ಕೋಟ : ಕೋಟ ವಿವೇಕ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಮತ್ತು ಸಾಹಿತ್ಯ ಸಂಘ ಪ್ರೌಢಶಾಲಾ ವಿಭಾಗದ ಜಂಟಿ ಆಶ್ರಯದಲ್ಲಿ ಯಶಸ್ವೀ ಕಲಾವೃಂದ ಕೊಮೆ, ತೆಕ್ಕಟ್ಟೆಯ “ಸಿನ್ಸ್ 1999 ಶ್ವೇತಯಾನ-77ನೇ ಕಾರ್ಯಕ್ರಮದ ಅಂಗವಾಗಿ ‘ಹೂವಿನಕೋಲು ಪ್ರದರ್ಶನ’ವು ದಿನಾಂಕ 12 ನವೆಂಬರ್ 2024ರಂದು ನಿಸರ್ಗದ ಶಾಂತಿ ವಿಹಾರದ ವೇದಿಕೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನ್ನಾಡಿದ ಕೋಟ ವಿವೇಕ ವಿದ್ಯಾ ಸಂಸ್ಥೆಯ ಪ್ರಾಂಶುಪಾಲ ಜಗದೀಶ್ ನಾವುಡ “ಯಕ್ಷಗಾನದ ಹಲವು ಪ್ರಕಾರಗಳಾದ ತಾಳಮದ್ದಳೆ, ಯಕ್ಷಗಾನ, ಗಾನವೈಭವ, ಹೂವಿನಕೋಲು, ಯಕ್ಷಗಾನ ಪ್ರಾತ್ಯಕ್ಷಿಕೆ ಹೀಗೆ ಹಲವಾರು ಕಾರ್ಯಕ್ರಮಗಳನ್ನು ನೆರವೇರಿಸುತ್ತಾ ಮಕ್ಕಳಿಗೆ ಕಲಿಸಿ, ವೇದಿಕೆ ಒದಗಿಸಿಕೊಡುತ್ತ ಬೆಳೆಸುತ್ತಿರುವ ಯಶಸ್ವೀ ಕಲಾವೃಂದ ಸಂಸ್ಥೆ ಮಾದರಿಯಾಗಿದೆ. ಅಷ್ಟೇ ಅಲ್ಲದೆ, ಭರತನಾಟ್ಯ, ಚಿತ್ರಕಲೆ, ಸಂಗೀತ ಹೀಗೆ ಅನ್ಯ ಕಲೆಯನ್ನು ಮಕ್ಕಳಿಗೆ ತಮ್ಮ ಸೂರಿನಡಿಯಲ್ಲಿ ಕಲಿಕೆಗೆ ಅವಕಾಶ ಕಲ್ಪಿಸಿಕೊಡುತ್ತಿರುವುದು ಶ್ಲಾಘನೀಯ ಕಾರ್ಯ. ವರ್ಷ ಪೂರ್ತಿ ಕಾರ್ಯಕ್ರಮವನ್ನು ಬೆಳ್ಳಿ ಹಬ್ಬದಲ್ಲಿ ಆಚರಿಸುತ್ತಾ ಬಂದ ಸಂಸ್ಥೆ ಕರ್ನಾಟಕದ ಎಲ್ಲಾ ಕಲಾಸಕ್ತರ ಗಮನವನ್ನು ಸೆಳೆದಿರುವುದು ಗಮನಾರ್ಹ.” ಎಂದರು.
ಯಕ್ಷಗುರು ಲಂಬೋದರ ಹೆಗಡೆ ಮಾತನಾಡಿ “ಸಂಸ್ಥೆಯ ಬೆಳ್ಳಿ ಹಬ್ಬದ ಭಾಗವಾಗಿ ಮಕ್ಕಳನ್ನೊಡಗೂಡಿ ಸಂಭ್ರಮಿಸಿದ್ದು ಹೆಚ್ಚು ಅರ್ಥಪೂರ್ಣ. ಮಕ್ಕಳ ಮೂಲಕ ಮುಂದಿನ ಪೀಳಿಗೆಗೆ ಕಲೆಯನ್ನು ಪಸರಿಸುವ ಕಾರ್ಯದಲ್ಲಿ ವಿವೇಕ ವಿದ್ಯಾಸಂಸ್ಥೆ ಭಾಗಿಯಾದದ್ದು ನಿಜಕ್ಕೂ ಹೆಮ್ಮೆ ಎನಿಸುತ್ತದೆ. ಈ ಕಲಾ ಪ್ರಕಾರಕ್ಕೆ ಸಹಸ್ರ ಸಂಖ್ಯೆಯ ಮಕ್ಕಳನ್ನು ಪ್ರೇಕ್ಷಕರಾಗಿಸಿ, ಬಹು ದೀರ್ಘ ಕಾಲ ಮಕ್ಕಳು ಮಾತಾಡಿಕೊಳ್ಳುವ ಹಾಗೆ ಮಾಡಿಸಿದ್ದು ವಿವೇಕ ವಿದ್ಯಾ ಸಂಸ್ಥೆ. ಈ ಸತ್ಕಾರ್ಯಕ್ಕೆ ನಾವು ಚಿರಋಣಿ.” ಎಂದರು.
ಹಿರಿಯ ಶಿಕ್ಷಕ ವೆಂಕಟೇಶ ಉಡುಪ, ಸಾಹಿತ್ಯ ಸಂಘದ ಸಂಚಾಲಕಿ ನಳಿನಾಕ್ಷಿ, ಲೈವ್ ಶ್ರೀನಿವಾಸ ಉಪಾಧ್ಯ ಉಪಸ್ಥಿತರಿದ್ದರು. ಶಿಕ್ಷಕ ಸುವೀರ್ ಕುಮಾರ ಹೊಳ್ಳ ಶುಭ ನುಡಿಯನ್ನಾಡಿದರು. ವಿವಿಧ ವಿಭಾಗದ ಪ್ರತಿಭಾನ್ವಿತರಾದ ಮದನ್ ನಾಯರಿ, ನರಹರಿ ಭಟ್, ಮದನ್ ಎಮ್. ಎಸ್., ನಿಶಾಂತ್ ಕಿಣಿ, ಅನ್ವಿತ್, ಸಮೃಧ್, ನಿಹಾಲ್ ಇವರಿಗೆ ಗೌರವ ಕಾಣಿಕೆಯನ್ನಿತ್ತು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಸಾತ್ವಿಕ್ ಪ್ರಾರ್ಥಿಸಿ, ವಿದ್ಯಾರ್ಥಿ ಮದನ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಯಶಸ್ವೀ ಕಲಾವೃಂದದ ಸದಸ್ಯರಿಂದ ಹೂವಿನಕೋಲು ರಂಗದಲ್ಲಿ ಪ್ರಸ್ತುತಿಗೊಂಡಿತು. ಕಾರ್ಯಕ್ರಮದಲ್ಲಿ ಲಂಬೋದರ ಹೆಗಡೆ, ಪಂಚಮಿ ವೈದ್ಯ, ಭರತ್ ಚಂದನ್, ಪವನ್ ಆಚಾರ್, ರಚಿತ್ ಶೆಟ್ಟಿ ಪಾಲ್ಗೊಂಡಿದ್ದರು.