ಗೋಪಾಡಿ : ಯಶಸ್ವೀ ಕಲಾವೃಂದದ ‘ಸಿನ್ಸ್ 1999 ಶ್ವೇತಯಾನ’ ಕಾರ್ಯಕ್ರಮದಲ್ಲಿ ‘7ನೇ ಅರ್ಥಾಂಕುರ’ ಹೊಸ ಅರ್ಥಧಾರಿಗಳ ಪರಿಶೋಧ ಕಾರ್ಯಕ್ರಮವು ದಿನಾಂಕ 03-03-2024ರಂದು ಗೋಪಾಡಿಯ ಶ್ರೀ ಬೊಬ್ಬರ್ಯ ದೈವಸ್ಥಾನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಪ್ರಾಯೋಜಕರಾದ ಚಂದ್ರಶೇಖರ ಇವರನ್ನು ಅಭಿನಂದಿಸಿ ಮಾತನ್ನಾಡಿದ ಯಕ್ಷಗುರು ಕೃಷ್ಣಮೂರ್ತಿ ಉರಾಳ “ಮುಂದಿನ ತಲೆಮಾರಿಗೆ ಹಾಗೂ ಯಕ್ಷಗಾನ ತಾಳಮದ್ದಳೆಗೆ ಅರ್ಥಧಾರಿಗಳನ್ನು ತಯಾರಿ ಮಾಡುವ ಮತ್ತು ಇತರ ಹಲವಾರು ವಿಭಾಗದ ಕಲಾ ಚಟುವಟಿಕೆಯನ್ನು ನೆರವೇರಿಸುತ್ತಾ ಬಂದ ಸಂಸ್ಥೆಯ ಕಾರ್ಯಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಗೋಪಾಡಿಯ ಗಂಗಾ ಪ್ರೊಡೆಕ್ಟ್ ಮಾಲಕರಾದ ಚಂದ್ರಶೇಖರ್ ಪ್ರಾಯೋಜಕತ್ವವನ್ನು ನಿರ್ವಹಿಸಿಕೊಂಡು ಕಲಾಸಕ್ತಿಯನ್ನು ಮೆರೆದಿದ್ದಾರೆ. ಇವರ ಕಲಾವಂತಿಕೆಯ ಪ್ರೇಕ್ಷಕನಾಗಿ, ಪ್ರೋತ್ಸಾಹಕನಾಗಿ ಮನಮೆಚ್ಚಿ ಹೃದಯದಿಂದ ಕೊಟ್ಟ ಕೊಡುಗೆ ನಿಜಕ್ಕೂ ಶ್ಲಾಘನೀಯ.” ಎಂದರು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಉಪನ್ಯಾಸಕ ಸುಜಯೀಂದ್ರ ಹಂದೆ ಮಾತನಾಡಿ “ಉದ್ಘಾಟನೆಯ ಕಾರ್ಯಕ್ರಮಗಳು ದಾಖಲೆಯ ಕಾರ್ಯಕ್ರಮವಾದವು. ರಾಜಕೀಯ ನೇತಾರರು, ವೈದ್ಯರುಗಳು, ಉದ್ಯಮಿಗಳು ಎಲ್ಲರೂ ಪ್ರಥಮವಾಗಿ ರಂಗದಲ್ಲಿ ಅಭಿನಯಿಸಿದ ಹಿರಿಮೆ ಸಂಸ್ಥೆಯದ್ದು. ವಿವಿಧ ಕಲಾ ಪ್ರಕಾರಗಳ ತರಗತಿಗಳನ್ನು ನಡೆಸುತ್ತಾ ಸಾಗಿ ಬಂದ ಸಂಸ್ಥೆ 25ನೇ ವರ್ಷಕ್ಕೆ ಹೊಸ ಭಾಷ್ಯ ಬರೆಯಲು ಹೊರಟಿದೆ. ಇದಕ್ಕೆ ಕಲಾ ವಲಯದ ಸಹಕಾರ ಈ ಸಂದರ್ಭದಲ್ಲಿ ಅತ್ಯಂತ ಅಗತ್ಯ.” ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಕೋಟ ಸುದರ್ಶನ ಉರಾಳ, ಉಪನ್ಯಾಸಕ ಅರ್ಥಧಾರಿ ರಾಘವೇಂದ್ರ ತುಂಗ, ಪ್ರಶಾಂತ್ ಆಚಾರ್ ಕೆಳಕಳಿ, ಕಾರ್ಯದರ್ಶಿ ವೆಂಕಟೇಶ ವೈದ್ಯ ಉಪಸ್ಥಿತರಿದ್ದರು. ಬಳಿಕ ಹೊಸ ಅರ್ಥಧಾರಿಗಳ ಪರಿಶೋಧ ಕಾರ್ಯಕ್ರಮದಲ್ಲಿ ‘ಜಾಂಬವತಿ ಕಲ್ಯಾಣ’ ಕಥಾನಕ ತಾಳಮದ್ದಳೆಗಳ ರೂಪದಲ್ಲಿ ರಂಗದಲ್ಲಿ ಪ್ರಸ್ತುತಿಗೊಂಡಿತು.