ಬಂಟ್ವಾಳ : ಸಿದ್ಧಕಟ್ಟೆಯ ಸರಕಾರಿ ಕಾಲೇಜಿನ ವಾರ್ಷಿಕ ಸಂಚಿಕೆ ‘ಸಿದ್ಧ ಸುಧೆ’ಯ ಲೋಕಾರ್ಪಣೆ ಸಮಾರಂಭವು ದಿನಾಂಕ 11-04-2024 ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಅಜೆಕಳ ಗಿರೀಶ ಭಟ್ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಂಚಿಕೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಬಂಟ್ವಾಳ ಸಮಿತಿಯ ಅಧ್ಯಕ್ಷ, ಮಂಗಳೂರು ಕಣಚೂರು ಆಯುರ್ವೇದ ಕಾಲೇಜಿನ ವೈದ್ಯಕೀಯ ಸಲಹೆಗಾರ, ಮಂಗಳಾ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕ ಹಾಗೂ ಬರಹಗಾರ ಡಾ. ಸುರೇಶ ನೆಗಳಗುಳಿ “ವಿದ್ಯಾಭ್ಯಾಸದ ಜೊತೆ ಜೊತೆಗೇ ಸಾಹಿತ್ಯ, ಕಲೆ ಮುಂತಾದ ವಿಷಯಗಳಲ್ಲಿ ತೊಡಗಿಸಿಕೊಳ್ಳುವುದು ಕಲಿಕೆಯ ಅಭಿವೃದ್ಧಿಗೆ ಪೂರಕ. ಬರೆಹಗಳು ರಾಷ್ಟ್ರದ ಉನ್ನತಿಗೆ ಪೂರಕವಾಗಿದ್ದು ಎಷ್ಟೋ ಸಾಧನೆಗಳು ಕೇವಲ ಸಾಹಿತ್ಯದಿಂದ ಆದ ಉದಾಹರಣೆಗಳು ಸಾಕಷ್ಟಿವೆ . ಶಾಲಾ ಪತ್ರಿಕೆ ‘ಸಿದ್ಧಸುಧೆ’ಯೂ ಆ ನಿಟ್ಟಿನತ್ತ ಅಳಿಲ ಸೇವೆಯೇ ಸರಿ.” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರ ನಿರ್ಮಾಣದಲ್ಲಿ ಸಾಹಿತ್ಯದ ಪಾತ್ರ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಸರಕಾರೀ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ ಪ್ರಕಾಶಚಂದ್ರ ಶಿಶಿಲ “ ‘ಜಗದೇಳಿಗೆಯಾಗುವುದು ಕನ್ನಡದಿಂದೇ’ ಕರ್ನಾಟಕ ಎಂಬ ಭೂಮಿಯನ್ನು ಮಥಿಸಿ ಕನ್ನಡವೆಂಬ ನವನೀತವನ್ನು ಪಡೆಯೋಣ ಎಂಬ ಕವಿನುಡಿಯಂತೆ ಸಾಹಿತ್ಯದ ಪಾತ್ರವು ರಾಷ್ಟ್ರ ನಿರ್ಮಾಣದಲ್ಲಿ ಮಹತ್ತರವಾಗಿದೆ.” ಎಂದರು.
ಇದೇ ಸಂದರ್ಭದಲ್ಲಿ ‘ಸಾಹಿತ್ಯ ಮತ್ತು ರಾಷ್ಠ್ರೀಯತೆ’ ಎಂಬ ವಿಚಾರದಲ್ಲಿ ಶ್ರೀ ಈಶ್ವರಚಂದ್ರ ಅವರಿಂದ ಉಪಾನ್ಯಾಸ ನಡೆಯಿತು. ದಕ್ಷಿಣ ಕನ್ನಡ ಬರಹಗಾರರ ವೇದಿಕೆಯ ಅಧ್ಯಕ್ಷ ಅಭಾಸಾಪ ಸಮಿತಿ ಸದಸ್ಯರೂ ಆದ ಶ್ರೀ ಜಯಾನಂದ ಪೆರಾಜೆ ಮಾತನಾಡಿ “ಸಾಹಿತ್ಯದಿಂದ ಮಾನಸಿಕ ಬೆಳವಣಿಗೆ ಹಾಗೂ ಸುಸಂಸ್ಕಾರ ಲಭಿಸುತ್ತದೆ.” ಎಂದರು.
ಪಿಂಗಾರ ಸಾಹಿತ್ಯ ಬಳಗದ ಶ್ರೀ ರೇಮಂಡ್ ಡಿ’ಕೂನ್ಹಾ ತಾಕೊಡೆ, ಕಾಲೇಜಿನ ಅಧ್ಯಾಪಕ, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.