ಮಂಗಳೂರು : ಯಕ್ಷಗಾನ ಕಲಾವಿದ ರಕ್ಷಿತ್ ಶೆಟ್ಟಿ ಪಡ್ರೆ ಇವರ ಶಿಷ್ಯವೃಂದದ ಯಕ್ಷ ಸಿದ್ದಿ ಸಂಭ್ರಮದ ಪ್ರಯುಕ್ತ ಸಿದ್ಧಿ ದಶಯಾನ ಕಾರ್ಯಕ್ರಮವು ದಿನಾಂಕ 10 ಆಗಸ್ಟ್ 2024 ಮತ್ತು 11 ಆಗಸ್ಟ್ 2024ರಂದು ಮಂಗಳೂರಿನ ಉರ್ವಸ್ಟೋರ್ ಡಾ. ಬಿ.ಆರ್. ಅಂಬೇಡ್ಕರ್ ಸಭಾಭವನದಲ್ಲಿ ಆಯೋಜಿಸಲಾಗಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಕ್ಷಗಾನ ತರಗತಿ ನಡೆಸುತ್ತಿರುವ ರಕ್ಷಿತ್ ಶೆಟ್ಟಿ ಪಡ್ರೆಯವರ ಯಕ್ಷ ಶಿಕ್ಷಣ ಕಾರ್ಯಕ್ಕೆ ಹತ್ತು ವರ್ಷ ತುಂಬಿದ ಹಿನ್ನೆಲೆಯಲ್ಲಿ ದಶಮಾನೋತ್ಸವ ಅಂಗವಾಗಿ ವಿವಿಧೆಡೆಯ ಶಿಷ್ಯವೃಂದ ಒಗ್ಗೂಡಿಸಿ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಒಂದೇ ವೇದಿಕೆಯಲ್ಲಿ 300ಕ್ಕೂ ಅಧಿಕ ಶಿಷ್ಯರು ಭಾಗವಹಿಸಲಿದ್ದಾರೆ.
ದಿನಾಂಕ 10 ಆಗಸ್ಟ್ 2024ರಂದು ಬೆಳಗ್ಗೆ 9-00 ಗಂಟೆಗೆ ಚೌಕಿಪೂಜೆ, ಪೂರ್ವರಂಗ ನಡೆಯಲಿದೆ. ಬೆಳಗ್ಗೆ 10-00 ಗಂಟೆಗೆ ಯಕ್ಷಗಾನ ವಿದ್ವಾಂಸ ಶ್ರೀ ವಾಸುದೇವ ರಂಗಾ ಭಟ್ಟ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅಧ್ಯಕ್ಷತೆ ವಹಿಸುವರು. ಬೆಳಗ್ಗೆ 10.30ರಿಂದ ‘ದೇವಸೇನಾನಿ’, ‘ಪಾವನ ಪಕ್ಷಿ’, ‘ದಾಶರಥಿ ದರ್ಶನ’, ಧರ್ಮ ದಂಡನೆ’ ಎಂಬ ಪ್ರಸಂಗದ ಯಕ್ಷಗಾನ ಪ್ರದರ್ಶನಗಳು ನಡೆಯಲಿವೆ. ಸಂಜೆ 5-00 ಗಂಟೆಗೆ ಶ್ರೀ ಚಂದ್ರಹಾಸ ಶೆಟ್ಟಿ ರಂಗೋಲಿ ಇವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಸಂಜೆ 6-30ಕ್ಕೆ ‘ಯಕ್ಷ ನವರಸ ವೈಭವ’, ರಾತ್ರಿ 8-00 ಗಂಟೆಗೆ ವಿನೂತನ ಪ್ರಯೋಗ ‘ಹಿಮ್ಮಿಂಚು ಯಕ್ಷಗಾನ’ವನ್ನು ಏರ್ಪಡಿಸಲಾಗಿದೆ.
ದಿನಾಂಕ 11 ಆಗಸ್ಟ್ 2024ರಂದು ಬೆಳಗ್ಗೆ 9-30 ಗಂಟೆಗೆ ‘ಲೀಲಾಮಾನುಷ ವಿಗ್ರಹ’ ಯಕ್ಷಗಾನ ಪ್ರದರ್ಶನ, ‘ನೃತ್ಯ ವಚನ ಚಿತ್ರ ಕಥನ’ ಮತ್ತು ‘ದಶಾವತಾರ’, ‘ಪಾದ ಪ್ರತೀಕ್ಷಾ’ ಎಂಬ ಪ್ರಸಂಗದ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಸಂಜೆ 4-00 ಗಂಟೆಗೆ ಡಾ. ಎಂ. ಮೋಹನ ಆಳ್ವ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕಟೀಲಿನ ಶ್ರೀ ಹರಿನಾರಾಯಣದಾಸ ಆಸ್ರಣ್ಣ ಆಶೀರ್ವಚನ ನೀಡುವರು. ಇದೇ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರ, ಯಕ್ಷಸಿದ್ದಿ ಪ್ರಶಸ್ತಿ- ಸಮ್ಮಾನ ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ ಯಕ್ಷಗಾನ ವೈವಿಧ್ಯ ‘ನೀನೋ ನಾನೋ’ ಮತ್ತು ತೆಂಕು –ಬಡಗು ಯಕ್ಷಗಾನ ಪ್ರದರ್ಶನ ‘ನಾಗಶ್ರೀ’ ಪ್ರಸ್ತುತಗೊಳ್ಳಲಿದೆ.