ಕಾಸರಗೋಡು : ಕಾಸರಗೋಡಿನ ನುಳ್ಳಿಪ್ಪಾಡಿ ಸೀತಮ್ಮ ಪುರುಷ ನಾಯಕ ಕನ್ನಡ ಭವನ ಗ್ರಂಥಾಲಯದ ಬಯಲು ರಂಗ ಮಂದಿರದಲ್ಲಿ ಕಾಸರಗೋಡಿನ ಕನ್ನಡ ಭವನದ ರಜತ ಸಂಭ್ರಮ, ನಾಡು-ನುಡಿಹಬ್ಬ ಸಾಧಕರಿಗೆ ವಿವಿಧ ಪ್ರಶಸ್ತಿ ಪ್ರದಾನ, ಕೃತಿ ಬಿಡುಗಡೆ ಸಮಾರಂಭವನ್ನು ದಿನಾಂಕ 18 ಜನವರಿ 2026ರಂದು ನಡೆಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಸ್ಥಾಪಕ ಸಂಚಾಲಕ ಡಾ. ಎಂ.ಜಿ.ಆರ್. ಅರಸ್ “ಗಡಿನಾಡಿನಲ್ಲಿ ಕನ್ನಡ ಕಟ್ಟುವ ಕಾಯಕದಲ್ಲಿ ನಿರತರಾದವರನ್ನು ಗುರುತಿಸಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡುವ ಮೂಲಕ ಇಲ್ಲಿನ ಕನ್ನಡಿಗರ ನೊಂದ ಮನಸ್ಸಿಗೆ ಸಾಂತ್ವನ ಲಭಿಸಲು ಸಾಧ್ಯ. ಕಾಸರಗೋಡಿನಲ್ಲಿ ಕನ್ನಡ ಭಾಷೆ, ಸಂಸ್ಕೃತಿಗೆ ಧಕ್ಕೆಯಾಗುವುದನ್ನು ಸಹಿಸಲಾಗದು. ಕನ್ನಡ ಭಾಷೆಯ ಮೇಲಿನ ದಬ್ಬಾಳಿಕೆ ವಿರುದ್ಧ ಹೋರಾಡುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಬೇಕು. ಕನ್ನಡ ಭವನದ ಸ್ಥಾಪಕಾಧ್ಯಕ್ಷ ಡಾ. ಕೆ. ವಾಮನ್ ರಾವ್ ಬೇಕಲ್ ಇವರನ್ನು ಈ ಬಾರಿಯ ಡಿ. ದೇವರಾಜ ಅರಸು ಪ್ರಶಸ್ತಿಗೆ ಆಯ್ಕೆ ಮಾಡಲಾಗಿರುವುದು ಸಂತಸದ ವಿಚಾರ” ಎಂದು ಹೇಳಿದರು.

ಕನ್ನಡ ಭವನದ ಸ್ಥಾಪಕಾಧ್ಯಕ್ಷ ಡಾ. ಕೆ. ವಾಮನ್ ರಾವ್ ಬೇಕಲ್ ಅಧ್ಯಕ್ಷತೆ ವಹಿಸಿದ್ದರು. ಧಾರ್ಮಿಕ ಮುಂದಾಳು ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ ದೀಪ ಪ್ರಜ್ವಲನೆಗೈದರು. ಸಾಹಿತಿ, ಜನಪ್ರತಿನಿಧಿ ಆಯಿಷಾ ಪೆರ್ಲ ದಿಕ್ಕೂಚಿ ಭಾಷಣ ಮಾಡಿದರು. ಶಿಕ್ಷಣ ತಜ್ಞ ವಿ.ಬಿ. ಕುಳಮರ್ವ, ಕ.ಸಾ.ಪ. ಕೇರಳ ಗಡಿನಾಡ ಘಟಕ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಕರ್ನಾಟಕ ಸರಕಾರದ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್. ಸುಬ್ಬಯ್ಯಕಟ್ಟೆ ಸಾಹಿತಿಗಳಾದ ಜಯಾನಂದ ಪೆರಾಜೆ, ಕಾಸರಗೋಡು ಜಿಲ್ಲಾ ಕನ್ನಡ ಮಾಧ್ಯಮ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರವಿ ನಾಯ್ಕಾಪು, ಡಾ. ರತ್ನಾ ಹಾಲಪ್ಪ ಗೌಡ, ಕನ್ನಡ ಭವನ ಕೋಶಾಧಿಕಾರಿ ಸಂಧ್ಯಾರಾಣಿ ಟೀಚರ್, ಪತ್ರಕರ್ತರಾದ ವೀಜಿ ಕಾಸರಗೋಡು, ಪ್ರದೀಪ್ ಬೇಕಲ್, ಜಗನ್ನಾಥ ಶೆಟ್ಟಿ ಪಿ.ಕೆ. ಮತ್ತಿತರರು ಉಪಸ್ಥಿತರಿದ್ದರು. ಡಾ. ಸುರೇಶ್ ನೆಗಳಗುಳಿ ಅವರು ಕನ್ನಡದ ಧ್ವಜಾರೋಹಣ ನಡೆಸಿದರು.

ವಿರಾಜ್ ಅಡೂರು ಸ್ವಾಗತಿಸಿ, ಕನ್ನಡ ಭವನ ಕಾರ್ಯದರ್ಶಿ ವಸಂತ್ ಕೆರೆಮನೆ ವಂದಿಸಿ, ವಿಶಾಲಾಕ್ಷ ಪುತ್ರಕಳ ನಿರೂಪಿಸಿದರು. ಗುರುರಾಜ್ ಕಾಸರಗೋಡು ಸಾರಥ್ಯದ ಗಡಿನಾಡ ಸಾಂಸ್ಕೃತಿಕ ಕಲಾ ವೇದಿಕೆ ಸದಸ್ಯರಿಂದ ನೃತ್ಯ ವೈಭವ, ಬದಿಯಡ್ಕರಂಗಸಿರಿ ಸಾಂಸ್ಕೃತಿಕ ವೇದಿಕೆ ಸದಸ್ಯರಿಂದ ಯಕ್ಷಗುರು ಬಾಯಾರು ಸೂರ್ಯನಾರಾಯಣ ಪದಕಣ್ಣಾಯರ ನಿರ್ದೇಶನದಲ್ಲಿ ಯಕ್ಷಗಾನ ನಡೆಯಿತು. ಕನ್ನಡದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಶ್ರೀ ಭಿಕ್ಷು ಲಕ್ಷ್ಮಣಾನಂದ ಸ್ವಾಮೀಜಿ ಸದ್ಭಾವನಾ ಪ್ರಶಸ್ತಿ, ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ರಾಷ್ಟ್ರೀಯ ಪ್ರಶಸ್ತಿ, ನಾಡೋಜ ಡಾ. ಕಯ್ಯಾರ ರಾಷ್ಟ್ರೀಯ ಪ್ರಶಸ್ತಿ, ಸಮಾಜ ಸೇವಾ ರತ್ನ ಪ್ರಶಸ್ತಿ, ಕನ್ನಡ ಪಯಸ್ವಿನಿ ಅಚೀವ್ಮೆಂಟ್ ಅವಾರ್ಡ್ ಮತ್ತು ಬೇಕಲ ರಾಮನಾಯಕ ಸಾಹಿತ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

