ಉಡುಪಿ : ನಾಟ್ಯಶ್ರೀ ಕಲಾತಂಡ ಶಿವಮೊಗ್ಗ ಸಂಸ್ಥೆಯ ರಜತ ಮಹೋತ್ಸವ ಕಾರ್ಯಕ್ರಮ ದಿನಾಂಕ 22 ಡಿಸೆಂಬರ್ 2024ರ ಭಾನುವಾರದಂದು ಉತ್ತರ ಕನ್ನಡದ ಶಿರಸಿಯ ನೆಮ್ಮದಿ ರಂಗಧಾಮದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಸಾಧಕರನ್ನು ಸನ್ಮಾನಿಸಿದ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ “ಯಕ್ಷಗಾನವಾಗಿರಬಹುದು ಅಥವಾ ಜಾನಪದವೇ ಇರಬಹುದು. ಕಲೆ ತನ್ನನ್ನು ನಂಬಿಕೊಂಡವರ ಕೈ ಎಂದಿಗೂ ಬಿಡೋದಿಲ್ಲ. ಕಲಾವಿದನ ಕಲಾ ಸೇವೆಯನ್ನು ಸಮಾಜ ಒಂದಲ್ಲ ಒಂದು ದಿನ ಗುರುತಿಸುವುದು ಖಂಡಿತ. ಇದಕ್ಕೆ ಹಲವಾರು ಸಾಧಕ ಹಿರಿಯ ಕಲಾವಿದರೇ ಸಾಕ್ಷಿಯಾಗಿದ್ದಾರೆ. ಕಲೆ ಕಲಾವಿದರಿಗೆ ಸಮಾಜದಲ್ಲಿ ಸೂಕ್ತ ಗೌರವವನ್ನು ತಂದುಕೊಡುತ್ತದೆ. ಕಲಾತಂಡದ ಸಂಚಾಲಕರಾದ ವಿದ್ವಾನ್ ದತ್ತಮೂರ್ತಿ ಭಟ್ ಅವರು ಯಕ್ಷಗಾನ ಕಲೆಗೆ ತನ್ನನ್ನು ಮುಡಿಪಾಗಿಟ್ಟುಕೊಂಡು ಅದರ ಬೆಳವಣಿಗೆಗಾಗಿ ನಾಟ್ಯಶ್ರೀ ಕಲಾತಂಡವನ್ನು ಸ್ಥಾಪಿಸಿ ಯಕ್ಷಗಾನದ ಹಿರಿಮೆಯನ್ನು ಎತ್ತಿ ಹಿಡಿದಿದ್ದಾರೆ. ಅವರೊಬ್ಬ ಮಹಾನ್ ಸಾಧಕ. ಅವರು ನಿರ್ಮಲ ಮನಸ್ಸಿನಿಂದ ಯಕ್ಷಗಾನ ಕಲೆಯ ಸೇವೆ ಮಾಡುತ್ತಿದ್ದಾರೆ. ಅವರು ಹುಟ್ಟುಹಾಕಿದ ಈ ಸಂಸ್ಥೆ ಇಂದು 25ವರ್ಷದ ಸಂಭ್ರಮಾಚರಣೆಯಲ್ಲಿರುವುದು ಸಂತೋಷದ ಸಂಗತಿ. ಅವರ ಈ ಕಲಾಸೇವೆ ಎಂದಿಗೂ ನಿರರ್ಥಕವಾಗದು. ಕಲಾಮಾತೆಯ ಸೇವೆಗೈದವರಿಗೆ ಎಂದೂ ಸೋಲಿಲ್ಲ, ಹೀಗಾಗಿ ಕಲಾವಿದರು ಎಂದೂ ಕೀಳರಿಮೆ ಬೆಳಸಿಕೊಳ್ಳಬಾರದು. ಕಲೆಯ ಆರಾಧನೆಯ ಹುಚ್ಚಿನಲ್ಲಿ ತಮ್ಮ ದುಡಿಮೆಯಿಂದ ಸಂಪಾದಿಸಿದ ಎಲ್ಲವನ್ನು ಅದಕ್ಕೆ ಸುರಿದವರಿದ್ದಾರೆ. ಅದೊಂದು ಒಳ್ಳೆಯ ಹುಚ್ಚು. ಈ ಹುಚ್ಚಿನಿಂದಲೇ ಯಕ್ಷಗಾನ ಇಂದು ಸರ್ವಮಾನ್ಯ ಕಲೆಯಾಗಿ ಬೆಳೆದಿದೆ, ಅಸಂಖ್ಯಾತ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಉಡುಪಿ ಜಿಲ್ಲೆಯೊಂದರಲ್ಲಿಯೇ ಶಾಲೆಗಳಲ್ಲಿ ಪ್ರಾರಂಭಿಸಿರುವ ಯಕ್ಷಗಾನ ಶಿಕ್ಷಣ, ಇಂದು ಸುಮಾರು 90ಕ್ಕೂ ಅಧಿಕ ಶಾಲೆಗಳಿಗೆ ಪಸರಿಸಿದೆ. 3,000ಕ್ಕೂ ಅಧಿಕ ಮಕ್ಕಳು ಇಂದು ಯಕ್ಷ ಶಿಕ್ಷಣವನ್ನು ಕಲಿಯುತ್ತಿದ್ದಾರೆ. ಈ ಬೆಳವಣಿಗೆ ಯಕ್ಷಗಾನ ಕಲೆಯನ್ನು ಅಜರಾಮರವನ್ನಾಗಿಸಲಿದೆ.” ಎಂದು ಅವರು ಭವಿಷ್ಯ ನುಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕಲಾಪೋಷಕ ಅನಂತಮೂರ್ತಿ ಹಗಡೆ ಮಾತನಾಡಿ “ದತ್ತಮೂರ್ತಿ ಭಟ್ ಅವರು ತಮ್ಮ ಜೀವನವನ್ನೇ ಯಕ್ಷಗಾನಕ್ಕಾಗಿ ಮೀಸಲಿಟ್ಟ ಮಹಾಪುರುಷ ಅವರ ಪ್ರೀತಿಗೆ, ಅವರ ಸಾಧನೆಗೆ ಯಕ್ಷಗಾನ ಆಕಾಡೆಮಿಯ ಅಧ್ಯಕ್ಷರೇ ಬಂದಿರುವುದು ಇದಕ್ಕೆ ಸಾಕ್ಷಿ. ಇಂದು ಯಕ್ಷಗಾನ ಹಲವಾರು ಮಂದಿಯ ಉಸಿರಾಗಿದೆ.ಅದನ್ನೇ ನಂಬಿಕೊಂಡ ಕಲಾವಿದರಿದ್ದಾರೆ. ಸಂಗೀತ ರತ್ನಾಕರ ಗ್ರಂಥದಲ್ಲಿ 1210ರಲ್ಲಿ ಯಕ್ಷಗಾನದ ಬಗ್ಗೆ ಉಲ್ಲೇಖವಿದೆ. ಕೋಟ ಶಿವರಾಮ ಕಾರಂತರು ಯಕ್ಷಗಾನ ಬಯಲಾಟ ಎಂಬ ಪುಸ್ತಕವನ್ನೇ ಬರೆದಿದ್ದಾರೆ. ಕೆಳದಿ, ತಂಜಾವೂರು, ಮೈಸೂರಿನ ಅರಸರು ಯಕ್ಷ ಗಾನವನ್ನು ಪೋಷಿಸುವ, ಬೆಳೆಸುವ ಕೆಲಸ ಮಾಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಂತೂ ಯಕ್ಷಗಾನಕ್ಕೆ ಅನುಪಮ ಕೊಡುಗೆಯನ್ನೇ ನೀಡಿದೆ. ಮಹಾನ್ ಯಕ್ಷಗಾನ ಕಲಾವಿದರು ಇಲ್ಲಿ ಆಗಿ ಹೋಗಿದ್ದಾರೆ.” ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ದತ್ತಮೂರ್ತಿ ಭಟ್ ಅವರು ತಮ್ಮ ಬಾಲ್ಯದ ದಿನಗಳಲ್ಲಿ ಯಕ್ಷಗಾನದ ಹುಚ್ಚನ್ನು ಬೆಳೆಸಿಕೊಂಡ ಬಗೆ ವಿವರಿಸಿದರು. “ವೃತ್ತಿಯಲ್ಲಿ ಉಪನ್ಯಾಸಕರಾಗಿ, ಪ್ರವೃತ್ತಿಯಲ್ಲಿ ಯಕ್ಷಗಾನದ ತಂಡವನ್ನು ಕಟ್ಟಿ ಇಂದಿಗೆ 25 ವರ್ಷಗಳು ತುಂಬಿವೆ. ಶಿರಸಿ, ಸಾಗರ, ಶಿವಮೊಗ್ಗ ಹೀಗೆ ಸಮಾನ ಮನಸ್ಕರ ಜೊತೆಗೆ ಸಂಘಟನೆಯನ್ನು ಬೆಳೆಸಿಕೊಂಡು ಬಂದಿದ್ದೇನೆ. ಈ ಸಾಧನೆಗೆ ಕಲಾಭಿಮಾನಿಗಳ ನಿರಂತರ ಪ್ರೋತ್ಸಾಹವೇ ಕಾರಣ.” ಎಂದರು.
ಕಾರ್ಯಕ್ರಮದಲ್ಲಿ ‘ನಾಟ್ಯಶ್ರೀ ರಜತ ನೂಪುರ’ ಗೌರವವನ್ನು ಬಂಗಾರೇಶ್ವರ ಹೆಗಡೆ ತುಂಬೆಮನೆ, ಕೊಳಗಿ ಕೇಶವ ಹೆಗಡೆ, ಜೆ. ಕೆ. ಭಟ್, ಎಚ್. ಬಿ. ನಾಯಕ, ವೆಂಕಟೇಶ್ ಗೌಡ ಹೇರೂರು, ನಾಗರಾಜ ಜೋಷಿ, ಎಂ. ಸಿ. ಹೆಬ್ಬಾರ್, ಎಂ. ಆರ್. ಯಾಜಿ ಸಾಲೆಬೈಲು, ನಿರ್ಮಲಾ ಗೋಳಿಕಟ್ಟೆ ಹಾಗೂ ಜಿ. ಪಿ. ಪ್ರಭಾಕರ ಇವರಿಗೆ ಪ್ರದಾನ ಮಾಡಲಾಯಿತು.
ಸಮಾರಂಭದಲ್ಲಿ ಕಲಾಭಿಮಾನಿಗಳಾದ ಉಪೇಂದ್ರ ಪೈ ಶಿರಸಿ, ಆರ್. ಎಂ. ಹೆಗಡೆ ಬಾಳೆಸರ, ಮೋಹನ ಹೆಗಡೆ ಹೆರವಟ್ಟ, ನಾರಾಯಣ ಯಾಜಿ ಸಾಲೆಬೈಲ್, ಎಸ್. ಕೆ. ಭಾಗವತ್ ಶಿರಸಿ, ವಿನಾಯಕ ಹೆಗಡೆ ದೊಡ್ಮನೆ, ಜಿ. ಎಲ್. ಹೆಗಡೆ ಕುಮಟಾ, ರವಿ ಹೆಗಡೆ ಹೂವಿನ ಮನೆ ಉಪಸ್ಥಿತರಿದ್ದು, ಗಣಪತಿ ಹೆಗಡೆ ಗುಂಜಗೋಡು ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಬಡಗುತಿಟ್ಟಿನ ಪ್ರಸಿದ್ಧ ಕಲಾವಿದರಿಂದ ‘ಅರ್ಜುನ-ಅರ್ಜುನ-ಅರ್ಜುನ’ ಯಕ್ಷ ಗಾನ ಪ್ರದರ್ಶನ ನಡೆಯಿತು.