ಮಂಗಳೂರು : ಮಾಂಡ್ ಸೊಭಾಣ್ ಕಲಾಂಗಣದಲ್ಲಿ ದಿನಾಂಕ 04 ಜನವರಿ 2026ರಂದು ಆಯೋಜಿಸಿದ ತಿಂಗಳ ವೇದಿಕೆ ಸರಣಿಯ ರಜತ ವರ್ಷಕ್ಕೆ ಚಾಲನೆ ನೀಡಲಾಯಿತು.
ಕಿಕ್ಕಿರಿದ ಬಯಲು ರಂಗಮಂದಿರದಲ್ಲಿ, ಕಬ್ಬಿನ ಗಾಣದ ಪ್ರತಿಕೃತಿಯನ್ನು ತಿರುಗಿಸಿ 289 ತಿಂಗಳ ಕಾರ್ಯಕ್ರಮಗಳ ಹೆಸರುಗಳನ್ನು ತೆರೆಯುವ ಮೂಲಕ ವಿಶಿಷ್ಟವಾಗಿ ಈ ಕಾರ್ಯಕ್ರಮ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ “ಮಾಂಡ್ ಸೊಭಾಣ್ ತಿಂಗಳ ವೇದಿಕೆ ದಾಖಲೆ ಪುಸ್ತಕಗಳಲ್ಲಿ ದಾಖಲಿಸುವಂತಹ ಸಾಧನೆ. ಕಲಾವಿದರಿಗೆ ವೇದಿಕೆ ಕೊಟ್ಟ ಈ ಸರಣಿಯಿಂದ ಕೊಂಕಣಿಗೆ ಬಹು ದೊಡ್ಡ ಗೌರವ ಲಭಿಸಿದೆ. ಇಂತಹ ಸಾಧನೆಗಾಗಿ ಮಾಂಡ್ ಸೊಭಾಣ್ ಸಂಸ್ಥೆಯನ್ನು ಸರಕಾರ ಗೌರವಿಸಬೇಕು. ಈ ಬಾಬ್ತು ನನ್ನ ಸಹಕಾರ ಇರಲಿದೆ.” ಎಂದು ಹೇಳಿದರು.
ಗೌರವ ಅತಿಥಿ ಉದ್ಯಮಿ ಹಾಗೂ ದಾನಿ ಆಸ್ಟಿನ್ ರೋಚ್ ಬೆಂಗಳೂರು ಇವರು ಸಂಸ್ಥೆಯ ನವೀಕೃತ ಜಾಲತಾಣ www.manddsobhann.org ಕೊಂಕಣಿ ಪುಸ್ತಕಗಳ ಇ-ಲೈಬ್ರೆರಿ, ಕೊಂಕಣಿ ಸಾಹಿತ್ಯದ ಅವಕಾಶ ಇ-ಬೊಂಗ್ಸಾಳ್ ಮತ್ತು ಕೊಂಕಣಿ ಕಾರ್ಯಕ್ರಮಗಳ ಮಾಹಿತಿಯ ಕೊಂಕಣಿಶೋ ಡೊಟ್ ಕೊಮ್ ಇವನ್ನು ಸಾಂಕೇತಿಕವಾಗಿ ಬಂಡಸಾಲೆಯ ಬಾಗಿಲು ತೆರೆಯುವ ಮೂಲಕ ಲೊಕಾರ್ಪಣೆಗೊಳಿಸಿದರು. ಈ ಬಗ್ಗೆ ಶ್ರಮಿಸಿದ ಕೇರನ್ ಮಾಡ್ತಾ ಮಾಹಿತಿ ನೀಡಿದರು. ತಂಡದ ವಿಕಾಸ್ ಲಸ್ರಾದೊ ತಾಂತ್ರಿಕ ಸಹಾಯ ಒದಗಿಸಿದ ಟೆಕ್‌ಹಾರ್ಮೊನಿಕ್ಸ್ ಇದರ ಅಜಯ್ ಡಿಸೋಜ ಆನಿ ಪ್ರಿನ್ಸನ್ ಕಾರ್ಡೊಜಾ ಇವರನ್ನು ಗೌರವಿಸಲಾಯಿತು.

ತಿಂಗಳ ವೇದಿಕೆ ಸರಣಿಗೆ ನೀಡಿದ ಸಹಕಾರಕ್ಕಾಗಿ ಆಸ್ಟಿನ್ ರೋಚ್ ಇವರನ್ನು ಸನ್ಮಾನಿಸಲಾಯಿತು. ʻʻನಮ್ಮ ಭಾಷೆಯ ಬಗ್ಗೆ ನಮಗೆ ಹೆಮ್ಮೆ ಇರಬೇಕು. ಭಾಷೆಯನ್ನು ಉಪಯೋಗಿಸಿ ಉಳಿಸಿ ಬೆಳೆಸುವ ಕೆಲಸ ಮಾಡಬೇಕು. ನಮಗೆ ದುಡ್ಡಿನ ಸಹಾಯ ನೀಡುವುದು ಸುಲಭ. ಆದರೆ ಇಷ್ಟೊಂದು ಯೋಜನಾಬದ್ದವಾಗಿ, ಸಮಯಕ್ಕೆ ಸರಿಯಾಗಿ, ನಿರಂತರವಾಗಿ ಈ ರೀತಿ ವೈವಿಧ್ಯಮಯ ಸಾಂಸ್ಕೃತಿಕ ಕೆಲಸಗಳನ್ನು ಮಾಡಲು ನಮಗೆ ಅಸಾಧ್ಯ. ಈ ಸಾಧನೆಗಾಗಿ ಮಾಂಡ್ ಸೊಭಾಣ್ ಅಧ್ಯಕ್ಷ ಮತ್ತು ಸಮತಿ ಅಭಿನಂದನಾರ್ಹರು.ʼʼ ಎಂದು ಪ್ರಶಂಶಿಸಿದರು.
ಸ್ವಾಗತಿಸಿ ಪ್ರಸ್ತಾವಿಸಿದ ಅಧ್ಯಕ್ಷ ಲುವಿ ಪಿಂಟೊ ಕಲಾಂಗಣ್ ಕೇವಲ ಕಟ್ಟಡವಾಗಿ ಉಳಿಯಬಾರದು. ಅಲ್ಲಿ ಕಲೆಯ ಕೆಲಸಗಳು ನಿರಂತರ ನಡೆಯಬೇಕು ಎಂಬ ಎರಿಕ್ ಒಝೇರಿಯೊ ರವರ ಚಿಂತನೆ ಮೇರೆಗೆ ಆರಂಭಗೊಂಡ ಯೋಜನೆಯೇ ತಿಂಗಳ ವೇದಿಕೆ. ಇಂದು ಈ ಯೋಜನೆ 25ನೇ ವಸಂತಕ್ಕೆ ಕಾಲಿಟ್ಟಿದೆ. ಕಲಾ ಲೋಕದಲ್ಲಿ ಇದೊಂದು ದಾಖಲೆಯೇ ಸರಿ. ಇದನ್ನು ಸಾಧಿಸಿದ ಮಾಂಡ್ ಸೊಭಾಣ್, ಸರ್ವ ಕಲಾವಿದರು ಹಾಗೂ ಪ್ರೇಕ್ಷಕರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಎರಿಕ್ ಒಝೇರಿಯೊ ಅಮೃತೋತ್ಸವ ಸಂಶೋಧನಾ ಅನುದಾನ – 2026 ಇದರ ಮಂಜೂರಾತಿ ಪತ್ರವನ್ನು ಜಾಸ್ಮಿನ್ ಲೋಬೊ, ಆಗ್ರಾರ್ ಇವರಿಗೆ ಹಸ್ತಾಂತರಿಸಲಾಯಿತು. ಒಂದು ಲಕ್ಷ ರೂಪಾಯಿ ಅನುದಾನದಲ್ಲಿ ಗುಮಟೆ ಹಾಡುಗಳು – ಒಂದು ಭಾಷಾ ಶಾಸ್ತ್ರೀಯ ಅಧ್ಯಯನ (ಐತಿಹಾಸಿಕ, ಭಾಷಿಕ ಮತ್ತು ಸಮಾಜೋ-ಸಾಂಸ್ಕೃತಿಕ ಹಿನ್ನಲೆ) ಎಂಬ ವಿಷಯದ ಮೇಲೆ ಅಧ್ಯಯನ ನಡೆಯಲಿದೆ. ಮಾಂಡ್ ಸೊಭಾಣ್ ಕಾರ್ಯದರ್ಶಿ ರೊನಿ ಕ್ರಾಸ್ತಾ ಮತ್ತು ಕೋಶಾಧಿಕಾರಿ ಸುನಿಲ್ ಮೊಂತೆರೊ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿತೊರಿ ಕಾರ್ಕಳ ಸಭಾ ಕಾರ್ಯಕ್ರಮ ನಿರೂಪಿಸಿದರು.
ನಂತರ 289 ತಿಂಗಳ ಕಾರ್ಯಕ್ರಮವಾಗಿ ಆಸ್ಟ್ರೇಲಿಯಾದಲ್ಲಿ ದುಡಿಯುತ್ತಿರುವ ಸಾಫ್ಟ್ ವೇರ್ ತಜ್ಞ ಪ್ರಜೋತ್ ಡೆಸಾ ಇವರಿಂದ ಸಂಗೀತ ರಸಮಂಜರಿ ನಡೆಯಿತು. ಸೋನಲ್ ಮೊಂತೇರೊ, ಕ್ಲಿಯೊನ್ ಡಿಸಿಲ್ವಾ ಆಯುಶ್ ಮಿನೇಜಸ್, ಬ್ಲೂ ಏಂಜಲ್ಸ್ ಕೊಯರ್ ಇವರು ಗಾಯನದಲ್ಲಿ ಹಾಗೂ ರಸೆಲ್ ರೊಡ್ರಿಗಸ್, ಹೃಷಿಕೇಶ್ ಉಪಾಧ್ಯಾಯ, ಜೊಸ್ವಿನ್ ಡಿಕುನ್ಹಾ ಮತ್ತು ಮಿಲ್ಟನ್ ಬ್ರಾಗ್ಸ್ ಸಂಗೀತದಲ್ಲಿ ಸಹಕರಿಸಿದರು.
