ತೆಕ್ಕಟ್ಟೆ : ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ ಇದರ ಸಂಯೋಜನೆಯಲ್ಲಿ ದಿನಾಂಕ 23 ನವೆಂಬರ್ 2024ರಂದು ಗೋಪಾಡಿ ದಿ. ರಾಮಚಂದ್ರ ಭಟ್ ಇವರ ನಿವಾಸದಲ್ಲಿ ‘ಸಿನ್ಸ್ 1999 ಶ್ವೇತಯಾನ -78’ ಸರಣಿ ಕಾರ್ಯಕ್ರಮವಾಗಿ “ಯಕ್ಷ ಭಾವ ರಸಾಯನ” ರಂಗ ಪ್ರಸ್ತುತಿಯಲ್ಲಿ ಪ್ರಸಿದ್ಧ ಉದ್ಯಮಿ ಗೋಪಾಡಿ ಶ್ರೀನಿವಾಸ ರಾವ್, ರುಕ್ಮಿಣೀ ಶ್ರೀನಿವಾಸ ಹಾಗೂ ಜಿ. ಆರ್. ಕೃಷ್ಣಮೂರ್ತಿ ಇವರುಗಳನ್ನು ಸಂಸ್ಥೆಯ ಗುರು ಲಂಬೋದರ ಹೆಗಡೆಯವರು ಗೌರವಿಸಿದರು.
ಈ ಕಾರ್ಯಕ್ರಮದ ಆಯೋಜಕರಾದ ಗೋಪಾಡಿ ಶ್ರೀನಿವಾಸ್ ರಾವ್ ಇವರು ಮಾತನಾಡಿ “ಅವಿರತ ಪ್ರಯತ್ನದಿಂದ ಯಶಸ್ಸು ಖಂಡಿತಾ ಸಾಧ್ಯ. ಕ್ಷೇತ್ರ ಯಾವುದಾದರೂ ನಿರಂತರ ಪ್ರಯತ್ನಬೇಕು. ಬೆಳೆ ಬರಲಿಲ್ಲ ಎನ್ನುವ ಕಾರಣಕ್ಕೆ ಭೂಮಿಯನ್ನು ಉಳುಮೆ ಮಾಡದೇ, ಬಿತ್ತನೆ ಮಾಡದೇ ಬಿಡಬಾರದು ಹೇಗೋ ಕಾರ್ಯಕ್ಷೇತ್ರದಲ್ಲೂ ಪ್ರತಿಫಲ ಸಿಗಲಿಲ್ಲವೆನ್ನುವ ಕಾರಣಕ್ಕೆ ಪ್ರಯತ್ನ ಕೈ ಬಿಡಬಾರದು. ಯಶಸ್ವೀ ಕಲಾವೃಂದ ನಿರಂತರ ಚಟುವಟಿಕೆಯಿಂದ ಗೆದ್ದು ಕಲಾಸಕ್ತರ ಮನದಲ್ಲಿ ಸ್ಥಾನ ಪಡೆದಿದ್ದಾರೆ. ಬಹುಬಗೆಯಲ್ಲಿ ಕಾರ್ಯಕ್ರಮದಲ್ಲಿ ನಾವೀನ್ಯತೆಯನ್ನು ಹೊಂದುತ್ತಾ ಹೊಸ ಹೊಸ ಬೆಳೆಯನ್ನು ತೆಗೆಯುವುದರ ಮೂಲಕ ಕಲಾಸಕ್ತರಿಗೆ ಹತ್ತಿರವಾಗಿ ಸಂಸ್ಥೆ ನಿಂತಿದೆ” ಎಂದು ಅಭಿಪ್ರಾಯಪಟ್ಟರು.
“ಹೊಸತನದೊಂದಿಗೆ ಕಾರ್ಯಕ್ರಮವನ್ನು ಆಯೋಜಿಸುವುದು ಸಣ್ಣ ಕೆಲಸವಲ್ಲ. ಒಂದಷ್ಟು ಶ್ರಮದೊಂದಿಗೆ ದೊಡ್ಡ ಜವಾಬ್ದಾರಿಯನ್ನು ಹೊತ್ತು ಕಾರ್ಯಕ್ರಮದ ಯಶಸ್ಸಿಗೆ ಒತ್ತು ಕೊಡುವ ಕೆಲಸ ಅನುಭವೀ ಸಂಸ್ಥೆಯಿಂದ ದೊರೆತದ್ದು ನಿಜಕ್ಕೂ ಶ್ಲಾಘನೀಯ ಕಾರ್ಯ” ಎಂದು ಉದ್ಯಮಿ ರಾಮಚಂದ್ರ ವರ್ಣ ನುಡಿದರು.
ಕಾರ್ಯಕ್ರಮದ ನಿರೂಪಣೆಯನ್ನು ಗೋಪಾಡಿಯ ಸಾಂಸ್ಕೃತಿಕ ರಾಯಭಾರಿ ಸೀತಾರಾಮ ಧನ್ಯ ನೆರವೇರಿಸಿದರು. ಸಭಾ ಕಾರ್ಯಕ್ರಮದ ಬಳಿಕ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ‘ಪಾಂಚಜನ್ಯ ಹಾಗೂ ಪಟ್ಟಾಭಿಷೇಕ’ ಪ್ರಸಂಗದ ಕಥಾ ಭಾಗ ಪ್ರಸ್ತುತಗೊಂಡಿತು.