ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಆಧಾರಸ್ತಂಭಗಳಲ್ಲಿ ಒಬ್ಬರಾದ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯನವರ ಜನ್ಮದಿನಾಚರಣೆ ಮತ್ತು ವಿವಿಧ ದತ್ತಿಪುರಸ್ಕಾರಗಳ ಪ್ರದಾನ ಕಾರ್ಯಕ್ರಮವನ್ನು ದಿನಾಂಕ 17 ಸೆಪ್ಟಂಬರ್ 2025ರಂದು ಸಂಜೆ 5-00 ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಏರ್ಪಡಿಸಲಾಗಿದೆ.
ಕಾರ್ಯಕ್ರಮದ ಉದ್ಘಾಟನೆ ಮತ್ತು ಪ್ರಶಸ್ತಿ ಪ್ರದಾನವನ್ನು ಹಿರಿಯ ವಿದ್ವಾಂಸರಾದ ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರೀಗಳು ಮಾಡಲಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ವಹಿಸುತ್ತಾರೆ. ಹಿರಿಯ ಚಿಂತಕರಾದ ಮಂಡಗದ್ದೆ ಶ್ರೀನಿವಾಸಯ್ಯನವರು ‘ಸರ್ ಎಂ.ವಿಶ್ವೇಶ್ವರಯ್ಯ’ನವರ ಕುರಿತು ವಿಶೇಷ ಉಪನ್ಯಾಸವನ್ನು ನೀಡಲಿದ್ದು ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪಕರಲ್ಲೊಬ್ಬರಾದ ಕರ್ಪೂರ ಶ್ರೀನಿವಾಸ ರಾವ್ ಅವರ ಮರಿಮೊಮ್ಮಗ ಪ್ರಸನ್ನ ಕರ್ಪೂರ್ ಮತ್ತು ದತ್ತಿ ದಾನಿಗಳಾದ ಡಾ. ವರದಾ ಶ್ರೀನಿವಾಸ್ ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ.
ಕಾರ್ಯಕ್ರಮದಲ್ಲಿ ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರೀ ವಿದ್ವತ್ ದತ್ತಿ ಪ್ರಶಸ್ತಿಯನ್ನು ಹಿರಿಯ ವಿದ್ವಾಂಸರಾದ ಡಾ. ಬಿ.ಎಸ್. ಪ್ರಣತಾರ್ತಿಹರನ್ ಇವರಿಗೆ, ಶ್ರೀಮತಿ ಮನೋಹರಿ ಪಾರ್ಥಸಾರಥಿ ‘ಮನುಶ್ರೀ’ ದತ್ತಿ ಪುರಸ್ಕಾರವನ್ನು ಎಲ್.ಗಿರಿಜಾ ರಾವ್ ಇವರಿಗೆ, ದಿ. ಟಿ. ಶ್ರೀನಿವಾಸ ಸ್ಮರಣಾರ್ಥ ಶ್ರೀ ಪಿ.ಕೆ. ನಾರಾಯಣ ಸಾಹಿತ್ಯ ದತ್ತಿ ಪುರಸ್ಕಾರವನ್ನು ಸಂಪಟೂರು ವಿಶ್ವನಾಥ್ ಮತ್ತು ಡಾ. ಶ್ರೀವತ್ಸ ಎಸ್. ವಟಿಯವರಿಗೆ ಪ್ರದಾನ ಮಾಡಲಾಗುತ್ತದೆ. ರಾಜಸಭಾ ಭೂಷಣ ಶ್ರೀ ಕರ್ಪೂರ ಶ್ರೀನಿವಾಸರಾವ್ ದತ್ತಿ ಪುರಸ್ಕಾವನ್ನು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಸ್ನಾತಕೋತ್ತರ ತರಗತಿಯಲ್ಲಿ ರ್ಯಾಂಕ್ ಪಡೆದಿರುವ ವೇದಾ ಸಿ. ಬಿರಾದರ್ ಮತ್ತು ಕರ್ಪೂರ ರಾಮರಾವ್ ಜನ್ಮ ಶತಾಬ್ಧಿ ದತ್ತಿ ಪುರಸ್ಕಾರವನ್ನು ಬೆಂಗಳೂರು ವಿಶ್ವವಿದ್ಯಾಲಯದ ಬಿ.ಇಡಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದಿರುವ ನೇತ್ರಾವತಿ ಜಿ. ಇವರಿಗೂ ಪ್ರದಾನ ಮಾಡಲಾಗುತ್ತದೆ.