ಉಡುಪಿ : ಮಾಹೆ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ, ಎಂ.ಜಿ.ಎಂ. ಕಾಲೇಜು ಆಶ್ರಯದಲ್ಲಿ ಡಾ. ಕೆ. ಚಿನ್ನಪ್ಪ ಗೌಡ ಬರೆದ ಮಾಚಾರು ಗೋಪಾಲ ನಾಯ್ಕ ಹೇಳಿದ ‘ಸಿರಿಸಂಧಿ’ ಕೃತಿ ಬಿಡುಗಡೆ ಕಾರ್ಯಕ್ರಮವು ದಿನಾಂಕ 10-02-2024ರಂದು ನಡೆಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಂಪಿ ಕನ್ನಡ ವಿ.ವಿ. ವಿಶ್ರಾಂತ ಕುಲಪತಿ ಡಾ. ಬಿ.ಎ. ವಿವೇಕ ರೈ ಮಾತನಾಡಿ “ಜಗತ್ತಿನಲ್ಲೇ ಕರ್ನಾಟಕ ಜಾನಪದ ಸಂಸ್ಕೃತಿ ಅದ್ಭುತವಾಗಿದ್ದು, ಚಿನ್ನಪ್ಪ ಗೌಡರು ಬರೆದ ‘ಸಿರಿಸಂಧಿ’ ಕೃತಿಯೂ ತುಳುವ ನಾಡು ಸಹಿತ ರಾಜ್ಯದ ಇತರ ಭಾಗದ ಜಾನಪದಗಳ ಅಧ್ಯಯನಕ್ಕೂ ಮೇಲ್ಪಂಕ್ತಿಯಾಗಿದೆ. ತುಳುನಾಡು ವ್ಯಾಪ್ತಿ ಮಾತ್ರವಲ್ಲದೇ ಮಂಟೇಸ್ವಾಮಿ, ಮಲೆಮಹದೇಶ್ವರ, ಹಾಲುಮತ, ಕೃಷ್ಣಗೊಲ್ಲ ಮೊದಲಾದ ಜಾನಪದಗಳ ಅಧ್ಯಯನಕ್ಕೆ ಇದೊಂದು ಮಾರ್ಗದರ್ಶಿಯಾಗಿದೆ. ಸಿರಿ ಸಾಹಿತ್ಯದ ಬಗ್ಗೆ ನಿರಂತರ ಅಧ್ಯಯನ ಮುಂದುವರಿಯಬೇಕು” ಎಂದು ಹೇಳಿದರು.
ಮಾಹೆ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಮಾತನಾಡಿ, “ಯುವಜನರು ಕಲೆ, ಸಾಹಿತ್ಯದ ಬಗ್ಗೆ ಒಲವು ಮೂಡಿಸಿಕೊಳ್ಳಬೇಕು” ಎಂದರು. ವಿಮರ್ಶಕ ಡಾ. ಬಿ. ಜನಾರ್ದನ್ ಭಟ್ ಕೃತಿ ಪರಿಚಯಿಸಿದರು. ಇದೇ ಸಂದರ್ಭದಲ್ಲಿ ಲೇಖಕ ಡಾ. ಕೆ. ಚಿನ್ನಪ್ಪ ಗೌಡರನ್ನು ಸಮ್ಮಾನಿಸಲಾಯಿತು. ಎಂ.ಜಿ.ಎಂ. ಪ್ರಾಂಶುಪಾಲ ಪ್ರೊ. ಲಕ್ಷ್ಮೀ ನಾರಾಯಣ ಕಾರಂತ ಉಪಸ್ಥಿತರಿದ್ದರು. ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಬಿ. ಜಗದೀಶ್ ಶೆಟ್ಟಿ ಸ್ವಾಗತಿಸಿ, ಕನ್ನಡ ಉಪನ್ಯಾಸಕಿ ಅಂಬಿಕಾ ನಿರೂಪಿಸಿ, ವಂದಿಸಿದರು.