ಕಾಸರಗೋಡು : ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೋಡು ವತಿಯಿಂದ ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ‘ಸಿರಿಬಾಗಿಲು ಯಕ್ಷ ವೈಭವ’ವು ದಿನಾಂಕ 17-07-2024 ರಿಂದ 20-07-2024ರ ವರೆಗೆ ನಡೆಯಲಿದೆ. ಪ್ರಪ್ರಥಮ ಬಾರಿಗೆ ಹವ್ಯಾಸಿ ಕಲಾತಂಡಗಳ ಚಾರಿತ್ರಿಕ ಯಕ್ಷಗಾನ ಪ್ರದರ್ಶನ, ವಿಚಾರ ಸಂಕಿರಣ, ಭರತನಾಟ್ಯ, ಕನ್ನಡ ನಾಡಗೀತೆ ಗಾಯನ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳನ್ನು ಇದು ಒಳಗೊಂಡಿದೆ.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಇದರ ಸಹಯೋಗದೊಂದಿಗೆ ‘ಕರ್ನಾಟಕ ಸಂಭ್ರಮ-50ರ ಸವಿ ನೆನಪು 2023-24’ ಮತ್ತು ಕಲಾಪೋಷಕರ ಸಹಕಾರದೊಂದಿಗೆ ಈ ಕಾರ್ಯಕ್ರಮ ನಡೆಯಲಿದೆ. ದಿನಾಂಕ 17-07-2024 ರಂದು ಬೆಳಗ್ಗೆ 10.30ಕ್ಕೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸೋಮಣ್ಣ ಬೇವಿನಮರದ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದರು ಚಾಲನೆ ನೀಡುವರು.
ಯಕ್ಷಗಾನ ಕಲಾಪೋಷಕ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ, ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತೀಹಳ್ಳಿ, ಸದಸ್ಯ ಎ. ಆರ್. ಸುಬ್ಬಯ್ಯಕಟ್ಟೆ, ಮಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಜೇಶ್, ಯಕ್ಷಗಾನ ಅಕಾಡೆಮಿ ಸದಸ್ಯ ಸತೀಶ ಅಡಪ, ಸಂಕಬೈಲು ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸಿರಿಬಾಗಿಲು ಪ್ರತಿಷ್ಠಾನದ ಅಧ್ಯಕ್ಷ ಸಿರಿಬಾಗಿಲು ರಾಮಕೃಷ್ಣ ಮಯ್ಯ ತಿಳಿಸಿದ್ದಾರೆ.
ನಾಲ್ಕು ದಿನಗಳಲ್ಲಿ ಐದು ಜಿಲ್ಲೆಗಳಿಂದ ತೆಂಕುತಿಟ್ಟು ಹಾಗೂ ಬಡಗುತಿಟ್ಟಿನ 26 ಹವ್ಯಾಸಿ ಯಕ್ಷಗಾನ ತಂಡಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿವೆ. ಸ್ಥಳೀಯ ಯುವ ಪ್ರತಿಭೆಗಳ ಭರತನಾಟ್ಯ, ಕನ್ನಡ ಭಾವಗೀತೆಗಳ ಗಾಯನಗಳು ಇರುತ್ತವೆ. ದಿನಾಂಕ 20-07-2024 ರಂದು ಮಧ್ಯಾಹ್ನ ಘಂಟೆ 2.00ರಿಂದ ಸಿರಿಬಾಗಿಲು ಪ್ರತಿಷ್ಠಾನ ಪ್ರಕಾಶಿಸಿದ 7 ಗ್ರಂಥಗಳ ಕುರಿತಾದ ವಿಚಾರ ಸಂಕಿರಣ ನಡೆಯಲಿದೆ. ಶ್ರೀಧರ ಡಿ. ಎಸ್., ರಾಧಾಕೃಷ್ಣ ಉಳಿಯತ್ತಡ್ಕ, ರಾಧಾಕೃಷ್ಣ ಕಲ್ಚಾರ್, ಲಕ್ಷ್ಮೀ ಮಚ್ಚಿನ, ಡಾ. ನಾಗವೇಣಿ ಮಂಚಿ, ಕುಮಾರ ಸುಬ್ರಮಣ್ಯ ಮುಳಿಯಾಲ ಮತ್ತು ರಾಘವೇಂದ್ರ ಉಡುಪ ನೇರಳೆಕಟ್ಟೆ ಪುಸ್ತಕಗಳ ಬಗ್ಗೆ ವಿಮರ್ಶೆ ನಡೆಸಿಕೊಡಲಿದ್ದಾರೆ.
ಸಂಜೆ ಗಂಟೆ 4.00 ರಿಂದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ .ಎಂ. ಮೋಹನ ಆಳ್ವ ಇವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಎಡನೀರು ಮಠದ ಶ್ರೀಸಚ್ಚಿದಾನಂದ ಭಾರತೀ ಶ್ರೀಪಾದರು ಹಾಗೂ ಕೊಂಡೆಯೂರು ಮಠದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಪ್ರಸಂಗಕರ್ತ ಶ್ರೀಧರ ಡಿ. ಎಸ್., ಬಹುಭಾಷಾ ವಿದ್ವಾಂಸ ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ, ಗಡಿನಾಡ ಸಂಗೀತ ವಿದ್ವಾನ್ ಶಕುಂತಲಾ ಕೆ. ಕುಂಚಿನಡ್ಕ ಇವರಿಗೆ ‘ಸಿರಿಬಾಗಿಲು ವೆಂಕಪ್ಪಯ್ಯ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಜಿ. ಕೆ. ಭಟ್ ಸೇರಾಜೆ ಅಭಿನಂದನಾ ಭಾಷಣ ಮಾಡುವರು. ಇದೇ ಸಂದರ್ಭದಲ್ಲಿ ಪ್ರತಿಷ್ಠಾನದ ಬೆಳವಣಿಗೆಗೆ ಸಹಕರಿಸಿದ ಗಣ್ಯರಿಗೆ ಗೌರವಾರ್ಪಣೆ ನಡೆಯಲಿದೆ.