ಕಾಸರಗೋಡು : ಕುಂಬ್ಳೆ ಸೀಮೆಯ ಗಡಿನಾಡು ಕಾಸರಗೋಡಿನ ಸಿರಿಬಾಗಿಲಿನ ಸಾಂಸ್ಕೃತಿಕ ಭವನದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಯಕ್ಷಗಾನ ಕಲಾಪೋಷಕರುಗಳ ಸಹಕಾರದಲ್ಲಿ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಂಯೋಜನೆಯಲ್ಲಿ ಎರಡನೇ ದಿನವಾದ 18 ಜುಲೈ 2024ರಂದು ಏಳು ತಂಡಗಳ ಯಕ್ಷಗಾನ ಪ್ರದರ್ಶನ ನಡೆಯಿತು.
ಯಕ್ಷಗಾನ ಕ್ಷೇತ್ರದಲ್ಲಿ ಕಲಾವಿದರಿಗೆ ಮತ್ತು ಪ್ರೇಕ್ಷಕರಿಗೆ ಹಬ್ಬದ ವಾತಾವರಣ ಸೃಷ್ಟಿಯಾಯಿತು. ವಿಶೇಷವೆಂದರೆ ಯಕ್ಷಗಾನದ ಯಾವುದೇ ಪರಿಚಯವಿಲ್ಲದ ದೂರದ ಮಂಡ್ಯದ ಶ್ರೀ ಸುಲ್ತಾನ್ ಗೌಡ, ಶ್ರೀ ಶಣ್ಮುಖನ್ ಮುಂತಾದ ಪ್ರೇಕ್ಷಕರು ಭಾಗವಹಿಸಿ ಮೆಚ್ಚುಗೆಯ ನುಡಿಯಾಡಿದರು. ಇಂದು ಶುದ್ಧ ಕನ್ನಡ ಉಳಿದಿದ್ದರೆ ಅದು ಯಕ್ಷಗಾನದಲ್ಲಿ ಮಾತ್ರ ಎಂಬ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಶ್ರೀ ಧರ್ಮಸ್ಥಳ ಮೇಳದಲ್ಲಿ ಹಿರಿಯ ಕಲಾವಿದರಾಗಿದ್ದ ಕುಂಬ್ಳೆ ಶ್ರೀಧರ ರಾವ್ ಅವರಿಗೆ ನುಡಿ ನಮನ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಆಷಾಡ ಮಾಸದ ವರ್ಷ ಧಾರೆಯ ಜತೆಗೆ ಮೂರನೇ ದಿನವಾದ 19 ಜುಲೈ 2024ರಂದು ಗಡಿನಾಡು ಕಾಸರಗೋಡಿನ ಸಿರಿಬಾಗಿಲಿನ ಸಾಂಸ್ಕೃತಿಕ ಉತ್ಸವ – ಯಕ್ಷ ವೈಭವಕ್ಕೆ ಸಾಕ್ಷಿಯಾಗಿರುವ ಯಕ್ಷಗಾನ ತಂಡಗಳು, ನೆರೆದ ಪ್ರೇಕ್ಷಕ ವೃಂದ, ಜತೆಗೆ ಪ್ರತಿದಿನ 150ಕ್ಕೂ ಹೆಚ್ಚು ಕಲಾವಿದರು ಭಾಗಿಯಾದದ್ದು ವಿಶೇಷ. ಒಂದೇ ವೇದಿಕೆಯಲ್ಲಿ ಇಷ್ಟು ತಂಡಗಳಿಗೆ ಅವಕಾಶ ಕಲ್ಪಿಸಿದ ಬಗ್ಗೆ ಹಲವು ಗಣ್ಯರಿಂದ ಬಂದ ಮೆಚ್ಚುಗೆಯ ಮಾತುಗಳು, ತೆಂಕುತಿಟ್ಟು ಯಕ್ಷಗಾನದ ಪಿತಾಮಹ ಪಾರ್ತಿಸುಬ್ಬರ ಜನ್ಮನಾಡಿನಲ್ಲಿ ಮಹಾಕವಿ ಪಾರ್ತಿಸುಬ್ಬರಿಗೆ ಸಂದ ಗೌರವವೇ ಸರಿ. ಈ ದಿನ ಧರ್ಮಸ್ಥಳ ಮೇಳದ ಮತ್ತೊಬ್ಬ ಹಿರಿಯ ಕಲಾವಿದರಾದ ಗಂಗಾಧರ ಪುತ್ತೂರು ಅವರಿಗೆ ನುಡಿ ನಮನ ಶ್ರದ್ಧಾಂಜಲಿ ಸಮರ್ಪಿಸಲಾಯಿತು.