ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘದ ವತಿಯಿಂದ ಕೊಡಮಾಡುವ ‘ಸಿರಿಗನ್ನಡಂ ಗೆಲ್ಗೆ ರಾ.ಹ. ದೇಶಪಾಂಡೆ’ ಪ್ರಶಸ್ತಿ ಎಂದೇ ಪ್ರಸಿದ್ಧವಾಗಿರುವ ಸಿರಿಗನ್ನಡಂ ಗೆಲ್ಗೆ ರಾಮಚಂದ್ರ ಹಣಮಂತ ರಾವ ದೇಶಪಾಂಡೆ ಪ್ರಶಸ್ತಿಗೆ ಸಾಹಿತಿ ನಾ. ಮೊಗಸಾಲೆ ಇವರನ್ನು ಹಾಗೂ ‘ಕನ್ನಡ ಪ್ರಪಂಚ ಡಾ. ಪಾಟೀಲ ಪುಟ್ಟಪ್ಪ ಪ್ರಶಸ್ತಿ’ಗೆ ಬೆಳಗಾವಿಯ ‘ಕನ್ನಡಮ್ಮ’ ಪತ್ರಿಕೆಯನ್ನು ಆಯ್ಕೆ ಮಾಡಲಾಗಿದೆ.
ಪುರಸ್ಕಾರಗಳು ತಲಾ ರೂಪಾಯಿ 50 ಸಾವಿರ ನಗದು ಹಾಗೂ ಫಲಕವನ್ನು ಒಳಗೊಂಡಿವೆ. ಸಂಘದ 135ನೇ ಸಂಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಸಮಾರಂಭವು ನಡೆಯಲಿದೆ.
ಸಾಹಿತಿ ನಾ. ಮೊಗಸಾಲೆ:
ಕಾಸರಗೋಡು ತಾಲೂಕಿನ ಕೋಳ್ಯೂರಿನ ಮೊಗಸಾಲೆ ಎಂಬ ಗ್ರಾಮದಲ್ಲಿ ಜನಿಸಿದ ಡಾ. ನಾರಾಯಣ ಮೊಗಸಾಲೆ ವೃತ್ತಿಯಲ್ಲಿ ಆಯುರ್ವೇದ ವೈದ್ಯರು. ಕಾವ್ಯದ ಜೊತೆಗೆ ಕಥೆ ಕಾದಂಬರಿಗಳನ್ನು ರಚಿಸಿರುವ ಅವರು ಸಾಹಿತ್ಯ ಸೃಷ್ಟಿಯ ಜೊತೆಗೆ ಸಾಹಿತ್ಯ ಪ್ರಸಾರದಲ್ಲಿಯೂ ವಿಶೇಷ ಕೆಲಸ ಮಾಡಿದ್ದಾರೆ. ಕಾಂತಾವರ ಎಂಬ ಪುಟ್ಟಗ್ರಾಮದಲ್ಲಿ ಕನ್ನಡ ಸಂಘ ಕಟ್ಟಿ ನಿರಂತರ ಸಾಹಿತ್ಯಕ ಚಟುವಟಿಕೆ ನಡೆಸುತ್ತಿದ್ದಾರೆ.
‘ವಾರ್ತಮಾನದ ಮುಖಗಳು’, ‘ಪಲ್ಲವಿ’, ‘ಮೊಗಸಾಲೆಯ ನೆನಪುಗಳು’, ‘ಪ್ರಭವ’,’ ಸ್ವಂತಕ್ಕೆ ಸ್ವಂತಾವತಾರ’, ‘ನೆಲದ ನೆರಳು’, ‘ಇದಲ್ಲ ಇದಲ್ಲ’, ‘ಇಹಪರದ ಕೊಳ’, ‘ಕಾಮನ ಬೆಡಗು’, ‘ದೇವರು ಮತ್ತೆ ಮತ್ತೆ’ ಇತ್ಯಾದಿ ಕವನ ಸಂಕಲನಗಳನ್ನು ರಚಿಸಿರುವ ಇವರು ‘ಅರುವತ್ತರ ತೇರು’, ‘ಪೂರ್ವೋತ್ತರ’, ‘ಕರಣ ಕಾರಣ’ ಮುಂತಾದ ಸಮಗ್ರ ಕಾವ್ಯವನ್ನು ರಚಿಸಿದ್ದಾರೆ. ‘ಮಣ್ಣಿನ ಮಕ್ಕಳು’, ‘ಅನಂತ’, ‘ಕನಸಿನ ಬಳ್ಳಿ’, ‘ನನ್ನದಲ್ಲದ್ದು’, ‘ಪಲ್ಲಟ’, ‘ನೆಲಮುಗಿಲುಗಳ ಮಧ್ಯೆ’, ‘ದಿಗಂತ’, ‘ದೃಷ್ಟಿ’, ‘ಉಪ್ಪು’, ‘ತೊಟ್ಟಿ’, ‘ಪಂಥ’, ‘ಅರ್ಥ’, ‘ಉಲ್ಲಂಘನೆ’, ‘ಮುಖಾಂತರ’, ‘ಧಾತು’ ಮುಂತಾದ ಕಾದಂಬರಿಗಳನ್ನು ರಚಿಸಿರುವ ಇವರು ‘ಆಶಾಂಕುರ’, ‘ಹಸಿರು ಬಿಸಿಲು’, ‘ಸುಂದರಿಯ ಎರಡನೇ ಅವತಾರ’, ‘ಸೀತಾಪುರದ ಕಥೆಗಳು’, ‘ಸನ್ನಿಧಿಯಲ್ಲಿ ಸೀತಾಪುರ’ ಮುಂತಾದ ಕಥಾ ಸಂಕಲನಗಳನ್ನು ರಚಿಸಿದ್ದಾರೆ.