ಧಾರವಾಡ : ಸಿತಾರ್ ನವಾಜ್ ಉಸ್ತಾದ್ ಬಾಲೇಖಾನ್ ಸ್ಮಾರಕ ಪ್ರತಿಷ್ಠಾನ ಟ್ರಸ್ಟ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಲೂರು ವೆಂಕಟರಾವ್ ಸಭಾ ಭವನದಲ್ಲಿ ದಿನಾಂಕ 02-12-2023ರಂದು ‘ಸಿತಾರ್ ನವಾಜ್ ಉಸ್ತಾದ್ ಬಾಲೇಖಾನ್ ಸ್ಮೃತಿ ಪ್ರಶಸ್ತಿ’ ಪ್ರದಾನ ಸಮಾರಂಭ ನಡೆಯಿತು.
ಈ ಸಮಾರಂಭದಲ್ಲಿ ಮನೋವೈದ್ಯ ಆನಂದ ಪಾಂಡುರಂಗಿ ಮಾತನಾಡಿ “ಮನೋವಿಜ್ಞಾನದಲ್ಲಿ ಚಿಕಿತ್ಸಾ ವಿಧಾನಗಳ ಜೊತೆಗೆ ಪೂರಕ ಚಿಕಿತ್ಸಾ ವಿಧಾನ ಸಂಗೀತ. ಆತಂಕ ಮೊದಲಾದ ಮನೋಸಮಸ್ಯೆಗಳನ್ನು ಸಂಗೀತ ಚಿಕಿತ್ಸೆಯಿಂದ ಗುಣಪಡಿಸಬಹುದು. ಮಕ್ಕಳಲ್ಲಿ ಏಕಾಗ್ರತೆ ಕೊರತೆ, ಮೊದಲಾದ ಸಮಸ್ಯೆಗಳು ಇದ್ದರೆ ಸಂಗೀತ, ಗಾಯನ ಅಭ್ಯಾಸದಲ್ಲಿ ತೊಡಗಿಸಿದರೆ ಅವುಗಳನ್ನು ಪರಿಹರಿಸಬಹುದು. ಸಂಗೀತವು ಶೈಕ್ಷಣಿಕ, ವ್ಯಕ್ತಿತ್ವ ವಿಕಸನಕ್ಕೂ ಸಹಕಾರಿ. ಪೋಷಕರು ಮಕ್ಕಳಲ್ಲಿ ಸಂಗೀತದ ಹವ್ಯಾಸವನ್ನು ರೂಢಿಸಬೇಕು. ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಅದು ಸಹಕಾರಿ. ಸಂಗೀತ ಆಲಾಪನೆ ಉಲ್ಲಾಸ, ನೆಮ್ಮದಿ ನೀಡುತ್ತದೆ” ಎಂದು ಹೇಳಿದರು.
ವಯೋಲಿನ್ ವಾದಕರಾದ ಬಿ.ಎಸ್. ಮಠ ಮತ್ತು ಅಕ್ಕಮಹಾದೇವಿ ಹಿರೇಮಠ ದಂಪತಿಗೆ ‘ಸಿತಾರ್ ನವಾಜ್ ಉಸ್ತಾದ್ ಬಾಲೇಖಾನ್ ಸ್ಮೃತಿ ಪ್ರಶಸ್ತಿ’ ಹಾಗೂ ತಬಲಾ ವಾದಕ ಓಂಕಾರ್ ಗುಲ್ವಾಡಿ ಅವರಿಗೆ ‘ಸಿತಾರ್ ನವಾಜ್ ಉಸ್ತಾದ್ ಬಾಲೇಖಾನ್ ಸ್ಮೃತಿ ಸಹ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
‘ಸಿತಾರ್ ನವಾಜ್ ಉಸ್ತಾದ್ ಬಾಲೇಖಾನ್ ಸ್ಮೃತಿ ಪ್ರಶಸ್ತಿ’ ಪಡೆದ ಪಿಟೀಲು ವಾದಕ ಬಿ.ಎಸ್. ಮಠ ಮಾತನಾಡಿ, “ಉಸ್ತಾದ್ ಬಾಲೇಖಾನ್ ಅವರು ನನಗೆ ಅಣ್ಣನಂತಿದ್ದರು. ಆಕಾಶವಾಣಿಯಲ್ಲಿ ಮಾರ್ಗದರ್ಶನ, ಪ್ರೋತ್ಸಾಹ ನೀಡಿದ್ದರು. ಅವರ ಆಶೀರ್ವಾದ ನನ್ನ ಮೇಲೆ ಇದೆ” ಎಂದರು.
‘ಸಿತಾರ್ ನವಾಜ್ ಉಸ್ತಾದ್ ಬಾಲೇಖಾನ್ ಸ್ಮೃತಿ ಸಹ ಪ್ರಶಸ್ತಿ’ ತಬಲಾ ವಾದಕ ಓಂಕಾರ್ ಗುಲ್ವಾಡಿ ಮಾತನಾಡಿ, “ಸಾಥ್ ಸಂಗತ್‌ಗಾರರಾಗಿ ಪ್ರಶಸ್ತಿ ಪಡೆಯುವುದು ಸಾಧನೆಯ ವಿಚಾರ. ಸಾಥ್ ಸಂಗತ್ ವಿಷಯ ಬಹಳಷ್ಟು ಜನಸಮಾನ್ಯರಿಗೆ ತಿಳಿದಿಲ್ಲ, ಸಾಥ್ ಮಾಡುವುದು ಸುಲಭ ಎಂದು ಭಾವಿಸಿದ್ದಾರೆ. ಸಾಥ್ ಸಂಗತ್ ಮಾಡುವುದು ಸುಲಭ, ಸಾಥ್ ನಿಭಾಯಿಸುವುದು ಕಷ್ಟ” ಎಂದರು.
ಕಾವೇರಿ ಕಲ್ಲಪ್ಪ ಬಾರ್ಕಿ ಅವರಿಗೆ ಸೌಭಾಗ್ಯ ಲಕ್ಷ್ಮೀ ವಸಂತ ರಾವ್ ಜಾಜೀ ವಿದ್ಯಾರ್ಥಿವೇತನ ಹಾಗೂ ಜ್ಯೋತಿ ತಿಗಡಿ ಅವರಿಗೆ ಸತೀಶ್ ಹಂಪಿಹೊಳಿ ಸಂಗೀತ ಪ್ರತಿಷ್ಠಾನದ ವಿದ್ಯಾರ್ಥಿವೇತನ ವಿತರಿಸಲಾಯಿತು. ಸಿತಾರ್ ರತ್ನ ಸಮಿತಿ ಅಧ್ಯಕ್ಷರಾದ ರಾಘವೇಂದ್ರ ಆಯಿ ಅಧ್ಯಕ್ಷತೆ ವಹಿಸಿದ್ದ, ಈ ಕಾರ್ಯಕ್ರಮದಲ್ಲಿ ಫರೀದ್ ಹಸನ್ ಅವರು ಗಾಯನ ಪ್ರಸ್ತುತ ಪಡಿಸಿ, ಓಂಕಾರ್ ಗುಲ್ವಾಡಿ ಅವರು ತಬಲಾ ಹಾಗೂ ಸತೀಶ್ ಭಟ್ ಹೆಗ್ಗಾರ್ ಹಾರ್ಮೋನಿಯಂನಲ್ಲಿ ಸಹಕರಿಸಿದರು. ಬಾಲೇಖಾನ್ ಅವರ ಮೊಮ್ಮಗ ಹ್ಯಾರಿಸ್ ಖಾನ್ ಅವರ ಸಿತಾರ್ ವಾದನಕ್ಕೆ ಮಲ್ಲೇಶ್ ಹೂಗಾರ್ ಅವರು ತಬಲಾ ಸಾಥ್ ನೀಡಿದರು.