ಬೆಳಗಾವಿ : ಬೆಳಗಾವಿ ರಂಗಸಂಪದ ತಂಡದವರಿಂದ ದಿನಾಂಕ 17 ಆಗಸ್ಟ್ 2025ರಂದು ಕೋನವಾಳ ಬೀದಿಯಲ್ಲಿರುವ ಲೋಕಮಾನ್ಯ ರಂಗಮಂದಿರದಲ್ಲಿ ಶ್ರೀ ವಿಜಯದಾಸರ ಜೀವನ ಘಟನೆಯನ್ನಾದರಿಸಿದ ಭಕ್ತಿ ಪ್ರಧಾನ ಸುಂದರ ನಾಟಕ ‘ಸ್ಮರಿಸಿ ಬದುಕಿರೋ….’ ಎಂಬ ನಾಟಕ ಪ್ರದರ್ಶನಗೊಂಡಿತು.
ಜಾಗಟೆಯನ್ನು ಬಾರಿಸುವುದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದ ಕೂಡಲಿಯ ಶ್ರೀ ಕೂಡ್ಲಿ ಆರ್ಯ ಅಕ್ಟೋಭ್ಯತೀರ್ಥರು ಮಾತನಾಡಿ “ಸುಮಾರು ಇಪ್ಪತ್ತೈದು ವರ್ಷಗಳಿಂದ ವೈವಿದ್ಯಮಯ ನಾಟಕಗಳನ್ನು ನೀಡುತ್ತ ಬಂದಿರುವ ರಂಗಸಂಪದ ತಂಡವು ಈಗ ಧಾರ್ಮಿಕ, ಭಕ್ತಿಪ್ರಧಾನ ನಾಟಕಗಳತ್ತ ಆಸಕ್ತಿಯನ್ನು ತೋರುತ್ತಿರುವುದು ನಿಜಕ್ಕೂ ನನಗೆ ಸಂತೋಷವನ್ನುಂಟು ಮಾಡಿದೆ. ‘ಸ್ಮರಿಸಿ ಬದುಕಿರೋ….’ ನಾಟಕ ಕರ್ನಾಟಕದಾದ್ಯಂತ ಪ್ರದರ್ಶನಗೊಳ್ಳಲಿ” ಎಂದು ಹಾರೈಸಿದರು.
ಪಂ. ಪ್ರಮೋದಾಚಾರ್ಯ ಕಟ್ಟಿಯವರು ಮಾತನಾಡಿ, “ರಂಗಸಂಪದ ನಮ್ಮ ಸಂಸ್ಕೃತಿಯನ್ನು ಇಂದಿನ ಯುವ ಪೀಳಿಗೆಗೆ ಪರಿಚಯುತ್ತಿರುವಂತಹ ಕಾರ್ಯ ನಿಜಕ್ಕೂ ಶ್ಲಾಘನೀಯ. ದಾಸರು, ಶರಣರನ್ನು ಪರಚಯಿಸುವಂತಹ ಇನ್ನಷ್ಟು ನಾಟಕಗಳು ಇವರಿಂದ ಪ್ರದರ್ಶನಗೊಳ್ಳಲಿ. ಈ ನಾಟಕದ ಯಶಸ್ಸಿನ ಹಿಂದೆ ನಿರ್ದೇಶಕ ಡಾ. ಅರವಿಂದ ಕುಲಕರ್ಣಿ ಮತ್ತು ತಂಡದವರ ಶ್ರಮ ಸಾಕಷ್ಟಿದೆ. ಅವರನ್ನು ಮನಃಪೂರ್ವಕವಾಗಿ ಅಭಿನಂದಿಸುತ್ತೇನೆ” ಎಂದು ಹೇಳಿದರು.
ಇಪ್ಪತ್ತೆರಡು ಕಲಾವಿದರು ಈ ನಾಟಕದಲ್ಲಿ ಅಭಿನಯಿಸಿದ್ದಾರೆ. ಪ್ರಸಾದ ಕಾರಜೋಳ, ಪವಿತ್ರಾ ರೇವಣಕರ, ವಾಮನ ಮಳಗಿ ತಮ್ಮ ಭಾವಪೂರ್ಣ ಅಭಿನಯದಿಂದ ಪ್ರೇಕ್ಷಕರ ಗಮನ ಸೆಳೆದರು. ಪ್ರೇಕ್ಷಕರ ಚಪ್ಪಾಳೆಗಳು ಇದೊಂದು ಯಶಸ್ವಿ ನಾಟಕವೆಂದು ಹೇಳಿದವು. ತಮ್ಮ ಮಾತುಗಳಲ್ಲಿ ಡಾ. ಅರವಿಂದ ಕುಲಕರ್ಣಿಯವರು ಶ್ರೀ ರಾಘವೇಂದ್ರ ಸ್ವಾಮಿ ಮಠದ ಪ್ರಸನ್ನ ದೇಶಪಾಂಡೆ, ಚಿತ್ರಕಲಾವಿದೆ ಪೂರ್ವಿ ರಾಜಪುರೋಹಿತ, ಕಿರುತೆರೆ ಕಲಾವಿದ ಪ್ರಸಾದ ಪಂಡಿತ, ನಿರ್ದೇಶಕ ವಿನಯ ಕುಲಕರ್ಣಿ ಸಹಕರಿಸಿದ ಎಲ್ಲರನ್ನೂ ಸ್ಮರಿಸಿಕೊಂಡರು.
ಪ್ರೇಕ್ಷಕರಿಂದ ಕಿಕ್ಕಿರುದು ತುಂಬಿದ ರಂಗಮಂದಿರದಲ್ಲಿ ಪ್ರದರ್ಶನಗೊಂಡ ‘ಸ್ಮರಿಸಿ ಬದುಕಿರೋ..’ ನಾಟಕ ರಚನೆ ದಂಡಿನ ಗಂಗಾವತಿಯವರಾಗಿತ್ತು. ಸಂಗೀತ ಸಂಯೊಜನೆ ಶ್ರೀಮತಿ ಸೀಮಾ ಕುಲಕರ್ಣಿಯವರದಾಗಿತ್ತು. ಡಾ. ಅರವಿಂದ ಕುಲಕರ್ಣಿ ನಿರ್ದೇಶನವಿತ್ತು. ಮೇಕಪ್ ಕಿರಣ ಮಹಾಲೆ ಮಾಡಿದ್ದರು.