ಮಂಗಳೂರು : ಕಾಸರಗೋಡು ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ಕೀರಿಕ್ಕಾಡು ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಸಭಾ ಭವನದಲ್ಲಿ ದಿನಾಂಕ 10 ಆಗಸ್ಟ್ 2024ರಂದು ದೇಲಂಪಾಡಿ ಮಹಾಲಿಂಗ ಪಾಟಾಳಿ-ಸೀತಮ್ಮ ದಂಪತಿಯ ಹೆಸರಲ್ಲಿ ಪ್ರಪ್ರಥಮವಾಗಿ ಕೊಡಲ್ಪಡುವ ಸ್ಮೃತಿ ಗೌರವವನ್ನು ಖ್ಯಾತ ಹಿರಿಯ ಸಾಹಿತಿ, ಅರ್ಥಧಾರಿ ಡಾ. ರಮಾನಂದ ಬನಾರಿ ಅವರಿಗೆ ನೀಡಿ ಗೌರವಿಸಲಾಯಿತು.
ಮಹಾಲಿಂಗ ಪಾಟಾಳಿ ಅವರ 18ನೇ ವರ್ಷದ ಸಂಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರ್ಥಧಾರಿ ನಿವೃತ್ತ ಪ್ರಾಧ್ಯಾಪಕ ರಾಮಣ್ಣ ಮಾಸ್ತರ್ ವಹಿಸಿದ್ದರು. ಭಾಗವತ ನಾರಾಯಣ ತೋರಣಗಂಡಿ ಸಂಸ್ಕರಣಾ ಭಾಷಣ ಮಾಡಿದರು. ಯಕ್ಷಗಾನ ಕಲೋಪಾಸಕ ಎಂ. ರಮಾನಂದ ರೈ ವಂದಿಸಿದರು. ನಾರಾಯಣ ದೇಲಂಪಾಡಿ ಅವರು ಪ್ರಾಸ್ತಾವಿಕ ಮಾತುಗಳೊಂದಿಗೆ ನಿರೂಪಣೆಗೈದರು.
ಮೊದಲಿಗೆ ಸ್ಥಳ ಸಾನ್ನಿಧ್ಯ ಶ್ರೀ ದೇವರ ಪೂಜಾರ್ಚನೆಯೊಂದಿಗೆ ಆರಂಭಗೊಂಡ ಈ ಕಲಾ ಸಾಂಸ್ಕೃತಿಕೋತ್ಸವದಲ್ಲಿ ಸಂಘದ ಹಿರಿಯ ಭಾಗವತ, ಗುರುಗಳಾದ ವಿಶ್ವವಿನೋದ ಬನಾರಿ ಅವರ ನಿರ್ದೇಶನದಲ್ಲಿ ಪಾರ್ತಿಸುಬ್ಬ ವಿರಚಿತ ‘ಸೀತಾಪಹಾರ – ಜಟಾಯು ಮೋಕ್ಷ’ ತಾಳಮದ್ದಳೆ ನಡೆಯಿತು. ಭಾಗವತರಾದ ರಚನಾ ಚಿದ್ಗಲ್ ಇವರ ಹಾಡುಗಾರಿಕೆಗೆ ಚೆಂಡೆ ಮದ್ದಳೆ ವಾದಕರಾಗಿ ಎಂ. ಅಪ್ಪಯ್ಯ ಮಣಿಯಾಣಿ, ಕೆ. ಶಿವರಾಮ ಕಲ್ಲೂರಾಯ, ವಿಷ್ಣುಶರಣ ಬನಾರಿ, ನಾರಾಯಣ ಪಾಟಾಳಿ ಮಯ್ಯಾಳ, ಕೃಷ್ಣಪ್ರಸಾದ ಬೆಳ್ಳಿಪ್ಪಾಡಿ ಮತ್ತು ಚೈತಾಲಿ ಕಾಂಚೋಡು ಅವರು ಸಹಕರಿಸಿದರು. ಅರ್ಥಧಾರಿಗಳಾಗಿ ಬಾಲಕೃಷ್ಣ ಗೌಡ ದೇಲಂಪಾಡಿ, ‘ಮುದಿಯಾರು ಐತ್ತಪ್ಪ ಗೌಡ, ರಮಾನಂದ ರೈ ದೇಲಂಪಾಡಿ, ವೀರಪ್ಪ ಸುವರ್ಣ ಬೆಳ್ಳಿಪ್ಪಾಡಿ, ರಾಮನಾಯ್ಕ ದೇಲಂಪಾಡಿ, ಪದ್ಮನಾಭ ರಾವ್ ಮಯ್ಯಾಳ, ಭಾಸ್ಕರ ಮಾಸ್ತರ್ ದೇಲಂಪಾಡಿ ಭಾಗವಹಿಸಿದ್ದರು. ನಂದಕಿಶೋರ ಬನಾರಿ ವಂದಿಸಿದರು.