ಮಡಿಕೇರಿ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿನಿಧಿಗಳಲ್ಲಿ ಅತ್ಯಂತ ಪ್ರತಿಷ್ಟಿತವಾದ ದತ್ತಿ ‘ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿ’ ಈ ದತ್ತಿಯನ್ನು ಗೌರಮ್ಮರವರ ಪುತ್ರ ಬಿ.ಜಿ. ವಸಂತರವರು ಕೊಡಗಿನ ಮಹಿಳಾ ಲೇಖಕಿಯರು ಪ್ರಕಟ ಪಡಿಸಿದ ಉತ್ತಮ ಕೃತಿಗೆ ಪ್ರಶಸ್ತಿ ನೀಡಿ ಗೌರವಿಸುವ ಸಲುವಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಲಾಗಿದೆ. ಇಲ್ಲಿಯವರೆಗೆ 19 ಲೇಖಕಿಯರಿಗೆ ಈ ಪ್ರಶಸ್ತಿ ನೀಡಲಾಗಿದ್ದು, 2023-24ನೇ ಸಾಲಿನ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಿದ್ದು 9 ಲೇಖಕಿಯರು ತಮ್ಮ ಕೃತಿಗಳನ್ನು ಪ್ರಶಸ್ತಿಗಾಗಿ ಪ್ರಸ್ತುತ ಪಡಿಸಿದ್ದರು.
ಜಿಲ್ಲೆಯ ಹಿರಿಯ ಮೂರು ಸಾಹಿತಿಗಳನ್ನು ತೀರ್ಪುಗಾರರನ್ನಾಗಿಸಿ ಅವರು ಎಲ್ಲಾ ಪುಸ್ತಕಗಳನ್ನು ಪರಾಮರ್ಶಿಸಿ ಶ್ರೀಮತಿ ಕೆ.ಜಿ. ರಮ್ಯ ಮೂರ್ನಾಡುರವರು ರಚಿಸಿದ ‘ದಾಹಗಳ ಮೈ ಸವರುತ್ತಾ’ ಕವನ ಸಂಕಲನಕ್ಕೆ ಈ ಪ್ರಶಸ್ತಿ ಲಭ್ಯವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್ ತಿಳಿಸಿದ್ದಾರೆ. ಅಧ್ಯಾಪಕಿಯಾಗಿರುವ ಶ್ರೀಮತಿ ಕೆ.ಜಿ ರಮ್ಯಾ ಜಿಲ್ಲೆಯ ಓರ್ವ ಅತ್ಯುತ್ತಮ ಕವಿಯತ್ರಿಯಾಗಿದ್ದಾರೆ. ಹಲವಾರು ಕವಿತೆಗಳನ್ನು ಕವಿಗೋಷ್ಠಿಗಳಲ್ಲಿ ವಾಚಿಸಿ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳಿಸಿದ್ದಾರೆ.