ಬೆಂಗಳೂರು: ಶ್ರೀ ದುರ್ಗಾ ನೃತ್ಯ ಅಕಾಡೆಮಿ ಚಾರಿಟೇಬಲ್ ಟ್ರಸ್ಟ್ ಮೈಸೂರು (ರಿ) ಹಾಗೂ ಡಾ|| ಜೆ.ಪಿ. ಕಲ್ಪನಾ ಮತ್ತು ಕುಟುಂಬದವರು ಅರ್ಪಿಸುವ ಗುರು ವಿದುಷಿ ಶ್ರೀಮತಿ ಶ್ರೀವಿದ್ಯಾ ಶಶಿಧರ್ ಇವರ ಶಿಷ್ಯೆಯಾದ ಶ್ರೀಮತಿ ಪ್ರಣತಿ ಎಸ್ ವಾಟಾಳ್ ಇವರ ಭರತನಾಟ್ಯ ರಂಗಪ್ರವೇಶವು ದಿನಾಂಕ 23-07-2023ರ ಭಾನುವಾರ ಸಂಜೆ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯದ ನಿವೃತ್ತ ಪೊಲೀಸ್ ಮಹಾನಿರ್ದೇಶಕರಾದ ಶ್ರೀ ಶಂಕರ್ ಬಿದರಿ, ಬೆಂಗಳೂರಿನ ಸುಪ್ರಸಿದ್ಧ ಸಂಗೀತ ಮತ್ತು ನೃತ್ಯ ವಿದ್ವಾಂಸರು, ವಿಮರ್ಶಕರು ಮತ್ತು ಅಂಕಣಕಾರರಾದ ಸಂಗೀತ ಕಲಾರತ್ನ ಡಾ. ಎಂ. ಸೂರ್ಯಪ್ರಸಾದ್ ಹಾಗೂ ಕಾರ್ಯಕ್ರಮದಲ್ಲಿ ವಿಶೇಷ ಅಭ್ಯಾಗತರಾಗಿ ಮಂಗಳೂರಿನ ನೃತ್ಯಭಾರತಿ ಕದ್ರಿಯ ಕರ್ನಾಟಕ ಕಲಾಶ್ರೀ ಗುರು ಶ್ರೀಮತಿ ಗೀತಾ ಸರಳಾಯ, ಮಂಡ್ಯದ ಗುರುದೇವ ನೃತ್ಯ ಅಕಾಡೆಮಿಯ ಗುರು ಡಾ. ಶ್ರೀಮತಿ ಚೇತನಾ ರಾಧಾಕೃಷ್ಣ ಹಾಗೂ ಮಂಗಳೂರಿನ ಹೊಸಬೆಟ್ಟುವಿನ ಶ್ರೀ ಶಾರದಾ ನೃತ್ಯಾಲಯದ ನೃತ್ಯ ವಿದುಷಿ ಶ್ರೀಮತಿ ಭಾರತಿ ಸುರೇಶ್ ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಕಲಾವಿದೆಗೆ ಜೊತೆಯಾಗಿ ನಟುವಾಂಗದಲ್ಲಿ ಮೈಸೂರಿನ ವಿದುಷಿ ಶ್ರೀಮತಿ ಶ್ರೀವಿದ್ಯಾ ಶಶಿಧರ್, ವೀಣೆಯಲ್ಲಿ ಪಾಂಡಿಚೇರಿಯ ಕಲೈಮಾಮಣಿ ಡಾ. ಪಿ. ಸುಕುಮಾರ್, ಹಾಡುಗಾರಿಕೆಯಲ್ಲಿ ಬೆಂಗಳೂರಿನ ಕರ್ನಾಟಕ ಕಲಾಶ್ರೀ ವಿದ್ವಾನ್ ಶ್ರೀ.ಡಿ.ಎಸ್. ಶ್ರೀವತ್ಸ, ಮೃದಂಗದಲ್ಲಿ ಬೆಂಗಳೂರಿನ ವಿದ್ವಾನ್ ಶ್ರೀ ಸಾಯಿವಂಶಿ, ಕೊಳಲಿನಲ್ಲಿ ಬೆಂಗಳೂರಿನ ವಿದ್ವಾನ್ ಶ್ರೀ ಗಣೇಶ್ ಕೆ.ಸ್, ಸಹಕರಿಸಲಿದ್ದಾರೆ ಹಾಗೂ ಕಾರ್ಯಕ್ರಮದ ನಿರೂಪಣೆಯನ್ನು ಬೆಂಗಳೂರು ಶ್ರೀ ಷಡಕ್ಷರಿ ಸುಗ್ಗನಹಳ್ಳಿ ನಡೆಸಿಕೊಡಲಿದ್ದಾರೆ.
ಕಲಾವಿದೆಯ ಪರಿಚಯ
ಶ್ರೀಮತಿ ಪ್ರಣತಿ ಎಸ್ ವಾಟಾಳ್ ಇವರು ಮೈಸೂರಿನ ಶ್ರೀಮತಿ ಜ್ಯೋತಿ ಮತ್ತು ಶ್ರೀಕಂಠಮೂರ್ತಿ ಅವರ ದ್ವಿತೀಯ ಪುತ್ರಿ. ಬೆಳೆಯುವ ಪೈರು ಮೊಳಕೆಯಲ್ಲಿಯೇ ಎಂಬಂತೆ ಬಾಲ್ಯದಿಂದಲೇ ಪ್ರದರ್ಶನ ಕಲೆಯಲ್ಲಿ ಆಸಕ್ತಿ ಬೆಳಸಿಕೊಂಡವರು. ತಮ್ಮ ಏಳನೆಯ ವಯಸ್ಸಿನಲ್ಲಿ ಮಂಗಳೂರಿನ ವಿದುಷಿ ಶ್ರೀ ಭಾರತಿ ಸುರೇಶ್‌ರವರ ಮಾರ್ಗದರ್ಶನದಲ್ಲಿ ಭರತನಾಟ್ಯವನ್ನು ಶ್ರದ್ಧೆಯಿಂದ ಕಲಿಯಲಾರಂಭಿಸಿದರು. ಕರ್ನಾಟಕ ಸೆಕೆಂಡರಿ ಬೋರ್ಡ್ ನಡೆಸುವ ಭರತನಾಟ್ಯ ಕಲೆಯ ಕಿರಿಯ ಮತ್ತು ಹಿರಿಯ ಹಂತದ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಹಾಗೆಯೇ ಇವರು ಸಂಗೀತ ಮತ್ತು ಕೀಬೋರ್ಡ್ ಅಭ್ಯಾಸವನ್ನೂ ಮಾಡಿದ್ದಾರೆ. ವಿವಾಹದ ನಂತರವೂ ಪತಿ ಶ್ರೀಯುತ ಅಜಯ್ ಕೀರ್ತಿಯವರ ಪ್ರೋತ್ಸಾಹದಿಂದ ತಮ್ಮ ಕಲಾಪ್ರತಿಭೆಯನ್ನು ಮುಂಡುವರಿಸಿಕೊಂಡು ಹೋಗಲು ಅವಕಾಶ ದೊರೆತಿರುವುದು ಸಂತಸದ ವಿಚಾರ. ಪ್ರಸ್ತುತ ಮೈಸೂರಿನ ಶ್ರೀ ದುರ್ಗಾ ನೃತ್ಯ ಅಕಾಡೆಮಿಯ ಗುರುಗಳಾದ ವಿದುಷಿ ಶ್ರೀಮತಿ ಶ್ರೀವಿದ್ಯಾ ಶಶಿಧರ್ ಅವರ ಮಾರ್ಗದರ್ಶನದಲ್ಲಿ ಭರತನಾಟ್ಯ ಸ್ನಾತಕ ವಿದ್ವತ್ತನ್ನು ಅಭ್ಯಾಸ ಮಾಡುತ್ತಿದ್ದಾರೆ.
ಪ್ರಣತಿ ಎಸ್ ವಾಟಾಳ್ ಅವರು ಶೈಕ್ಷಣಿಕವಾಗಿ ಮೈಸೂರಿನ ವಿದ್ಯಾವಿಕಾಸ್ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ಎಲೆಕ್ಟ್ರಿಕಲ್ ಪದವೀಧರೆಯಾಗಿದ್ದಾರೆ. ಪ್ರಸ್ತುತ ಬೆಂಗಳೂರಿನ ಹ್ಯಾಶ್ಡಿನ್ ಬೈ ಡೆಲಾಯ್ಡ್ ಕಂಪನಿಯಲ್ಲಿ ಡೆಲವರಿ ಸ್ಪೆಷಲಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಅನೇಕ ಪ್ರತಿಷ್ಠಿತ ವೇದಿಕೆಗಳಲ್ಲಿ ಪ್ರದರ್ಶನ ನೀಡಿ ಕಲಾಸಕ್ತರಿಂದ ಮಾತ್ರವಲ್ಲದೆ ಕಲಾವಿದರಿಂದಲೂ ಮೆಚ್ಚುಗೆ ಗಳಿಸಿದ್ದಾರೆ.
ಇವರು ಹೆಸರಾಂತ ಗುರುಗಳಾದ ದೆಹಲಿಯ ಪದ್ಮಶ್ರೀ ಗೀತಾ ಚಂದ್ರನ್, ಶ್ರೀಮತಿ ಶ್ವೇತಾ ಪ್ರಚಂಡೆ, ಮಂಗಳೂರಿನ ಶ್ರೀಮತಿ ರಾಧಿಕಾ ಶೆಟ್ಟಿ ಹಾಗೂ ಮಂಜುನಾಥ್ ಎನ್ ಪುತ್ತೂರು (ತಾಳ ಪ್ರಕ್ರಿಯೆ) ಇವರುಗಳು ಏರ್ಪಡಿಸಿದ ಕಾರ್ಯಾಗಾರಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ.
ವಿದುಷಿ ಶ್ರೀಮತಿ ಶ್ರೀವಿದ್ಯಾ ಶಶಿಧರ್
ಎಳವೆಯಿಂದಲೇ ನೃತ್ಯದಲ್ಲಿ ಆಸಕ್ತಿ ಹೊಂದಿದ್ದ ಶ್ರೀವಿದ್ಯಾ ತಮ್ಮ ಪೋಷಕರ ಪ್ರೋತ್ಸಾಹ ದಿಂದ ಮಂಗಳೂರಿನ ಹೆಸರಾಂತ ಗುರುಗಳಾದ ಕರ್ನಾಟಕ ಕಲಾಶ್ರೀ ಶ್ರೀಮತಿ ಗೀತಾ ಸರಳಾಯ ಹಾಗು ರಶ್ಮಿ ಚಿದಾನಂದರ ಮಾರ್ಗದರ್ಶನದಲ್ಲಿ ವಿದ್ವತ್ ಹಂತದ ಪರೀಕ್ಷೆ ಪೂರೈಸಿ ಕಟೀಲಿನಲ್ಲಿ ರಂಗಪ್ರವೇಶವನ್ನು ಮಾಡಿರುತ್ತಾರೆ. ವಿವಾಹದ ನಂತರ ಪತಿ ಶ್ರೀ ಶಶಿಧರ್ ಇವರ ಸಹಕಾರದೊಂದಿಗೆ ಮೈಸೂರಿನ ಗುರುಗಳಾದ ಡಾ. ಚೇತನಾ ರಾಧಾಕೃಷ್ಣರ ಮಾರ್ಗದರ್ಶನದಲ್ಲಿ ಎಂ. ಡಾನ್ಸ್ ಪದವಿ ಪಡೆದು, ಮೈಸೂರಿನಲ್ಲಿ ಕಳೆದ 10 ವರ್ಷಗಳಿಂದ “ಶ್ರೀ ದುರ್ಗಾ ನೃತ್ಯ ಅಕಾಡೆಮಿ”. ಸಂಸ್ಥೆ ಸ್ಥಾಪಿಸಿ ನೂರಾರು ವಿದ್ಯಾರ್ಥಿಗಳಿಗೆ ನೃತ್ಯಶಿಕ್ಷಣ ನೀಡುತ್ತಿದ್ದಾರೆ. ದೂರದರ್ಶನದ ‘ಬಿ’ ಶ್ರೇಣಿಯ ಕಲಾವಿದೆಯಾಗಿರುವ ಇವರು ಪ್ರಸ್ತುತ ಚೆನ್ನೈನ ಗುರುಗಳಾದ ಶ್ರೀ ಶಿಜಿತ್ ನಂಬಿಯಾರ್ ಹಾಗು ಪಾರ್ವತಿ ಮೆನನ್ ಅವರ ಬಳಿ ನೃತ್ಯ ಅಭ್ಯಾಸ ಮಾಡುತಿದ್ದಾರೆ. ಶ್ರೀ ದುರ್ಗಾ ನೃತ್ಯ ಅಕಾಡೆಮಿಯ ವಿದ್ಯಾರ್ಥಿಗಳೊಂದಿಗೆ ರಾಜ್ಯ ಹಾಗು ಹೊರರಾಜ್ಯಗಳಲ್ಲೂ ನೃತ್ಯ ಕಾರ್ಯಕ್ರಮ ನೀಡಿರುತ್ತಾರೆ.