ಸುತ್ತಲೂ ಹಸಿರಿನ ರಕ್ಷಾ ಕವಚ, ಕೆಂಪು ಹೆಂಚುಗಳ ಮೇಲೆ ಬಿದ್ದು ಜಿಟಿ ಜಿಟಿ ಸದ್ದು ಮಾಡುತ್ತಿದ್ದ ಮಳೆ…ತೊಟ್ಟಿ ಮನೆಯ ಆ ಹುಲ್ಲು ಹಾಸಿನ ಮೇಲೆ ಶಬ್ಧವಾಗದಂತೆ ಸದ್ದು ಮಾಡುತ್ತಿದ್ದ ಸೂರು ನೀರು… ಚುಮು ಚುಮು ಚಳಿ…ಮೂಗರಳುವಂತೆ ಅಡುಗೆ ಕೋಣೆಯಿಂದ ಬರುತ್ತಿದ್ದ ಕಾಫಿಯ ಸುವಾಸನೆ, ಉಪ್ಪಿಟ್ಟಿಗಾಗಿ ಬೇಯುತ್ತಿದ್ದ ರವೆಯ ಘಮ ಘಮ…ಕಣ್ಣೆದುರು ರೆಕ್ಕೆ ಅಗಿಲಿಸಿಕೊಂಡು ಹಾರಾಡುತ್ತಿದ್ದ ಬಾವಲಿಗಳು…ಹೀಗೆ ಥೇಟ್ ಮಲೆನಾಡಿನ ಮೂಡಿಗೆರೆಯ ವಾತಾವರಣದಂಥ ಶರವಣಕುಮಾರ್ ಅವರ ಮನೆ ‘ಪೂರ್ಣಚಂದ್ರ’ದಲ್ಲಿ ದಿನಾಂಕ 08 ಸೆಪ್ಟೆಂವರ್ 2024ರ ಭಾನುವಾರ ಇಳಿ ಸಂಜೆಯ ಹೊತ್ತಿನಲ್ಲಿ ಕರ್ವಾಲೋದ ಪೂರ್ಣಚಂದ್ರ ತೇಜಸ್ವಿ ತಮ್ಮ ‘ಕಿವಿ’ ಜತೆ ಆವಾಹನೆಯಾಗಿದ್ದರು ! ಮಂದಣ್ಣ, ಪ್ರಭಾಕರ, ಎಂಗ್ಟ, ಪ್ಯಾರಾ, ಬಿರಿಯಾನಿ ಕರಿಯಪ್ಪ… ಒಬ್ಬರಾ ? ಇಬ್ಬರಾ ? ಪೂಚಂತೇ ಅವರ ಕೃತಿಗಳ ಪಾತ್ರಧಾರಿಗಳ ದೊಡ್ಡ ಮೆರವಣಿಗೆಯೇ ನಡೆದುಹೋಯಿತು. ತೇಜಸ್ವಿಯವರನ್ನು ಮೌನವಾಗಿ ಧ್ಯಾನಿಸುವವರಿಗೆ ಅಪ್ಯಾಯಮಾನವಾದಂಥ ವಾತಾವರಣ ಅದು. ಈ ಕಾರ್ಯಕ್ರಮ ನೋಡಿದ್ದರೆ ಬರ್ತ್ಡೇ ಆಚರಣೆ, ಸನ್ಮಾನ ಎಂದರೆ ಬಾಯಿಗೆ ಬಂದಂತೆ ಬಯ್ದು ದೂರ ಓಡುತ್ತಿದ್ದ ತೇಜಸ್ವಿ ಅವರೇ ಮೆಚ್ಚುತ್ತಿದ್ದರೇನೋ ಎನ್ನುವಂತೆ ಕೆ.ಎಸ್. ಮೂರ್ತಿ, ನಂಜುಂಡಸ್ವಾಮಿ ಅಚ್ಚುಕಟ್ಟಾಗಿ ಸಂಘಟಿಸಿದ್ದರು. ಒಂದು ಕಡೆಯಿಂದ ನೋಡಿದರೆ ತೇಜಸ್ವಿ ಅಪರಾವತಾರದಂತೆಯೇ ಇರುವ ಕಣಿವೆ ಭಾರದ್ವಾಜ್ ಅವರು ತೇಜಸ್ವಿ ಅವರನ್ನು ವಿಭಿನ್ನವಾಗಿ ತೆರೆದಿಟ್ಟು ‘ಹೀಗೂ ಇದ್ದರು ತೇಜಸ್ವಿ’ ಎನ್ನುವ ಅರಿವು ಮೂಡಿಸಿದರು. ಕುವೆಂಪು ಮತ್ತು ಪೂಚಂತೇ ನಡುವಿನ ವೈರುಧ್ಯತೆಗಳನ್ನು ಹೇಳುತ್ತಲೇ ತೇಜಸ್ವಿ ಅವರನ್ನು ಮತ್ತಷ್ಟು ಮನದಟ್ಟು ಮಾಡಿಸಲು ಪ್ರಯತ್ನಿಸಿದರು ಮೆ.ನಾ. ವೆಂಕಟನಾಯಕ್. ಇತಿಹಾಸ ಉಪನ್ಯಾಸಕಿ ಶಾಂತಿ ಅವರೂ ತೇಜಸ್ವಿ ಬದುಕು ಬರಹದ ಪರಿಚಯ ಮಾಡಿಕೊಟ್ಟರು. ರಾಜಕಾರಣಿ ವಿ.ಪಿ. ಶಶಿಧರ್ ಅವರ ವಿಭಿನ್ನ ಮಾತುಗಳೂ ಗಮನ ಸೆಳೆದವು. ಒಟ್ಟಾರೆ ಇದೊಂದು ವಿಶಿಷ್ಟ ಕಾರ್ಯಕ್ರಮ. ಇಂಥ ಕಾರ್ಯಕ್ರಮಗಳು ಮತ್ತಷ್ಟು ಮೂಡಿಬರಲಿ..ಸಾಹಿತ್ಯ ಕ್ಷೇತ್ರ ಶ್ರೀಮಂತವಾಗಲಿ.