ಸುಳ್ಯ : ಮೋಹನ ಸೋನ ಕಲಾ ಗ್ಯಾಲರಿ ಆಯೋಜಿಸುವ ‘ಸೋನ ನೆನಪು’ ಕಾರ್ಯಕ್ರಮವು ದಿನಾಂಕ 14-10-2023 ರಂದು ಸುಳ್ಯ ತಾಲೂಕಿನ ಸೊಣಂಗೇರಿಯ ನಡುಮನೆಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕಾರವಾರದ ಕರಾವಳಿ ಮುಂಜಾವು ಪತ್ರಿಕೆಯ ಸಂಪಾದಕರಾದ ಗಂಗಾಧರ ಹಿರೇಗುತ್ತಿ ಭಾಗವಹಿಸಲಿದ್ದಾರೆ. ಸುಮಧುರ ಕಂಠದ ಗಾಯಕ ದೇವಾನಂದ ಗಾಂವ್ಕರ್ ಇವರಿಂದ ಹಾಡುಗಳ ಕಾರ್ಯಕ್ರಮ ನಡೆಯಲಿದೆ. ಮತ್ತು ಸಂದರ್ಭದಲ್ಲಿ ಮೋಹನ ಸೋನ ಕಲಾ ಗ್ಯಾಲರಿಯಲ್ಲಿ ಸುದೇಶ್ ಮಹಾನ್ ಮತ್ತು ಆದ್ಯ ರಾಜೇಶ್ ಮಹಾನ್ ಇವರ ಕಲಾಕೃತಿಗಳ ಪ್ರದರ್ಶನ ನಡೆಯಲಿದೆ.
ಮೋಹನ ಸೋನ :
ವರ್ಣ ಚಿತ್ರ ಕಲಾವಿದ, ಶಿಕ್ಷಕ, ರಂಗಕರ್ಮಿ, ವರ್ಣ ಸಂಶೋಧಕ, ಬರಹಗಾರ, ಛಾಯಾ ಚಿತ್ರಗಾರ, ರಂಗತಂತ್ರಜ್ಞ, ನಟ ಸಂಘಟಕ ಹೀಗೆ ಬಹುಮುಖ ಪ್ರತಿಭೆಯ ಮೋಹನ ಸೋನ ಸಾಂಸ್ಕೃತಿಕ ಲೋಕಕ್ಕೆ ನೀಡಿದ ಕೊಡುಗೆ ಅನನ್ಯ. 19-01-1954ರಂದು ಸುಳ್ಯ ತಾಲೂಕಿನ ಸೊಣಂಗೇರಿಯ ನಡುಮನೆ ವೆಂಕಟರಮಣ ಗೌಡ ಮತ್ತು ಚಿನ್ನಮ್ಮ ದಂಪತಿಗಳ ಸುಪುತ್ರರಾದ ಇವರು ಪದವಿ ಶಿಕ್ಷಣ ಪೂರೈಸಿದ ನಂತರ ತಂದೆಯ ಒತ್ತಾಸೆಯಂತೆ ಮಂಗಳೂರಿನ ಸರಕಾರಿ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ತರಬೇತಿ ಪಡೆದು, ಮುಂದೆ ಗುರು ಜೆ.ಚಂದ್ರಶೇಖರರ ಮಾರ್ಗದರ್ಶನದಲ್ಲಿ ಲಲಿತಕಲಾ ಪದವಿ ಪೂರೈಸಿದರು. ಒಂಬತ್ತು ವರ್ಷಗಳ ಕಾಲ ಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಇವರು ಮಕ್ಕಳ ಸೃಜನಶೀಲ ಬೆಳವಣಿಗೆಗೆ ಸಾಕಷ್ಟು ಪ್ರಯತ್ನಗಳನ್ನು ಹಾಗೂ ಪ್ರಯೋಗಗಳನ್ನು ಮಾಡಿ ಯಶಸ್ವಿಯಾದವರು. ನಾಲ್ಕು ಗೋಡೆಗಳ ನಡುವೆ ನಡೆಯುವ ಮಾಮೂಲಿ ಶಿಕ್ಷಣಕ್ಕಿಂತ ಪ್ರಕೃತಿಯ ನಡುವೆ ನಡೆಯುವ ಬಯಲು ಶಿಕ್ಷಣ ಮಕ್ಕಳ ಭವಿಷ್ಯಕ್ಕೆ ತುಂಬಾ ಮುಖ್ಯ ಎಂದು ಸೋನಾ ಪ್ರಾಯೋಗಿಕವಾಗಿ ಅಂದೇ ಮಾಡಿ ತೋರಿಸಿದರು. ವಿಟ್ಲ ಪರಿಸರದಲ್ಲಿ ಆಧುನಿಕ ರಂಗಭೂಮಿಯ ಬೀಜ ಬಿತ್ತಿದ ಸೋನ ಹೊಸ ಪ್ರತಿಭೆಗಳ ಹುಟ್ಟಿಗೆ ಕಾರಣವಾದರು. ಸದಾ ಹೊಸತನದ ಹುಡುಕಾಟದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ಅವರ ಕ್ರಿಯಾಶೀಲತೆ ಕರಾವಳಿಯ ರಂಗಭೂಮಿಗೆ ಹೊಸ ಸಂಚಲನ ತಂದು ಕೊಟ್ಟಿತು. ವಿಟ್ಲ ಪರಿಸರದಲ್ಲಿ ಪ್ರಾಕೃತಿಕವಾದ ಒಂದು ಎಕರೆ ಪ್ರದೇಶವನ್ನು ವೇದಿಕೆಯನ್ನಾಗಿ ಪರಿವರ್ತಿಸಿ 250 ರಿಂದ 300 ಕಲಾವಿದರನ್ನು ಕೂಡಿಕೊಂಡು ಪ್ರದರ್ಶಿಸಿದ ‘ಸೋಮನದುಡಿ’ ನಾಟಕಕ್ಕೆ ಅಂದು ನಾಲ್ಕು ಸಾವಿರಕ್ಕೂ ಮಿಕ್ಕಿ ಪ್ರೇಕ್ಷಕರು ಸೇರಿ ಅಭೂತಪೂರ್ವ ಯಶಸ್ಸು ಕಂಡಿತ್ತು. ಮುಂದೆ ನೀನಾಸಂ ತರಬೇತಿ ಪೂರ್ಣಗೊಳಿಸಿದ ಇವರು ಸೋಣಂಗೇರಿ ಶಾಲೆಯ ಬಯಲನ್ನು ಬಳಕೆ ಮಾಡಿ 220 ಮಕ್ಕಳನ್ನು ಕೂಡಿಕೊಂಡು ‘ಅಳಿಲು ರಾಮಾಯಣ’ ನಾಟಕವನ್ನು ನಿರ್ದೇಶಸಿ ಪ್ರದರ್ಶಿಸಿದ್ದರು. ಗ್ರಾಮೀಣ ಬದುಕಿನ ಜೊತೆ ಕಲಾ ಪ್ರಕಾರಗಳನ್ನು ಹಂಚಿಕೊಂಡು ನಿರಂತರತೆಯನ್ನು ಮೈಗೂಡಿಕೊಂಡಿರಬೇಕು ಎನ್ನುವ ನಿಟ್ಟಿನಲ್ಲಿ ಸಮಾನ ಮನಸ್ಕರ ಜೊತೆ ಸೇರಿಕೊಂಡು ‘ನಿರತ ನಿರಂತ’ ಸಂಸ್ಥೆಯನ್ನು ಹುಟ್ಟುಹಾಕಿದರು. ಈ ತಂಡದ ಮೂಲಕ ಮಕ್ಕಳ ಶೈಕ್ಷಣಿಕ ಶಿಬಿರ, ಚಿತ್ರ ರಸಗ್ರಹಣ ಶಿಬಿರ, ಜಾನಪದ ಕಲಾ ಪ್ರದರ್ಶನ, ಮನೆಮನೆ ನಾಟಕ, ಬೀದಿ ನಾಟಕ, ಮುಖವಾಡ ತಯಾರಿ, ಗೊಂಬೆ ತಯಾರಿ, ಸಾಹಿತ್ಯ ಸಂವಾದ, ವರ್ಣ ಮನೋವಿಜ್ಞಾನ ಶಿಬಿರ ಮುಂತಾದ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಪ್ರಕೃತಿ ಸೊಬಗಿನ ಹಳ್ಳಿಯನ್ನು ಸಾಂಸ್ಕೃತಿಕ ಗ್ರಾಮ ಮಾಡುವ ಅವರ ಕನಸಿನ ಮೂರ್ತ ರೂಪವೇ ಸೊಣಂಗೇರಿಯ ‘ಬಯಲು ಚಿತ್ರಾಲಯ’ 20-05 1993 ರಿಂದ 27-05-1993ರ ವರೆಗೆ ಕರ್ನಾಟಕದ ಮೂಲೆ ಮೂಲೆಗಳಿಂದ ಬಂದ ಕಲಾವಿದರು ಸೋಣಂಗೇರಿಯ 40 ಮನೆಗಳಲ್ಲಿ ಉಳಿದುಕೊಂಡು ಚಿತ್ರರಚನೆ ಮಾಡಿದ್ದರು. ಊರಿನ ಬೇಲಿ ಗೋಡೆ, ಬಾವಿಕಟ್ಟೆ, ಕಿಟಕಿ, ಬಾಗಿಲು, ಜಗಳಿಗಳು ಕಲಾವಿದರ ಕೈಚಳಕದಿಂದ ಸುಂದರ ಉಬ್ಬು ಶಿಲ್ಪದ ಕಲಾಕೃತಿಗಳಾಗಿ ಮಾರ್ಪಟ್ಟವು. ಜೊತೆಗೆ ದಿನವಿಡೀ ನಾಟಕ ಹಾಡು ಜಾನಪದ ಕುಣಿತಗಳ ಕಾರ್ಯಕ್ರಮ ಉತ್ಸವದ ರೀತಿಯಲ್ಲಿ ಇಡೀ ರಾಜ್ಯದಲ್ಲಿ ಸುದ್ದಿಯಾದವು. ಇದರ ಪರಿಣಾಮವಾಗಿ ದೇಶದ ನಾನ ಭಾಗಗಳಿಂದ ಸಾವಿರಾರು ಕಲಾಸಕ್ತರು ಸೋಣಂಗೇರಿಗೆ ಧಾವಿಸಿ, ಸುಳ್ಯದ ಪುಟ್ಟ ಹಳ್ಳಿ ಕಲಾ ಗ್ಯಾಲರಿಯಾದ ಸೊಬಗನ್ನು ಕಣ್ತುಂಬಿ ಕೊಂಡರು. ಡಾ.ಶಿವರಾಮ ಕಾರಂತರ ಆಶಯದಂತೆ ಮಕ್ಕಳು ಸ್ವಯಂ ಕಲಿಕೆಯ ಮೂಲಕವೇ ಬೆಳೆಯಬೇಕು ಎಂಬ ಉದ್ದೇಶದಿಂದ ಪುತ್ತೂರಿನ ಬಾಲವನದಲ್ಲಿ ಯಾವುದೇ ಫಲಾಪೇಕ್ಷೆಯಿಲ್ಲದೆ ಮಕ್ಕಳ ಶಿಬಿರಗಳನ್ನು ನಡೆಸುತ್ತಿದ್ದರು. ಪ್ರಕೃತಿಯಲ್ಲಿ ಸಿಗುವ ಬಣ್ಣಗಳ ವಿಷಯದಲ್ಲಿ ಮೋಹನ ಸೋನಾ ಮಾಡಿದ ಸಂಶೋಧನೆ ಕುತೂಹಲದಾಯಕ. ಬಂಟಮಲೆ ಕಾಡಿನಲ್ಲಿ ಮಕ್ಕಳೇ ಮಣ್ಣು, ತೊಗಟೆ ಮತ್ತು ಸಸ್ಯಗಳನ್ನು ಶೋಧಿಸುವ ಹಾಗೂ ಅದನ್ನೇ ಬಣ್ಣವಾಗಿ ಉಪಯೋಗಿಸಿ ಚಿತ್ರಗಳನ್ನು ಬಿಡಿಸುವ ಶಿಬಿರವು ಮಕ್ಕಳಲ್ಲಿ ಸಂಶೋಧನಾ ಪ್ರವೃತ್ತಿ ಬೆಳೆಯಲು ಕಾರಣವಾಯಿತು. ಕರ್ನಾಟಕದ ಕಾರಂತ ದಿಗ್ಗಜರಾದ ಕೋಟ ಶಿವರಾಮ ಕಾರಂತ ಹಾಗೂ ಬಿ.ವಿ ಕಾರಂತರಿಂದ ಪ್ರೇರಣೆಗೆ ಒಳಗಾಗಿದ್ದ ಇವರು ಬಿ.ವಿ ಕಾರಂತರು ನಿರ್ದೇಶನ ಮಾಡಿದ ಪು.ತಿ.ನ ಇವರ ಗೋಕುಲ ನಿರ್ಗಮನ ನಾಟಕದ ದೃಶ್ಯಗಳನ್ನು ಪುತ್ತೂರಿನ ಆನಂದಾಶ್ರಮ ಗೋಡೆಗಳಲ್ಲಿ ಉಬ್ಬು ಶಿಲ್ಪದ ಮೂಲಕ ಶಾಶ್ವತಗೊಳಿಸಿದರು. ಕೊಳಲು, ನೇಗಿಲು, ಮುಂಜಾವದ ಸಂಗೀತ, ನೂಲ ನೇಕೆ, ಕೂಡು ಕುಟುಂಬದ ಗ್ರಾಮೀಣ ಬದುಕು, ಹಳ್ಳಿಗಾಡಿನ ಪೇಟೆ, ಪುಣ್ಯಕೋಟಿ, ಗುಡುಗುಡು ಕುಮ್ಮಟ ದೇವರು, ಶಿವರಾಮ ಕಾರಂತರ ‘ಚೋಮನ ದುಡಿ’, ಕಂಬಾರರ ‘ಸಿರಿ ಸಂಪಿಗೆ’, ಕಾರ್ನಾಡರ ನಾಗಮಂಡಲ, ಪು.ತಿ.ನ ಇವರ ಗೋಕುಲ ನಿರ್ಗಮನ ನಾಟಕ ಇವೆಲ್ಲಾ ಸೋನರ ಕುಂಚದಲ್ಲಿ ಅರಳಿದ ದೃಶ್ಯಕಾವ್ಯಗಳು. ಇವರ ಸಾಧನೆಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಕಾಂತಾವರ ಕನ್ನಡ ಸಂಘ ಸನ್ಮಾನ, ನಾ.ಮೊಗಸಾಲೆ ಪ್ರತಿಷ್ಠಾನ ಪ್ರಶಸ್ತಿ, ಜೆ.ಸಿ ರಾಜ್ಯ ಪುರಸ್ಕಾರ, ದ.ಕ ಜಿಲ್ಲಾ ಸಾಹಿತ್ಯ ಸಮ್ಮೇಳನ ಸನ್ಮಾನ, ಕನಕ ಮಜಲು ರಂಗ ಚಾವಡಿ ಸನ್ಮಾನ, ಸುಳ್ಯ ತಾಲೂಕು ರಾಜ್ಯೋತ್ಸವ ಪ್ರಶಸ್ತಿ, ಬೆಂಗಳೂರಿನ ರಂಗ ಮಂಟಪ ಸನ್ಮಾನ, ಸುಳ್ಯ ರಂಗಮನೆ ಗೌರವ ಸನ್ಮಾನ ಇತ್ಯಾದಿ ಇವರ ಸೃಜನಶೀಲತೆ ಮತ್ತು ಕ್ರಿಯಶೀಲತೆಗಳಿಗೆ ಸಂದ ಗೌರವ.