ದೇವರನ್ನು ಕಾಣಲು ತಪಸ್ಸು ಮಾಡಬೇಕಾಗಿಲ್ಲ. ಕಾಶಿ, ಕೈಲಾಸ, ಮಂದಿರ, ಬಸದಿ, ದರ್ಗಾಗಳಿಗೆ ಹೋಗಬೇಕಾಗಿಲ್ಲ. “ದಿವ್ಯಾಂಗ ಪ್ರತಿಭೆಗಳಿರುವ ಬಿರುಮಲೆ ಬೆಟ್ಟದಲ್ಲಿ ಇರುವ ‘ಪ್ರಜ್ಞಾಶ್ರಮ’ಕ್ಕೆ ಹೋದರೆ ಸಾಕು. ಅಲ್ಲಿ ದೇವರಂಥ ‘ಪ್ರಜ್ಞೆಯ ಬೆಳಕು’ಗಳಿವೆ. ಡಿಸೆಂಬರ್ 03 ‘ವಿಶ್ವ ವಿಕಲಚೇತನರ ದಿನ’ ನಾವೆಲ್ಲ ಅಂಗಾಂಗ ಸರಿ ಇದ್ದು ಹುಟ್ಟಿದ್ದೇವೆ.. ಆದರೂ ‘ವಿವೇಕ, ಆ-ನಂದದಾ ಬೆಳಕು ಇನ್ನೂ ಬೆಳಗಿಲ್ಲ.’ ಯಾವುದೋ ಕಾರಣದಿಂದ ಭಿನ್ನವಾಗಿ, ತಾಯಿಯ ಗರ್ಭದಿಂದ ಈ ಲೋಕದ ಬೆಳಕು ಕಂಡ ಮಗು, ಕಣ್ಣು, ಕಿವಿ, ಬಾಯಿ ಬಾರದೆ, ನಡೆಯಲು ಕಾಲಿಲ್ಲದೆ…ಬರೆಯಲು-ದುಡಿಯಲು ಕೈಗಳಿಲ್ಲದೆ, ಎಲ್ಲಾ ಇದ್ದು ಪ್ರಜ್ಞೆಯೇ ಇಲ್ಲದ ಮಗುವನ್ನು “ತನಗೆ ವರ ಎಂದು ಕಾಣುವ ತಾಯಿ ಕ್ಷಮಯಾಧರಿತ್ರಿ.” ಒಂದು ಕಾಲದಲ್ಲಿ ಅಂತಹ ಮಕ್ಕಳು ಶಾಪ ಎಂದು ಭಾವಿಸಿ ಕತ್ತಲ ಕೋಣೆಯೊಳಗೆ, ಕೈ-ಕಾಲುಗಳಿಗೆ ಸರಪಳಿಹಾಕಿ ಕೂಡಿಟ್ಟದ್ದೂ ಇದೆ. ಆದರೆ, ಕಾಲ ಬದಲಾಗಿದೆ. ವಿಶ್ವ ಸಂಸ್ಥೆ ಭಿನ್ನ ರೀತಿಯಲ್ಲಿ ಹುಟ್ಟಿದ ಮಗುವೂ ರಾಷ್ಟ್ರದ-ವಿಶ್ವದ ಆಸ್ತಿ ಎಂದು ಪರಿಗಣಿಸಿ, 03-12-1992ರಿಂದ “ವಿಶ್ವ ಅಂಗವಿಕಲರ ದಿನ” (International days of persons with disabilities) ಎಂದು ಘೋಷಿಸಿತು.
ಇಂದು ನಾವು ನಮ್ಮ ನಡುವಿನ ಆ ಮಕ್ಕಳನ್ನು, ಯುವಕ-ಹಿರಿಯರನ್ನು ಕಂಡು ಮರುಕಪಟ್ಟರೂ ಅವರೂ ಯಾರಿಗೂ ಕಡಿಮೆಯಲ್ಲ ಎಂದು ಭಾವಿಸಿ “ವಿಶೇಷ ಚೇತನರು..ದಿವ್ಯಾಂಗ ದೇವರು” ಎಂದು ಪೂಜ್ಯ ಭಾವನೆಯಿಂದ ನೋಡಬೇಕಾದ ಸಮಾಜದಲ್ಲಿದ್ದೇವೆ. ಅವರನ್ನು ಅನುಕಂಪದಿಂದ ಅಲ್ಲ, ಆತ್ಮ ಗೌರವದಿಂದ ಕಾಣುವ ಕಾಲಘಟ್ಟದಲ್ಲಿ ಇದ್ದೇವೆ. ಅವರ ಪ್ರತಿಭೆ-ಸಾಧನೆಗಳನ್ನು ಕಂಡು ಸಂಭ್ರಮಿಸುವವರಾಗಿದ್ದೇವೆ.
ದಿನಾಂಕ 03-12-2023 ಆದಿತ್ಯವಾರ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕ ಹಾಗೂ ರೋಟರಿ ಕ್ಲಬ್ ಪುತ್ತೂರು ಯುವ, ರೋಟರಿ ಜಿಲ್ಲೆ 3181, ವಲಯ 5 ಇವರ ಜಂಟಿ ಆಶ್ರಯದಲ್ಲಿ, ಪುತ್ತೂರು ತಾಲೂಕು ವಿವಿಧೋದ್ದೇಶ ಹಾಗೂ ಗ್ರಾಮೀಣ ಮತ್ತು ನಗರ ವಿಕಲಚೇತನರ ಪುನರ್ವಸತಿ ಕಾರ್ಯಕರ್ತರ ಸಹಕಾರದೊಂದಿಗೆ “ದಿವ್ಯಾಂಗ ಪ್ರತಿಭೆಗಳ ಸಾಹಿತ್ಯ ಸಂಭ್ರಮ -23”, “ಪುತ್ತೂರಿನ ಗೌರಿಶಂಕರ” ಎಂದು ಗೌರವದಿಂದ ಕಾಣುವ ಪುತ್ತೂರು ಬಿರುಮಲೆ ಬೆಟ್ಟದ ಪವಿತ್ರ ಮಡಿಲಲ್ಲಿರುವ “ಪ್ರಜ್ಞಾಶ್ರಮ”ದಲ್ಲಿ ಬೆಳಕ ಕಣ್ತುಂಬಿಸಿಕೊಳ್ಳುವ ಅವಕಾಶವಾಯಿತು.
ಪುತ್ತೂರಿನ ಕನ್ನಡ ಸಾಹಿತ್ಯ ಪರಿಷತ್ತು ಇದರ ಕ್ರಿಯಾಶೀಲ ಅಧ್ಯಕ್ಷರೂ ಕನಸುಗಾರರೂ ಕಾರ್ಯಕ್ರಮವನ್ನು ಹೇಗೆ ನಡೆಸಬೇಕೆಂಬ ಯೋಚನೆ ಯೋಜನೆಯಲ್ಲಿ ಎಲ್ಲರ ಮನಗೆದ್ದ ಯುವ ಕನ್ನಡ ಕಾಯಕ ಯೋಗಿ ಪುತ್ತೂರು ಉಮೇಶ್ ನಾಯಕ್ ಅವರ ಅಧ್ಯಕ್ಷತೆಯಲ್ಲಿ, ಅವರ ಅಣ್ಣ 2014ರಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ವಿಶೇಷ ಪ್ರತಿಭೆ ಪುತ್ತೂರು ಸುರೇಶ್ ನಾಯಕ್ ದೀಪ ಪ್ರಜ್ವಲನಗೊಳಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಶ್ರೀ ನವೀನ್ ಭಂಡಾರಿ, ಸಮಾಜ ಸೇವಕಿ ಶ್ರೀಮತಿ ನಯನಾ ರೈ, ತಾಲೂಕು ಪಂಚಾಯತ್ ವಿಕಲಚೇತನರ ಸೇವಾಕೇಂದ್ರ ಕಚೇರಿಯ ಸಂಯೋಜಕ ಶ್ರೀ ನವೀನ್ ಕುಮಾರ್, ರೋಟರಿ ಜಿಲ್ಲೆ 3181ವಲಯ 5 ಇದರ ಶ್ರೀ ನರಸಿಂಹ ಪೈ ಎ.ಜಿ. ಸೇನಾನಿ, ಶ್ರೀ ಝೇವಿಯರ್ ಡಿ’ಸೋಜಾ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವಿಶೇಷ ಸಾಧನೆ ಮಾಡುತ್ತಿರುವ ಪಂಚ ಸಾಧಕರಾದ,ಶ್ರೀ ಕೇಶವ್ ಅಮೈ, ಎಸ್.ಆರ್.ಕೆ.ಲ್ಯಾಡರ್ಸ್ (ಯಶಸ್ವಿ ಉದ್ಯಮಿ, ಸಮಾಜಸೇವಕರು), ಶ್ರೀ ಮನುಕುಮಾರ್ (ಸಾಹಿತ್ಯ, ಸಂಘಟಕರು), ಕು.ನೇಹಾ ರೈ ಎಂ.ಕಾಂ (ಶಿಕ್ಷಣ), ಅಬ್ದುಲ್ ಅಯೂಬ್, (ಕಲೆ-ಝೀ ಕನ್ನಡ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಲಾವಿದರು), ಶ್ರೀ ಪಿ.ವಿ. ಸುಬ್ರಮಣಿ, (ಎಂ.ವಿ. ಗ್ರೂಪ್ ಆಫ್ ಸೋಶಿಯಲ್ ಸರ್ವಿಸಸ್ ಪುತ್ತೂರು (ಭಿನ್ನ ಸಾಮರ್ಥ್ಯದ ಜನರ ಸೇವೆಗಾಗಿ) ಇವರುಗಳನ್ನು ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾ ಅಧಿಕಾರಿ ಶ್ರೀ ನವೀನ್ ಭಂಡಾರಿ ಇವರು ಕನ್ನಡ ಶಾಲು ಪೇಟ ತೊಡಿಸಿ ಸ್ಮರಣಿಕೆ ನೀಡಿ ಅಭಿನಂದಿಸಿ ಶುಭ ಹಾರೈಸಿ, ಕಟಪಾಡಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಶ್ರೀ ರವೀಂದ್ರ ಆಚಾರ್ಯ ಸನ್ಮಾನಪತ್ರ ವಾಚಿಸಿದರು.
ರೋಟರಿ ಕ್ಲಬ್ ಪುತ್ತೂರು ಯುವ ಇದರ ಅಧ್ಯಕ್ಷ ಶ್ರೀ ಪಶುಪತಿ ಶರ್ಮ ಎಲ್ಲರನ್ನೂ ಸ್ವಾಗತಿಸಿ, ಒಳಮೊಗ್ರು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಶ್ರೀ ಮೋಹನ್ ಕೆ.ಪಿ. ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಜ್ಞಾಶ್ರಮದ ಮುಖ್ಯಸ್ಥ ಶ್ರೀ ಅಣ್ಣಪ್ಪ ಧನ್ಯವಾದ ಸಮರ್ಪಿಸಿ, 34ನೇ ನೆಕ್ಕಿಲಾಡಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಶ್ರೀ ಶೇಷಪ್ಪ ಕಾರ್ಯಕ್ರಮ ನಿರೂಪಿಸಿದರು. ದಿವ್ಯ ಪ್ರತಿಭೆಗಳ ಹಾಡು, ಕುಣಿತ ,ಭಜನೆ, ಜಾದೂ ಪ್ರದರ್ಶನ, ಏಕಪಾತ್ರಾಭಿನಯ, ಕವನವಾಚನ.., ಸಂಗೀತ ಕುರ್ಚಿ, ಬಾಲ್ ಪಾಸಿಂಗ್… ಇತ್ಯಾದಿ ಕಾರ್ಯಕ್ರಮಗಳು ಎಲ್ಲರ ಅಭಿಮಾನಕ್ಕೆ ಪಾತ್ರವಾಯಿತು.
ಈ ಕಾರ್ಯಕ್ರಮಕ್ಕೆ ವಿಶೇಷ ಸಹಕಾರ ನೀಡಿರುವ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ ಪುತ್ತೂರು (ಭೋಜನ ಕೊಡುಗೆ), ಶ್ರೀ ನಾಗೇಶ್ ಪ್ರಭು ಪರ್ಲಡ್ಕ (ಉಪಾಹಾರ ಕೊಡುಗೆ), ಪೊಪ್ಯುಲರ್ ಐಸ್ ಕ್ರೀಂ (ಐಸ್ ಕ್ರೀಂ ಕೊಡುಗೆ), ಹೆಗ್ಡೆ ಪ್ಲಾಸ್ಟಿಕ್ ಪುತ್ತೂರು (ಹಾಳೆತಟ್ಟೆಗಳ ಕೊಡುಗೆ), ಎಂ.ಡಿ.ಎಸ್.ಪಡೀಲ್ (ಶಾಮಿಯಾನ ಹಾಗೂ ಧ್ವನಿವರ್ಧಕ ಕೊಡುಗೆ), ಸಚಿನ್ ಟ್ರೇಡಿಂಗ್ ಕಂಪೆನಿ ಪುತ್ತೂರು (ಸನ್ಮಾನ ವಸ್ತುಗಳ ಕೊಡುಗೆ), ಡಾ. ಅಶ್ವಿನ್ ಆಳ್ವ (ಮೆಡಿಕೇಟೆಡ್ ತಲೆದಿಂಬು), ಡಾ. ಹರ್ಷ ಕುಮಾರ್ (ಉಡುಗೊರೆ), ಬಿಂದು ಕುಡಿಯುವ ನೀರು (ಪಾನೀಯ ಕೊಡುಗೆ) ಹೀಗೆ ಎಲ್ಲರೂ “ದಿವ್ಯಾಂಗರು ನಮ್ಮವರು..ಅವರಿಗಾಗಿ ನಾವು..” ಎಂಬ ಸಂದೇಶ ನೀಡಿರುವುದು ಈ ಪುಣ್ಯ ಕಾರ್ಯ ಕ್ರಮದ ವಿಶೇಷವಾಗಿತ್ತು. ದಿವ್ಯಾಂಗರು ಕಣ್ಣಿಗೆ ಕಾಣುವ ದೇವರುಗಳು…ಅವರಿಗೆ ಅನುಕಂಪ ಬೇಡ..ಸಹಾಯ ಹಸ್ತ ಸಮಾನ ಪ್ರೀತಿ , ಅವಕಾಶ ಅಗತ್ಯ.
ನಾರಾಯಣ ರೈ ಕುಕ್ಕುವಳ್ಳಿ,
ಪ್ರಧಾನ ಸಂಪಾದಕರು ‘ಮಧುಪ್ರಪಂಚ’, ಅಂಕಣಕಾರರು ‘ಪ್ರತಿಭಾರಂಗ’ಸುದ್ದಿಬಿಡುಗಡೆ ಪುತ್ತೂರು.