Subscribe to Updates

    Get the latest creative news from FooBar about art, design and business.

    What's Hot

    ಮಂಗಳೂರಿನ ಪುರಭವನದಲ್ಲಿ ಪ್ರಶಸ್ತಿ ಪ್ರದಾನ, ನಾಟಕ ಪ್ರದರ್ಶನ ಮತ್ತು ವಿಚಾರ ಮಂಥನ ಕಾರ್ಯಕ್ರಮ | ಮೇ 11 

    May 10, 2025

    ಬೆಂಗಳೂರಿನ ಶ್ರೀ ವಿನಾಯಕ ದೇವಸ್ಥಾನದಲ್ಲಿ ‘ಸುದರ್ಶನ ಗರ್ವಭಂಗ’ ಮತ್ತು ‘ಕುಶ ಲವ ಕಾಳಗ’ ಪ್ರದರ್ಶನ | ಮೇ 17

    May 10, 2025

    ಕಟೀಲಿನಲ್ಲಿ ‘ತುಳುನಾಡು ಮತ್ತು ಕಳರಿ’ ವಿಚಾರಗೋಷ್ಠಿ ಮತ್ತು ಚರ್ಚಾಗೋಷ್ಠಿ | ಮೇ 24

    May 10, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ವಿಶೇಷ ಲೇಖನ | ಸಾಂಸ್ಕೃತಿಕ ಸಿಕ್ಕುಗಳ ನಡುವೆ ರಂಗಭೂಮಿಯ ಪ್ರಸ್ತುತತೆ
    Artist

    ವಿಶೇಷ ಲೇಖನ | ಸಾಂಸ್ಕೃತಿಕ ಸಿಕ್ಕುಗಳ ನಡುವೆ ರಂಗಭೂಮಿಯ ಪ್ರಸ್ತುತತೆ

    December 5, 2024Updated:January 7, 2025No Comments4 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಯಾವುದೇ ಸಮಾಜದಲ್ಲಾದರೂ ಸಾರ್ವಜನಿಕ ಅಥವಾ ಸಾರ್ವತ್ರಿಕ ಎಂದು ಪರಿಭಾವಿಸಲಾಗುವ ನಿರೂಪಣೆಗಳನ್ನು ಮತ್ತು ವ್ಯಾಖ್ಯಾನಗಳನ್ನು ತಳಮಟ್ಟದ ಜನಸಾಮಾನ್ಯರವರೆಗೂ ತಲುಪಿಸಿ, ಇಡೀ ಸಮಾಜವನ್ನು ಅವುಗಳ ಪ್ರಭಾವಕ್ಕೊಳಪಡಿಸುವ ಪ್ರಕ್ರಿಯೆಯ ಹಿಂದೆ, ಆಯಾ ಸಮಾಜದ ಮೇಲೆ ಬೌದ್ಧಿಕ ಹಿಡಿತ, ಭೌತಿಕ ಪ್ರಾಬಲ್ಯ ಮತ್ತು ಸಾಂಸ್ಕೃತಿಕ ಪಾರಮ್ಯ ಸಾಧಿಸಿರುವಂತಹ ಚಿಂತನಧಾರೆಗಳು ಪ್ರಧಾನವಾಗಿ ಕಾಣುತ್ತವೆ. ಇದನ್ನೇ ಕಾರ್ಲ್ ಮಾರ್ಕ್ಸ್ ಮತ್ತು ಏಂಗೆಲ್ಸ್‌ ತಮ್ಮ “ಆಳುವ ವರ್ಗಗಳು ಮತ್ತು ಆಳುವ ಚಿಂತನೆಗಳು” ಎಂಬ ಪ್ರಬಂಧದಲ್ಲಿ “ಒಂದು ನಿರ್ದಿಷ್ಟ ಸಮಾಜದಲ್ಲಿ ಚಾಲ್ತಿಯಲ್ಲಿರುವ ಕಲ್ಪನೆಗಳು ಮತ್ತು ಚಿಂತನಾ ವಿಧಾನಗಳು ಆಳುವ ವರ್ಗಗಳಿಂದಲೇ ರೂಪುಗೊಳ್ಳುವುದಲ್ಲದೆ, ಅದರ ಬಲದಿಂದಲೇ ಸ್ಥಾಪಿತ ಅಭಿಪ್ರಾಯಗಳಾಗುತ್ತವೆ. ಭೌತಿಕ ಸಂಪತ್ತಿನ ಉತ್ಪಾದನೆಯನ್ನು ನಿಯಂತ್ರಿಸುವ ವರ್ಗವೇ ಸಮಾಜದ ಬೌದ್ಧಿಕ ಉತ್ಪಾದನೆಯನ್ನೂ ನಿಯಂತ್ರಿಸುತ್ತದೆ” ಎಂದು ಹೇಳುತ್ತಾರೆ. ವರ್ತಮಾನದ ಭಾರತದಲ್ಲಿ ಈ ಆಳುವ ವರ್ಗಗಳನ್ನು ಪ್ರತಿನಿಧಿಸುತ್ತಿರುವುದು ಸಾಂಪ್ರದಾಯಿಕ ಸಾಂಸ್ಕೃತಿಕ ರಾಜಕಾರಣ.

    ಮಾರ್ಕ್ಸ್ ನ ಈ ಮಾತುಗಳು ಸಾರ್ವಕಾಲಿಕ ಸತ್ಯ ಎನ್ನಲು ಯಾವ ಚಾರಿತ್ರಿಕ ಪುರಾವೆಯೂ ಬೇಕಿಲ್ಲ. ಸಮಕಾಲೀನ ವಸಾಹತೋತ್ತರ ಭಾರತದ, 1990ರ ಜಾಗತೀಕರಣ ಮತ್ತು ಅಯೋಧ್ಯೆ ನಂತರದ ಸಾಮಾಜಿಕ-ಸಾಂಸ್ಕೃತಿಕ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದು ಇನ್ನಷ್ಟು ಸ್ಪಷ್ಟವಾಗುತ್ತದೆ. ವಿಕಾಸದತ್ತ ತೆರೆದುಕೊಳ್ಳುತ್ತಿರುವ, ವಿಕಸಿತ ಭಾರತದ ಕನಸುಗಳನ್ನು 2047ರ ಹೊತ್ತಿಗೆ ಸಾಕಾರಗೊಳಿಸುವ ನಿಟ್ಟಿನಲ್ಲಿ ಭಾರತದ ಆರ್ಥಿಕತೆ ನಡೆಯುತ್ತಿರುವ ಹಾದಿಯ ಅಂತಿಮ ಪರಿಣಾಮಗಳೇನೇ ಇರಲಿ, ಈ ಕಾಲಾವಧಿಯಲ್ಲಿ ಭಾರತೀಯ ಸಮಾಜವು ಎದುರಿಸಬಹುದಾದ ಸಾಂಸ್ಕೃತಿಕ ಸಿಕ್ಕುಗಳು, ತಳಮಟ್ಟದ ಸಮಾಜವು ಎದುರಿಸಬೇಕಾದ ಸಾಮಾಜಿಕ ಸವಾಲುಗಳು ಹಾಗೂ ಸಾಮಾಜಿಕ ಪಿರಮಿಡ್ಡಿನ ತಳಪಾಯದಲ್ಲಿರುವ ಬಹುದೊಡ್ಡ ಸಮಾಜವು ಮುಖಾಮುಖಿಯಾಗಬಹುದಾದ ಸಾಂಪ್ರದಾಯಿಕ ಶಕ್ತಿಗಳ ಬೌದ್ಧಿಕ ಪ್ರಾಬಲ್ಯವನ್ನು ವರ್ತಮಾನದಲ್ಲಿಟ್ಟು ನೋಡಿದಾಗ, ಬಹುಸಾಂಸ್ಕೃತಿಕ ಭಾರತ ತನ್ನ ಅಂತಃಸತ್ವವನ್ನು ಉಳಿಸಿಕೊಳ್ಳಲು ಸಾಧ್ಯವೇ ಎಂಬ ಅನುಮಾನ ಸಹಜವಾಗಿ ಕಾಡುತ್ತದೆ.

    ಈ ಆತಂಕಗಳ ನಡುವೆಯೇ ವಿಕಸಿತ ಭಾರತ ತನ್ನ ವಿಕಾಸದ ಹಾದಿಯಲ್ಲಿ ಸಾಗುತ್ತಾ ಭೌಗೋಳಿಕ ಅಖಂಡತೆಯನ್ನು ರಕ್ಷಿಸಿಕೊಳ್ಳುತ್ತಲೇ ಆಂತರಿಕವಾಗಿ ಸಾಂಸ್ಕೃತಿಕ ವಿಘಟನೆಯ ಅಪಾಯವನ್ನೂ ಎದುರಿಸುತ್ತಿರುವುದು ವರ್ತಮಾನದ ವಿರೋಧಾಭಾಸ. ಈ ಅಪಾಯಗಳ ನಡುವೆಯೇ ನವ ಭಾರತ ತನ್ನ ಸಾಂಸ್ಕೃತಿಕ ಬೇರುಗಳನ್ನು ಮತ್ತಷ್ಟು ಗಟ್ಟಿಯಾಗಿಸುವ ಪ್ರಯತ್ನಗಳತ್ತ ಗಮನಹರಿಸಬೇಕಿದೆ. ಸಾಹಿತ್ಯ, ಕಲೆ, ರಂಗಭೂಮಿ ಮತ್ತು ಇನ್ನಿತರ ಜನಸ್ಪಂದನೆಯ ಸೃಜನಶೀಲ ಅಭಿವ್ಯಕ್ತಿಗಳ ಮೂಲಕ. ಇಂತಹ ಸಂದಿಗ್ಧ ಸನ್ನಿವೇಶದಲ್ಲಿ ವಿಕಸಿತ ಭಾರತ ಎದುರಿಸುತ್ತಿರುವ ತಲ್ಲಣಗಳಿಗೆ ನಿರ್ಭೀತ ಸ್ವಾಯತ್ತತೆ ಮತ್ತು ಸೃಜನಶೀಲತೆಯಿಂದ ಸ್ಪಂದಿಸುವ ಧೀ ಶಕ್ತಿ ಇರುವುದು ಮತ್ತು ಅದನ್ನು ಉಳಿಸಿಕೊಂಡಿರುವುದು ರಂಗಭೂಮಿ ಎನ್ನುವುದು ವಾಸ್ತವ.

    ರಂಗಭೂಮಿಯನ್ನು ಕೇವಲ ನಾಲ್ಕು ಗೋಡೆಗಳೊಳಗೆ, ಕೆಲವೇ ಪ್ರೇಕ್ಷಕರ ನಡುವೆ ಬಂಧಿಸದೆ, ವಿಶಾಲ ಸಮಾಜದ ನಡುವೆ ಇಟ್ಟು ನೋಡಿದಾಗ, ಎಂತಹುದೇ ಸಾಂಸ್ಕೃತಿಕ ಪಲ್ಲಟಗಳನ್ನು ಎದುರಿಸುವ ಅದರ ಅಂತಃಶಕ್ತಿಯನ್ನು ಗ್ರಹಿಸಬಹುದು. ಸಮಾಜದ ಅಂತರಂಗದ ಒಳಹೊಕ್ಕು ಅದರೊಳಗಿನ ಜನಜೀವನ, ಜೀವನೋಪಾಯ ಹಾಗೂ ನಿತ್ಯ ಬದುಕಿನ ವಿವಿಧ ಆಯಾಮಗಳತ್ತ ಒಳಗಣ್ಣಿನಿಂದ ನೋಡುವುದರೊಂದಿಗೆ ವರ್ತಮಾನದ ಸಮಾಜವನ್ನು ಕಾಡುತ್ತಿರುವ ಜಟಿಲ ಸವಾಲುಗಳನ್ನು ಸಾಮಾಜಿಕ ಅನಿಷ್ಠಗಳನ್ನು, ಸಾಂಪ್ರದಾಯಿಕತೆಯ ಅಪಾಯಗಳನ್ನು, ಸಾಂಸ್ಕೃತಿಕ ತಡೆಗೋಡೆಗಳನ್ನು ಸಹ ಸೂಕ್ಷ್ಮವಾಗಿ ಗಮನಿಸುತ್ತಿರುತ್ತದೆ.

    ಹಾಗಾಗಿಯೇ ರಂಗಪ್ರಯೋಗ ಎನ್ನುವುದು ಸಮಾಜವನ್ನು ಒಳಗಣ್ಣಿನಿಂದ ನೋಡುವುದಷ್ಟೇ ಅಲ್ಲದೆ, ಅದರೊಳಗಿನ ಋಣಾತ್ಮಕಗಳನ್ನು ಹೊರಗೆಳೆದು ನಿಕಶಕ್ಕೊಡ್ಡುವ ಒಂದು ಸೃಜನಶೀಲ ಕಲಾಭಿವ್ಯಕ್ತಿಯಾಗಿ ರೂಪುಗೊಂಡಿದೆ. ಚರಿತ್ರೆಯನ್ನು ಸಮಕಾಲೀನಗೊಳಿಸಿ ಪ್ರೇಕ್ಷಕರ ಮುಂದಿಡುವ ಮೂಲಕ ಸಾಮಾಜಿಕ-ಸಾಂಸ್ಕೃತಿಕ ಅಪಸವ್ಯಗಳು ಮರುಕಳಿಸದಂತೆ ಜಾಗೃತಿ ಮೂಡಿಸುವ ಒಂದು ನೈತಿಕ ಜವಾಬ್ದಾರಿ ರಂಗಭೂಮಿಯ ಮೇಲಿದೆ.

    ಇಂದಿಗೂ ನಮ್ಮ ಸಮಾಜವನ್ನು ಕಾಡುತ್ತಿರುವ ಪಿತೃಪ್ರಧಾನತೆ, ಮಹಿಳಾ ದೌರ್ಜನ್ಯ, ಅಸ್ಪೃಶ್ಯತೆ, ಜಾತಿ ತಾರತಮ್ಯಗಳು ಮತ್ತು ಈ ಪೀಡೆಗಳನ್ನು ಯಥಾಸ್ಥಿತಿಯಲ್ಲಿ ಕಾಪಾಡುವ ಸಾಂಸ್ಕೃತಿಕ ರಾಜಕಾರಣದ ಆಕ್ರಮಣಗಳಿಗೆ ಪ್ರತಿಯಾಗಿ, ಭಾರತದ ಬಹುತ್ವವನ್ನು, ಬಹುಸಾಂಸ್ಕೃತಿಕ ನೆಲೆಗಳನ್ನು, ಜನಪದೀಯ ಶ್ರೀಮಂತಿಕೆಯನ್ನು ಮುಂದಿನ ತಲೆಮಾರಿಗೂ ದಾಟಿಸುವ ಒಂದು ಮಹತ್ತರ ಹೊರೆ ರಂಗಭೂಮಿಯ ಮೇಲಿದೆ ಮತ್ತು ಸಾಹಿತ್ಯಿಕ ನೆಲೆಯಲ್ಲಿ ಇದು ಸಾಧ್ಯವಾಗಬಹುದು

    ಹೆಮ್ಮೆಯಿಂದ ಹೇಳಬಹುದಾದ ಸತ್ಯ ಎಂದರೆ ಭಾರತೀಯ ಕನ್ನಡ ರಂಗಭೂಮಿ, ಗೋದ್ರೋತ್ತರ ಭಾರತದ ಎಲ್ಲ ಸಾಂಸ್ಕೃತಿಕ ದಾಳಿಗಳನ್ನೂ ಸಮರ್ಥವಾಗಿ ಎದುರಿಸಿ, ತನ್ನ ಹಿರಿಮೆಯನ್ನು ಕಾಪಾಡಿಕೊಂಡು ಬಂದಿದೆ. ಹವ್ಯಾಸಿ ರಂಗಭೂಮಿ ಕರ್ನಾಟಕದಲ್ಲಿ ಕಟ್ಟಿಕೊಟ್ಟಿರುವ ವಿಶಾಲ ವೇದಿಕೆಯಲ್ಲಿ ನೂರಾರು ರಂಗ ತಂಡಗಳು ತಮ್ಮ ಈ ಸಾಂಸ್ಕೃತಿಕ ನೊಗವನ್ನು ಹೊರುತ್ತಲೇ ಬಂದಿವೆ. ಈ ನಿಟ್ಟಿನಲ್ಲಿ ಮೈಸೂರಿನ ಪ್ರತಿಷ್ಠಿತ ರಂಗಾಯಣ ಮತ್ತು ಅದು ಕಟ್ಟಿಕೊಟ್ಟಿರುವ ವಿಶಾಲ ರಂಗಪ್ರಪಂಚ ಬಹಳ ಮುಖ್ಯ ಭೂಮಿಕೆ ವಹಿಸಿದೆ. ಕರ್ನಾಟಕದ ಹವ್ಯಾಸಿ ರಂಗಭೂಮಿಯನ್ನು ಕಟ್ಟಿ ಬೆಳೆಸಿದ ರಂಗ ಸಮುದಾಯವನ್ನು ಮತ್ತಷ್ಟು ಸೃಜನಶೀಲಗೊಳಿಸುವ ಮತ್ತು ಸಮಾಜಮುಖಿಯಾಗಿಸುವ ಒಂದು ಪ್ರಯೋಗಶಾಲೆಯಾಗಿ ರಂಗಾಯಣ ತನ್ನ ನಡಿಗೆಯನ್ನು ಮುಂದುವರೆಸುತ್ತಾ ಬಂದಿದೆ. ಹಲವು ಶಾಖೆಗಳಾಗಿ ಹರಡಿರುವ ಇಲ್ಲಿ ಬಿತ್ತಿದ ಬೀಜಗಳು ಇಂದು ಟಿಸಿಲೊಡೆದು ಕನ್ನಡ ರಂಗಭೂಮಿಯ ಹಂದರವನ್ನು ವಿಸ್ತರಿಸುತ್ತಾ ಬೃಹತ್‌ ವೃಕ್ಷಗಳಾಗಿ ಬೆಳೆದು ನಿಂತಿವೆ.

    ರಂಗಾಯಣ ಜನ್ಮ ತಳೆಯುವ ಮುಂಚೆಯೇ ಮೈಸೂರಿನ ಸಾಂಸ್ಕೃತಿಕ ವಾತಾವರಣದಲ್ಲಿ ರಂಗಭೂಮಿಯನ್ನು ಕಟ್ಟಿದ ಮಿತ್ರಮೇಳ, ಸಮತೆಂತೋ, ಅಮರ ಕಲಾಸಂಘ, ಕಲಾಪ್ರಿಯ, ಕದಂಬ ರಂಗವೇದಿಕೆ ಮತ್ತು ಸಮುದಾಯ ಮೊದಲಾದ ತಂಡಗಳು ಇಂದಿಗೂ ಜೀವಂತಿಕೆಯಿಂದಿರುವುದು ಹೆಮ್ಮೆಯ ಸಂಗತಿ ಮತ್ತು ಸಾಮಾಜಿಕ ಅನ್ಯಾಯಗಳ ವಿರುದ್ಧ ದನಿ ಎತ್ತುತ್ತಾ, ನೊಂದ ತಳಸಮಾಜದೊಡನೆ ದನಿಗೂಡಿಸುತ್ತಾ, ನೋವು ತಲ್ಲಣಗಳಿಗೆ ಸ್ಪಂದಿಸುವ ಒಂದು ಉದಾತ್ತತೆ ಹೊಂದಿದೆ. ಮೈಸೂರಿನಲ್ಲಿ ಹಲವು ಕಲಾ ತಂಡಗಳು ರಂಗಭೂಮಿಯನ್ನು ಜನರ ಹತ್ತಿರ ಕೊಂಡೊಯ್ಯುವ ಪ್ರಯತ್ನಗಳನ್ನು ಮಾಡುತ್ತಿವೆ. ಅವುಗಳಲ್ಲಿ ಜಿ.ಪಿ.ಐ.ಇ.ಆರ್‌., ನಟನ, ಸುರುಚಿ, ಪರಿರ್ತಿನ, ಜನಮನ, ದೇಸಿರಂಗ, ನಿರಂತರ, ರಂಗವಲ್ಲಿ, ರಂಗಾಂತರಂಗ ಮೊದಲಾದ ತಂಡಗಳು ಉಲ್ಲೇಖನಾರ್ಹ.

    ಮೈಸೂರಿನ ರಂಗತಂಡಗಳು ಇಲ್ಲಿನ ರಂಗಪ್ರೇಕ್ಷಕರ ಮುಂದೆ ಮಂಟೇಸ್ವಾಮಿಯ ಜನಪದೀಯ ನೆಲೆಗಳನ್ನು ಇರಿಸುವಷ್ಟೇ ಪರಿಣಾಮಕಾರಿಯಾಗಿ ಅತೊಲ್‌ ಫ್ಯೂಗಾರ್ಡ್ ಎಂಬ ನಾಟಕಕಾರನನ್ನೂ, ಒಡಲಾಳದ ಸಾಕವ್ವನನ್ನೂ, ಠಾಗೋರರ ‘ಲೋಕದ ಒಳಹೊರಗ’ನ್ನೂ, ಉತ್ತರ ಭಾರತದ ದೋಪ್ಡಿಯನ್ನೂ, ಫೂಲನ್‌ ದೇವಿಯನ್ನೂ, ಬಂಜಾರರ ಬದುಕನ್ನೂ ಇರಿಸುವ ಮೂಲಕ ಜನಪದ-ಚರಿತ್ರೆ-ವರ್ತಮಾನದ ಒಂದು ಸಾಂಸ್ಕೃತಿಕ ಹೂರಣವನ್ನು ಉಣಬಡಿಸುತ್ತಾ ಬಂದಿದೆ.

    ಮೈಸೂರು ತನ್ನ ಸಾಂಸ್ಕೃತಿಕ ನಗರಿ ಎಂಬ ಹೆಸರನ್ನು ಭವಿಷ್ಯಕ್ಕೂ ರವಾನಿಸುವ ನಿಟ್ಟಿನಲ್ಲಿ ಇಲ್ಲಿನ ರಂಗಭೂಮಿ ತನ್ನ ಸೃಜನಶೀಲ ಪ್ರಯೋಗಗಳಿಂದ ರಂಗಕಲೆಯನ್ನು ಉದ್ಧಿಪನಗೊಳಿಸುತ್ತಿರುವುದು ಅತಿಶಯದ ಮಾತೇನಲ್ಲ. ಇದಕ್ಕೆ ಕಾರಣ ನೂರಾರು ಕಲಾವಿದರು, ಸಹೃದಯ ರಂಗಾಸಕ್ತರು ಮತ್ತು ಈ ಆಂಡ್ರಾಯ್ಡ್‌ ಯುಗದಲ್ಲೂ ರಂಗಪ್ರಯೋಗಗಳನ್ನು ಆನಂದಿಸಲು ಕಿಕ್ಕಿರಿದು ನೆರೆಯುವ ಮೈಸೂರಿನ ಸಾಂಸ್ಕೃತಿಕ ಮನಸ್ಸುಗಳು. ಹಾಗಾಗಿಯೇ ರಂಗಾಯಣದಲ್ಲಿ ನಡೆಯುವ ಬಹುರೂಪಿ ಇಂದು ವಿಶ್ವಮಾನ್ಯತೆ ಪಡೆದುಕೊಂಡಿದೆ. ರಂಗಾಯಣ ಹುಟ್ಟುಹಾಕಿದ ಕಲಾಪ್ರತಿಭೆಗಳನ್ನು ಗುರುತಿಸುತ್ತಲೇ, ಹವ್ಯಾಸಿ ರಂಗಭೂಮಿಯನ್ನು ಪ್ರವೇಶಿಸುತ್ತಿರುವ ಯುವ ರಂಗಕರ್ಮಿಗಳನ್ನೂ ಗುರುತಿಸುವುದು ಅಗತ್ಯ. ಹೊಸ ಪ್ರಯೋಗಗಳಿಗೆ ತೆರೆದುಕೊಳ್ಳುತ್ತಲೇ ಇರುವ ಇಲ್ಲಿನ ಯುವ ರಂಗಪ್ರತಿಭೆಗಳು ಮತ್ತು ಈ ಕುಡಿಗಳನ್ನು ಪೋಷಿಸುತ್ತಿರುವ ಹಿರಿಯ ಕಲಾವಿದರು ಮೈಸೂರಿನ ರಂಗಭೂಮಿಯನ್ನು ಮತ್ತಷ್ಟು ಶ್ರೀಮಂತಗೊಳಿಸುತ್ತಿರುವುದು ಹೆಮ್ಮೆಯ ವಿಚಾರ.

    ಈ ನೊಗವನ್ನು ಹೊರಲೇಬೇಕಾದ ಪರಿಸ್ಥಿತಿಯಲ್ಲಿ, ತನ್ನ ಸಾಂಸ್ಕೃತಿಕ ತಳಪಾಯವನ್ನು ಇಂದಿಗೂ ಸುರಕ್ಷಿತವಾಗಿರಿಸಿಕೊಂಡಿರುವ ರಂಗಭೂಮಿ ತನ್ನ ಹೊಣೆಗಾರಿಕೆಯನ್ನು ಅರಿತು ಮುನ್ನಡೆಯುತ್ತಿರುವುದು ಹೆಮ್ಮೆಯ ವಿಚಾರ. ವ್ಯಕ್ತಿನಿಷ್ಠವಾಗಿ ನೋಡದೆ ರಂಗಭೂಮಿಯ ಈ ನಡಿಗೆಯನ್ನು ವಸ್ತುನಿಷ್ಠವಾಗಿ ನೋಡುವ ಅನಿವಾರ್ಯತೆ ಇದೆ. ಈ ಬೆಳಕಿಂಡಿಗಳನ್ನು ನಿರಂತರವಾಗಿ ತೆರೆಯುತ್ತಲೇ ಇರುವುದು ರಂಗಭೂಮಿ ಎಂಬ ಒಂದು ದೃಶ್ಯಕಲೆ ಮತ್ತದರ ಸೃಜನಶೀಲ ಪ್ರಯೋಗಗಳು. ಈ ಕಿರಣಗಳ ಸುತ್ತ ಕತ್ತಲಾವರಿಸದಂತೆ ಎಚ್ಚರ ವಹಿಸುತ್ತಾ ತಮ್ಮೊಳಗಿನ ಕಲಾಪ್ರತಿಭೆ ಮತ್ತು ಕಲಾಭಿವ್ಯಕ್ತಿಯನ್ನು ವಿಶಾಲ ಸಮಾಜದ ಔನ್ನತ್ಯಕ್ಕಾಗಿ ಸಮರ್ಪಿಸುತ್ತಾ ಸಾಗಿರುವುದು ಮೈಸೂರಿನ ರಂಗಭೂಮಿನ್ನು ಪ್ರತಿನಿಧಿಸುವ ಸಮಸ್ತ ಕಲಾವಿದರು.

    ಈ ಮಹತ್ತರ ಕೆಲಸವನ್ನು ಸಾಂಸ್ಕೃತಿಕ ಜವಾಬ್ದಾರಿಯೆಂದೆಣಿಸಿ, ಭವಿಷ್ಯದ ತಲೆಮಾರಿಗೆ ವರ್ತಮಾನವು ನೀಡಬಹುದಾದ ಅಮೂಲ್ಯ ಕೊಡುಗೆ ಎಂದು ಭಾವಿಸುತ್ತಾ, ಇನ್ನೂ ಹೆಚ್ಚಿನ ನಾವೀನ್ಯತೆಯೊಂದಿಗೆ ನೂತನ ರಂಗಪ್ರಯೋಗಗಳಿಗೆ ತೆರೆದುಕೊಳ್ಳಬೇಕಾದ ತುರ್ತು ನಮಗೆ ಎದುರಾಗಿದೆ. ಈ ದೊಡ್ಡ ಹೊರೆಯನ್ನು ಹೊತ್ತು ನಿಭಾಯಿಸಿ ರಥಚಕ್ರಗಳನ್ನು ಮುಂದೆಳೆಯುವ ಸಾಂಸ್ಕೃತಿಕ ಸಂವೇದನೆ ಮತ್ತು ಸೃಜನಶೀಲತೆ ರಂಗಭೂಮಿಯಲ್ಲಿದೆ. ಕರ್ನಾಟಕದ ರಂಗಭೂಮಿ ಈ ಅಮೂಲ್ಯ ಸಂಪತ್ತನ್ನು ಸುರಕ್ಷಿತವಾಗಿ ಕಾಪಾಡಿಕೊಂಡು, ಭವಿಷ್ಯದೆಡೆಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಸಾಗುತ್ತಿರುವುದೂ ಹೌದು. ಸೃಜನಶೀಲ ಕಲೆಯಾಗಿ ರಂಗಭೂಮಿಯನ್ನು ಕಟ್ಟಿಬೆಳೆಸಿದ ಪೂರ್ವಸೂರಿಗಳಿಗೆ ನಾವು ಸಲ್ಲಿಸಬಹುದಾದ ಗೌರವ ಮತ್ತು ಶ್ರದ್ಧಾಂಜಲಿ ಈ ರಥಚಕ್ರಗಳನ್ನು ಮುಕ್ಕಾಗದ ಹಾಗೆ ನೋಡಿಕೊಳ್ಳುವುದರಲ್ಲಿದೆ.

    ಇಂತಹ ಸಾರಥ್ಯ ವಹಿಸಿರುವ ‘ರಂಗ ಸಂಪದ’ ತನ್ನ ಐದು ದಶಕಗಳನ್ನು ಪೂರೈಸಿ ಮುನ್ನಡೆಯುತ್ತಿರುವುದು ಕರ್ನಾಟಕದ ಹೆಮ್ಮೆ ಕನ್ನಡ ರಂಗಭೂಮಿಯ ಹಿರಿಮೆ. ‘ರಂಗ ಸಂಪದ’ ತನ್ನ ಸಾಂಸ್ಕೃತಿಕ ಕಲಾಭಿವ್ಯಕ್ತಿಯ ಗಜನಡಿಗೆಯನ್ನು ಹೀಗೆಯೇ ಮುಂದುವರಿಸುತ್ತಾ, ಭವಿಷ್ಯದ ತಲೆಮಾರಿಗೆ ಅತ್ಯವಶ್ಯವಾದ ಒಂದು ಮಾನವೀಯ ಸಂವೇದನಾಶೀಲ ಸೃಜನಾತ್ಮಕ ಹೊಸ ಜಗತ್ತನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ಯಶಸ್ವಿಯಾಗಲಿ ಎಂದು ಈ ಸಂದರ್ಭದಲ್ಲಿ ಹಾರೈಸುತ್ತೇನೆ.

    ನಾ. ದಿವಾಕರ

    Share. Facebook Twitter Pinterest LinkedIn Tumblr WhatsApp Email
    Previous Articleಸಂಗೀತ ವಿದ್ವಾನ್ ಮಧೂರು ಪಿ. ಬಾಲಸುಬ್ರಹ್ಮಣ್ಯಂ ಇವರಿಗೆ ‘ಕರ್ನಾಟಕ ಕಲಾಚಾರ್ಯ’ ಪ್ರಶಸ್ತಿ
    Next Article ಸಾಧನ ಬಳಗದಿಂದ ‘ಸ್ನೇಹ ಮಿಲನ-25’ರಲ್ಲಿ ‘ಪತ್ತೋಳಿ ರೂಕ’ ನಾಟಕ ಪ್ರದರ್ಶನ
    roovari

    Add Comment Cancel Reply


    Related Posts

    ಕಲಾಕುಲ್ ಕೊಂಕಣಿ ನಾಟಕ ರೆಪರ್ಟರಿಗೆ ಅರ್ಜಿ ಆಹ್ವಾನ

    May 10, 2025

    ‘ಗೌರಿ ಸುಂದರ್ ವಾರ್ಷಿಕ ಪ್ರಶಸ್ತಿ’ ಪ್ರದಾನ ಹಾಗೂ ಪುಸ್ತಕ ಲೋಕಾರ್ಪಣೆ ಸಮಾರಂಭ | ಮೇ 11

    May 8, 2025

    ಧಾರವಾಡ ರಂಗಾಯಣದಲ್ಲಿ ‘ಚಿಣ್ಣರಮೇಳ 2025’ ಸಮಾರೋಪ ಸಮಾರಂಭ | ಮೇ 03ರಿಂದ 05

    May 2, 2025

    ಸಿವಗಂಗ ರಂಗಮಂದಿರದಲ್ಲಿ ‘ಬಣ್ಣದ ಬೇಸಿಗೆ’ ಮಕ್ಕಳ ರಂಗ ಶಿಬಿರದ ಸಮಾರೋಪ ಸಮಾರಂಭ | ಮೇ 04

    May 1, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.

    Notifications