ಸ್ವಾತಂತ್ರ್ಯ ಹೋರಾಟಗಾರರಾಗಿ, ಕರ್ನಾಟಕ ಏಕೀಕರಣದ ಮುಂದಾಳುವಾಗಿ, ಕನ್ನಡ ಕಾವ್ಯ ಪರಂಪರೆಯ ಪ್ರತಿನಿಧಿಯಾಗಿ, ರಾಷ್ಟ್ರ ಪ್ರಶಸ್ತಿ ವಿಜೇತ ಅಧ್ಯಾಪಕರಾಗಿ, ಕನ್ನಡಿಗರಿಗೆ ಹಿರಿಯಣ್ಣನಾಗಿ ಪ್ರೇರಣೆಯನ್ನು ನೀಡಿದ ಕಯ್ಯಾರ ಕಿಂಞಣ್ಣ ರೈಯವರು ಶತಮಾನ ಕಂಡ ಅಪರೂಪದ ಕವಿ. “ಇವರ ಕವನಗಳು ಪಾರಿವಾಳದ ಹಿಂಡಿನಂತೆ ರೂಪದಲ್ಲಿ ಮಾತ್ರ ಸಾಹಜಿಕವಾಗಿ ಭಿನ್ನವೇ ಹೊರತು ಧ್ವನಿಯಲ್ಲಿ ಏಕಪ್ರಕಾರವಾದ ಕಲಕಂಠ” ಎಂದು ಮಂಜೇಶ್ವರ ಗೋವಿಂದ ಪೈಗಳು ‘ಪುನರ್ನವ’ ಸಂಕಲನಕ್ಕೆ ಸಂಬಂಧಿಸಿ ಹೇಳಿದ ಮಾತುಗಳನ್ನು ಕಯ್ಯಾರರ ಒಟ್ಟು ಕವನಗಳಿಗೆ ಅನ್ವಯಿಸಹುದು. ‘ಶ್ರೀಮುಖ’, ‘ಐಕ್ಯಗಾನ’, ‘ಪುನರ್ನವ’, ‘ಚೇತನ’, ‘ಪಂಚಮಿ’, ‘ಕೊರಗ’, ‘ಗಂಧವತಿ’ ಎಂಬ ಆರು ಕವನ ಸಂಕಲನಗಳ ಜೊತೆಗೆ 111 ಕವನಗಳ ಸಂಕಲನ ‘ಶತಮಾನದ ಗಾನ’, ಅವುಗಳನ್ನು ಒಳಗೊಂಡ ‘ಪ್ರತಿಭಾ ಪಯಸ್ವಿನಿ’ಯೂ ಸೇರಿದಂತೆ ‘ಕುಮಾರನ್ ಆಶಾನ್ ಅವರ ಮೂರು ಕವಿತೆಗಳು’ (ಅನುವಾದ) ಮತ್ತು ‘ಮಕ್ಕಳ ಪದ್ಯ ಮಂಜರಿ ಭಾಗ 1 ಮತ್ತು ಭಾಗ 2’ ಎಂಬ ಕೃತಿಗಳು ಅವರ ಪ್ರತಿಭೆಗೆ ಸಾಕ್ಷಿಯಾಗಿವೆ.
“ಆಗ ಕನ್ನಡದಲ್ಲಿ ನವೋದಯ ಸಾಹಿತ್ಯ ಕೃಷಿಯ ಕಾಲವಾಗಿತ್ತು. ನನ್ನ ಒಲವು ಆ ಕಡೆಗೆ ಇತ್ತು. ಮುಕ್ತಪ್ರಾಸ, ಮುಕ್ತ ಛಂದೋಲಯದ ಕವಿತಾ ರಚನೆಯ ಶೈಲಿಗೆ ನಾನು ಒಲಿದಿದ್ದೆ. ಕಾಲೇಜಿನಲ್ಲಿ ಶ್ರೀಕೃಷ್ಣ ಜಯಂತಿಯ ಅಂಗವಾಗಿ ಆಯೋಜಿಸಿದ ಭಗವದ್ಗೀತೆ ಕಂಠಪಾಠ ಸ್ಪರ್ಧೆ, ಶ್ರೀಕೃಷ್ಣನನ್ನು ಕುರಿತ ಕವನ ರಚನೆ ಸ್ಪರ್ಧೆಯಲ್ಲಿ ಬಹುಮಾನ ದೊರೆತಿದ್ದು, ನಾಡಹಬ್ಬದ ಸಂದರ್ಭದಲ್ಲಿ ಬೇಂದ್ರೆಯವರಿಂದ ಪ್ರೋತ್ಸಾಹ ಸಿಕ್ಕಿದ್ದು ಕಾವ್ಯರಚನೆಗೆ ಸ್ಫೂರ್ತಿ ನೀಡಿತು” ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ‘ನೀನು ನನ್ನ ಭಾವನೆಯಲಿ’ ಎಂಬ ಕವನ ‘ಸ್ವದೇಶಾಭಿಮಾನಿ’ ಪತ್ರಿಕೆಯಲ್ಲಿ ಪ್ರಕಟವಾದಾಗ ಹರ್ಷಗೊಂಡು ‘ಅಚ್ಚಾಗಿ ಬಂದಾಗ ಹುಚ್ಚೆದ್ದು ಹೋಗಿಹೆನು, ನೆಲವ ಬಿಟ್ಟೇರಿಹೆನು ಬಾನಿನೆಡೆಗು’ ಎಂದು ಸಂಭ್ರಮಿಸಿದ್ದಾರೆ. ‘ಸ್ವಗತ’ ಎಂಬ ಕವನದಲ್ಲಿ ಅವರು ನಡೆದು ಬಂದ ಹಾದಿಯ ವಿವರಗಳಿವೆ.
ಕನ್ನಡದ ಗಡಿನಾಡಿನಲ್ಲಿ ನಾ ಹುಟ್ಟಿರಲು
ಹೇಡಿಯೆನಿಸದೆ ಯೋಧನಾಗಬೇಕು
ಕನ್ನಡಾಂತರ್ಗತಂ ತುಳುನಾಡು ನನ್ನದಿದು
ಭಾರತಾಂತರ್ಗತಂ ಕನ್ನಡದ ಬದುಕು
ಎಂಬ ದೃಷ್ಟಿಕೋನವು ಕಯ್ಯಾರರ ಬಹಳಷ್ಟು ಕವನಗಳಿಗೆ ಹಿನ್ನೆಲೆಯಾಗಿದೆ. ಬಾಳಿ ಬದುಕಿದ ಪರಿಸರವು ಅವರ ಕಾವ್ಯವನ್ನು ಪ್ರಭಾವಿಸಿದೆ.
ಬೇಟೆ ಕಂಬಳ ಕೋಲ ತಾಳಮದ್ದಳೆಗಳಲಿ
ನಮ್ಮ ಹಿರಿಯರ ಹುರುಪು ನೋಡಬೇಕು
ಅಶ್ವಧಾಟಿಯ ಹಿಡಿದು ನಮ್ಮಜ್ಜ ಜೈಮಿನಿಯ
ಓದುತಿರೆ ಸರಸತಿಯೆ ಕುಣಿಯಬೇಕು
ಈ ಚರಣಗಳೊಂದಿಗೆ ‘ನೇಗಿಲ ಸಮಕೆ ಲೇಖನಿ ಹಿಡಿದ ಕೈಯಲ್ಲಿಗೆರೆ ತಪ್ಪದಿರೆ ಬರೆವೆ’ ಎಂಬ ಸಾಲೂ ಅದನ್ನು ಸಮರ್ಥಿಸುತ್ತದೆ. “ಇವರು ಕನ್ನಡನಾಡಿನ ವಿಶಿಷ್ಟ ಕವಿ. ಯಕ್ಷಗಾನ ಬಯಲಾಟ, ತಾಳಮದ್ದಳೆ, ಭೂತನರ್ತನ, ಪಾಡ್ದನ, ಓಬೇಲೆ, ಕಳಂಜ, ಜೋಗಿ, ಪರವ, ಪಂಬದ, ನಲಿಕೆಯವರು, ತೋಟಗದ್ದೆಗಳು ಇವರ ಕಾವ್ಯ ಸ್ಫೂರ್ತಿಯ ನೆಲೆಗಳು” ಎಂದು ದೇಜಗೌ ಗುರುತಿಸುತ್ತಾರೆ.
ಕಯ್ಯಾರರು ಕಾವ್ಯ ರಚನೆಗೆ ತೊಡಗಿದಾಗ ದೇಶದಲ್ಲಿ ಸ್ವಾತಂತ್ರ್ಯ ಹೋರಾಟದ ಕಾವು ಹರಡಿತ್ತು. ಪರಾಧೀನತೆಯ ಸಮಸ್ಯೆಗೆ ಅವರು ತೀವ್ರವಾಗಿ ಸ್ಪಂದಿಸಿದರು.
ಎನ್ನೆದೆಯ ಬಿಸಿರಕ್ತ ಕುದಿಕುದಿಸಿ ಮಸಿಮಾಡಿ
ನಾಂ ಬರೆಯಬಲ್ಲೆನೆ? ನಾನು ಕವಿಯು
ಸುಲಿಗೆ ಸಂಸ್ಕೃತಿ ಎಂದು ತಿಳಿದಿರುವ ಪಾಪಿಗಳ
ಮುರಿವ ಲೇಖನಿ ಬೇಕು ರಕ್ತವದಕೆ ಮಸಿ
ರಾಷ್ಟ್ರದ ಶಕ್ತಿಯೆಲ್ಲವೂ ಸ್ವಾತಂತ್ರ್ಯದ ಕನಸಿನಲ್ಲಿ ದುಡಿಯತೊಡಗಿದ ಸಮಯದಲ್ಲಿ ಆದರ್ಶವಾದವನ್ನು ವ್ಯಕ್ತಪಡಿಸುವ ಈ ಸಾಲುಗಳು ದೇಶಕಾಲಗಳನ್ನು ಮೀರಿ ನಿಲ್ಲುತ್ತವೆ. ‘ರಕ್ಕಸರ ರಾಜ್ಯದಲಿ ದೇವರಿಗೆ ನೆಲೆಯೆಲ್ಲಿ’ ಎಂದು ಪ್ರಶ್ನಿಸುವ ಕವಿ ‘ಕರುಳುಗಳು ಕುದಿಯುತಿವೆ ಬೆಂಕಿಯಲ್ಲಿ’ ಎಂಬ ಸತ್ಯವನ್ನು ಮುಂದಿಡುತ್ತಾರೆ. ಇದರ ನಿವಾರಣೆಗಾಗಿ ‘ಧಗಧಗಿಸಲೀ ದೇಹ ನಿತ್ಯ ಸಂತೋಷದಲಿ, ಅರ್ಪಿಸುವಿದೋ ಪುಣ್ಯ ಪಾದಪದ್ಮದಲಿ’ ಎಂಬ ಸಮರ್ಪಣ ಭಾವದೊಂದಿಗೆ ‘ಬಿಡೆಬಿಡೆವು ಎಂದೆಂದು ನಮ್ಮದೀ ಸೊತ್ತೆಂದು, ಕಾದಾಡಿ ತಾಯ್ನಾಡ ಕೀರ್ತಿಯುಳಿಸುವೆವು’ ಎಂದು ನಿರ್ಧರಿಸುತ್ತಾರೆ. ಭಾರತ ಮಾತೆಯದಾಸ್ಯದ ಸಂಕಲೆಯನ್ನು ಕಿತ್ತೊಗೆಯಲು ಎಲ್ಲರೂ ಮುಂದೆ ಬರಬೇಕು. ಎಲ್ಲ ಮಕ್ಕಳನ್ನು ಸಮಾನವಾಗಿ ಪೊರೆಯುವ ತಾಯಿಗೆ ಆಪತ್ತು ಬಂದಾಗ ಮಕ್ಕಳೆಲ್ಲರೂ ಆಕೆಯನ್ನು ಕಾಪಾಡಬೇಕು ಎಂಬ ಮನೋಭಾವವನ್ನು ಕಾಣುತ್ತೇವೆ.
ಒಮ್ಮತದೊಳೇಕ ಪಂಥವ ಹಿಡಿದು ಸಾಗುವೆವು
ಸೋದರರು ಕ್ಷಮಿಸೆಮ್ಮ ಬಡಿದಾಡೆವು
ಹೊಸ ಜಗದ ನಿರ್ಮಾಣದೊಳೀ ಸಂಧಿಕಾಲದಲಿ
ನಿನ್ನ ಘನತೆಗೆ ಕೊರತೆಯಾಗಬಿಡೆವು
ಎಂಬ ಭರವಸೆಯ ಮಾತುಗಳನ್ನಾಡುತ್ತಾರೆ. ಸ್ವಾತಂತ್ರ್ಯದ ಕನಸು ನನಸಾದಾಗ ಸಂತಸ ಪಡುತ್ತಾರೆ.
ಸ್ವಾತಂತ್ರ್ಯ ಭಾರತಕೆ ಬಂತು ಬಂತು
ಬೇಕು ಬೇಕೆಂದ ಬಿಡುಗಡೆಯು ಬಂತು
ಬಿಸಿರಕುತ ಮಸಿಯಲ್ಲಿ ಮೃದು ಹೃದಯತಲದಲ್ಲಿ
ಕವಿ ಬರೆದಕಾವ್ಯ ಬಿಡುಗಡೆಯು ಬಂತು
ಸ್ವಾತಂತ್ರ್ಯಕ್ಕಾಗಿ ಕಾದ ಗಳಿಗೆಯನ್ನು ಕಟ್ಟಿಕೊಡುವ ಕೊನೆಯ ಎರಡು ಸಾಲುಗಳು ಕವನದ ಒಟ್ಟು ಆಶಯವನ್ನು ಪ್ರತಿಫಲಿಸುತ್ತವೆ.
ಜೀವನದ ಕಲ್ಪತರು ಪಡೆದನುಭವದ ಫಲವು
ಸಿಹಿಯೋ ಸಿಹಿ ಬೇರೇನೂ ಹೇಳಲೊಲ್ಲೆ
ಬಾಳುವೆಯ ಬಟ್ಟಲಲಿ ನಂಜೆರೆದು ಕುಡಿಯೆನಲು
ಕಹಿಯೆನದೆ ಕುಡಿಕುಡಿದು ಬದುಕಬಲ್ಲೆ
ಎನ್ನುವ ಕವಿಯು ನಿರಾಶಾವಾದಿಯಲ್ಲ.
ಬೆಂಕಿ ಬಿದ್ದಿದೆ ಮನೆಗೆ ಓ ಬೇಗ ಬನ್ನಿ
ಎಲ್ಲರೂ ಎದ್ದೆದ್ದು ಓಡಿ ಬನ್ನಿ
ಕನ್ನಡದ ಗಡಿಕಾಯೆ
ಗುಡಿಕಾಯೆ ನುಡಿಕಾಯೆ
ಕಾಯಲಾರೆವೆ ಸಾಯೆ
ಎಂದು ಆವೇಶಭರಿತರಾಗಿ ಹೇಳುವಲ್ಲಿ ಭಾಷಾವಾರು ಪ್ರಾಂತ್ಯ ವಿಂಗಡಣೆಯ ಸಂದರ್ಭದಲ್ಲಿ ಕಾಸರಗೋಡು ಕೇರಳಕ್ಕೆ ಸೇರಿದಾಗ ಹುಟ್ಟಿದ ಆತಂಕ, ನೋವು ಎದ್ದುಕಾಣುತ್ತದೆ. ಈ ಸಾಲುಗಳು ಕಾಸರಗೋಡಿನ ಗಂಭೀರ ಪರಿಸ್ಥಿತಿಯನ್ನು ವಿವರಿಸುತ್ತಿದ್ದರೂ ಕವಿಯ ಕಾಳಜಿಯನ್ನು ಇಡೀ ದೇಶದ ನೆಲೆಯಲ್ಲೂ ಪರಿಭಾವಿಸಬಹುದು.
ಕಯ್ಯಾರರ ಕಾವ್ಯದಲ್ಲಿ ಜಾತಿ ಪ್ರಜ್ಞೆ ಅಥವಾ ವರ್ಣಪ್ರಜ್ಞೆಯನ್ನು ಕುರಿತ ವಿರೋಧಿ ನೆಲೆಯು ಮುಖ್ಯವಾಗುತ್ತದೆ. ‘ಮೇಲಿಲ್ಲ ಕೀಳಿಲ್ಲ ಮಾನವರಲಿ, ಬಡವನೂ ಬಲ್ಲಿದನೂ ಒಂದೆಯಿಲ್ಲಿ’ ಎಂಬ ಸಮಾನತೆಯ ತತ್ವದೊಂದಿಗೆ ‘ಬಿಳಿಯರಿಗೆಲ್ಲವೂ ಬೇರೇನು ತತ್ವವು? ಕರಿಯ ಜನರು ಕುರಿಯ ಮಂದೆಗಳೇನು?’ ಎಂಬ ಪ್ರಶ್ನೆಯಲ್ಲಿ ವ್ಯಕ್ತಿ ಪ್ರಜ್ಞೆಯು ಸಮಷ್ಟಿ ಪ್ರಜ್ಞೆಯಾಗಿ ವಿಸ್ತರಿಸುತ್ತದೆ.
ಆಳೊಡೆತನ ಹೋಗಿ ವಿಶ್ವ ವಿಷಮತೆ ನೀಗಿ
ಪ್ರೀತಿ ಸಮತೆಗಳಿಗಾಗಿ ಗೆಲ್ಲು ನಾಡೆ
ಎನ್ನುವುದರೊಂದಿಗೆ ‘ಎಲ್ಲರೂ ನಮ್ಮವರೆ ಎದೆಯರಳಲಿ’ ಎಂಬ ಆಶಯವನ್ನು ವ್ಯಕ್ತಪಡಿಸುತ್ತಾರೆ. ಒಳ ಕುದಿತಗಳನ್ನು ಪ್ರತೀಕಾರ ಮತ್ತು ದ್ವೇಷವಾಗಿ ಪರಿವರ್ತಿಸದೆ ಸಾಮರಸ್ಯದ ನೆಲೆಯಲ್ಲಿ ಬಿಚ್ಚಿಡುವ ಕಯ್ಯಾರರು ಸಮಾನತೆಯ ಮೌಲ್ಯಗಳನ್ನು ಪುನಶ್ಚೇತನಗೊಳಿಸಲು ಬಯಸುತ್ತಾರೆ. ದೇಶಕ್ಕೆ ಸ್ವಾತಂತ್ರ್ಯ ದೊರಕಿದರೂ ವಿವಿಧತೆಯಲ್ಲಿ ಏಕತೆಯಿಲ್ಲದಿದ್ದರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ತಿಳಿದಿರುವುದರಿಂದ ಐಕ್ಯಮಂತ್ರವನ್ನು ಸಾರುತ್ತಾರೆ.
ಐಕ್ಯವೊಂದೇ ಮಂತ್ರ
ಐಕ್ಯದಿಂದೆ ಸ್ವತಂತ್ರ
ಐಕ್ಯಗಾನದಿ ರಾಷ್ಟ್ರ ತೇಲುತಿರಲಿ
ತಮ್ಮ ಕವನಗಳಲ್ಲಿ ದೇಶಭಕ್ತಿಯನ್ನು ಮುಖ್ಯವಾಗಿಟ್ಟುಕೊಂಡಂತೆ ಆಧ್ಯಾತ್ಮಿಕ ಚಿಂತನೆಯನ್ನೂ ಅಳವಡಿಸಿಕೊಂಡ ಕವಿಯ ಪಾಲಿಗೆ ಕೆಲವೊಮ್ಮೆ ದೇಶವೇ ದೇವರಾಗುತ್ತದೆ.
ಸ್ವಾತಂತ್ರ್ಯ ವೃಂದಾವನದೊಳೆಸೆವ ಸಸಿ ತುಳಸಿ
ಯಾಗಿ ನಾ ದೇವಪೂಜೆಯ ಬಯಸಲೊಲ್ಲೆ
ತಾಯ್ನಾಡ ತೋಟದಲಿ ಹೂಚಿಗುರು ಹೆಚ್ಚಿಸುವ
ಗೊಬ್ಬರದ ಪುಡಿಯಾದರದೆ ಭಾಗ್ಯಬಲ್ಲೆ
ಎನ್ನುವಲ್ಲಿ ತಾಯಿನಾಡೇ ಸ್ವರ್ಗ ಎನ್ನುವ ಭಾವವಿದೆ.
ದುಡಿತವೇ ನನ್ನ ದೇವರು ಲೋಕ ದೇವಕುಲ
ಬೆವರೆ ಹೂ ಹಣ್ಣುಕಾಯ್ ಕಣ್ಣೀರೆ ತೀರ್ಥಂ
ಎನ್ನೊಂದಿಗರ ಬಾಳ ಸಾವು ನೋವಿನ ಗೋಳ
ಉಂಡಿಹೆನು ಸಮಪಾಲನೆನಗದೆ ಪ್ರಸಾದಂ
ದುಡಿಮೆಯಲ್ಲಿ ದೇವರನ್ನು ಕಾಣುವ ಬಗೆಯನ್ನು ವಿವರಿಸುವ ಕವಿಯ ಮನದೊಳಗೆ ವ್ಯವಸ್ಥೆಯನ್ನು ಕುರಿತ ನೋವು ಹುದುಗಿದ್ದರೂ, ವಾಸ್ತವವನ್ನು ತಿರಸ್ಕರಿಸದೆ
ಕಾಣದಿಹ ದಾರಿಯಲಿ ಮುಂದಿರುವ ಕಷ್ಟಗಳ
ಇಂದು ನೆನೆಯುತ ನೀನು ಮರುಗಲೇಕೆ
ಈ ಕ್ಷಣವು ನಗುತಿರಲು ಈ ದಿನವು ಸುಖವಿರಲು
ಬಾಳ್ವೆ ಬೆಳಗುವುದೆಂದು ಮರೆಯಲೇಕೆ?
ಎನ್ನುವ ಆಶಾವಾದಿ ಚಿಂತನೆಯು ನವೋದಯ ಸಾಹಿತ್ಯದ ಲಕ್ಷಣವಾಗಿದೆ.
ಶೋಷಣೆ, ದೌರ್ಜನ್ಯ ಮೊದಲಾದದಮನಕಾರಿ ಪ್ರವೃತ್ತಿಗಳಿಗೆ ನಮ್ಮದೌರ್ಬಲ್ಯವೇ ಕಾರಣವೆಂದು ಧ್ವನಿಸುವ ಕವಿಯು ಸಮಸ್ಯೆಗಳಿಗೆ ಕಾರಣವನ್ನು ತನ್ನೊಳಗೆ ಹುಡುಕುವ ಪ್ರಜ್ಞಾವಂತಿಕೆಯನ್ನು ತೋರ್ಪಡಿಸುವುದರೊಂದಿಗೆ ವ್ಯಕ್ತಿಯು ಮುನ್ನಡೆಯಬೇಕಾದ ಹಾದಿಯನ್ನು ತೋರುತ್ತಾರೆ.
ತಗ್ಗಿದವರು ಮೇಲಾಗಲಿಲ್ಲ ಮಗು
ಬಗ್ಗಿದವಗೆಗುದ್ದೊಂದು
ತಲೆಯೆತ್ತಿ ನಡೆ ನೀ ಬೆಳಕಿನೆಡೆಗೆ
ಜಾಡ್ಯ ಹೊಡೆದು ಹಾಕಿಂದು
ಎಲ್ಲ ಬಗೆಯ ಜಾಡ್ಯಗಳನ್ನು ಕಿತ್ತೊಗೆದು ಹೊಸ ಚೈತನ್ಯವನ್ನು ತುಂಬಿಕೊಳ್ಳಲು ಪ್ರೇರಣೆಯನ್ನಿತ್ತು ‘ಇದೊ ಮೊದಲು ಮುನ್ನಿಲ್ಲ ಮುಗಿದುದಂದಿನ ಹಾಡು, ಹೊಸತಿಂದು ಹೊಸತು ಹಾಡು’ ಎನ್ನುತ್ತಾ ನವಜೀವ, ನವಭಾವ, ನವಶಕ್ತಿ ತುಂಬಿಸುವ ಹಾಡನ್ನು ಹಾಡಲು ಬಯಸುತ್ತಾರೆ. ಜಾತಿ, ಕುಲ, ಮತ, ಧರ್ಮಗಳ ಪಾಶವನ್ನು ಕಡಿದೊಗೆಯುವಷ್ಟು ಶಕ್ತಿಯನ್ನು ಪಡೆದು, ಯಾವ ಪರಿಮಿತಿಗೊಳಗಾಗದೆ ‘ಯುಗಯಗಗಳಾಚೆಯಲಿ ಲೋಕ ಲೋಕಾಂತದಲಿ ಆ ಹಾಡು ಗುಡುಗಬೇಕು’ ಎಂದು ಇಚ್ಛಿಸುತ್ತಾರೆ.
ನೋಯುವಂತೆ ಹೊಡೆದವರು
ನೋಯದಂತೆ ತಡೆದವರು
ಸ್ವರ್ಗದಲ್ಲಿ ಬಿದ್ದವರು
ನರಕದಿಂದ ಎದ್ದವರು
ಇವರು ನಡೆದ ದಾರಿ
ಯುಗಾದಿಯೆಂದು ಸಾರಿ
ಎಂಬಲ್ಲಿ ಯುಗಾದಿಯ ಬಗ್ಗೆ ಇತರರು ಬರೆದ ಕವನಗಳಲ್ಲಿರುವುದಕ್ಕಿಂತ ಭಿನ್ನವಾದ ನೋಟ ಸಿಗುತ್ತದೆ. ಯಾವುದೇ ವಸ್ತುವನ್ನು ದುಡಿಸಿಕೊಳ್ಳಬಲ್ಲ ಕವಿ ಗಂಡು ಹೆಣ್ಣಿನ ಮಿಲನದಲ್ಲೂ ಅಧ್ಯಾತ್ಮವನ್ನು ಕಾಣುತ್ತಾರೆ.
ಪ್ರಕೃತಿಯೊಂದಿಗೆ ಪುರುಷ ಮಿಳನ
ಅನಂತಜೀವರೂಪ
ಕತ್ತಲೆಯೋ ಬತ್ತಲೆಯೋ
ಒಳಗೆ ಸ್ನೇಹದೀಪ
ಕಯ್ಯಾರರ ಪೌರಾಣಿಕ ಸಂವೇದನೆಯು ಗಮನಾರ್ಹವಾಗಿದೆ.
ಎಣೆವಕ್ಕಿ ಬೇರಾಗೆ ಅದಕಾಗಿ ಮರುಗಿಹನು
ಪಕ್ಷಿ ಹೃದಯದ ಬೇನೆಯರಿತು ಬಲು ಬರೆದವನು
ಮೂಕಸೃಷ್ಟಿಯೊಳಾದರನಿತು ಕರುಣಿಪ ಕವಿಯು
ಪ್ರೇಮಪಿಂಡದೊಳಿಂತು ಪ್ರೀತಿದೋರುವ ಕವಿಯು
ಹಾ ಹಂತ! ಇದನೆಂತು ಮರೆಯಬಹುದು ಮಹಾಂತ?
ಕವಿಯು ಋಷಿಯಹುದಯ್ಯ ಬ್ರಹ್ಮರ್ಷಿ ಇರಬಹುದು
ಆದರವನಲಿ ಮನುಷ್ಯನ ಹೃದಯವಿಲ್ಲೇನು?
ರಾಮಾಯಣದಲ್ಲಿ ಊರ್ಮಿಳೆಯನ್ನು ಅಲಕ್ಷಿಸಿದ ವಾಲ್ಮೀಕಿಯನ್ನು ಕವಿಯು ಆಕ್ಷೇಪಿಸಿದರೂ ಆತನ ಪಾಂಡಿತ್ಯ ತನಗಿಲ್ಲವೆಂದು ಪ್ರಾಮಾಣಿಕವಾಗಿ ಒಪ್ಪಿಕೊಂಡು ‘ಅರಸಿಕನು ನಾನೆಂತು ಬರೆವೆ ಕ್ಷಮಿಸೌ ತಾಯೆ’ ಎಂದು ಊರ್ಮಿಳೆಯಲ್ಲಿ ಕ್ಷಮೆಯನ್ನು ಯಾಚಿಸುತ್ತಾರೆ. ‘ಬೇಡುವೆಂ ಚಂದ್ರವಂಶದ ಕುಡಿಯ ಕಾಪಾಡು’ ಎಂಬ ಕಥನಕಾವ್ಯದಲ್ಲಿ ಮಹಾಭಾರತದ ಕುಂತಿಕರ್ಣರ ಸಂವಾದವನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ.
ಉಪ್ಪನ್ನವಿತ್ತವಗೆತಪ್ಪೆಣಿಸದಿರು ಮಗನೆ
ಹೇಡಿಯೆನೆ ಹಿಂದುಳಿಯದಿರು ರಣದಿ
ಬೇಡುವೆಂ ಚಂದ್ರವಂಶದ ಕುಡಿಯ ಕಾಪಾಡು
ತೊಟ್ಟ ಶರವಂ ಮರಳಿ ಮರೆತು ಬಿಡು
ಕೌರವರ ಕಡೆಯಿಂದ ಹೋರಾಡಿದರೂ ಕುಂತಿಯ ಮಾತಿಗೆ ಬದ್ಧನಾಗಿ, ವಿರೋಧಿ ಬಣದ ಪಾಂಡವರನ್ನು ಉಳಿಸಬೇಕಾಗಿ ಬರುವ ಸಂದಿಗ್ಧ ಪರಿಸ್ಥಿತಿಗೆ ಒಳಗಾದ ಕರ್ಣನ ವ್ಯಕ್ತಿತ್ವವು ಮಾರ್ಮಿಕವಾಗಿ ಮೂಡಿ ಬಂದಿದೆ.
ಉಳಿದ ಕವಿತೆಗಳಿಂದ ಬೇರೆ ಜಾಡಿನಲ್ಲಿರುವ ‘ಕೊರಗ’ ಜಾತಿಸೂಚಕವಾಗಿದ್ದರೂ ಅದರೊಳಗಿನ ವಿಚಾರಗಳು ಎಲ್ಲ ಸ್ಥಿತಪ್ರಜ್ಞರಿಗೆ ಹೊಂದಿಕೊಳ್ಳುತ್ತವೆ. ದಲಿತ ಎಂಬ ಪದವನ್ನು ಕೇಳಿದ ಕೂಡಲೇ ಪ್ರತಿಭಟನೆಯ ಕಲ್ಪನೆಯ ಆವರಿಸಿಕೊಳ್ಳುವ ಹೊತ್ತಿನಲ್ಲಿ ಸಾಮಾಜಿಕ ಅಸ್ತಿತ್ವವಿಲ್ಲದ ಸಮುದಾಯದ ಬಗ್ಗೆ ಮೂಡಿದ ಈ ಕವಿತೆಯು ಛಿದ್ರಗೊಂಡ ಬದುಕನ್ನು ಕಾಠಿಣ್ಯವಿಲ್ಲದೆ ಪ್ರಕಟಿಸುತ್ತದೆ. ಮಾನ–ಅವಮಾನ, ಸೋಲು – ಗೆಲುವು, ಲಾಭ – ನಷ್ಟ, ಸುಖ – ದುಃಖಗಳಿಗೆ ಮಾತ್ರವಲ್ಲ, ಯುಗಗಳು ಕಳೆದರೂ ತನ್ನ ಬದುಕಿನ ಮಟ್ಟ ಬದಲಾಗಲಿಲ್ಲವೆಂದು ಆತನು ಕೊರಗಲಾರ.
ಇಲ್ಲವೆಂಬುದೆ ಇವನ ಬದುಕು ಭಾಗ್ಯಗಳಿಗೆಲ್ಲ
ತನುಮನಕೆ ನೋವಾದರೂ ಕೊರಗ
ಮಳೆಬಿಸಿಲಿಗೂ ಇವ ಕೊರಗ.
ಜಾತಿ, ಮತ, ಜನಾಂಗೀಯ ದ್ವೇಷಗಳಿಂದ ತಲ್ಲಣಗೊಂಡ ಸಮಾಜಕ್ಕೆ ವಿಶ್ವ ಮಾನವ ಸಂದೇಶವನ್ನು ನೀಡಿದ ಕವಿ ಕುವೆಂಪು ಅವರಿಂದ ಕಯ್ಯಾರರು ಸ್ಫೂರ್ತಿಯನ್ನು ಪಡೆದಿದ್ದಾರೆ. ಜಾತಿ ಮತ್ತು ವರ್ಣಪ್ರಜ್ಞೆಯನ್ನು ವಿರೋಧಿಸಿದ, ಕಂದಾಚಾರಗಳನ್ನು ಪ್ರಶ್ನಿಸಿದ, ಅಧ್ಯಾತ್ಮವನ್ನು ಸಾಹಿತ್ಯವಾಗಿಸಿದ, ಉಪನಿಷತ್ತುಗಳ ಸಾರವನ್ನು ಉಣಬಡಿಸಿದ, ಸಮಾನತೆಯ ತತ್ವವನ್ನು ಸಾರಿದ, ಪುರಾಣದ ಅಲಕ್ಷಿತ ಪಾತ್ರಗಳಿಗೆ ಹೊಸ ಆಯಾಮವನ್ನು ಕೊಟ್ಟ ಕುವೆಂಪು ತೋರಿದ ಬೆಳಕಿನ ಹಾದಿಯಲ್ಲಿ ನಡೆದ ಕಯ್ಯಾರರು ಅವರ ಪ್ರಭಾವವನ್ನು ಮೀರಿ ತಮ್ಮದೇ ಆದ ಮಾರ್ಗವನ್ನು ಸೃಷ್ಟಿಸಿಕೊಂಡಿದ್ದಾರೆ. ಕನ್ನಡ ನವೋದಯದ ಸಂದರ್ಭದಲ್ಲಿ ಬರವಣಿಗೆಯನ್ನು ಆರಂಭಿಸಿ ನವ್ಯೋತ್ತರವರೆಗೂ ಹಾದು ಬಂದ ಕಯ್ಯಾರರು ವೇದ, ಪುರಾಣ ಮತ್ತು ಕಾವ್ಯಮೀಮಾಂಸೆಯನ್ನು ಅರಗಿಸಿಕೊಂಡಿದ್ದಾರೆ. ಜನಾಂಗವನ್ನು ಹುರಿದುಂಬಿಸುವ ರೀತಿಯಲ್ಲಿ ಕವನಗಳನ್ನು ರಚಿಸಿರುವ ಕವಿಯು ಆ ಮಾಧ್ಯಮದ ಮೂಲಕ ಉಪನಿಷತ್ತಿನ ಸಂದೇಶವನ್ನು ಸಾರಿದ್ದಾರೆ. ಕವಿತೆಯ ಎಲ್ಲ ಬಗೆಯ ಎತ್ತರಗಳಲ್ಲಿ ಸಂಚರಿಸಬಲ್ಲ ಕಯ್ಯಾರರಿಗೆ ಕನ್ನಡಕಾವ್ಯ ಲೋಕದಲ್ಲಿ ವಿಶಿಷ್ಟ ಸ್ಥಾನವಿದೆ.
ವಿಮರ್ಶಕರು : ಡಾ. ಸುಭಾಷ್ ಪಟ್ಟಾಜೆ
ಡಾ. ಸುಭಾಷ್ ಪಟ್ಟಾಜೆಯವರು ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದಲ್ಲಿ ಡಾ. ಯು. ಮಹೇಶ್ವರಿ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ‘ಕನ್ನಡ ಮತ್ತು ಮಲಯಾಳಂ ಸಣ್ಣ ಕತೆಗಳಲ್ಲಿ ಪರಕೀಯ ಪ್ರಜ್ಞೆಯ ನೆಲೆಗಳು- ಒಂದು ತೌಲನಿಕ ಅಧ್ಯಯನ’ ಎಂಬ ಸಂಶೋಧನ ಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ. ಗೋಡೆ ಮೇಲಿನ ಗೆರೆಗಳು (ಕಥಾ ಸಂಕಲನ) ಅನುಪಮ ಅಕ್ಷರೋಪಾಸಕ ಎ. ನರಸಿಂಹ ಭಟ್ (ವ್ಯಕ್ತಿ ಚಿತ್ರಣ) ಕಥನ ಕಾರಣ (ಸಂಶೋಧನ ಕೃತಿ) ಶ್ರುತಿ ಹಿಡಿದು ಜೊತೆ ನಡೆದು (ವಿಮರ್ಶಾ ಲೇಖನಗಳ ಸಂಗ್ರಹ) ನುಡಿದು ಸೂತಕಿಗಳಲ್ಲ, ಇಹಪರದ ಧ್ಯಾನ, ಪ್ಲಾಸಿಬೋ (ಸಂಪಾದಿತ) ಸುನಂದಾ ಬೆಳಗಾಂವಕರ: ಜೀವನ ಮತ್ತು ಸಾಹಿತ್ಯ, ಬಹುಮುಖಿ: ಡಾ. ಮೋಹನ ಕುಂಟಾರ್ ಜೀವನ ಮತ್ತು ಸಾಹಿತ್ಯ (ವ್ಯಕ್ತಿ ಚಿತ್ರಣ) ಎಂಬ ಕೃತಿಗಳನ್ನು ಹೊರತಂದಿರುವ ಇವರು ಕಾಸರಗೋಡು ಜಿಲ್ಲೆಯ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆ ಶೇಣಿಯಲ್ಲಿ ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಧಾರವಾಡದ ಸಾಹಿತ್ಯ ಗಂಗಾ ಸಂಸ್ಥೆಯ ಸಂಚಾಲಕರಾಗಿ, ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯ ಸದಸ್ಯರಾಗಿ ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಗಳನ್ನು ನಡೆಸುತ್ತಿದ್ದಾರೆ.
ಕಯ್ಯಾರ ಕಿಂಞಣ್ಣ ರೈ