ಕನ್ನಡ ಸಾಹಿತ್ಯ ಲೋಕದ ಹಿರಿಯ ಬರಹಗಾರರಾದ ವೈದೇಹಿಯವರ ಮೂಲ ಹೆಸರು ವಾಸಂತಿ. ತಮ್ಮ 23ನೇ ವಯಸ್ಸಿನಲ್ಲಿ ಕೆ.ಎಲ್. ಶ್ರೀನಿವಾಸ ಮೂರ್ತಿಯವರನ್ನು ವಿವಾಹವಾದ ನಂತರ ತಮ್ಮ ಹೆಸರನ್ನು ಜಾನಕಿ ಶ್ರೀನಿವಾಸ ಮೂರ್ತಿ ಎಂದು ಬದಲಾಯಿಸಿಕೊಂಡರು. ಇವರ ರಚನೆಯ ‘ನೀರೆಯರ ಮನ’ ಎಂಬ ನೈಜ ಘಟನೆಯನ್ನಾಧರಿಸಿದ ಕತೆಯನ್ನು ಪ್ರಕಟಣೆಗಾಗಿ ಸುಧಾ ವಾರ ಪತ್ರಿಕೆಗೆ ‘ಜಾನಕಿ’ ಎಂಬ ಕಾವ್ಯನಾಮದಲ್ಲಿ ಕಳುಹಿಸಿದರು. ಆದರೆ ಆಗಿನ ಸಂಪಾದಕರು ‘ವೈದೇಹಿ’ ಎಂಬ ಕಾವ್ಯನಾಮದಲ್ಲಿ ಈ ಕಥೆಯನ್ನು ಪ್ರಕಟಿಸಿದರು. ಅಂದಿನಿಂದ ಜಾನಕಿಯವರು ‘ವೈದೇಹಿ’ ಎಂಬ ಕಾವ್ಯನಾಮದಲ್ಲಿಯೇ ಸಾಹಿತ್ಯ ರಚನೆ ಮಾಡಲಾರಂಬಿಸಿದರು. ಇವರ ಹಲವಾರು ಕಥೆಗಳು ಕರ್ಮವೀರ, ಮಯೂರ, ಸುಧಾ, ಪ್ರಜಾವಾಣಿ, ಉದಯವಾಣಿ, ಕಸ್ತೂರಿ ಮುಂತಾದ ದೈನಿಕ ವಾರಪತ್ರಿಕೆ ಹಾಗೂ ಪಾಕ್ಷಿಕಗಳಲ್ಲಿಯೂ ಪ್ರಕಟಗೊಂಡವು. ಸ್ತ್ರೀ ಪ್ರಪಂಚದ ನೋವು, ನಲಿವು, ಸಹನೆ, ನರಳುವಿಕೆಗಳಿಗೆ ಸ್ಪಂದಿಸಿ, ತಾವು ಕಂಡದ್ದನ್ನು, ಅನುಭವಿಸಿದ್ದನ್ನು ಸ್ತ್ರೀ ಪಾತ್ರಗಳ ಮೂಲಕ ಬರಹರೂಪಕ್ಕಿಳಿಸಿ ಅನಾವರಣಗೊಳಿಸಿದವರು ವೈದೇಹಿಯವರು. ಆದ್ದರಿಂದಲೇ ಅವರ ಸಾಹಿತ್ಯ ಕೃತಿಗಳಲ್ಲಿ ಸಹಜತೆ ಮತ್ತು ವಾಸ್ತವತೆ ನೈಜವಾಗಿರುವುದು ಮಾತ್ರವಲ್ಲ, ಕುಂದಾಪುರ ಕನ್ನಡದ ಸೊಗಡು ಸಾಹಿತ್ಯದ ಸೌಂದರ್ಯವನ್ನು ಹೆಚ್ಚಿಸುವುದರೊಂದಿಗೆ ಆ ಭಾಷೆಯ ಬಗೆಗಿನ ವೈದೇಹಿಯವರ ಅಭಿಮಾನವೂ ವ್ಯಕ್ತವಾಗುತ್ತದೆ.
ದಿನಾಂಕ 12 ಫೆಬ್ರವರಿ 1945ರಂದು ಜನಿಸಿದ ವೈದೇಹಿಯವರು ಮೂಲತಃ ಕುಂದಾಪುರದವರು. ಇವರ ತಂದೆ ಎ.ವಿ.ಎನ್. ಹೆಬ್ಬಾರ್ ಎಂದೇ ಹೆಸರುವಾಸಿಯಾದ ಐರೋಡಿ ವೆಂಕಟ ನರಸಿಂಹ ಹೆಬ್ಬಾರ್, ತಾಯಿ ಮಹಾಲಕ್ಷ್ಮೀ. ಪ್ರಸ್ತುತ ಉಡುಪಿಯ ಮಣಿಪಾಲದಲ್ಲಿ ನೆಲೆಸಿರುವ ಇವರಿಗೆ ನಯನಾ ಕಶ್ಯಪ್ ಮತ್ತು ಪಲ್ಲವಿ ರಾವ್ ಎನ್ನುವ ಇಬ್ಬರು ಪುತ್ರಿಯರಿದ್ದಾರೆ. ಇವರಲ್ಲಿ ನಯನಾರವರು ವೈದೇಹಿಯವರ ಐದು ಕಾದಂಬರಿಗಳು ಮತ್ತು ಇನ್ನು ಕೆಲವು ಕೃತಿಗಳನ್ನು ಆಂಗ್ಲ ಭಾಷೆಗೆ ಅನುವಾದಿಸಿದ್ದಾರೆ. ‘ಮರ ಗಿಡ ಬಳ್ಳಿ’, ‘ಅಂತರಂಗದ ಪುಟಗಳು’, ‘ಗೋಲೆ ಸಮಾಜಶಾಜ್ಞೆಯ ಟಿಪ್ಪಣಿಗೆ’, ‘ಅಮ್ಮಚ್ಚಿ ಎಂಬ ನೆನಪು’, ‘ಕ್ರೌಂಚ ಪಕ್ಷಿಗಳು’ ಇವು ಇವರ ಕಥಾ ಸಂಕಲನಗಳಾದರೆ ‘ಬಿಂದು ಬಿಂದಿಗೆ’, ‘ಪಾರಿಜಾತ ಹೂವ ಕಟ್ಟುವ ಕಾಯಕ’, ‘ದೀಪದೊಳಗಿನ ದೀಪ’ ಇವು ಕವನ ಸಂಗ್ರಹಗಳು. ‘ಅಸ್ಪೃಶ್ಯರು’ ಇವರ ರಚನೆಯ ಕಾದಂಬರಿ. ‘ಧಾಂ ಧೂಂ’, ‘ಸುಂಟರ ಗಾಳಿ’, ‘ಮೂಕನ ಮಕ್ಕಳು’, ‘ಗೊಂಬೆ ಮ್ಯಾಕ್ ಬೆಥ್’, ‘ಢಣಾಡಂಗೂರ’ ಮೊದಲಾದವು ಇವರ ರಚನೆಯ ಮಕ್ಕಳ ಸಾಹಿತ್ಯ. ‘ನಾಯಿ ಮರಿ’, ‘ಸೋಮಾರಿ ಓಲ್ಯಾ’, ‘ಸೂರ್ಯ ಬಂದ’ ಇವು ಹಲವಾರು ವೇದಿಕೆಗಳಲ್ಲಿ ಪ್ರದರ್ಶನಗೊಂಡ ಇವರ ರಚನೆಯ ನಾಟಕಗಳು.
‘ಮಲ್ಲಿನಾಥನ ಧ್ಯಾನ’, ‘ಮೇಜು ಮತ್ತು ಬಡಗಿ’, ‘ಜಾತ್ರೆ’ ಇತ್ಯಾದಿ ಪ್ರಬಂಧಗಳು, ‘ಭಾರತೀಯ ಮಹಿಳೆಯರ ಸ್ವಾತಂತ್ರ್ಯ ಹೋರಾಟ’, ‘ಬೆಳ್ಳಿಯ ಸಂಕೋಲೆ’, ‘ಸೂರ್ಯ ಕಿನ್ನರಿಯರು’, ‘ಸಂಗೀತ ಸಂವಾದ’ ಇವರ ಅನುವಾದ ಸಾಹಿತ್ಯಗಳಾದರೆ, ಕೋಟ ಲಕ್ಷ್ಮೀ ನಾರಾಯಣ ಕಾರಂತರ ಆತ್ಮಕತೆಯಾದ ‘ನೆನಪಿನಂಗಳದಲ್ಲಿ ಮುಸ್ಸಂಜೆ ಹೊತ್ತು’, ಸೇಡಿಯಾಪು ಕೃಷ್ಣ ಭಟ್ಟರ ‘ಸೇಡಿಯಾಪು ನೆನಪುಗಳು’ ಮತ್ತು ಬಿ.ವಿ. ಕಾರಂತರ ‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ ಇದು ಆತ್ಮಕಥೆ ನಿರೂಪಣೆ. ಮದುವೆಯ ನಂತರ ಶಿವಮೊಗ್ಗ ನಗರದಲ್ಲಿ ನೆಲೆಸಿರುವಾಗ ಮೇರು ಸಾಹಿತಿಗಳ ಪರಿಚಯದಿಂದಾಗಿ ಸಾಹಿತ್ಯ ರಚನೆಗೆ ಒತ್ತಾಸೆ ದೊರೆಯಿತು. ಸಾಹಿತ್ಯ ರಚನೆಗೆ ಹಂಬಲಿಸುತ್ತಿರುವ ಎಳೆಯರನ್ನು ಪ್ರೋತ್ಸಾಹಿಸುತ್ತಿದ್ದ ಅನುಪಮಾ ನಿರಂಜನ, ಲಂಕೇಶ್ ಮೊದಲಾದವರ ಪ್ರೇರಣೆ ಇವರ ಒಳಗಿರುವ ಬರಹಗಾರ್ತಿಯನ್ನು ಹೊರಗೆಳಯುವಲ್ಲಿ ಸಹಾಯಕವಾಯಿತು.
ವೈದೇಹಿಯವರು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅನನ್ಯ. ಅವರ ಈ ಸಾಧನೆಗೆ ಕರ್ನಾಟಕ ಲೇಖಕಿಯರ ಸಂಘದಿಂದ ‘ಗೀತಾ ದೇಸಾಯಿ ದತ್ತಿ ನಿಧಿ ಪುರಸ್ಕಾರ’, ‘ಅಂತರಂಗದ ಪುಟಗಳು’ ಮತ್ತು ‘ಬಿಂದು ಬಿಂದಿಗೆ’ ಕೃತಿಗಳಿಗೆ ‘ವರ್ಧಮಾನಪೀಠ ಪ್ರಶಸ್ತಿ’, ‘ವರ್ಧಮಾನ ಉದಯೋನ್ಮುಖ ಪ್ರಶಸ್ತಿ’, ‘ಗೋಲಾ’ ಕೃತಿಗೆ ‘ಕಥಾ ಆರ್ಗನೈಸೇಷನ್ ಕಥಾ ಪುರಸ್ಕಾರ’, ‘ಹಗಲು ಗೀಚಿದ ನೆಂಟ’ ಕೃತಿಗೆ ಕರ್ನಾಟಕ ಲೇಖಕಿಯ ಸಂಘದಿಂದ ‘ಅನುಪಮಾ ಪುರಸ್ಕಾರ’, ‘ಸಮಾಜ ಶಾಸ್ತ್ರಜ್ಞ ಟಿಪ್ಪಣಿಗೆ’ ಈ ಕೃತಿಗೆ ಕರ್ನಾಟಕ ಸಂಘ ಶಿವಮೊಗ್ಗದಿಂದ ‘ಎಂ.ಕೆ. ಇಂದಿರಾ ಪುರಸ್ಕಾರ’, ‘ಅಸ್ಪೃಶ್ಯರು’ ಕೃತಿಗೆ ‘ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರ’, ‘ಐದು ಮಕ್ಕಳ ನಾಟಕಗಳು’ ಕೃತಿಗೆ ಅತ್ತಿಮಬ್ಬೆ ಪ್ರತಿಷ್ಠಾನದಿಂದ ‘ಅತ್ತಿಮಬ್ಬೆ ಪುರಸ್ಕಾರ’ ಮತ್ತು ‘ಸಾಹಿತ್ಯ ಅಕಾಡೆಮಿ ಪುರಸ್ಕಾರ’, ‘ಮಲ್ಲಿನಾಥನ ಧ್ಯಾನ’ ಕೃತಿಗೆ ಕರ್ನಾಟಕ ರಾಜ್ಯ ಸರ್ಕಾರದಿಂದ ‘ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ’, ‘ಕೌಂಚ ಪಕ್ಷಿಗಳು’ ಎಂಬ ಸಣ್ಣ ಕಥಾ ಸಂಕಲನಕ್ಕೆ ‘ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ’ ಹೀಗೆ ‘ಸಂದೇಶ ಕನ್ನಡ ಸಾಹಿತ್ಯ ಪ್ರಶಸ್ತಿ’ ‘ನಿರಂಜನ ಪ್ರಶಸ್ತಿ’, ‘ಸುನಂದಮ್ಮ ಸಾಹಿತ್ಯ ಪ್ರಶಸ್ತಿ’ ಮತ್ತು ‘ನೃಪತುಂಗ ಸಾಹಿತ್ಯ ಪ್ರಶಸ್ತಿ’ ಹತ್ತು ಹಲವು ಪುರಸ್ಕಾರ ಸನ್ಮಾನಗಳು ಇವರ ಸಾಹಿತ್ಯ ಸಾಧನೆಗೆ ದೊರೆತ ಗೌರವ.
ವೈದೇಹಿಯವರ ಕಥೆಯನ್ನಾಧರಿಸಿದ ಗಿರೀಶ್ ಕಾಸರವಳ್ಳಿ ನಿರ್ದೇಶನದ ‘ಗುಲಾಬಿ ಟಾಕೀಸ್’ ಚಲನಚಿತ್ರಕ್ಕೇ 2009ರ ಅತ್ಯುತ್ತಮ ಪ್ರಾದೇಶಿಕ ಚಲನಚಿತ್ರ ರಾಷ್ಟ್ರೀಯ ಪ್ರಶಸ್ತಿ ಹಾಗೂ ಪ್ರಮುಖ ಪಾತ್ರ ವಹಿಸಿದ ನಟಿ ಉಮಾಶ್ರೀ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ನೀಡಲಾಗಿದೆ. ಇದು ವೈದೇಹಿಯವರ ಸನ್ಮಾನ ಪುರಸ್ಕಾರ ಪ್ರಶಸ್ತಿಗಳ ಗೌರವವನ್ನು ಹೆಚ್ಚಿಸುತ್ತದೆ. ಸಾಹಿತ್ಯಲೋಕ ಶ್ರೀಮಂತಗೊಳಿಸಿದ ಸೃಜನಶೀಲ ಸಾಹಿತಿ ವೈದೇಹಿಯವರಿಗೆ ಜನ್ಮ ದಿನದ ಶುಭಾಶಯಗಳು.
ಅಕ್ಷರಿ