ಕನ್ನಡ ಲೇಖಕಿಯಾಗಿ ಸಮಾಜ ಸೇವಕಿಯಾಗಿ ಖ್ಯಾತಿ ಗಳಿಸಿರುವ ಸಿ. ಎನ್. ಜಯಲಕ್ಷ್ಮೀಯವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕೃಷಿಗೈದ ಖ್ಯಾತ ಬರಹಗಾರ್ತಿ. ಇವರ ಮೂರು ಕಾದಂಬರಿಗಳು ಮೂರು ಕಥಾ ಸಂಕಲನಗಳು, ಎರಡು ನಾಟಕಗಳು, ಏಳು ಮಕ್ಕಳ ಸಾಹಿತ್ಯ, ಜೀವನ ಚರಿತ್ರೆ ಸೇರಿದಂತೆ ಒಟ್ಟು ಹದಿನೇಳು ಕೃತಿಗಳನ್ನು ರಚಿಸಿ ಹೆಸರು ಪಡೆದಿದ್ದಾರೆ. ಅವರ ಕೃತಿಗಳು ಹೀಗಿವೆ –
ಕಾದಂಬರಿಗಳು – ಗ್ರಾಮಲೀಲೆ (ಸಾಮಾಜಿಕ), ಶಪ್ತವಾಪಿ, ಗಂಗರಸರ ದುರ್ವಿನೀತ (ಐತಿಹಾಸಿಕ)
ಕಥಾ ಸಂಕಲನಗಳು – ಶುಭದೃಷ್ಠಿ, ನಾರಿಯರ ಹಲವು ಮುಖಗಳು, ಅನಾಮಿಕ ಮತ್ತು ಇವರ ಕಥೆಗಳು
ಮಕ್ಕಳ ಸಾಹಿತ್ಯ – ಸ್ನೇಹ ಸಾಮ್ರಾಜ್ಯ, ಚೋರನಲ್ಲ ದಂಗೆಕೋರ, ಕೋಳೂರು ಕೊಡಗೂಸು, ಸಮುದ್ರ ಮತ್ತು ಸಾಗರ ಸಂಗಮ, ಅಭಯಾರಣ್ಯದಲ್ಲಿ ಒಂದು ಅನುಭವ, ಮಹಾಭಾರತದಲ್ಲಿ ಪ್ರಾಣಿಗಳು
ಜೀವನ ಚರಿತ್ರೆ – ರಾಜಾರಾಮ್ ಮೋಹನ ರಾಮ್
ಜನಪ್ರಿಯ ಜೈಮಿನಿ ಭಾರತದ ಗದ್ಯ ಕೃತಿ ಮತ್ತು ‘ದಶರಥ’ ಮತ್ತು ‘ದೇವಯನಿ’ ಎರಡು ನಾಟಕಗಳು
ಜಯಲಕ್ಷ್ಮೀದೇವಿಯವರು ಅವರ ಎರಡೂ ನಾಟಕಗಳಲ್ಲಿ ನಟಿಯಾಗಿಯೂ ಗಣನೀಯ ಅಭಿನಯ ಮೆರೆದಿದ್ದಾರೆ. ಇವೆರಡೂ ಬಹಳ ದಿನಗಳು ಯಶಸ್ವಿ ಪೂರ್ಣವಾಗಿ ಪ್ರದರ್ಶನದಲ್ಲಿದ್ದವು. ‘ದಶರಥ’ ನಾಟಕದಲ್ಲಿ ರಾಮಾಯಣದ ಪ್ರಸಂಗ ಒಂದಕ್ಕೆ ಹೊಸ ತಿರುವು ಕೊಡಲಾಗಿದೆ. ಕೇಕೆಯ ರಾಜಪುತ್ರಿ ಕೈಕೇಯಳನ್ನೂ ಮೋಹಿಸಿದ ದಶರಥ ಅವಳಿಗೆ ಹುಟ್ಟುವ ಮಗನಿಗೆ ಪಟ್ಟ ಕಟ್ಟಬೇಕೆಂಬ ಅವಳ ತಂದೆಯ ಷರತ್ತಿಗೆ ಒಪ್ಪಿ (ಕೌಶಲ್ಯ, ಸುಮಿತ್ರೆಯರಿಗೆ ವಯಸ್ಸಾಗಿದ್ದು ಮಕ್ಕಳಾಗುವುದಿಲ್ಲವೆಂದು ಯೋಚಿಸಿ) ಮದುವೆಯಾದನು. ಮುಂದೆ ಪುತ್ರ ಕಾಮೇಷ್ಠಿ ಯಾಗದ ಫಲವಾಗಿ ಮೂವರೂ ಪತ್ನಿಯರಿಗೂ ಮಕ್ಕಳಾದವು. ಹಿರಿಯ ಹೆಂಡತಿ ಕೌಶಲ್ಯೆಯ ಮಗ ಶ್ರೀರಾಮನಿಗೆ ಪಟ್ಟ ಕಟ್ಟಬೇಕೆಂದು ನಿರ್ಧರಿಸಿದಾಗ ದಶರಥನು ವಚನ ಭ್ರಷ್ಟನಾಗಬಾರದೆಂದು ಯೋಚಿಸಿದ ಕೈಕೇಯು ತನ್ನ ಮಗ ಭರತನಿಗೆ ಪಟ್ಟಾಭಿಷೇಕ, ರಾಮನಿಗೆ 14 ವರ್ಷ ವನವಾಸವೆಂದು ಪಟ್ಟು ಹಿಡಿದಳು. ಈ ವಿಷಯ ಶ್ರೀರಾಮಚಂದ್ರನಿಗೆ ಮತ್ತು ವಶಿಷ್ಟರಿಗೂ ತಿಳಿದಿತ್ತು ಎಂದು ಪ್ರಸ್ತುತ ಪಡಿಸಲಾಗಿದೆ.
ಸಾಹಿತ್ಯದ ಜೊತೆಗೆ ಇವರಿಗೆ ಸಮಾಜ ಸೇವೆಯಲ್ಲಿಯೂ ಆಸಕ್ತಿ, ಶೃದ್ಧೆ. ಅವರ ಪತಿಯವರು ವರ್ಗವಾಗಿ ಹೋದ ಸ್ಥಳಗಳಲ್ಲೆಲ್ಲಾ ಶಿಶು ವಿಹಾರಗಳು, ಮಹಿಳಾ ಸಂಘಗಳನ್ನೂ ತೆರೆದು ಮಕ್ಕಳ ಹಾಗೂ ಮಹಿಳೆಯರ ಅಭ್ಯುದಯಮುಖಿ ಸಮಾಜ ಸೇವಾ ಕಾರ್ಯಗಳಲ್ಲಿ ನಿರತರಾಗಿದ್ದರು. ಇಷ್ಟೇ ಅಲ್ಲದೆ ಸಂಗೀತ ಮತ್ತು ಗಮಕ ಕಲೆಯಲ್ಲಿ ಆಸಕ್ತರಾಗಿದ್ದರು. ಪ್ರಖ್ಯಾತ ಸಂಗೀತ ತಜ್ಞರಾಗಿದ್ದ ರಾಳ್ಲೆಪಲ್ಲಿ ಅನಂತಕೃಷ್ಣ ಶರ್ಮರ ಬಳಿ ಸಂಗೀತ ಅಭ್ಯಾಸ ಮಾಡಿ, ಕೆ.ಆರ್. ಪೇಟೆಯಲ್ಲಿ ಮಹಿಳೆಯರ ಏಳಿಗೆಗಾಗಿ ಸಂಕ್ಷಿಪ್ತ ಶಿಕ್ಷಣ ತರಗತಿಗಳನ್ನು ನಡೆಸಿದರು. ಮಕ್ಕಳಿಗೆ ಸಂಗೀತಾಭ್ಯಾಸ ಮಾಡಿಸಿದರು.
ಲೇಖಕಿ ಜಯಲಕ್ಷ್ಮೀ ದೇವಿಯವರು ಚನ್ನಪಟ್ಟಣದ ಪಟ್ಟು ಗ್ರಾಮದಲ್ಲಿ ಸಿ.ಕೆ. ನಾರಾಯಣ ರಾವ್ – ನಂಜಮ್ಮ ದಂಪತಿಯ ಮಗಳಾಗಿ 1926ನೇ ಮಾರ್ಚ್ 8ರಂದು ಜನಿಸಿದರು. ಮೈಸೂರಿನ ದೊಡ್ಡಪ್ಪನ ಮನೆಯಲ್ಲಿ ಬಾಲ್ಯ, ಪ್ರಾಥಮಿಕ ಶಾಲಾ ನಂತರ ನಂಜುಂಡಯ್ಯನವರೊಡನೆ ವಿವಾಹ. ನಂತರ ಪತಿಯ ಸಹಕಾರದಿಂದ ಶಿಕ್ಷಣ ಮುಂದುವರೆಸಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾವ, ಜಾಣ ಪರೀಕ್ಷೆಗಳ ಜೊತೆಗೆ ಎಸ್. ಎಸ್. ಎಲ್. ಸಿ. ಪರೀಕ್ಷೆಯನ್ನು ಪಾಸು ಮಾಡಿದರು. ಬಾಲ್ಯದಿಂದಲೂ ತಾಯಿ ಹೇಳುತ್ತಿದ್ದ ಕಥೆಗಳು, ತಾತ ಹೇಳುತ್ತಿದ್ದ ಅರೇಬಿಯನ್ ನೈಟ್ಸ್ ಕಥೆಗಳು, ತಂದೆ ಹೇಳುತ್ತಿದ್ದ ಶೇಕ್ಸ್ ಪಿಯರ್ ನಾಟಕಗಳು, ಫ್ರೆಂಚ್, ಇಂಗ್ಲೀಷ್ ಕಾದಂಬರಿಗಳ ಕಥೆಗಳನ್ನು ಕೇಳುತ್ತಾ ಹೇಳುತ್ತಾ ಸಾಹಿತ್ಯದ ಬಗ್ಗೆ ಒಲವು ಹೆಚ್ಚಾಗಿತ್ತು. ಹಾಗಾಗಿ ತಮ್ಮ ಮದುವೆಯ ನಂತರ ಸಾಹಿತ್ಯ ಹಾಗೂ ಸಮಾಜಸೇವೆಯಲ್ಲಿ ತೊಡಗಿಸಿಕೊಂಡು ಸಮಾಜದಲ್ಲಿ ತಮ್ಮ ವ್ಯಕ್ತಿತ್ವ ಮೆರೆದ ಧೀಮಂತ ಮಹಿಳೆಯಾಗಿ ಮೆರೆದಿದ್ದರು. ಹುಟ್ಟಿನ ಮೇಲೆ ಸಾವು ಅನಿವಾರ್ಯವಲ್ಲವೇ ?, 1995ರ ನವೆಂಬರ್ 14ರಂದು ಇವರು ಕೊನೆಯುಸಿರೆಳೆದರು. ಅವರ ಅಂತ್ಯದ ನಂತರವೂ ಮೈಸೂರಿನಲ್ಲಿ ಅವರ ಹೆಸರಿನಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಮಕ್ಕಳ ಜ್ಞಾನರ್ಜನೆಗೆ ಸಹಾಯಕವಾಗಿರುವುದು ಶ್ಲಾಘನೀಯ !!
ಅವರು ಮೈಸೂರಿನಲ್ಲಿದ್ದಾಗ ನನ್ನ ಸಹೋದರಿಯರು ಅವರು ಏರ್ಪಡಿಸುತ್ತಿದ್ದ ಸಾಂಸ್ಕೃತಿಕ ಚಟುವಳಿಕೆಗಳಲ್ಲಿ ಭಾಗಿಯಾಗಿ ಕೆಲವು ವರ್ಷಗಳು ಅವರ ಒಡನಾಟದಲ್ಲಿದ್ದರು ಎಂಬುದು ಇನ್ನೂ ಹೆಚ್ಚಿನ ಸಂತಸದ ವಿಷಯವಾಗಿದೆ. ಇಂತಹ ಸೇವಾಕಾಂಕ್ಷಿ ಸಾಹಿತಿ ಶ್ರೀಮತಿ ಸಿ.ಎನ್. ಜಯಲಕ್ಷ್ಮೀಯವರ ದಿವ್ಯ ಚೇತನಕ್ಕೆ ಅವರ ಜನ್ಮ ದಿನದಂದು ಅಭಿಮಾನ ಹಾಗೂ ಗೌರವ ಪೂರ್ವಕ ನಮನಗಳು.
ಡಾ. ಯಶೋಧರ ಕೆ.,
ನಿವೃತ್ತ ಶಿಕ್ಷಣ ಪ್ರಾಧ್ಯಾಪಕರು, ಮೈಸೂರು ವಿಶ್ವ ವಿದ್ಯಾನಿಲಯ ಮೈಸೂರು.