ಕವಿ, ವಿಮರ್ಶಕ, ಚಿಂತಕ, ವಾಗ್ಮಿ ಹಾಗೂ ಬಹುಶ್ರುತ ವಿದ್ವಾಂಸರಾದ ಪ್ರೊ. ಬಿ. ಎಚ್. ಶ್ರೀಧರರು ದಕ್ಷಿಣ ಕನ್ನಡ ಜಿಲ್ಲೆಯ ಬಿಜೂರು ಗ್ರಾಮದ ಬವಲಾಡಿಯಲ್ಲಿ ಸೀತಾರಾಮ ಹೆಬ್ಬಾರ ಹಾಗೂ ನಾಗಮ್ಮ ದಂಪತಿಯ ಸುಪುತ್ರರಾಗಿ 24 ಏಪ್ರಿಲ್ 1918 ರಂದು ಜನಿಸಿದರು. ಮೂಲತಃ ಇವರ ವಂಶಸ್ಥರು ಬಾರ್ಕೂರಿನವರು.
ಪ್ರಾಥಮಿಕ ವಿದ್ಯಾಭ್ಯಾಸವನ್ನು ಬಿಜೂರಿನಲ್ಲಿ ಮುಗಿಸಿದರೆ, ಸೊರಬ ಹಾಗೂ ಸಾಗರದಲ್ಲಿ ಮಿಡ್ಲ್ ಸ್ಕೂಲ್ ಮತ್ತು ಪ್ರೌಢಶಾಲಾ ಶಿಕ್ಷಣವನ್ನು ಮುಗಿಸಿದರು. ತಮ್ಮ ಮುಂದಿನ ವಿದ್ಯಾಭ್ಯಾಸಕ್ಕಾಗಿ ಅಧ್ಯಯನಕ್ಕೆ ಗ್ರಂಥಾಲಯದ ಪುಸ್ತಕಗಳು, ಶಾಲಾ ಶುಲ್ಕಕ್ಕೆ ಶಿಷ್ಯವೇತನ ಹಾಗೂ ನಿತ್ಯದ ಭೋಜನಕ್ಕಾಗಿ ವಾರಾನ್ನನ್ನು ಅವಲಂಭಿಸಿದ್ದ ಶ್ರೀಧರರು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ. ಕಲಿತು ರಾಜ್ಯಕ್ಕೆ ಮೊದಲಿಗರಾಗಿ ಉತ್ತೀರ್ಣರಾದವರು. ತಮ್ಮ ಮನೆ ಪಾಠ ಮತ್ತು ಶಿಷ್ಯವೇತನದಿಂದ ತಂದೆಯವರಿಗೂ ಸಂಸಾರ ನಿರ್ವಹಿಸಲು ಸಹಾಯಕರಾಗಿದ್ದದ್ದು ಹೆಮ್ಮೆ ಪಡುವ ವಿಚಾರ. ಮಹಾರಾಜ ಕಾಲೇಜಿನಲ್ಲಿ ಎಂ. ಎ. ಮುಗಿಸಿ, ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರಾಗಿ, ಸಹ ಶಿಕ್ಷಕರಾಗಿ, ಪ್ರಾಚಾರ್ಯರಾಗಿ ಶ್ರೀಧರರು ಸೇವೆ ಸಲ್ಲಿಸಿದ್ದಾರೆ.
ಸಾಹಿತ್ಯದಲ್ಲಿ ಆಸಕ್ತಿ ಇದ್ದ ಶ್ರೀಧರರು ತಮ್ಮ 14ನೇ ವಯಸ್ಸಿನಲ್ಲಿಯೇ ಪದ್ಯ ರಚನೆ ಮಾಡಿ ಮೆಚ್ಚುಗೆ ಪಡೆದವರು. ಇವರ ಮೊದಲ ಕವನ ಸಂಕಲನ ‘ಮೇಘನಾದ’ ಮತ್ತು ‘ಕನ್ನಡಗೀತಾ’, ‘ರಸಯಜ್ಞ’, ‘ಮಂಜುಗೀತಾ’, ‘ಅಮೃತ ಬಿಂದು’ ಇತ್ಯಾದಿ ಇವರ ಲೇಖನಿಯಿಂದ ಮೂಡಿಬಂದ ಇತರ ಕವನ ಸಂಕಲನಗಳು. ಇವರ ಸಾಹಿತ್ಯದಲ್ಲಿ ಭಾವಗೀತೆಗಳು ಮತ್ತು ಪ್ರೌಢ ಪ್ರಬಂಧಗಳೇ ಹೆಚ್ಚಾಗಿದ್ದವು. ಭಾವಗೀತೆಗಳಲ್ಲಿ ದೇಶಪ್ರೇಮ, ದೈವ ಪ್ರೇಮ, ಸಾಮಾಜಿಕ, ರಾಜಕೀಯ, ಆರ್ಥಿಕ, ಭಾವನಾತ್ಮಕ, ಬೌದ್ಧಿಕ ಇತ್ಯಾದಿಗಳ ಕೊರತೆ ಮತ್ತು ಅವುಗಳ ಬಗ್ಗೆ ಅವರಿಗಿರುವ ನೋವು ವ್ಯಕ್ತವಾಗುತ್ತದೆ. ಪ್ರಬಂಧಗಳಲ್ಲಿಯೂ ಶಿಕ್ಷಣ, ತತ್ವಜ್ಞಾನ, ಕಲೆ, ರಾಜಕೀಯ, ಅರ್ಥವ್ಯವಸ್ಥೆ, ವ್ಯಾಪಾರ, ವ್ಯವಹಾರ, ವಿಮರ್ಶೆ ಇತ್ಯಾದಿಗಳ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನವನ್ನು ಯಶಸ್ವಿಯಾಗಿ ಮಾಡಿದ್ದಾರೆ. ಇವರು ಸಾಹಿತ್ಯದ ಎಲ್ಲಾ ಆಯಾಮಗಳಲ್ಲೂ ಬರವಣಿಗೆಯ ಕೆಲಸವನ್ನು ಮಾಡಿದವರು. ಯಕ್ಷಗಾನ, ನಾಟಕ, ಆತ್ಮಕಥೆ, ವಿಡಂಬನೆ, ವಿಮರ್ಷೆ, ವೈಚಾರಿಕ, ಐತಿಹಾಸಿಕ, ಇಂಗ್ಲೀಷಿನಿಂದ ಕನ್ನಡಕ್ಕೆ ಅನುವಾದ, ಕನ್ನಡದಿಂದ ಸಂಸ್ಕೃತಕ್ಕೆ ಅನುವಾದಗಳ ಜೊತೆಗೆ ಕೃತಿಗಳ ಸಂಪಾದನೆಯನ್ನೂ ಮಾಡಿದ ಖ್ಯಾತಿ ಇವರದ್ದು. ‘ಬಿ. ಎಚ್. ಶ್ರೀಧರ’, ‘ವಾತ್ಸಲ್ಯದ ಸಿರಿ ಸಾಹಿತ್ಯದ ಗರಿ – ಬಿ. ಎಚ್. ಶ್ರೀಧರ’, ‘ಕಲ್ಲರಳಿದ ಬಿ. ಎಚ್. ಶ್ರೀಧರ’ ಇವು ಪ್ರೊ. ಬಿ. ಎಚ್. ಶ್ರೀಧರರ ಬಗ್ಗೆ ರಚನೆಗೊಂಡ ಕೃತಿಗಳು. 1999ರಲ್ಲಿ ‘ಶ್ರೀಧರ ಸ್ಮರಣೆ’ ಎಂಬ ಸ್ಮರಣ ಸಂಚಿಕೆ ಡಾಕ್ಟರ್ ಎಂ. ಜಿ. ಹೆಗಡೆ ಇವರ ಸಂಪಾದಕತ್ವದಲ್ಲಿ ಪ್ರಕಟಗೊಂಡಿದೆ.
ತೀ. ನಂ. ಶ್ರೀ ಸ್ಮಾರಕ ಬಹುಮಾನ, ಮೈಸೂರು ವಿಶ್ವವಿದ್ಯಾಲಯದ ಸ್ವರ್ಣ ಮಹೋತ್ಸವ ಬಹುಮಾನ, ಲೋಕ ಶಿಕ್ಷಣ ಟ್ರಸ್ಟ್ ಬಹುಮಾನ, ನೌಕಾಗೀತ – ಭಾರತ ಸರಕಾರದ ರಕ್ಷಣಾಖಾತೆ ಪ್ರಶಸ್ತಿ ಮಾತ್ರವಲ್ಲದೆ ವರಕವಿ ದ. ರಾ. ಬೇಂದ್ರೆಯವರಿಂದ, ಡಾ. ಶಿವರಾಮ ಕಾರಂತರಿಂದ, ಕುಂದಾಪುರ ಜೆ. ಸಿ. ಯಿಂದ ರೋಟರಿ ಕ್ಲಬ್ಬಿನಿಂದ, ಸಿರ್ಸಿಯ ರಂಗಸಂಗ ಮತ್ತು ಕಲಾರಂಗದಿಂದ, ಯುಗಪುರುಷ ಕಿನ್ನಿಗೋಳಿ ಇವರೆಲ್ಲರಿಂದ ಸನ್ಮಾನವನ್ನು ಪಡೆದು ಗೌರವಕ್ಕೆ ಪಾತ್ರರಾಗಿದ್ದಾರೆ. ಇವೆಲ್ಲವೂ ತಮ್ಮ ಬರವಣಿಗೆಯ ಮೂಲಕ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಕ್ಕೆ ಬಿ. ಎಚ್. ಶ್ರೀಧರರಿಗೆ ಸಂದ ಗೌರವಗಳು. ಬಹುಮುಖ ಪ್ರತಿಭೆಯ ಬಿ. ಹೆಚ್. ಶ್ರೀಧರರು 1990ನೇ ಇಸವಿಯಲ್ಲಿ ತಾನು ಜನಿಸಿದ ಏಪ್ರಿಲ್ ತಿಂಗಳ ದಿನಾಂಕ 24ರಂದೇ ಇಹವನ್ನು ತ್ಯಜಿಸಿದರು.
ಸಾಹಿತ್ಯ ಲೋಕದಲ್ಲಿ ಅವರು ಜೀವಂತವಾಗಿದ್ದರೂ, ಅವರ ನೆನಪು ಜನಮನದಲ್ಲಿ ಶಾಶ್ವತವಾಗಿ ನಿಲ್ಲುವಂತೆ ಮಾಡಲು ಅವರ ಪುತ್ರ ರಾಜಶೇಖರ ಹೆಬ್ಬಾರರು ಇತರರೊಡಗೂಡಿ 1990ರಲ್ಲಿ ‘ಬಿ. ಎಚ್. ಶ್ರೀಧರ ಸಾಹಿತ್ಯ ಪ್ರಶಸ್ತಿ’ ಸಮಿತಿಯನ್ನು ರಚಿಸಿ, ಕನ್ನಡದ ಶ್ರೇಷ್ಠ ಸಾಹಿತಿಗಳ ಅತ್ಯುತ್ತಮ ಕೃತಿಗೆ ಹಾಗೂ ಜೀವಿತ ಸಾಧನೆಗೆ ಪ್ರಶಸ್ತಿಯನ್ನು ಬಿ. ಹೆಚ್. ಶ್ರೀಧರರ ಜನ್ಮದಿನದಂದೇ ನಡೆಸುತ್ತಿರುವು ಶ್ಲಾಘನೀಯ.
-ಅಕ್ಷರೀ
Subscribe to Updates
Get the latest creative news from FooBar about art, design and business.
Previous Articleಸಮಾರೋಪಗೊಂಡ ರಂಗ ಸ್ವರೂಪದ 20ನೇ ವರ್ಷದ ಮಕ್ಕಳ ಬೇಸಿಗೆ ಶಿಬಿರ