ಕನ್ನಡ ಸಾರಸ್ವತ ಲೋಕದಲ್ಲಿ ‘ಎನ್ನೆಸ್ಸೆಲ್’ ಎಂದು ಪ್ರಸಿದ್ಧರಾಗಿರುವ ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರು ಭಾವಗೀತೆಗಳ ಮೂಲಕ ಕನ್ನಡಿಗರ ಮನೆಮಾತಾದವರು. ಬದುಕಿನಲ್ಲಿ ಸದಾ ಲವಲವಿಕೆ ಇರಬೇಕೆನ್ನುವ ಹಂಬಲವನ್ನು ಅವರು ತಮ್ಮ ಭಾವಗೀತೆಗಳ ಮೂಲಕ ಅಭಿವ್ಯಕ್ತಗೊಳಿಸಿದವರು. ತಮ್ಮ ಗೀತೆಗಳಲ್ಲಿ ಸೊಗಸಾದ ನವಯವ್ವೌನವನ್ನು ತುಂಬಿ ಸುಮಧುರ ಭಾವವನ್ನು ಶೋತೃಗಳ ಕಿವಿಗೆ ಉಣಬಡಿಸಿದವರು. “ಈ ಬಾನು, ಈ ಚುಕ್ಕಿ, ಈ ಹೂವು, ಈ ಹಕ್ಕಿ, ತೇಲಿಸಾಗುವ ಮುಗಿಲು ಹರುಷ ಉಕ್ಕಿ” ಎಂದು ಪ್ರಕೃತಿಯ ನಡುವೆ ಸಾಹಿತ್ಯದ ರಸಧಾರೆಯನ್ನು ಉಕ್ಕಿಸಿದವರು ಕವಿ ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರು.
1936ರ ಅಕ್ಟೋಬರ್ 29ರಂದು ಪ್ರಾಕೃತಿಕ ಸೊಬಗಿನ ಮಲೆನಾಡಿನ ಶಿವಮೊಗ್ಗದಲ್ಲಿ ಜನಿಸಿದ ಇವರು, ಮೈಸೂರಿನಲ್ಲಿ ವ್ಯಾಸಂಗ ಮಾಡಿ ನಂತರ ಬೆಂಗಳೂರಿನಲ್ಲಿ ಅಧ್ಯಾಪನ ವೃತ್ತಿಯನ್ನು ಆರಂಭಿಸಿದರು. ವ್ಯಾಸಂಗದ ಅವಧಿಯಲ್ಲಿ ಮೈಸೂರಿನಲ್ಲಿ ತ.ಸು.ಶಾಮರಾಯರ ಮನೆಯಲ್ಲಿ ವಾರಾನ್ನ ಮಾಡಿ ಓದಿದ ನೆನಪನ್ನು ಭಟ್ಟರು ಯಾವಾಗಲೂ ಸ್ಮರಿಸುತ್ತಾರೆ. ಚೆನ್ನಾಗಿ ಓದಿದ ಅವರು ಬಿ.ಎ. ಹಾಗೂ ಎಂ.ಎ.ನಲ್ಲಿ ರ್ಯಾಂ ಕ್ ಪಡೆದರು. ತೀ.ನಂ.ಶ್ರೀಕಂಠಯ್ಯನವರ ಮಾರ್ಗದರ್ಶನವೂ ಅವರಿಗೆ ಈ ಸಂದರ್ಭದಲ್ಲಿ ದೊರೆಯಿತು. ಈ ರೀತಿಯ ಗುರುಗಳ ಸಂಸರ್ಗದಿಂದ ಅವರಲ್ಲಿ ಸಾಹಿತ್ಯದ ಬಗೆಗಿನ ಆಸಕ್ತಿಯನ್ನು ಕೆರಳುವಂತೆ ಮಾಡಿತು. ಬೆಂಗಳೂರಿನ ಆಚಾರ್ಯ ಪಾಠ ಶಾಲಾ ಕಾಲೇಜಿನಲ್ಲಿ ಕನ್ನಡ ಅಧಾಪಕರಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ ಇವರು ವೃತ್ತಿ ನೈಪುಣ್ಯತೆಯಿಂದ ಭಡ್ತಿ ಹೊಂದಿ, ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾದರು. “ಆಧುನಿಕ ಕನ್ನಡ ಕಾವ್ಯದಲ್ಲಿ ಪ್ರತಿಮಾದೃಷ್ಟಿ” ಎನ್ನುವ ಪ್ರಬಂಧವನ್ನು ಮಂಡಿಸಿ ಡಾಕ್ಟರೇಟ್ ಪದವಿಯನ್ನು ಪಡೆದರು.
ಕನ್ನಡ ಸಾಹಿತ್ಯ ಲೋಕಕ್ಕೆ ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರ ಕೊಡುಗೆ ಅಪಾರವಾದುದು. ಭಾವಗೀತೆಗಳ ಮೂಲಕ ಕನ್ನಡಿಗರ ಮನಸೂರೆಗೊಳಿಸಿದ ಕವಿ ಇವರು. ಇವರ ಸಾಹಿತ್ಯ ಕೇವಲ ಓದುಗರನ್ನು ಮಾತ್ರವಲ್ಲದೆ, ಧ್ವನಿಸುರುಳಿಗಳ ಮೂಲಕ ಕೇಳುಗರನ್ನೂ ಭಾವಲೋಕಕ್ಕೆ ಕರೆದೊಯ್ದಂತಹ ಭಾವಜೀವಿ. ‘ವೃತ್ತ’, ‘ದೀಪಿಕಾ’, ‘ಬಂದೇ ಬರತಾವ ಕಾಲ’, ‘ಸಂವೇದನ, ‘ಬೇಲಿನಾಚಿನ ಸುಳಿ’, ‘ಬಾರೋ ವಸಂತ’, ‘ಹೊಳೆ ಸಾಲಿನಮರ’, ‘ನೀಲಾಂಜನ’ ಮೊದಲಾದ ಕವನ ಸಂಕಲನಗಳು ಇವರ ಸಾಹಿತ್ಯ ಶ್ರೀಮಂತಿಕೆಗೆ ಸಾಕ್ಷಿಯಾಗಿವೆ. ಇವರ ಪ್ರತಿಯೊಂದು ಭಾವಗೀತೆಗಳು ಪ್ರಕೃತಿಯ ಬಗೆಗಿನ ಆಶ್ಚರ್ಯ, ಕುತೂಹಲಗಳ ಜೊತೆಗೆ ಹೆಣ್ಣು ಗಂಡಿನ ನಡುವಿನ ಸಾಮರಸ್ಯದ ಬಗೆಗಿನ ಒಳನೋಟಗಳನ್ನು ನಮಗೆ ತೆರೆದಿಡುತ್ತವೆ. ‘ಮುಗಿಲ ಮಾಲೆ ನಭದಲಿ ಹಾಲು ಪೈರು ಹೊಲದಲಿ, ರೂಪಿಸುತಿದೆ ನಿನ್ನ ಪ್ರೀತಿ ಕವಿತೆಯೊಂದ ಎದೆಯಲಿ’ ಎನ್ನುವ ಕವಿ ಪ್ರಕೃತಿಯ ನಡುವೆ ಮಾನವ ಪ್ರೀತಿ ಅರಳುವ ಜೀವನೋತ್ಸಾಹವನ್ನು ಕವನದ ಮೂಲಕ ಅಭಿವ್ಯಕ್ತಿಸುತ್ತಾರೆ. ‘ನನಸಾಗದಿದ್ದರೂ ಕನಸಿಗಿದೆ ಘನತೆ ತೈಲ ಯಾವುದೇ ಇರಲಿ ಉರಿಯುವುದು ಹಣತೆ’ (ಹೊಸ ವರ್ಷ ಬಂದಂತೆ ಕವನ) ಈ ಕವನದ ಸಾಲುಗಳು ಜೀವನೋತ್ಸಾಹವನ್ನು ತುಂಬುತ್ತವೆ. ‘ಸಾವಿರ ಬಗೆಯಲಿ ಸಾಗುತ್ತಿದೆ ಸ್ವಾತಂತ್ರ್ಯದ ಲಾಸ್ಯ’ ಎನ್ನುವ ಪದ್ಯದ ಸಾಲುಗಳು ರಾಷ್ಟ್ರಾಭಿಮಾನವನ್ನು ಹೆಚ್ಚಿಸುವ ಹಾಡು. ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತಾ ಆಧುನಿಕ ಕನ್ನಡ ಕಾವ್ಯಗಳನ್ನು ಬೆಳೆಸುತ್ತಾ ಬಂದ ಕವಿಗಳಲ್ಲಿ ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರೂ ಒಬ್ಬರೂ.
ಕೇವಲ ಭಾವಗೀತೆಗಳು ಮಾತ್ರವಲ್ಲದೆ, ಮಹಾನ್ ತತ್ತ್ವಪದಕಾರ ಸಂತ ಶಿಶುನಾಳ ಶರೀಫರ ಸುಮಾರು ನೂರ ಒಂದು ತತ್ತ್ವಪದಗಳನ್ನು ಸಂಗ್ರಹಿಸಿ ಪ್ರಕಟಿಸಿ, ಅದನ್ನು ಪ್ರಖ್ಯಾತಗೊಳಿಸಿದವರು. ಅನೇಕ ಪಾಶ್ಚಾತ್ಯ ಕವಿಗಳ ಕವಿತೆಗಳನ್ನು ಕನ್ನಡಕ್ಕೆಅನುವಾದ ಮಾಡಿದ್ದಾರೆ. ವಿಲಿಯಂ ಶೇಕ್ಸ್ ಪಿಯರ್‌ನ ಸುಮಾರು ನೂರು ಸಾನೆಟ್‌ಗಳನ್ನು ‘ಶೇಕ್ಸ್ ಪಿಯರ್ ಸಾನೆಟ್ ಚಕ್ರ’ ಎಂಬ ಹೆಸರಿನಲ್ಲಿ ಅನುವಾದ ಮಾಡಿದ್ದಾರೆ. ಟಿ.ಎಸ್. ಎಲಿಯಟ್ ಕೃತಿಗಳನ್ನು ‘ಎಲಿಯಟ್ ಕಾವ್ಯ ಸಂಪುಟ’ ಎಂದೂ ಹಾಗೂ ಯೀಟ್ಸ್ ಕವಿಯ ಕೃತಿಗಳನ್ನು ‘ಚಿನ್ನದ ಹಕ್ಕಿ’ ಎಂದು ಕನ್ನಡ ಭಾಷೆಗೆ ಅನುವಾದ ಮಾಡಿದ್ದಾರೆ. ಇವರ ಅನುವಾದ ಸಾಹಿತ್ಯವನ್ನು ಅನೇಕ ವಿದ್ವಾಂಸರು ಮೆಚ್ಚಿ ಇವು ಕನ್ನಡಕ್ಕೆ ವರದಾನಗಳು ಎಂದು ಹೊಗಳಿದ್ದಾರೆ. ಶೇಕ್ಸ್ ಪಿಯರ್‌ನ ಸಾನೆಟ್‌ಗಳ ಅನುವಾದವನ್ನು ಮೆಚ್ಚಿ ‘ಇದಕ್ಕಿಂತ ಹೆಚ್ಚು ಉತ್ತಮವಾಗಿ ಈ ಅನುವಾದವನ್ನು ಮಾಡಲು ಸಾಧ್ಯವಿರಲಿಲ್ಲ’ ಎಂದು ಗೋಪಾಲ ಕೃಷ್ಣ ಅಡಿಗರು ಹೇಳಿದ್ದಾರೆ. ಈ ಬಗ್ಗೆ ಎನ್.ಎಸ್.ಎಲ್. ಸಂತೋಷವನ್ನು ವ್ಯಕ್ತಪಡಿಸಿದ್ದು, ಇವೆಲ್ಲಾ ತಾನು ಸಾಹಿತ್ಯ ಕೃಷಿಯಲ್ಲಿ ಇನ್ನಷ್ಟು ತೊಡಗಲು ಕಾರಣವಾಯಿತು ಎನ್ನುತ್ತಾರೆ.
ಮಕ್ಕಳಿಗಾಗಿಯೂ ಅನೇಕ ಕೃತಿಗಳನ್ನು ರಚಿಸಿದ್ದಾರೆ. ‘ಕಿನ್ನರಲೋಕ’, ‘ನಂದನ’, ‘ಸತ್ಯವೇ ನಮ್ಮ ತಾಯಿ ತಂದೆ’ ‘ಭಾಳ ಒಳ್ಳೇವ್ರ್ ನಮ್ಮ ಮಿಸ್ಸು’ ಇವು ಮಕ್ಕಳಿಗಾಗಿ ಬರೆದ ಶಿಶುಗೀತೆಗಳಾದರೆ, ‘ವಿವೇಚನ‘, ‘ಅನನ್ಯ’, ‘ಪರಸ್ವರ’, ‘ಕಾವ್ಯ ಶೋಧನ’ ಇವರ ವಿಮರ್ಶಾಕೃತಿಗಳು. ಇವುಗಳಲ್ಲದೆ ಅನೇಕ ನಾಟಕ ಕೃತಿಗಳನ್ನೂ ಕನ್ನಡಿಗರಿಗೆ ನೀಡಿದ್ದಾರೆ. ‘ಇಸ್ಪೀಟ್ ರಾಜ್ಯ’ ಮಕ್ಕಳ ನಾಟಕ. ‘ಟ್ವೆಲ್ಫ್ ನೈಟ್’ ವಿಲಿಯಂ ಶೇಕ್‌ಫಿಯರ್‌ನ ನಾಟಕದ ಅನುವಾದ. ‘ಧ್ರುವಚರಿತ’ ನಾಟಕ ಹಾಗೂ ‘ಮೃಚ್ಛಕಟಿಕ’ ನಾಟಕವನ್ನು ಅನುವಾದ ಮಾಡಿದ್ದಾರೆ. ‘ಮೃಚ್ಛಕಟಿಕ’ ನಾಟಕವು ಶೂದ್ರಕ ಮಾಹಾಕವಿಯ ಜಗತ್ಪ್ರಸಿದ್ಧ ನಾಟಕ ‘ಮೃಚ್ಛಕಟಿಕ’ದ ಛಾಯಾನುವಾದ. ಈ ನಾಟಕದ ವಿಶೇಷತೆಯನ್ನು ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರು ಮುನ್ನುಡಿಯಲ್ಲಿ ಹೇಳಿಕೊಂಡಿದ್ದಾರೆ. “ಈ ನಾಟಕವು ಪುರೂರವ, ದುಷ್ಯಂತರಂಥ ದೇವಮಾನವರ ಕಥೆಯಲ್ಲ. ಅಗ್ನಿಮಿತ್ರ, ಉದಯರಂಥ ರಾಜರ ಕಥೆಯೂ ಅಲ್ಲ. ನಾಟಕದ ದೃಷ್ಠಿ ಚಾರುದತ್ತ, ವಸಂತನೇನೆಯರಂಥ ಪ್ರಜೆಗಳ ಮೇಲಿದೆ. ನಾಟಕದ ಕ್ರಿಯೆಯು ದೇವಲೋಕ, ಅರಮನೆ, ಋಷ್ಯಾಶ್ರಮಗಳಿಂದ ಬೀದಿ, ಬಯಲು, ಬಡಮನೆ ನ್ಯಾಯಾಲಯಗಳಿಗೆ ಬಂದಿದೆ. ಖಳನಾಯಕನಾದ ಶಕಾರನೇ ವಿದೂಷಕನಾಗಿ ಬಿಡುವ ವಿಚಿತ್ರ ಇಲ್ಲಿದೆ.” ಎಂದು ನಾಟಕದ ಮಹತ್ವವನ್ನು ವಿವರಿಸುತ್ತಾರೆ. ‘ಮೃಚ್ಛಕಟಿಕ’ ನಾಟಕವು ಛಾಯಾನುವಾದವಾದರೂ ಅದು ಮೂಲವನ್ನೇ ಪೂರ್ತಿಯಾಗಿ ಅನುವಾದ ಮಾಡಿಲ್ಲ. ಮೂಲ ವಿಸ್ತಾರವಾದದ್ದು. “ಆಧುನಿಕ ರಂಗಭೂಮಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮೂಲವನ್ನು ಸಂಗ್ರಹಿಸಿ ಬರೆದಿದ್ದೇನೆ” ಎಂದಿದ್ದಾರೆ. ಇವರ ನಾಟಕಗಳು ರಂಗ ಪ್ರದರ್ಶನವನ್ನು ಕಂಡಿವೆ. ಇವರೇ ರಚಿಸಿದ ಸ್ವತಂತ್ರ ಗೀತ ನಾಟಕ ‘ಊರ್ವಶಿ’ ಪ್ರಸಿದ್ಧಿ ಗಳಿಸಿದ ಕೃತಿ.
ಇವರ ಸಾಹಿತ್ಯ ಸೇವೆಯನ್ನು ಗುರುತಿಸಿ ಅರಸಿ ಬಂದ ಪ್ರಶಸ್ತಿಗಳು ಅನೇಕ. ರಾಜ್ಯ ಸಾಹಿತ್ಯಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿ, ವರ್ಧಮಾನ್ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ ಹೀಗೆ ಅನೇಕ ಪ್ರಶಸ್ತಿಗಳು ಅವರ ಸಾಹಿತ್ಯದ ಸೇವೆಗೆ ಸಂದ ಗೌರವಗಳು. ಬಹುಮುಖ ವ್ಯಕ್ತಿತ್ವದ ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರ ಅನೇಕ ಭಾವಗೀತೆಗಳು ಕನ್ನಡಿಗರ ಮನದಲ್ಲಿ ಅಚ್ಚಳಿಯಂತೆ ನಿಂತಿವೆ. ಪ್ರಸಿದ್ಧ ಗಾಯಕರಾದ ಶಿವಮೊಗ್ಗ ಸುಬ್ಬಣ್ಣ, ಸಿ. ಅಶ್ವಥ್, ಮೈಸೂರು ಅನಂತಸ್ವಾಮಿಯಂತಹ ಗಾಯಕರ ಸುಗಮ ಸಂಗೀತದ ಮೂಲಕ ಕವಿ ಇಂದಿಗೂ ಕನ್ನಡಿಗರ ಜನಮಾನಸದಲ್ಲಿ ಚಿರಸ್ಥಾಯಿಯಾಗಿದ್ದಾರೆ.
ಸರಳ, ಸಜ್ಜನಿಕೆಯ, ಹಸನ್ಮುಖ ಕವಿ, ಕನ್ನಡಿಗರ ಎದೆಗೆ ಭಾವಗೀತೆಗಳ ಮೂಲಕ ರಸಾನಂದದ ಜೊತೆಗೆ ಕರ್ಣಾನಂದವನ್ನು ಉಣಬಡಿಸಿದ ಕವಿ ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರು ದಿನಾಂಕ 6 ಮಾರ್ಚ್ 2021ರಲ್ಲಿ ನಿಧನರಾದರು. ಕವಿಯಾಗಿ, ನಾಟಕಕಾರರಾಗಿ, ವಿಮರ್ಶಕರಾಗಿ ತಮ್ಮ ವಿಶಿಷ್ಟ ಸಾಹಿತ್ಯದ ಮೂಲಕ ಕನ್ನಡ ಸಾಹಿತ್ಯಲೋಕದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ ಕವಿ ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರು ಕನ್ನಡಿಗರಿಗೆ ಶಕ್ತಿಯಾಗಿ ನಿಂತಿದ್ದಾರೆ.
ತಾಳುವುದ ನೀ ಕಲಿ ಮಗೂ
ಬಾಳುವುದ ನೀ ಕಲಿ ಮಗೂ
ತಾಳುವ ಧೀರ ಆಳುವ ಊರ
ಎನ್ನುವುದ ನೆನಪಿಡು ಮಗೂ – ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ
ಡಾ. ಜ್ಯೋತಿ ಪ್ರಿಯಾ
ಸಹ ಪ್ರಾಧ್ಯಾಪಕರು ಡಾ. ಪಿ. ದಯಾನಂದ ಪೈ – ಪಿ. ಸತೀಶ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು, ರಥಬೀದಿ, ಮಂಗಳೂರು.