Subscribe to Updates

    Get the latest creative news from FooBar about art, design and business.

    What's Hot

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ವಿಶೇಷ ಲೇಖನ – ಶಬ್ದ ಗಾರುಡಿಗ ದ. ರಾ. ಬೇಂದ್ರೆ
    Birthday

    ವಿಶೇಷ ಲೇಖನ – ಶಬ್ದ ಗಾರುಡಿಗ ದ. ರಾ. ಬೇಂದ್ರೆ

    January 31, 2025Updated:February 1, 2025No Comments3 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ವರಕವಿ ಎಂದೇ ಪ್ರಸಿದ್ಧರಾದ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು 20ನೇ ಶತಮಾನದ ಕನ್ನಡದ ಖ್ಯಾತ ಕವಿ ಮತ್ತು ಕಾದಂಬರಿಕಾರರು. ಸಾಮಾನ್ಯವಾಗಿ ಇವರ ಹೆಸರನ್ನು ದ. ರಾ. ಬೇಂದ್ರೆ ಅಥವಾ ಬೇಂದ್ರೆ ಎಂದೇ ಕರೆಯುವುದು ವಾಡಿಕೆ. ಆದರೆ ‘ಅಂಬಿಕಾತನಯದತ್ತ’, ‘ದತ್ತ ರಾಮ ಬೇಂದ್ರೆ’, ‘ಸದಾನಂದ ಜಂಗಮ’, ‘ಬೆಂ. ದ. ರಾ’, ‘ಬೆಂದರೇ’ ಹೀಗೆ ಬೇರೆ ಬೇರೆ ಕಾವ್ಯನಾಮಗಳಿಂದಲೂ ಇವರು ಸಾಹಿತ್ಯ ರಚನೆ ಮಾಡಿದ್ದಾರೆ.
    ರಾಮಚಂದ್ರ ಭಟ್ಟ ಮತ್ತು ಪಾರ್ವತಿ ಬಾಯಿ ದಂಪತಿಯ ಹಿರಿಯ ಮಗನಾದ ಬೇಂದ್ರೆಯವರು ಚಿತ್ಪಾವನ ಕುಟುಂಬದಲ್ಲಿ 31 ಜನವರಿ 1896 ರಂದು ಧಾರವಾಡದಲ್ಲಿ ಜನಿಸಿದರು. ರಾಮಚಂದ್ರ ಭಟ್ಟರ ಅಜ್ಜ, ಅಪ್ಪಾ ಶಾಸ್ತ್ರಿಯವರು ವೈದಿಕ ವಿದ್ವಾಂಸರಾಗಿದ್ದು ಮರಾಠಿಯಲ್ಲಿ ಹಲವಾರು ಕೀರ್ತನೆಗಳನ್ನು ರಚಿಸಿದ್ದಾರೆ. ಬೇಂದ್ರೆಯವರ ತಂದೆಯವರೂ ಸಂಸ್ಕೃತ ವಿದ್ವಾಂಸರಾಗಿದ್ದು, ಬೇಂದ್ರೆಯವರ 12ನೇ ವರ್ಷ ವಯಸ್ಸಿನಲ್ಲಿ ತೀರಿಕೊಂಡರು. ಆದ್ದರಿಂದ ತಾಯಿ ಮತ್ತು ಅಜ್ಜಿಯ ಆಶ್ರಯದಲ್ಲಿ ಬೇಂದ್ರೆಯವರು ಬೆಳೆಯಬೇಕಾಯಿತು.

    ತನ್ನ ಪ್ರಾರಂಭಿಕ ಶಿಕ್ಷಣವನ್ನು ಹುಟ್ಟೂರಾದ ಧಾರವಾಡದಲ್ಲಿ ಪೂರೈಸಿದ ಬೇಂದ್ರೆಯವರು ಮುಂದಿನ ವಿದ್ಯಾಭ್ಯಾಸಕ್ಕಾಗಿ 1913ರಲ್ಲಿ ಪುಣೆಯ ‘ಫರ್ಗುಸನ್’ ಕಾಲೇಜಿಗೆ ಸೇರಿ, ಬಿ. ಎ. ಪದವಿ ಮುಗಿಸಿದರು. ಮುಂದೆ ಧಾರವಾಡದ ವಿಕ್ಟೋರಿಯಾ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸೇರಿ ‘ಬೇಂದ್ರೆ ಮಾಸ್ತರು’ ಎಂದು ಕರೆಸಿಕೊಂಡರು. ಬಾಲ್ಯದಿಂದಲೇ ಸಹಪಾಠಿಯಾಗಿದ್ದ ಶ್ರೀಧರ ಖಾನೋಲ್ಕರ್ ಅದೇ ಶಾಲೆಯಲ್ಲಿ ಬೇಂದ್ರೆಯವರ ಜೊತೆ ಕೆಲಸ ಮಾಡುತ್ತಿದ್ದರು. ಸ್ವತಃ ಕವಿಯಾಗಿದ್ದ ಖಾನೊಲ್ಕರ್ ಮತ್ತು ಬೇಂದ್ರೆಯವರ ಸ್ನೇಹ ಸಂಬಂಧ ಕೊನೆಯವರೆಗೂ ಭದ್ರವಾಗಿಯೇ ಇತ್ತು. ಬೇಂದ್ರೆಯವರು ತಮ್ಮ ರಚನೆಯ ಕವನ ಸಂಕಲನ ‘ಉಯ್ಯಾಲೆ’ ಯನ್ನು 1938 ರಲ್ಲಿ ಖಾನೋಲ್ಕರ್ ಅವರ ಸ್ನೇಹ, ಆಪ್ತತೆ ಮತ್ತು ಪ್ರೋತ್ಸಾಹಕ್ಕಾಗಿ ಪ್ರೀತಿಯಿಂದ ಅರ್ಪಿಸಿದರು. 1935 ರಲ್ಲಿ ಎಂ. ಎ. ಪದವಿ ಮುಗಿಸಿದ ಬೇಂದ್ರೆಯವರು ಸೊಲ್ಲಾಪುರದ ಡಿ. ಎ. ವಿ. ಕಾಲೇಜಿನಲ್ಲಿ ಪ್ರಾಧ್ಯಾಪಕ ಸ್ಥಾನವನ್ನಲಂಕರಿಸಿದರು.

    ಸಾಹಿತ್ಯದ ರಚನೆಯ ಕಡೆಗೆ ಹೆಚ್ಚು ಒಲವಿದ್ದ ಬೇಂದ್ರೆ ಕಾಲೇಜು ವಿದ್ಯಾರ್ಥಿಯಾಗಿರುವಾಗಲೇ ಕವಿತೆಗಳನ್ನು ಬರೆಯಲಾರಂಭಿಸಿದರು. 1918 ರಲ್ಲಿ ಇವರ ಮೊದಲ ಕವನ ‘ಪ್ರಭಾತ ಪತ್ರಿಕೆ’ಯಲ್ಲಿ ಪ್ರಕಟಗೊಂಡಿತು. 1925ರಲ್ಲಿ ‘ಕೃಷ್ಣ ಕುಮಾರಿ’ ಎಂಬ ಶೀರ್ಷಿಕೆಯಲ್ಲಿ ಇವರ ಮೊದಲ ಕವನ ಸಂಕಲನ ಪ್ರಕಟಗೊಂಡಿತು. ಧಾರವಾಡ ಆಕಾಶವಾಣಿಯಲ್ಲಿಯೂ ಸಾಹಿತ್ಯ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು. ಸ್ವಾತಂತ್ರ್ಯ ಚಳುವಳಿಯ ಕಾವು ಎಲ್ಲೆಡೆ ಪಸರಿಸುತ್ತಿದ್ದ ಸಮಯದಲ್ಲಿ ಬೇಂದ್ರೆಯವರ ‘ಗರಿ’ ಕವನ ಸಂಕಲನದಲ್ಲಿರುವ ‘ನರಬಲಿ’ ಎಂಬ ಕವನವು ಆಗಿನ ಬ್ರಿಟಿಷ್ ಸರ್ಕಾರ ತನ್ನ ವಿರುದ್ಧವಾಗಿ ಬರೆದ ಕವನವೆಂದು ತಿಳಿಯಿತು. ದೇಶಪ್ರೇಮಿಯಾದ ಬೇಂದ್ರೆಯವರು ತಾವೂ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದಾಗ ಬೆಳಗಾವಿಯ ಹಿಂಡೆಲೆಗೆ ಜೈಲಿನಲ್ಲಿ ಕೆಲಕಾಲ ಸೆರೆಮನೆವಾಸ ಅನುಭವಿಸ ಬೇಕಾಯಿತು. ಬೇಂದ್ರೆಯವರು ಯಾವುದಕ್ಕೂ ಎದೆಗುಂದಲಿಲ್ಲ. ಇದೇ ಸಂದರ್ಭದಲ್ಲಿ ಮಾಸ್ತಿಯವರು ನಡೆಸುತ್ತಿದ್ದ ‘ಜೀವನ ಪತ್ರಿಕೆ’ಯಲ್ಲಿ ಅಧಿಕೃತವಾಗಿ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

    20 ಕ್ಕಿಂತಲೂ ಹೆಚ್ಚು ಕವನ ಸಂಕಲನಗಳನ್ನು ಪ್ರಕಟ ಪಡಿಸಿದ ಶಬ್ದ ಗಾರುಡಿಗ ಇವರು. ಸ್ಫೂರ್ತಿಯನ್ನು ಸ್ಪುರಿಸುವ, ಉತ್ಸಾಹವನ್ನುಕಿಸುವ, ಕಷ್ಟ ಕಾರ್ಪಣ್ಯಗಳಿಂದ ಬಸವಳಿದ ಜೀವಗಳಿಗೆ ಸಮಾಧಾನ ನೀಡಬಲ್ಲ ಕವಿತೆಗಳು ಬೇಂದ್ರೆಯವರದು. ‘ಅದಕ್ಕೆ ನಾನು ಬಡವಿ ಆತ ಬಡವ ಒಲವೇ ನಮ್ಮ ಬದುಕು’, ‘ನೀ ಹಿಂಗ ನೋಡಬ್ಯಾಡ ನನ್ನ’, ‘ಕುಣಿಯೋಣ ಬಾರ ಕುಣಿಯೋಣ ಬಾ’ ಇತ್ಯಾದಿ ಕವನಗಳೇ ಸಾಕ್ಷಿ. ಸುಖ-ದುಃಖವನ್ನು ಹಂಚಿಕೊಂಡು ಜೀವನ ಸಾಗಿಸುವುದೇ ಪ್ರೀತಿ ಎಂಬುದು ಇವರ ಸಾಹಿತ್ಯದಲ್ಲಿ ಎದ್ದು ಕಾಣುತ್ತದೆ. ರಸವೆ ಜನನ ವಿರಸವೆ ಮರಣ ಸಮರಸವೆ ಜೀವನ ಎನ್ನುವ ಮೂಲಕ ಜೀವನದ ರಹಸ್ಯವನ್ನು ಮನಮುಟ್ಟುವಂತೆ ತಿಳಿಸಿ ಹೇಳಿದ ಕವಿ ಬೇಂದ್ರೆ . ‘ಹುಚ್ಚಾಟ’ ಹಾಗೂ ‘ಹೊಸ ಸಂಸಾರ ಮತ್ತು ಇತರ ನಾಟಕಗಳು’ ಇವರ ರಚನೆಯ ನಾಟಕ ಕೃತಿ. ಪ್ರತಿಭಾ ಪ್ರೌಢಿಮೆಗೆ ಸಾಕ್ಷಿ ಆಗುವಂತಹ ವಿಮರ್ಶಾತ್ಮಕ ಗ್ರಂಥಗಳೂ ಇವರ ಲೇಖನಿಯಿಂದ ಮೂಡಿವೆ.

    ರವೀಂದ್ರನಾಥ ಟಾಗೋರ್, ಕಬೀರ್ ಮೊದಲಾದವರ ಕವಿತೆಗಳನ್ನು ಕನ್ನಡಕ್ಕೆ ಅನುವಾದ ಮಾಡುವುದರೊಂದಿಗೆ ಅರವಿಂದರ ಅನೇಕ ಕೃತಿಗಳನ್ನು ಕನ್ನಡಕ್ಕೆ ತಂದಿದ್ದಾರೆ. ಇವೆಲ್ಲಾ ಬರಹಗಳು ಬೇಂದ್ರೆಯವರ ಖ್ಯಾತಿಯನ್ನು ಮೇಲ್ಪಂಕ್ತಿಗೊಯ್ಯುತ್ತವೆ.
    ಕರ್ನಾಟಕದ ಬಗ್ಗೆ ಅಭಿಮಾನ ಪ್ರೀತಿ ಹೊಂದಿದ ಕವಿ ಕರ್ನಾಟಕವನ್ನು ‘ಕನ್ನಡ ಭಾರತೀ’, ‘ಕನ್ನಡ ರತಿ’, ‘ನಾಡ ರಾಣಿ’, ‘ಕನ್ನಡದಾರತಿ’, ‘ಸಿರಿಗನ್ನಡ ಭಾರತಿ’ ಹೀಗೆ ಹಲವಾರು ರೂಪಗಳಲ್ಲಿ ಕಂಡುಕೊಂಡಿದ್ದಾರೆ. ನಾಡಿನೊಳಗೆ ಐಕ್ಯಭಾವವನ್ನು ಪ್ರತಿಪಾದಿಸುವಲ್ಲಿ ನಾಡಿನೊಳಗಿರುವ ಅಥವಾ ಹೊರಗಿರುವ ವಿವಿಧ ಭಾಷೆಗಳು ಕನ್ನಡಕ್ಕೆ ಧಕ್ಕೆ ತರುವುದಿಲ್ಲ ಎಂಬುದನ್ನು ಸ್ಪಷ್ಟವಾಗಿ ಇವರು ತಿಳಿದುಕೊಂಡಿದ್ದರು. ಕರ್ನಾಟಕವೆಂದರೆ ವಿವಿಧ ಪಂಥಗಳ ವಿವಿಧ ಭಾಷೆಗಳ ಜನರಿರುವಂತಹ ನಾಡು. ಇವರುಗಳ ಮಧ್ಯೆ ಸಂಘರ್ಷ, ವೈರುಧ್ಯ ಇಲ್ಲದೆ ಪರಸ್ಪರ ಐಕ್ಯ ಭಾವ ಬೆಳೆದಾಗ ಮಾತ್ರ ನಾಡಿನ ಉನ್ನತಿ ಎಂಬುದು ಬೇಂದ್ರೆಯವರ ದೃಷ್ಟಿಕೋನವಾಗಿತ್ತು. ” ಒಂದೇ ಒಂದೇ ಕರ್ನಾಟಕ ಒಂದೇ,
    ಹಿಂದೆ ಮುಂದೆ ಎಂದೆ ಕರ್ನಾಟಕ ಒಂದೇ…….. ಜಗದೇಳಿಗೆಯಾಗುವುದಿದೆ ಕರ್ನಾಟಕದಿಂದೆ” ಎಂಬ ಅವರ ಕವಿತೆಯ ಸಾಲುಗಳನ್ನು ಮನನ ಮಾಡುವಲ್ಲಿ ಕರ್ನಾಟಕದಿಂದ ಕೇವಲ ಕನ್ನಡಿಗರಿಗೆ ಮಾತ್ರ ಒಳಿತು ಎಂದು ಭಾವಿಸದೆ, ಜಗದ ಏಳಿಗೆ ಆಗುವುದಿದ್ದರೆ ಅದು ಕರ್ನಾಟಕದಿಂದಲೇ ಎಂಬುದು ತಿಳಿದು ಬರುತ್ತದೆ.
    ಕರ್ನಾಟಕ ಸಾಹಿತ್ಯ ಚಕ್ರವರ್ತಿ ಬೇಂದ್ರೆಯವರು ತಮ್ಮದೇ ಆದ ವಿಶಿಷ್ಟ ಶೈಲಿಯಿಂದ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿ, ಗಮನಸೆಳೆದ ಒಬ್ಬ ಮಹಿಮಾವಂತ. ಸಾಹಿತ್ಯ, ಸಂಸ್ಕೃತಿ, ಕಲಾಪ್ರಸಾರವನ್ನು ತನ್ನ ಆದ್ಯ ಕರ್ತವ್ಯವೆಂದು ಭಾವಿಸಿದ ಬೇಂದ್ರೆಯವರು ಗೆಳೆಯರ ಗುಂಪನ್ನು ಕಟ್ಟಿ, ಸಾಹಿತಿಗಳನ್ನು ಮತ್ತು ಸಾಹಿತ್ಯ ಆಸಕ್ತರನ್ನು ಒಂದಾಗಿ ಸೇರಿಸಿ ಅಂದು ಆಚರಿಸಿದ ನವರಾತ್ರಿ ನಾಡ ಹಬ್ಬ ಇಂದು ನಾಡಿನಾದ್ಯಂತ ಬೇರೆ ಬೇರೆ ಮಗ್ಗುಲುಗಳಲ್ಲಿ ವಿಸ್ತರಿಸಿರುವುದು ಅವರ ಸಂಘಟನಾ ದೂರದೃಷ್ಟಿಗೆ ಸಾಕ್ಷಿಯಾಗಿದೆ.
    ‘ಕುಲವಧು’, ‘ಚಕ್ರತೀರ್ಥ’, ’ಅರಿಶಿಣ ಕುಂಕುಮ’, ‘ಬೆಳ್ಳಿ ಮೋಡ’, ‘ಶರಪಂಜರ’ ಮುಂತಾದ ಚಲನಚಿತ್ರಗಳಲ್ಲಿ ಪರಕವಿ ಅಂಬಿಕಾತನಯದತ್ತರ ಹಲವು ಕವನಗಳು ಅಳವಡಿಸಿಕೊಳ್ಳಲಾಗಿದೆ.
    1958 ರಲ್ಲಿ ‘ಅರಳುಮರಳು’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮರಾಠಿಯಲ್ಲಿ ರಚಿಸಿದ ಕೃತಿ ‘ಸಂವಾದ’ಕ್ಕೆ ಕೇಳ್ಕರ್ ಬಹುಮಾನ, 1968ರಲ್ಲಿ ‘ಪದ್ಮಶ್ರೀ ಪ್ರಶಸ್ತಿ’,
    1973ರಲ್ಲಿ ‘ನಾಕು ತಂತಿ’ ಕವನ ಸಂಕಲನಕ್ಕೆ ‘ಭಾರತೀಯ ಜ್ಞಾನಪೀಠ ಪ್ರಶಸ್ತಿ’, ಕರ್ನಾಟಕ ವಿಶ್ವವಿದ್ಯಾನಿಲಯ, ಮೈಸೂರು ವಿಶ್ವವಿದ್ಯಾನಿಲಯ, ವಾರಣಾಸಿ ಹಾಗೂ ಕಾಶಿ ವಿದ್ಯಾಪೀಠದಿಂದ ‘ಗೌರವ ಡಾಕ್ಟರೇಟ್ ಪ್ರಶಸ್ತಿ’ ಹೀಗೆ ಈ ಸೃಜನಶೀಲ ಕವಿಗೆ ಸಾಲು ಸಾಲು ಪ್ರಶಸ್ತಿಗಳು ಲಭಿಸಿದೆ.
    ವಿವಿಧ ಭಾಷಾ ಸೊಬಗನ್ನು ಕಾವ್ಯ ಪಂಕ್ತಿಗಳಲ್ಲಿ ಕಟ್ಟಿಕೊಟ್ಟ ಕಾವ್ಯ ಗಾರುಡಿಗ, ಕರ್ನಾಟಕದ ಕವಿಕುಲತಿಲಕ 26 ಅಕ್ಟೋಬರ್ 1981ರಲ್ಲಿ ಇಹವನ್ನು ತ್ಯಜಿಸಿದರು.

    –ಅಕ್ಷರೀ

    Birthday kannada Literature
    Share. Facebook Twitter Pinterest LinkedIn Tumblr WhatsApp Email
    Previous Articleಸಂತ ಎಲೋಶಿಯಸ್ ವಿಶ್ವವಿದ್ಯಾನಿಲಯದಲ್ಲಿ ‘ಗಾಂಧಿ ಸ್ಮೃತಿ’ ಕಾರ್ಯಕ್ರಮ
    Next Article ಬೆಂಗಳೂರಿನ ಕಲಾಗ್ರಾಮದಲ್ಲಿ ‘ಭಾರತ ರಂಗ ಮಹೋತ್ಸವ ಅಂತರಾಷ್ಟ್ರೀಯ ನಾಟಕೋತ್ಸವ’ | ಫೆಬ್ರವರಿ 01ರಿಂದ 08
    roovari

    Add Comment Cancel Reply


    Related Posts

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025

    ಖ್ಯಾತ ಸಾಹಿತಿ ಪ್ರೊ. ಜಿ.ಎಸ್. ಸಿದ್ಧಲಿಂಗಯ್ಯ ನಿಧನ

    May 8, 2025

    ಆಳ್ವಾಸ್‌ನ ಶಿವರಾಮ ಕಾರಂತ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ

    May 7, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.