ಕನ್ನಡದ ಹೆಸರಾಂತ ಹಾಸ್ಯ ಬರಹಗಾರರು ಮತ್ತು ಪ್ರಸಿದ್ಧ ನಾಟಕ ತರಬೇತುದಾರರು ದಾಶರಥಿ ದೀಕ್ಷಿತ್. ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯವರಾದ ದೀಕ್ಷಿತರು ಬಾಲಾಜಿ ದೀಕ್ಷಿತ್ ಹಾಗೂ ಗಂಗೂಬಾಯಿ ದಂಪತಿಗೆ 18 ಜನವರಿ 20 21ರಲ್ಲಿ ಜನಿಸಿದ ಸುಪುತ್ರ.
ಇವರು ತಮ್ಮ ಆರಂಭಿಕ ಶಿಕ್ಷಣವನ್ನು ದಾವಣಗೆರೆ ಮತ್ತು ಚಿತ್ರದುರ್ಗ ಸೇರಿದಂತೆ ಬೇರೆ ಬೇರೆ ಕಡೆಗಳಲ್ಲಿ ಮಾಡಿ, ಬೆಂಗಳೂರಿನ ಕಾಲೇಜಿನಲ್ಲಿ ಇಂಟರ್ಮೀಡಿಯಟ್ ಮುಗಿಸಿ, ಮುಂದೆ ವಿದ್ಯಾಭ್ಯಾಸವನ್ನು ಮುಂದುವರಿಸದೆ, ಕರ್ನಾಟಕ ಸರ್ಕಾರದ ವಿದ್ಯುಚ್ಛಕ್ತಿ ಇಲಾಖೆಯಲ್ಲಿ ಸ್ವಲ್ಪ ಸಮಯ ಕೆಲಸ ಮಾಡಿ, ಮತ್ತೆ ಬೆಂಗಳೂರಿನ ವಿಮಾನ ಕಾರ್ಖಾನೆಯೊಂದರಲ್ಲಿ ದುಡಿಯಲಾರಂಭಿಸಿದರು. ಆಗಲೇ ಬರವಣಿಗೆಯನ್ನು ಆರಂಭಿಸಿದ ಇವರು ತಮ್ಮ ಬರಹದ ಒಂದು ಕಥೆಯನ್ನು ‘ಪ್ರಜಾಮತ’ ದಿನಪತ್ರಿಕೆಗೆ ನೀಡಿದ್ದು, ಅದು ಪ್ರಕಟಗೊಂಡಿತು. ಗಂಭೀರ ಬರಹದ ಬದಲಿಗೆ ಲಘು ಬರಹದ ಕಡೆಗೆ ಗಮನ ಕೊಡುವಂತೆ ಇವರ ಬರಹಗಳನ್ನು ಓದಿದ ಪ್ರಸಿದ್ಧ ಲೇಖಕ ತ. ರಾ. ಸುಬ್ಬರಾವ್ ಸೂಚಿಸಿದರು. ಅವರ ಸಲಹೆಯನ್ನು ಸ್ವೀಕರಿಸಿದ ದಾಶರಥಿಯವರು ಹಾಸ್ಯ ಬರಹಗಳ ಕಡೆ ಗಮನಹರಿಸಿದರು. ತಂದೆ ಬಾಲಾಜಿ ದೀಕ್ಷಿತರು ಶಿರಸ್ತೇದಾರರಾಗಿದ್ದರಿಂದ ದಾವಣಗೆರೆ, ಮೊಳಕಾಲ್ಮೂರು, ಹರಿಹರ, ಇತ್ಯಾದಿ ಪ್ರದೇಶಗಳಿಗೆಲ್ಲ ವರ್ಗವಾಗಿ ಹೋಗಬೇಕಾಗಿ ಬಂತು. ನಾಟಕಗಳ ಬಗ್ಗೆ ಆಸಕ್ತಿ ಇದ್ದ ದೀಕ್ಷಿತರು ಅಲ್ಲಿ ನೋಡುತ್ತಿದ್ದ ನಾಟಕಗಳಿಂದ ಪ್ರೇರಣೆಗೊಂಡು 1952 ರಲ್ಲಿ ‘ಅಜ್ಜಿ ಆಸ್ತಿ’ ನಾಟಕವನ್ನು ರಚನೆ ಮಾಡಿ ರಂಗಕ್ಕೆ ತಂದರು. ಅದು ಪ್ರೇಕ್ಷಕರೆಲ್ಲರಿಂದ ಮೆಚ್ಚುಗೆಯನ್ನು ಪಡೆಯಿತು. ಅನಂತರ ‘ಅಜ್ಜನ ಅವಾಂತರ’ ,’ಅಳಿಯ ದೇವರು’, ‘ಲಂಬೋದರ’ ಇತ್ಯಾದಿ ಹಲವಾರು ನಾಟಕಗಳನ್ನು ರಚಿಸಿದರು. ಆ ಕಾಲಘಟ್ಟದಲ್ಲಿ ಹೆಚ್ಚಿನ ಶಾಲಾ ಕಾಲೇಜುಗಳ ವಾರ್ಷಿಕೋತ್ಸವ ಹಾಗೂ ಇತರ ಸಂದರ್ಭಗಳಲ್ಲಿ ದಾಶರಥಿಯವರ ನಾಟಕಗಳೇ ರಂಗದ ಮೇಲೆ ಬರುತ್ತಿದ್ದವು. ಜನರು ನಾಟಕಗಳನ್ನು ಮೆಚ್ಚಿ ಅವರ ಅಭಿಮಾನಿಗಳೇ ಆಗಿದ್ದರು.
ದೀಕ್ಷಿತರು ಬಹಳ ಮುತುವರ್ಜಿಯಿಂದ ರಚನೆ ಮಾಡಿದ ಕಥೆ ಒಂದನ್ನು ನಾಡಿಗೇರ್ ಕೃಷ್ಣರಾಯರಿಗೆ ನೀಡಿ ಅವರ ಪ್ರತಿಕ್ರಿಯೆಗಾಗಿ ಎದುರು ನೋಡಿದರು. ನಾಡಿಗೇರ್ ತಾವು ಕಾರ್ಯನಿರ್ವಹಿಸುತ್ತಿದ್ದ ‘ಪ್ರಜಾಮತ’ ಪತ್ರಿಕೆಯಲ್ಲಿ ಅದನ್ನು ಪ್ರಕಟಪಡಿಸಿದರು. ಹೀಗೆ ದೊರೆತ ಒಂದು ಪ್ರೋತ್ಸಾಹದ ಪರಿಣಾಮವಾಗಿ ಮುಂದೆ ಅವರ ಬರಹಗಳು ‘ಕಥೆಗಾರ’ ಪತ್ರಿಕೆಯಲ್ಲೂ ಪ್ರಕಟವಾಗುವಂತಾಯಿತು. ದೀಕ್ಷಿತರ ಲಘು ಬರಹಗಳ ಸಂಗ್ರಹವಾದ ‘ಪ್ರೇತ ಸಂಹಾರ’ಕ್ಕೆ ಅ. ನ. ಕೃ. ಎಂದೇ ಪ್ರಸಿದ್ಧರಾದ ಖ್ಯಾತ ಸಾಹಿತಿ ಅರಕಲಗೂಡು ನರಸಿಂಗ ರಾಯರು ಮುನ್ನುಡಿ ಬರೆದರು. ಇದು ಪ್ರಕಟವಾದ ನಂತರ ‘ರಾಶಿ’ ಎಂದೇ ಪ್ರಸಿದ್ಧರಾದ ಎಮ್. ಶಿವರಾಂ ಇದನ್ನು ಓದಿ ಮೆಚ್ಚುಗೆ ಸೂಚಿಸಿ ‘ಕೊರವಂಜಿ’ ಪತ್ರಿಕೆಗೆ ಬರೆಯುವಂತೆ ಕೇಳಿಕೊಂಡರು. ಈ ರೀತಿಯ ಪ್ರೋತ್ಸಾಹದಿಂದ ಅವರ ಬರವಣಿಗೆಗೆ ಒಂದು ತಿರುವು ದೊರೆತು, ಹಲವಾರು ಹಾಸ್ಯ ಕೃತಿಗಳನ್ನು ರಚಿಸುವಂತಾಯಿತು.
ದೀಕ್ಷಿತರು ಬರೆದ ಲಘು ಲೇಖನಗಳ ಸಂಗ್ರಹವೇ ‘ಪಕೋಡಪ್ರಿಯ ದಫೇದಾರ್ ದೇರಣ್ಣ’ ಈ ಕೃತಿಗೆ ಡಿ. ವಿ. ಜಿ. ಯವರೇ ಮುನ್ನುಡಿ ಬರೆದು ಶುಭ ಹಾರೈಸಿದ್ದಾರೆ. ತಮ್ಮ ಕಾರ್ಯಕ್ಷೇತ್ರವಾದ ವಿಮಾನ ಕಾರ್ಖಾನೆಯಿಂದ ಇಂಗ್ಲೆಂಡ್ ಪ್ರವಾಸ ಹೋಗುವ ಅನಿರೀಕ್ಷಿತ ಅವಕಾಶ ಇವರಿಗೆ ಒದಗಿ ಬಂದಿತು. ಆ ಪ್ರವಾಸದ ಅನುಭವವೇ ‘ಗಾಂಪರ ಗುಂಪು’ ಎಂಬ ನಗೆ ನಾಟಕ.
ಸಾಹಿತ್ಯದ ವಿವಿಧ ರೀತಿಯ ಬರಹಗಳ ಜೊತೆಗೆ ದಾಶರಥಿಯವರು ಕಾದಂಬರಿ ರಚನೆಯಲ್ಲಿ ತೊಡಗಿದರು. ಇವರ ಪ್ರಥಮ ರಚನೆ ‘ಬಾಳ ಬಂಧನ’ ನಂತರ ಇದನ್ನು ಹಿಂಬಾಲಿಸಿ ‘ಮಾವನ ಮನೆ’ , ‘ಗಂಡಾಗಿ ಕಾಡಿದ್ದ ಗುಂಡು’, ‘ಮರಳಿ ಮಠಕ್ಕೆ’ ಇತ್ಯಾದಿ ಹಾಸ್ಯ ಕಾದಂಬರಿಗಳು ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದವು. ‘ಮೈಸೂರು ಪೆಪಿಟಿಯರ್ಸ್’ ಎಂಬ ಸಂಸ್ಥೆ ಸ್ಥಾಪಿಸಿ, ದೇಶದಾದ್ಯಂತ ಸಂಚರಿಸಿ ಹಲವಾರು ಪ್ರದರ್ಶನ ನೀಡಿ ಸೈ ಎನಿಸಿಕೊಂಡು ತಮ್ಮ ಹವ್ಯಾಸವಾದ ಮತ್ತೊಂದು ಮುಖವನ್ನು ಜನತೆಗೆ ತೋರ್ಪಡಿಸಿದ್ದಾರೆ. ನಾಟಕ ರಚನೆ ಮತ್ತು ನಟನಾ ಕಲಾವಿದರಾದ ಇವರು ‘ಸಂಸ್ಕಾರ’ , ‘ಮುಯ್ಯಿ’, ‘ಫಣಿಯಮ್ಮ’ , ‘ಭಾಗ್ಯದ ಲಕ್ಷ್ಮೀ ಬಾರಮ್ಮ’, ‘ಅಬಚೂರಿನ ಪೋಸ್ಟ್ ಆಫೀಸ್’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದು ಅವರ ನಟನಾ ಕೌಶಲ್ಯಕ್ಕೆ ಸಾಕ್ಷಿಯಾಗಿದೆ. ತಮ್ಮ ಬರಹದ ಮತ್ತು ನಟನೆಯ ಮೂಲಕ ತುಂಬಿದ ಸಭಾಂಗಣವನ್ನು ನಗೆಗಡಲಲ್ಲಿ ತೇಲಿಸುತ್ತಿದ್ದ ದಾಶರಥಿ ದೀಕ್ಷಿತರು 1986 ಆಗಸ್ಟ್ 28 ರಂದು ಸ್ವರ್ಗಸ್ಥರಾದರು.
ಅದಮ್ಯ ಚೇತನಕ್ಕೆ ಅನಂತ ವಂದನೆಗಳು.
– ಅಕ್ಷರೀ
Subscribe to Updates
Get the latest creative news from FooBar about art, design and business.