ಸೃಜನಶೀಲ ಸಾಹಿತ್ಯ ಅರಳುವುದು ನೋವು, ಕಷ್ಟ, ಜಂಜಾಟಗಳ ಜೀವನದ ನಡುವೆ ಎಂಬುದು ಜನಜನಿತ ಮಾತು. ಈ ರೀತಿಯ ಜೀವನ ನಡೆಸಿ ಪ್ರಸಿದ್ಧರಾದ ಎಷ್ಟೋ ಸೃಜನಶೀಲ ಸಾಹಿತಿಗಳನ್ನು ನಮ್ಮ ನಾಡು ಕಂಡಿದೆ. ಇಂತಹ ಸಾಹಿತಿಗಳ ನಡುವೆ ಎದ್ದು ಕಾಣುವ ಮಹಿಳಾ ಸಾಹಿತಿ, ಹಲವು ಪ್ರಥಮಗಳಿಗೆ ಸಾಕ್ಷಿಯಾದವರು ನಾಡೋಜ ಗೀತಾ ನಾಗಭೂಷಣ. ಅವರು ಅನುಭವಿಸಿದ ಕಷ್ಟ, ನೋವು, ತಿರಸ್ಕಾರ, ಅಪಮಾನ, ಕಹಿ ಘಟನೆಗಳ ಪ್ರೇರಣೆಯಿಂದಲೇ ಅವರೊಳಗಿನ ಸಾಹಿತಿ ಬೆಳಕಿಗೆ ಬಂದದ್ದು.
ಗುಲ್ಬರ್ಗ ಜಿಲ್ಲೆಯ ಹಿಂದುಳಿದ ಪುಟ್ಟ ಹಳ್ಳಿಯಾದ ಸಾವಳಗಿ ಎಂಬಲ್ಲಿ 1942 ಮಾರ್ಚ್ 25ರಂದು ಗೀತಾ ಜನಿಸಿದರು. ಗುಲ್ಬರ್ಗದ ಬಟ್ಟೆ ಕಾರ್ಖಾನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಶಾಂತಪ್ಪ ಮತ್ತು ಶರಣಮ್ಮ ದಂಪತಿಗಳ ಸುಪುತ್ರಿ.
ಕನ್ನಡದ ಪ್ರಸಿದ್ಧ ಲೇಖಕಿಯಾದ ಇವರು ಬಡ ಕುಟುಂಬದಲ್ಲಿ ಜನಿಸಿ ಸಿಟ್ಟು, ತಿರಸ್ಕಾರ, ಅಪಮಾನಗಳ ಮಧ್ಯೆ ಎಲ್ಲವನ್ನೂ ಎದುರಿಸಿ ತ್ರಿವಿಕ್ರಮನಂತೆ ಎದ್ದು ನಿಂತವರು. ಪ್ರಾಥಮಿಕ ವಿದ್ಯಾಭ್ಯಾಸವನ್ನು ತನ್ನ ಹುಟ್ಟೂರಿಯನಲ್ಲಿ ಮುಗಿಸಿದ ಇವರು ಒಂದು ಕಲೆಕ್ಟರ್ ಕಚೇರಿಯಲ್ಲಿ ಉದ್ಯೋಗಿಯಾಗಿದ್ದುಕೊಂಡು ದುಡಿಯುತ್ತಲೇ ಕಾಲೇಜಿನ ಪದವಿ ಶಿಕ್ಷಣವನ್ನು ಮುಗಿಸಿ, ಬಿ. ಎಡ್. ಮತ್ತು ಎಂ. ಎ. ಪದವಿ ಪಡೆದ ನಂತರ ಶಿಕ್ಷಕರಾಗಿ ವೃತ್ತಿಯನ್ನು ಆರಂಭಿಸಿ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾದವರು. ವೃತ್ತಿ ಜೀವನದೊಂದಿಗೆ ಬರಹವನ್ನು ಪ್ರವೃತ್ತಿಯನ್ನಾಗಿಸಿಕೊಂಡ ಸಾಹಿತ್ಯ ಸಾಧಕಿ ಗೀತಾ ನಾಗಭೂಷಣ್. ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸದ ಸಾಮಾಜಿಕ ವ್ಯವಸ್ಥೆ ಇದ್ದ ಆ ಕಾಲಘಟ್ಟದಲ್ಲಿ ಆರಂಭದಲ್ಲಿ ರಂಜನೀಯ ಕಾದಂಬರಿಗಳನ್ನು ಬರೆದರೂ, ನಂತರ ತಾವು ಸಾಗಬೇಕಾದ ದಾರಿ ಬೇರೆ ಇದೆ ಎಂಬುದನ್ನು ಕಂಡುಕೊಂಡು ದೇಸಿ ಸೊಗಡಿನ ಭಾಷೆಯಲ್ಲಿ ದಲಿತರ ಮೇಲಿನ ದೌರ್ಜನ್ಯ, ತುಳಿತ, ಕುಡಿತ, ಹಸಿವು, ಇವುಗಳ ಬಗ್ಗೆ ಮನಮುಟ್ಟುವಂತೆ ಸಹಜವಾಗಿಯೇ ಬರೆದರು. ಬೆತ್ತಲೆ ಸೇವೆ, ದೇವದಾಸಿ ಪದ್ಧತಿ, ಮಹಿಳೆಯರ ಮೇಲಿನ ದೌರ್ಜನ್ಯ ಇತ್ಯಾದಿಗಳ ಬಗ್ಗೆ ಹಿಂದೆ ಮುಂದೆ ನೋಡದೆ ಅದರಿಂದ ತಮ್ಮ ಮನಸ್ಸಿಗಾದ ನೋವನ್ನು ಪರಿಣಾಮಕಾರಿಯಾಗಿ ಓದುಗರ ಮನ ರೊಚ್ಚಿಗೇಳುವಂತೆ ಬರಹ ರೂಪಕ್ಕೆ ಇಳಿಸಿದರು.
‘ತಾವರೆ ಹೂವು’ ಕಾದಂಬರಿ 1968ರಲ್ಲಿ ಪ್ರಕಟಗೊಂಡಿದ್ದು, ಅಲ್ಲಿಂದ 2004ರ ‘ಕೇಂದ್ರ ಸಾಹಿತ್ಯ ಅಕಾಡೆಮಿ’ ಪುರಸ್ಕೃತ ‘ಬದುಕು’ ಕಾದಂಬರಿಯವರೆಗೆ 31 ಕಾದಂಬರಿಗಳ ರಚನೆ ಇವರಿಂದ ಆಗಿದೆ. ಮಾತ್ರವಲ್ಲ ಎಲ್ಲಾ ಕಾದಂಬರಿಗಳು ಪ್ರಕಟಗೊಂಡಿರುವುದು ಇವರ ಹೆಗ್ಗಳಿಕೆ. 50 ಸಣ್ಣ ಕಥೆಗಳು ಹಾಗೂ 15 ನಾಟಕಗಳ ಕರ್ತೃ ಇವರು. ಆಕಾಶವಾಣಿಯ ವಿವಿಧ ಕೇಂದ್ರಗಳಲ್ಲಿ ಇವರ ಕಥೆಗಳು ಮತ್ತು ನಾಟಕಗಳು ಪ್ರಸಾರಗೊಂಡಿವೆ. ‘ಹೆಣ್ಣಿನ ಕೂಗು’ ಚಲನಚಿತ್ರ ಇವರ ‘ಹಸಿಮಾಂಸ ಮತ್ತು ಹದ್ದುಗಳು’ ಕೃತಿಯನ್ನಾದರಿಸಿದುದಾಗಿದೆ.
“ಸಾಹಿತ್ಯ ಶಬ್ದಾಡಂಬರದ ರಂಜನೀಯ ಆಗಬಾರದು. ಪ್ರೀತಿ, ಜನಜಾಗೃತಿ, ಶಾಂತಿ, ಸೌಹಾರ್ದತೆಯ ಭಾವನೆಯನ್ನು ಜಾಗೃತಗೊಳಿಸುವ ಸಾಹಿತ್ಯ ರಚಿಸಿದ ಅಂದಿನ ದಾಸರು, ವಚನಕಾರರು, ಜನಪದದಂತೆ ಇಂದಿನ ಸಾಹಿತಿಗಳಿಂದಲೂ ಸುಧಾರಣೆಯನ್ನು ಪ್ರೇರೇಪಿಸುವ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗುವ ಸಾಹಿತ್ಯದ ರಚನೆಯಾಗಬೇಕು” ಎಂಬುದು ಗೀತಾ ನಾಗಭೂಷಣರ ಮನದ ಮಾತು. ಅಂತೆಯೇ ಅವರ ಸಾಹಿತ್ಯದ ಧ್ವನಿಯು ಅದೇ ಆಗಿತ್ತು. ‘ದುರುಗ ಮುರುಗೈರ ಸಂಸ್ಕೃತಿ’ ಇವರ ಪ್ರಶಸ್ತಿ ಪುರಸ್ಕೃತ ಕೃತಿ.
ಡಾ. ಗೀತಾ ನಾಗಭೂಷಣ ಇವರ ಸಾಹಿತ್ಯ ಸೇವೆಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಸಂದಿವೆ. ಗುಲ್ಬರ್ಗ ವಿಶ್ವವಿದ್ಯಾನಿಲಯದ ‘ಡಾಕ್ಟರೇಟ್’, ಕರ್ನಾಟಕ ಸಾಹಿತ್ಯ ಅಕಾಡೆಮಿಯ ‘ವಿಶೇಷ ಗೌರವ ಪ್ರಶಸ್ತಿ’, ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’, ಗುಲ್ಬರ್ಗ ವಿಭಾಗ ಮಟ್ಟದ ‘ಉತ್ತಮ ಉಪನ್ಯಾಸಕಿ ಪ್ರಶಸ್ತಿ’, ಗುಲ್ಬರ್ಗದ ಎಸ್. ಆರ್. ಪಾಟೀಲ್ ಮಹಾಂತ ಜ್ಯೋತಿ ಪ್ರತಿಷ್ಠಾನದ ‘ಕಾಯಕ ರತ್ನ ಪ್ರಶಸ್ತಿ’, ಕನ್ನಡ ಸಾಹಿತ್ಯ ಪರಿಷತ್ತಿನ ‘ಬಿ. ಸರೋಜಾ ದೇವಿ ಪ್ರಶಸ್ತಿ’, ಕರ್ನಾಟಕ ಲೇಖಕಿಯರ ಬಳಗದಿಂದ ‘ಅನುಪಮಾ ಪ್ರಶಸ್ತಿ’, ‘ಆಳ್ವಾಸ್ ನುಡಿಸಿರಿ ಪ್ರಶಸ್ತಿ’, ‘ಧರ್ಮಸ್ಥಳದ ಸಾಹಿತ್ಯ ಪ್ರಶಸ್ತಿ’ ಇತ್ಯಾದಿಗಳೇ ಅಲ್ಲದೆ ಇನ್ನೂ ಅನೇಕ ಪ್ರಶಸ್ತಿಗಳಿಗೆ ಇವರು ಪಾತ್ರರಾಗಿದ್ದಾರೆ.
ಡಾ. ಗೀತಾ ನಾಗಭೂಷಣ್ ಹಲವು ಪ್ರಥಮಗಳ ಸರದಾರಿಣಿಯಾಗಿರುವುದು ಅವರ ಸಾಧನೆಯ ಸಂಕೇತ. ‘ನಾಡೋಜ’ ಪ್ರಶಸ್ತಿ ಪಡೆದ ಪ್ರಥಮ ಮಹಿಳಾ ಸಾಹಿತಿ, ‘ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’ ಪಡೆದ ಕರ್ನಾಟಕದ ಪ್ರಥಮ ಮಹಿಳಾ ಬರಹಗಾರ್ತಿ, ‘ದಾನ ಚಿಂತಾಮಣಿ ಪ್ರಶಸ್ತಿ’ಗೆ ಭಾಜನರಾದ ಪ್ರಪ್ರಥಮ ಕನ್ನಡದ ಮಹಿಳಾ ಲೇಖಕಿ, ಕನ್ನಡಕ್ಕೆ ಮೊತ್ತಮೊದಲ ‘ಭಾರತೀಯ ಭಾಷಾ ಪರಿಷತ್ ಪ್ರಶಸ್ತಿ’ಯನ್ನು ತಂದು ಕೊಟ್ಟವರು ಗೀತಾ ನಾಗಭೂಷಣ್. ಕರ್ನಾಟಕ ಸಾಹಿತ್ಯ ಅಕಾಡೆಮಿಯ 43 ವರ್ಷಗಳ ದೀರ್ಘ ಇತಿಹಾಸದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಮೊದಲ ಮಹಿಳೆ, ಗದಗದಲ್ಲಿ ನಡೆದ 76ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಖ್ಯಾತಿ ಇವರದ್ದು.
ಕಷ್ಟದಲ್ಲಿಯೇ ಮೇಲೆ ಬಂದು, ಅನನ್ಯ ಸಾಧನೆ ಮಾಡಿ, ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ದಿಟ್ಟ ನಡೆ ನುಡಿಯ ಸಾಹಿತಿ 28 ಜೂನ್ 2020ರಲ್ಲಿ ತಮ್ಮ 78ನೇ ವಯಸ್ಸಿನಲ್ಲಿ ವಿಧಿವಶರಾದರು. ಭೌತಿಕವಾಗಿ ಅವರು ನಮ್ಮ ನಡುವೆ ಇಲ್ಲದಿದ್ದರೂ ಸಾಹಿತ್ಯ ಕೃತಿಗಳ ಮೂಲಕ ಜೀವಂತವಾಗಿದ್ದಾರೆ.
ಅಗಲಿದ ಆತ್ಮಕ್ಕೆ ಅನಂತ ನಮನಗಳು.
–ಅಕ್ಷರೀ