ಕಾಸರಗೋಡಿನಲ್ಲಿ ಹೆರಿಗೆ ಮಾಡಿಸುವ ಪ್ರಥಮ ವೈದ್ಯೆಯಾಗಿ ಮಹಿಳಾಸಂಘ, ಮಹಿಳಾ ಸಮ್ಮೇಳನಗಳಂತಹ ಸಂಘಟನಾ ಕಾರ್ಯಗಳಲ್ಲಿ ನಾಯಕತ್ವ ವಹಿಸಿ ಎರಡು ಬಾರಿ ಪರಿಷತ್ತಿನ ಅಧ್ಯಕ್ಷೆಯಾಗಿ ಕನ್ನಡದ ಕೆಲಸಗಳಿಗೆ ಮಾರ್ಗದರ್ಶನ ಕೊಟ್ಟರೆಂದು ಡಾ. ಲಲಿತಾ ಎಸ್ ಎನ್. ಭಟ್ಟರ ನೆನಪು ಮಾಡಿಕೊಂಡ ಕಾಸರಗೋಡು ಚಿನ್ನಾ, ” ಈ ತರಹ ಕಾರ್ಯಕ್ರಮ ಎಲ್ಲಿ ಯಾಕೆ ಹೇಗೆ ಆಚರಿಸಿಯೇವು? ಎಷ್ಟು ಕಾಲ? ಯಾರೊಂದಿಗೆ? ಯಾರು ಬಂದಾರು? ” ಎಂದು ಸಂದೇಹ ಮುಂದಿಟ್ಟರು.ಅವರು ಡಾ. ಲಲಿತಾ ಭಟ್ ಅವರ ಸಂಸ್ಮರಣಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ್ದಕ್ಕೆ ಅಧ್ಯಕ್ಷತೆ ವಹಿಸಿದ್ದ ಕ ಸಾ ಪ ಕಾಸರಗೋಡು ಗಡಿನಾಡ ಘಟಕಾಧ್ಯಕ್ಷ ಡಾl ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಅವರ ಸಮಜಾಯಿಷಿ ಗಮನಾರ್ಹವಾಗಿತ್ತು-
” ನೆನಪಿಸಿಕೊಳ್ಳುವುದು ನಮ್ಮ ಕರ್ತವ್ಯ. ಪರಿಷತ್ತು ಕೈಗೊಳ್ಳುವ ಕಾರ್ಯಕ್ರಮಗಳಲ್ಲಿ ಕೆಲವು ಕೇಂದ್ರದ ಆದೇಶದಂತೆ ಇರುತ್ತವೆ. ಉದಾಹರಣೆಗೆ ಸರ್ ಎಂ ಬಿಶ್ವೇಶ್ವರಯ್ಯ, ನಾಲ್ಕನೇ ಕೃಷ್ಣರಾಜ ಒಡೆಯರ್ ಮುಂತಾದವರ ಜೊತೆಗೆ ಕೈಯಾರ ಕಿಞ್ಞಣ್ಣ ರೈ, ಮಂಜೇಶ್ವರ ಗೋವಿಂದ ಪೈಗಳು, ಕುಣಿಕುಳ್ಳಾಯರು, ಕಳ್ಳಿಗೆ ಮುಂತಾದವರು. ನಮ್ಮ ಮಟ್ಟಿಗೆ ಮೊದಲ ಅಧ್ಯಕ್ಷೆ ಡಾ. ಲಲಿತಾ ಅವರು ಪ್ರಥಮ ವಂದ್ಯರು. ಪೆರ್ಲ ಕೃಷ್ಣ ಭಟ್ ಅವರ ಸಂಸ್ಮರಣೆಗೆ ಒಂದು ಟ್ರಸ್ಟ್ ಇತ್ತು. ಇನ್ನು ವೇಣುಗೋಪಾಲ ಕಾಸರಗೋಡು, ಎಸ್. ವಿ. ಭಟ್ ಮುಂತಾದವರನ್ನು ಜೋಡಿಸಿಕೊಳ್ಳುವುದಕ್ಕೆ ಸಾಧ್ಯವೋ ನೋಡಬೇಕು. ನಮಗೆ ಮಾರ್ಗದರ್ಶಕರಾಗಿ ಐ. ವಿ. ಭಟ್ ಹೇಗೂ ಜೊತೆಗಿದ್ದಾರೆ.
” ಲಲಿತಾ ಅವರ ಕೈತಿಗಳ ಸಂಗ್ರಹ ಕಾರ್ಯವೂ ನಡೆದರೆ ಉತ್ತಮ. ನೆನಕೆ ಬರೇ ನುಡಿನಮನ ಆಗಬೇಕಿಲ್ಲ. ಅವರಿಂದ ನಮ್ಮವರು ಸ್ಫೂರ್ತಿ ಪಡೆಯುವಂತಾಗಬೇಕು. ಉದಾಹರಣೆಗೆ ಇಂದಿನ ಕಾರ್ಯಕ್ರಮವನ್ನು ನಾವು ಸ್ವಲ್ಪ ಭಿನ್ನ ರೀತಿಯಲ್ಲಿ ಆಯೋಜಿಸಿದ್ದೇವೆ. ಡಾ. ಮಹೇಶ್ವರಿ , ಶ್ರೀಮತಿ ಸವಿತಾ ಹಾಗೂ ಕವಿತಾ ಕೂಡ್ಲು ತಕ್ಕುದಾಗಿ ಮಾತನಾಡಿದ್ದಾರೆ. ಅಟ್ಟುಂಬೊಳ ದಾಟಿ ಅಂತರಿಕ್ಷ ತಲುಪಿರುವ ಮಹಿಳೆಯರ ಸಾಹಸ ಮಹೇಶ್ವರಿ ಅವರ ಮಾತಿನಿಂದ ವೇದ್ಯ. ಸ್ತ್ರೀಯರ ಸಾಹಿತ್ಯದ ಅನನ್ಯತೆ ಮತ್ತು ಸಾಮಾಜಿಕ ಸಾಧನೆಯೇನೂ ಕಡಿಮೆಯದಲ್ಲ” ಎಂದು ಕವಿತಾ ಕೂಡ್ಲು ವಿವರಿಸಿದ್ದಾರೆ.
” ಈಗಿನ ಮುಖ್ಯ ಸಮಸ್ಯೆ ಎಂದರೆ ಹೊಸ ತಲೆಮಾರು. ಚಿನ್ನಾ ಹೇಳಿದಂತೆ ಇದು ಆತಂಕದ ವಿಚಾರ. ಉತ್ತರ ಸಿಗದ ಪ್ರಶ್ನೆಯೂ ಹೌದು. ಕನ್ನಡ ಉಳಿಸಿ ಬೆಳೆಸಬೇಕಿದ್ದರೆ ಈ ಕುರಿತು ತೀವ್ರವಾಗಿ ಚಿಂತಿಸಿ ದಾರಿ ಹುಡುಕಬೇಕು”
ಮುಂದಿನ ಕಾರ್ಯಕ್ರಮಗಳ ಕುರಿತು ಚುಟುಕಾಗಿ ಸೂಚನೆ ನೀಡಿದ ಅಧ್ಯಕ್ಷರು ತಾನು ಅಧಿಕಾರ ವಹಿಸಿಕೊಂಡಂದಿನಿಂದ ಪ್ರತಿ ತಿಂಗಳು ” ಪರಿಷತ್ತಿನ ನಡಿಗೆ ಹಿರಿಯರ ಕಡೆಗೆ” ಅಲ್ಲಲ್ಲೆ ಗೌರವಿಸಿಕೊಂಡು ದೊರಕಿದ ಕೃತಾರ್ಥತೆಯನ್ನು ಹಂಚಿಕೊಂಡರು.
ಶ್ರೀಮತಿ ಸವಿತಾ ಭಟ್ ಅವರು ಮಾತನಾಡುತ್ತ, “ಅಕ್ಕನ ಜೊತೆಗೆ ನಾಟಕ, ವಿಚಾರ ಸಂಕಿರಣ, ಮನೆ ಮನೆ ಭೇಟಿಯಂಥ ಸಂದರ್ಭಗಳನ್ನು ನೆನಪಿಸಿ ಕೊಂಡರು.” ತನ್ನ ಹೆರಿಗೆ ಆದದ್ದು ಪ್ರಶಾಂತಿಯಲ್ಲಿ. ಎನ್ನುವವರೇ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಯಾಕೆಂದರೆ ಆಕೆ ಇಲ್ಲಿನ ಪ್ರಥಮ ಪ್ರಸೂತಿ ತಜ್ಞೆ. ಅವರ ಹಾಸ್ಯ ಪ್ರವೃತ್ತಿ, ಲೇಖನಗಳು, ನಾಟಕಗಳು, ಅನುವಾದಗಳು ಒಳ್ಳೆಯ ಶೈಲಿಯುಳ್ಳಂಥವು. ದುಡಿಮೆಯಲ್ಲೂ ಅವರು ಮಿಂಚಿದವರು. ಸತ್ಯಸಾಯಿ ಚರಿತ್ರೆಯನ್ನು ಇಂಗ್ಲಿಷಿನಿಂದ ಅನುವಾದಿಸಿದ್ದು ವೈಕಂ ಮಲಯಾಳಂ ಕೃತಿಯನ್ನು ಭಾಷಾಂತರಿಸಿದ್ದು, ಗೀತಾ ತರಗತಿ ನಡೆಸಿದ್ದು, ಗುಡಿ ಕೈಗಾರಿಕೆಯಲ್ಲಿ ಕಿರಿಯರನ್ನು ಹುರಿಗೊಳಿಸಿದ್ದು ಮುಂತಾದ ಅವರ ಸಾಧನೆಗಳು ಅಭಿಯಾನದ 100ನೇ ಕಂತನ್ನು ಅನಾರೋಗ್ಯದ ನಡುವೆಯೂ ತನ್ನ ಮನೆಯಲ್ಲೇ ಮಾಡಿಕೊಂಡ ಅವರ ಛಲ ಅನನ್ಯ” ಎಂದರು.
ಡಾ. ಯು. ಮಹೇಶ್ವರಿ ಅವರು- ಅಡುಗೆ ಮನೆಯಿಂದ ಹೊರ ಬಂದು ಸಾಹಸ, ಶಕ್ತಿ ತೋರುತ್ತಿರುವ ಸ್ತ್ರೀಯರ ಕುರಿತು ಅಭಿಮಾನದ ಮಾತಾಡುತ್ತ,” ಮಹಿಳೆಯರದ್ದು ಅಡುಗೆಮನೆ ಸಾಹಿತ್ಯ ಎಂಬ ಮಾತು ಮೊದಲೆಲ್ಲ ಕೇಳಿಸುತ್ತಿತ್ತು. ಈಗ ಹಾಗೆ ಕೇವಲವಾಗಿ ಕಾಣದಂತೆ ಅನೇಕರ ದುಡಿಮೆ ಗಮನ ಸೆಳೆಯುತ್ತದೆ. ಆರೋಗ್ಯಕ್ಕೆ ಪೂರಕವಾದ ಶುಚಿ ರುಚಿ ಕುಟುಂಬ ಪೋಷಣೆಯ ಜವಾಬ್ದಾರಿಗಳ ಜೊತೆಗೇ ಸಾಹಿತ್ಯ ಸೃಷ್ಟಿ ಸಂಶೋಧನೆ, ಸಾಮಾಜಿಕ ಸ್ವಾಸ್ಥ್ಯ ಪಾಲನೆಗಳಲ್ಲೂ ಮಹಿಳೆ ಮುಂದೆ ಇದ್ದಾಳೆ. ಅಡುಗೆಮನೆಯ ಪತನದಿಂದ ಇತ್ತೀಚೆಗೆ ಸಾಮಾಜಿಕ ಸ್ವಾಸ್ಥ್ಯ ಕೆಟ್ಟಿದೆ ಅನ್ನುವುದು ಬೇರೆ ಮಾತು. ಆದರೆ ಇಂದಿಗೂ ಯಾವ ಕ್ಷೇತ್ರವೂ ಮಹಿಳೆಗೆ ಹೊರತಾಗಿಲ್ಲ. ಗಂಡಿಗೆ ಸಮಾನ ದುಡಿಮೆ ಇದೆ. ದಾಂಪತ್ಯದಲ್ಲಿ ವಿರಸ ವಿಚ್ಛೇದನಗಳು ಇತ್ತೀಚಿಗೆ ಹೆಚ್ಚುತ್ತಿವೆ. ಅದಕ್ಕೆ ಒಟ್ಟು ಸಮಾಜವೇ ಹೊಣೆ ಎನ್ನ ಬೇಕು. ಇಂತಹ ದೌರ್ಬಲ್ಯಗಳನ್ನು ಮೀರುವಲ್ಲಿಯೂ ಆಕೆಯ ತ್ಯಾಗ- ಸಮನ್ವಯದ ಹೆಜ್ಜೆಗಳು ಗಮನ ಸೆಳೆಯುತ್ತವೆ” ಎಂದರು.
ಮುಂದೆ ಕವಿತಾಕೂಡ್ಲು ಅವರು ಧನಾತ್ಮಕವಾಗಿ ವಿಷಯವನ್ನು ಮಂಡಿಸುತ್ತ,” ಕನ್ನಡ ಇನ್ನೆಷ್ಟು ದಿನ ಎಂಬ ನಿರಾಶೆ ಸಲ್ಲದು. ಹಾಗನ್ನುವುದು ಮರಣದ ಸಂಕೇತ. ಕಾಸರಗೋಡಿನ ಮಟ್ಟಿಗೆ ಸ್ತ್ರೀ ಶೋಷಣೆಯೂ ಅಷ್ಟಾಗಿ ಇಲ್ಲ. ಮಾತೃ ಪ್ರಧಾನ ಕುಟುಂಬ ವ್ಯವಸ್ಥೆ ಮತ್ತು ಅದು ಕಲಿಸುವ ಪಾಠಗಳು ಇಲ್ಲಿನ ಸಮಾಜವನ್ನು ನಿಯಂತ್ರಿಸಿವೆ. ದುಡಿದು ಸ್ವಂತಿಕೆ ಸಾಧಿಸುವ ಮಾತೆಯರ ಸಂಖ್ಯೆ ಹೆಚ್ಚುತ್ತಿದೆ. ಇಲ್ಲಿನ ಸಾಹಿತ್ಯ ಸೃಷ್ಟಿಯೂ ಉಲ್ಲೇಖನೀಯ. ಲಕ್ಷ್ಮಿ ಕುಂಜತ್ತೂರು ಅವರ ಕಾದಂಬರಿಗಳನ್ನು ಓದಿದರೂ ಸಾಕು. ಕಾಸರಗೋಡಿನ ಮಹಿಳೆಯರ ಸಾಧನೆ, ಜೀವನ ರೀತಿ, ಸಾಂಸ್ಕೃತಿಕ ಅನನ್ಯತೆಗಳು ಅಲ್ಲಿ ಸರಿಯಾಗಿ ಗೋಚರವಾಗುತ್ತವೆ. ಹೆಣ್ಣಿನ ಸೆರಗು ಹಾರಾಡಿದರೂ ಅದರ ಇನ್ನೊಂದು ತುದಿ ಬಂಧನದಲ್ಲಿ ಇರುತ್ತದೆ ಎಂಬುದು ಸ್ವಲ್ಪ ಹಳೆಯ ಮಾತು. ಬಂಧನಗಳಿಂದ ಆಕೆ ಸಾಕಷ್ಟು ಮುಕ್ತಿ ಪಡೆದಿದ್ದಾಳೆ. ಜೀವ ಪರವಾದ ಅನುಭೂತಿ ಹೆಣ್ಣಿನಲ್ಲಿ ಇರುವಷ್ಟು ಕಾಲ ಸಾಮಾಜಿಕ ಸ್ವಾಸ್ಥ್ಯ ಶತಸ್ಸಿದ್ಧ” ಎಂದರು.
ನಿರೀಕ್ಷೆಯಂತೆ ಈ ಸಂಸ್ಮರಣೆ ಅರ್ಥಪೂರ್ಣ ನುಡಿನಮನ ಎನ್ನಿಸಿತು. ಜೊತೆಗೆ ಮುಂದಿನ ಗೊತ್ತುಗುರಿಗೂ ನಾಂದಿಹಾಡಿತು. ದೀಪಾವಳಿ ಹಬ್ಬದ ಒತ್ತಡವಿದ್ದೂ ಗಣ್ಯರು ಭಾಗವಹಿಸಿದರು.
ಆಕರ್ಷಕ, ದೃಢ ಮತ್ತು ಅರ್ಥಗರ್ಭಿತ ಪ್ರಾರ್ಥನೆಯೊಂದಿಗೆ ಶೇಖರ ಶೆಟ್ಟಿ ಹಾಗೂ ಸೂಕ್ತ ನಿರ್ವಹಣೆಯೊಂದಿಗೆ ವಿಶಾಲಾಕ್ಷ ಪುತ್ರಕಳರೂ ಜೀವ ತುಂಬಿದರು. ಚಿನ್ನಾ ಅವರ ‘ಪದ್ಮ ಕುಟೀರ’ ಸಾರ್ಥಕ ಬೆಂಬಲ ಕೊಟ್ಟರೆ ಡಾ. ಆಶಾಲತಾ ಅವರಿಂದ ಸ್ವಾಗತ, ಶ್ರೀಮತಿ ವಿದ್ಯಾವಾಣಿ ಮಠದ ಮೂಲೆ ಅವರಿಂದ ವಂದನೆ ಸೇರಿ ರಂಗಚಿನ್ನಾರಿ ಸಂಸ್ಥೆಯ ಸಹಕಾರದೊಂದಿಗೆ ಕಾರ್ಯಕ್ರಮ ತಂಬಿ ಬಂತು.


ಪಿ. ಎನ್. ಮೂಡಿತ್ತಾಯ.
