ಚಿಂತನಶೀಲ ಹಾಗೂ ಸ್ತ್ರೀವಾದಿ ಬರಹಗಾರರಾದ ಡಾ. ಎಸ್. ವಿ. ಪ್ರಭಾವತಿಯವರು ಮಂಡ್ಯ ಜಿಲ್ಲೆಯ ಕೆ. ಆರ್. ಪೇಟೆ ತಾಲೂಕಿನ ಹೊಸಹೊಳಲು ಎಂಬ ಪುಟ್ಟ ಗ್ರಾಮದಲ್ಲಿ 1950 ಜುಲೈ 25ರಂದು ಜನಿಸಿದರು. ಬಹಳ ದೊಡ್ಡ ನಿವೇಶನದಲ್ಲಿದ್ದ ಮನೆಯಲ್ಲಿ 50 ಮಂದಿ ಇದ್ದ ತುಂಬು ಕುಟುಂಬದಲ್ಲಿ ಬೆಳೆದವರು. ತಂದೆ ವೆಂಕಟಸುಬ್ಬಯ್ಯ ಪೋಸ್ಟ್ ಮಾಸ್ಟರ್ ಆಗಿದ್ದರು. ತಾಯಿ ರತ್ನಮ್ಮ.
ಮೈಸೂರಿನ ಲಕ್ಷ್ಮಿಪುರಂ ಸರ್ಕಾರಿ ಶಾಲೆಯಲ್ಲಿ ಇವರ ಬಾಲ್ಯದ ವಿದ್ಯಾಭ್ಯಾಸ ನಡೆಯಿತು. ಮಂಡ್ಯದ ಸೈಂಟ್ ಜೋಸೆಫ್ ಕಾನ್ವೆಂಟ್ ಸ್ಕೂಲ್ ನಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ, ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಬಿ. ಎ. ಮತ್ತು ಮಾನಸಗಂಗೋತ್ರಿಯಲ್ಲಿ ಎಮ್. ಎ. ಪದವಿಯನ್ನು ಪಡೆದರು.
ಹೊಸಹೊಳಲಿನಲ್ಲಿರುವಾಗ ಚಿಕ್ಕಪ್ಪನವರು ಮಂಡ್ಯ ಮೈಸೂರಿಗೆ ಹೋದಾಗ ತಿಂಡಿಯ ಜೊತೆಗೆ ತರುತ್ತಿದ್ದ ಅ. ನ. ಕೃ., ತ. ರಾ. ಸು., ನಿರಂಜನ ಮತ್ತು ಉಷಾದೇವಿ ಇವರ ಪುಸ್ತಕಗಳನ್ನು ಓದುತ್ತಲೇ ಅತಿಯಾಗಿ ಓದುವ ಹವ್ಯಾಸ ಬೆಳೆಸಿಕೊಂಡರು.
ಅವರು ಬರೆದ ಮೊದಲ ಕಥೆ “ಜಂಬದ ಫಲ”. ಆದರೆ ಅವರು ನಿಜವಾಗಿ ಬರೆಯಲು ಆರಂಭಿಸಿದ್ದು ದ್ವಿತೀಯ ವರ್ಷದ ಎಂ. ಎ. ವಿದ್ಯಾರ್ಥಿನಿಯಾಗಿದ್ದಾಗ. ಪ್ರಭಾವತಿಯವರೇ ಹೇಳುವಂತೆ “ಪ್ರಾಚೀನ ಕವಿಗಳು ಹೆಣ್ಣೊಬ್ಬಳನ್ನು ಬಿಡಿಬಿಡಿಯಾಗಿ ವರ್ಣಿಸುತ್ತಾರೆ. ಆದರೆ ಹೆಣ್ಣೊಬ್ಬಳು ಗಂಡನ್ನೇಕೆ ವರ್ಣಿಸಬಾರದು ಎಂದು ಯೋಚಿಸಿ, ಸಿ. ಪಿ. ಕೆ. ಯವರು ಮಹಾಕಾವ್ಯ ಪಾಠ ಮಾಡುತ್ತಿದ್ದಾಗ ಅವರನ್ನೇ ಕುರಿತು ಬರೆದ ಕವನ “ನಿನ್ನನೇ ಕುರಿತು”. ‘ಸಂಕ್ರಮಣ’, ‘ನನ್ನೊಡನಿದ್ದೂ ನನ್ನಂತಾಗದೆ’, ‘ಅನಿಸಿಕೆ’, ‘ಪ್ರಶ್ನೆಗಳು’ ಇವು 1974ರ ನಂತರ ಬರೆದ ಕವಿತೆಗಳು. ತಾಯಿತನದ ಜವಾಬ್ದಾರಿ ಬಹಳಷ್ಟು ಇದ್ದ ಕಾರಣ ಆ ಮಧ್ಯೆ ಬರಹಕ್ಕೆ ತಡೆಯು ಉಂಟಾಯಿತು. ಮತ್ತೆ 10 ವರ್ಷಗಳ ನಂತರ ಬರೆದ ಕವಿತೆ “ಕವನ ಹುಟ್ಟುವ ಹೊತ್ತು” ಇದು ‘ಶೂದ್ರ’ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಈ ಮಧ್ಯೆ ಪಿ. ಎಚ್. ಡಿ. ಗಾಗಿ ಬರೆದ ಪ್ರೌಢ ಪ್ರಬಂಧ “ಕನ್ನಡ ಸಾಹಿತ್ಯದಲ್ಲಿ ದ್ರೌಪದಿ” 1996ರಲ್ಲಿ ಪ್ರಕಟಗೊಂಡಿತು. ಮುಂದೆ ಚಂದ್ರಶೇಖರ ಪಾಟೀಲರ ‘ಸಂಕ್ರಮಣ’ ಪತ್ರಿಕೆಯಲ್ಲಿ ಇವರು ಬರೆದ ವಿಮರ್ಶಾ ಲೇಖನಗಳು ಹೊರಬರಲಾರಂಭಿಸಿದವು. ಮಾತ್ರವಲ್ಲದೆ “ಮಳೆ ನಿಂತ ಮೇಲಿನ ಮರ” ಎಂಬ ಕವನ ಸಂಕಲನವನ್ನು ಪ್ರಕಟಿಸಿದರು. ಆದರೆ ಬರವಣಿಗೆಯ ಚಟುವಟಿಕೆಯಲ್ಲಿ ತಮ್ಮನ್ನು ಈ ಮಟ್ಟಿಗೆ ತೊಡಗಿಸಿಕೊಂಡಿದ್ದರೂ, ಅದಾಗಲೇ ಅವರೊಬ್ಬ ಸಾಹಿತಿ ಎಂದು ಗುರುತಿಸಿಕೊಂಡಿದ್ದರೂ “ಅದು ಅದಾಗಿಯೇ ಆಯಿತೇ ಹೊರತು ನಾನು ಸಾಹಿತಿಯಾಗಲು ಹೊರಟವಳಲ್ಲ.” ಎಂದು ಹೇಳುವಲ್ಲಿ ಪ್ರಭಾವತಿಯವರು ಸೌಜನ್ಯವನ್ನು ಮೆರೆದಿದ್ದಾರೆ. ಮುಂಬಯಿಯ “ಕರ್ನಾಟಕ ಮಲ್ಲ” ಎನ್ನುವ ಪತ್ರಿಕೆಯಲ್ಲಿಯೂ ದ್ರೌಪದಿಯ ಕುರಿತು ಬರೆದ ಇವರ ಕೆಲವು ಕಥೆಗಳು ಪ್ರಕಟಗೊಂಡಿದ್ದವು. ಒಂದು ಸಂದರ್ಭದಲ್ಲಿ ವೈ. ಕೆ. ಸಂಧ್ಯಾ ಶರ್ಮ ಇವರ ಭೇಟಿಯಾದಾಗ “ರಾಗಸಂಗಮ” ಪುಸ್ತಕದ ಬಗ್ಗೆ ಪ್ರಭಾವತಿ ಅವರಿಗೆ ತಿಳಿಸಿ, ಸಂಪಾದಕರಾದ ಸುಂದರರಾಜನ್ ಅವರನ್ನು ಸಂಪರ್ಕಿಸಲು ಹೇಳಿದರು. ಸುಂದರ ರಾಜನ್ ಅವರನ್ನು ಸಂಪರ್ಕಿಸಿ 60 ಪುಟಗಳಷ್ಟು ಕೈಬರಹಗಳ ಕತೆಗಳಿಗೆ ತಮ್ಮ ವೈಯಕ್ತಿಕ ಹಾಗೂ ಹೊಸಹೊಳಲಿನ ಕಥೆಗಳನ್ನು ಸೇರಿಸಿ ಅವರಿಗೆ ನೀಡಿದರು. ಇದರಿಂದ ಸ್ಪೂರ್ತಿಗೊಂಡ ಹೊಸಹೊಳಲಿನ ಜನರು ಈ ಕಥೆಗಳ ಬಗ್ಗೆ ಅಭಿಮಾನದಿಂದ ಮಾತನಾಡುವಂತೆ ಆಯ್ತು.
‘ದ್ರೌಪದಿ’, ‘ಕುಂತಿ’, ‘ಅಹಲ್ಯಾ’, ಯಶೋಧರಾ’, ‘ಸೀತಾ’, ‘ಶಕುಂತಲಾ’, ‘ಗಾರ್ಗಿ’, ‘ದೇವಕಿ’ ಹೀಗೆ ವೈವಿಧ್ಯಮಯ ವಸ್ತುಗಳು ಮತ್ತು ವಿಷಯಗಳನ್ನು ಹೊಂದಿರುವ ಒಟ್ಟು ಎಂಟು ಕಾದಂಬರಿಗಳು ಇವರ ಲೇಖನಿಯಿಂದ ಹೊರಬಂದಿವೆ. ಇವುಗಳಲ್ಲಿ ‘ದ್ರೌಪದಿ’ ಕಾದಂಬರಿಗೆ ಸು. ರಂಗಸ್ವಾಮಿ ಅವರ ‘ಅತ್ತಿಮಬ್ಬೆ ಟ್ರಸ್ಟಿನ ಪ್ರಶಸ್ತಿ’ ಬಂದಿದೆ, ಮಾತ್ರವಲ್ಲದೆ ಗುಲ್ಬರ್ಗ ಮತ್ತು ಬಿಜಾಪುರ ವಿಶ್ವವಿದ್ಯಾನಿಲಯಕ್ಕೆ ಅದು ಪಠ್ಯಪುಸ್ತಕವಾಗಿಯೂ ಸ್ವೀಕಾರಗೊಂಡಿದೆ. ‘ಯಶೋಧರಾ’ ಕಾದಂಬರಿಯು ಕರ್ನಾಟಕ ಲೇಖಕಿಯರ ಸಂಘದ “ಗೀತಾ ದೇಸಾಯಿ ದತ್ತಿ ಪ್ರಶಸ್ತಿ”, “ಭೂಮಿ” ಕವನ ಸಂಕಲನ ‘ಮುದ್ದಣ ಕಾವ್ಯ ಪ್ರಶಸ್ತಿ’ಗಳನ್ನು ಪಡೆದುಕೊಂಡಿದೆ. ‘ಸ್ತ್ರೀವಾದದ ಪ್ರಸ್ತುತತೆ’, ‘ಕನ್ನಡ ಸಾಹಿತ್ಯದಲ್ಲಿ ಸ್ತ್ರೀವಾದಿ ನೆಲೆಗಳು’, ‘ಕನ್ನಡ ರಾಮಾಯಣಗಳು’, ‘ಹೊರಳು ನೋಟ’, ‘ಜಾಗತೀಕರಣ ಮತ್ತು ಮಹಿಳೆ’, ‘ಸಮನ್ವಯ’, ‘ಚಿತ್ತ-ಭಿತ್ತಿ’, ಮುಂತಾದವು ಇವರ ಚಿಂತನಶೀಲ ಬರಹಗಳು. ‘ಸ್ತ್ರೀವಾದದ ಪ್ರಸ್ತುತತೆ’ ಪ್ರಬಂಧಕ್ಕೆ ‘ಕಾವ್ಯಾನಂದ ಪುರಸ್ಕಾರ’, ‘ಸಮನ್ವಯ’ ವಿಮರ್ಶಾ ಕೃತಿಗೆ ‘ಗೋಕಾಕ್ ವಿಮರ್ಶಾ ಪ್ರಶಸ್ತಿ’ ಮುಂತಾದ ಅನೇಕ ಗೌರವಗಳಿಗೆ ಪ್ರಭಾವತಿಯವರು ಪಾತ್ರರಾಗಿದ್ದಾರೆ.
“ಎನ್ನ ಪಾಡೆನಗಿರಲಿ” ಇದು ಪ್ರಕಟಗೊಂಡ ಇವರ ಆತ್ಮಕಥೆ, ಇವರ ನಾಲ್ಕು ಕವನ ಸಂಕಲನಗಳು ಸೇರಿ “ನದಿ ಹರಿಯುತ್ತಿರಲಿ” ಎಂಬ ಶೀರ್ಷಿಕೆಯಡಿ ಸಮಗ್ರ ಕಾವ್ಯ ಸಂಪುಟವಾಗಿದೆ. ಎರಡು ಸಂಶೋಧನಾ ಪ್ರಬಂಧಗಳು, ಮೂರು ಪ್ರಬಂಧ ಸಂಕಲನಗಳು, ಏಳು ವಿಮರ್ಶಾ ಗ್ರಂಥಗಳು, ಒಂದು ನಾಟಕ, ಮೂರು ಸಂಪಾದನಾ ಗ್ರಂಥಗಳು ಇವರ ಸಾಹಿತ್ಯ ಯಾತ್ರೆಯಲ್ಲಿ ಲೇಖನಿಯಿಂದ ಹೊರಬಂದ ಬರಹಗಳು.
‘ಅನುಪಮಾ ನಿರಂಜನ ಪ್ರಶಸ್ತಿ’, ‘ಕಾಕೋಳು ಸರೋಜಾ ರಾವ್ ಪ್ರಶಸ್ತಿ’, ‘ಕಾವ್ಯಾನಂದ ಪ್ರಶಸ್ತಿ’, ‘ಸಾವಿತ್ರಮ್ಮ ದತ್ತಿ ಪ್ರಶಸ್ತಿ’, ‘ಸ್ನೇಹ ಸೇತು ಪ್ರಶಸ್ತಿ’ಗಳು ಡಾ. ಎಸ್. ವಿ. ಪ್ರಭಾವತಿಯವರು ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಕ್ಕೆ ಸಂದ ಗೌರವಗಳು.
ಹಿರಿಯ ಸಾಹಿತಿ ಡಾ. ಎಸ್. ವಿ. ಪ್ರಭಾವತಿಯವರಿಗೆ ಜನ್ಮ ದಿನದ ಶುಭಾಶಯಗಳು.
-ಅಕ್ಷರೀ