Subscribe to Updates

    Get the latest creative news from FooBar about art, design and business.

    What's Hot

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ವಿಶೇಷ ಲೇಖನ | ಬಹುಮುಖ ವ್ಯಕ್ತಿತ್ವದ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ
    Birthday

    ವಿಶೇಷ ಲೇಖನ | ಬಹುಮುಖ ವ್ಯಕ್ತಿತ್ವದ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ

    March 19, 2025Updated:March 20, 2025No Comments5 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬಂಟ್ವಾಳ ತಾಲೂಕಿನ ಮೊಡಂಕಾಪುವಿನ ಬಳಿಯ ಏರ್ಯಬೀಡಿನಲ್ಲಿ ಮಾವಂತೂರು ಸುಬ್ಬಯ್ಯ ಆಳ್ವ ಮತ್ತು ಸೋಮಕ್ಕೆ ದಂಪತಿಯ ಮಗನಾಗಿ ದಿನಾಂಕ 19 ಮಾರ್ಚ್ 1926ರಂದು ಲಕ್ಷ್ಮೀನಾರಾಯಣ ಆಳ್ವರು ಜನಿಸಿದರು. ಅವರ ಪ್ರಾಥಮಿಕ ವಿದ್ಯಾಭ್ಯಾಸ ನಡೆದದ್ದು ಬಂಟ್ವಾಳದಲ್ಲಿಯೇ. ಹೈಸ್ಕೂಲು ವಿದ್ಯಾಭ್ಯಾಸಕ್ಕೆ ಅವರು ಮಂಗಳೂರಿನ ಕೆನರಾ ಹೈಸ್ಕೂಲನ್ನು ಆಶ್ರಯಿಸಿದರು. ಹತ್ತನೆಯ ತರಗತಿಯ ಬಳಿಕ ಅವರ ಔಪಚಾರಿಕ ವಿದ್ಯಾಭ್ಯಾಸ ಮುಂದುವರಿಯಲಿಲ್ಲ. ಆದರೆ ಸ್ವಾಧ್ಯಾಯಿಯಾಗಿ ಅವರು ಗಳಿಸಿದ ಜ್ಞಾನ ಅಪಾರ. ಹಿಂದಿ ಕಲಿಕೆಯಲ್ಲಿ ಆಸಕ್ತಿಯನ್ನು ವಹಿಸಿ ರಾಷ್ಟ್ರಭಾಷಾ ಪ್ರವೀಣರಾದರು. ಹಾಗೆಯೇ ಇಂಗ್ಲೀಷ್‌ನಲ್ಲಿ ಕೂಡ ಪರಿಣತಿಯನ್ನು ಪಡೆಯಲು ಬಲ್ಲವರ ಸಹಾಯವನ್ನು ಪಡೆದು ಶೇಕ್ಸ್ಪಿಯರ್, ಟಾಗೋರ್ ಮುಂತಾದ ವಿಶ್ವಮಾನ್ಯರನ್ನು ಓದಿಕೊಂಡರು. ಸೇಡಿಯಾಪು ಕೃಷ್ಣಭಟ್ಟರ ಶಿಷ್ಯತ್ವವನ್ನು ಅವರು ಸ್ವೀಕರಿಸಿದ್ದು ಅವರ ಜ್ಞಾನದಾಹದ ಮತ್ತೊಂದು ಹೆಗ್ಗುರುತು. ಅವರಿಂದ ಹಳಗನ್ನಡ ಪಾಠಗಳನ್ನು ಹೇಳಿಸಿಕೊಂಡ ಏರ್ಯರು ತಮ್ಮೀ ಗುರುವನ್ನು ಸದಾಕಾಲ ಎದೆಯ ಗುಡಿಯಲ್ಲಿಟ್ಟು ಆರಾಧಿಸಿದವರು. ಸೇಡಿಯಾಪು ಕೃಷ್ಣಭಟ್ಟರ ಶತಮಾನೋತ್ಸವವನ್ನು ಬಂಟ್ವಾಳದಲ್ಲಿ ತಮ್ಮ ನೇತೃತ್ವದಲ್ಲಿ ಅತ್ಯಂತ ಸ್ಮರಣೀಯವಾಗಿ ಆಚರಿಸಿದ್ದ ಅವರು ಗುರುವಿಗೆ ಶ್ರದ್ಧೆಯ ಕಾಣಿಕೆಯನ್ನು ಸಲ್ಲಿಸಿದ್ದರು. ತಂದೆಯವರು ನಡೆಸುತ್ತಿದ್ದ ಪುರಾಣ ಪ್ರವಚನ, ತೊರವೆರಾಮಾಯಣ ಲಕ್ಷ್ಮೀಶನ ಜೈಮಿನಿ ಭಾರತ, ಕನ್ನಡ ಭಾಗವತ ಮುಂತಾದ ಕಾವ್ಯಗಳ ವಾಚನ-ವ್ಯಾಖ್ಯಾನಗಳು- ಅವರನ್ನು ಪ್ರಭಾವಿಸಿದ್ದವು. ತಂದೆಯವರು ಮಕ್ಕಳಿಗೆ ಗಮಕ ಕಲೆಯನ್ನೂ ಕಲಿಸಿದ್ದರಂತೆ. ಏರ್ಯರ ಸಹೋದರಿ ಚಂದ್ರಭಾಗಿ ರೈಯವರು ಕೂಡ ಓದು-ಬರವಣಿಗೆಯಲ್ಲಿ ತೊಡಗಿಸಿಕೊಂಡ ಓರ್ವ ಧೀಮಂತ ಮಹಿಳೆಯಾಗಿದ್ದರು. ಇದು ಏರ್ಯಬೀಡಿನ ಮನೆಯಲ್ಲಿ ಸಾಹಿತ್ಯದ ವಾತಾವರಣವಿತ್ತು ಎನ್ನುವುದಕ್ಕೆ ಸಾಕ್ಷಿ.

    ಲಕ್ಷ್ಮೀನಾರಾಯಣ ಆಳ್ವರಿಗೆ ತಮ್ಮ ಆರನೆಯ ತರಗತಿಯಿಂದಲೇ ಓದುವ ಗೀಳು ಆರಂಭವಾಗಿತ್ತು. ಕತೆ – ಕಾದಂಬರಿಗಳ ಓದಿನ ಬಳಿಕ ಗಂಭೀರ ಓದಿಗೂ ಹೊರಳಿಕೊಂಡರು. ಈ ಪುಸ್ತಕ ಪ್ರೀತಿ ನಿರಂತರವಾಗಿ ಮುಂದುವರಿಯಿತು. ’ಹೊತ್ತು ಹೋಗುವುದೆನಗೆ ಸತ್ತವರ ಸಂಗದಲಿ’ ಎಂದು ತಮ್ಮ ಓದಿನ ಅಭಿರುಚಿಯ ಬಗ್ಗೆ ಅವರೇ ಹೇಳಿದ್ದಿದೆ. ಸಾಹಿತ್ಯದಲ್ಲಿ ಹಳೆಯ ಹೊಸ ಭೇದಗಳನ್ನು ಓರ್ವ ಜಿಜ್ಞಾಸುವಾಗಿ ಅರಿತುಕೊಳ್ಳುವಲ್ಲಿ ಅವರು ಆಸಕ್ತಿಯನ್ನು ತೋರುತ್ತಿದ್ದರು ಹಳಗನ್ನಡವನ್ನೆಂತೋ ಅಂತೆಯೇ ಅಡಿಗರನ್ನೂ ಅವರು ಅರ್ಥೈಸಿಕೊಳ್ಳಬಲ್ಲವರಾಗಿದ್ದರು. ದೇಶದ ಮೇಲೆ ತುರ್ತುಪರಿಸ್ಥಿತಿಯ ಹೇರಿಕೆಯಾದ ಹಿನ್ನೆಲೆಯಲ್ಲಿ ಅವರು ಬರೆದ ‘ಕತ್ತೆ ಸತ್ತು ಹೋಯಿತು’ ಎಂಬ ಕವಿತೆ ವ್ಯಂಗ್ಯವಿಡಂಬನೆಯ ಧಾಟಿಯಿಂದ ಕೂಡಿದ್ದು, ಅದರ ಅಭಿವ್ಯಕ್ತಿಯ ಕ್ರಮ ನವ್ಯದ ಓದಿಲ್ಲದೆ ಸಾದ್ಯವಾಗುವಂಥದಲ್ಲ. ಅನೇಕ ಪ್ರಾಧ್ಯಾಪಕರಲ್ಲಿ ಕೂಡ ಕಾಣಿಸದ ಸೂಕ್ಷ್ಮ ಓದನ್ನು ಅತ್ಯಂತ ಇಳಿವಯಸ್ಸಿನಲ್ಲೂ ಅವರು ಇರಿಸಿಕೊಂಡಿರುವುದರ ಬಗ್ಗೆ ಮನತುಂಬಿ ತಿರುಮಲೇಶರು ಹೇಳಿದ್ದರು. ಈ ಓದು ಹಿರಿಯರು ಹರಸಿದ ಹೆದ್ದಾರಿಯನ್ನು ತಮ್ಮ ಸಮಕಾಲೀನರಿಗೆ ತಮ್ಮ ಮುಂದಿನ ಪೀಳಿಗೆಗೆ ಪರಿಚಯಿಸುವ ಕುರಿತಾದ ಉತ್ಸಾಹವನ್ನು ಅವರಲ್ಲಿ ಮೂಡಿಸಿದ್ದಿರಬೇಕು. ಪಂಜೆ, ಕಾರ್ನಾಡ್ ಸದಾಶಿವ ರಾವ್, ಪೊಳಲಿ ಶೀನಪ್ಪ ಹೆಗ್ಡೆ, ನಾರಾಯಣ ಕಿಲ್ಲೆ, ಎ.ಬಿ. ಶೆಟ್ಟಿ, ಮುಳಿಯ ತಿಮ್ಮಪ್ಪಯ್ಯ, ಗೋವಿಂದ ಪೈ, ಕಡೆಂಗೋಡ್ಲು, ಸೇಡಿಯಾಪು, ಎಸ್ವಿಪಿ- ಹೀಗೆ ದ. ಕ. ಜಿಲ್ಲೆಯ ಅಭಿಮಾನವಾದ ಹಲವರ ಶತಮಾನದ ಸ್ಮರಣೆಯನ್ನು ಅವರು ಮುಂಚೂಣಿಯಲ್ಲಿ ನಿಂತು ಅರ್ಥಪೂರ್ಣವಾಗಿ ಆಯೋಜಿಸಿದ್ದರ ಹಿನ್ನೆಲೆಯನ್ನು ಈ ರೀತಿಯಲ್ಲಿ ಗುರುತಿಸಬಹುದು. ಕಾಸರಗೋಡನ್ನೂ ಒಳಗೊಂಡಂತೆ ಅವಿಭಜಿತ ದ. ಕ. ಜಿಲ್ಲೆಯನ್ನು ಅದರ ಸಾಹಿತ್ಯಿಕ, ಸಾಂಸ್ಕೃತಿಕ ಪರಂಪರೆಯನ್ನು ಅಪಾರವಾಗಿ ಪ್ರೀತಿಸಿ ಗೌರವಿಸುತ್ತಿದ್ದ ಅವರಿಗೆ ಆ ಸತ್ವ ಬತ್ತಿಹೋಗಬಾರದು, ಎಳೆಯ ಪೀಳಿಗೆಯಲ್ಲಿ ಮುಂದುವರಿಯಬೇಕು, ಹಳತು ಹೊಸತರ ಕೊಂಡಿ ಭದ್ರವಾಗಿ ಬೆಸೆದು ಮುನ್ನಡೆಯಬೇಕು ಎಂಬ ಕಾಳಜಿ ಬಹಳವಾಗಿ ಇತ್ತು. ಎಳೆಯರ ಸೃಜನಶೀಲ ಚಟುವಟಿಕೆಗಳಿಗೆ ಅವರ ನಿರಂತರ ಪ್ರೋತ್ಸಾಹವಿತ್ತು.

    ಸ್ವಾತಂತ್ರ್ಯ ಹೋರಾಟದ ಹಾಗೂ ಗಾಂಧೀಜಿಯವರ ದಲಿತೋದ್ಧಾರ ಆಂದೋಲನದ ಪ್ರೇರಣೆ ಆಳ್ವರಲ್ಲಿ ಎಳೆವೆಯಲ್ಲೇ ಮೂಡಿತ್ತು. ಬಂಟ್ವಾಳದಲ್ಲಿ ದಲಿತೋದ್ಧಾರದ ಧ್ಯೇಯವನ್ನಿರಿಸಿಕೊಂಡು ಒಂದು ಸಂಘಟನೆಯನ್ನು ಹುಟ್ಟುಹಾಕಿ ಅಸ್ಪೃಶ್ಯತೆ, ಅಸಮಾನತೆಯನ್ನು ತೊಡೆಯಲು ಅವರು ಈ ಸಂಘಟನೆಯ ಮೂಲಕ ನಡೆಸಿದ ಪ್ರಾಮಾಣಿಕ ಪ್ರಯತ್ನಗಳು ಇತಿಹಾಸದ ಭಾಗವಾಗಿವೆ. ಹಾಗೆಯೇ ಸಹಕಾರ ಕ್ಷೇತ್ರದಲ್ಲಿ ಅವರ ದುಡಿಮೆಯು ಕೂಡ ಸಣ್ಣದೇನಲ್ಲ. ಮೊಳಹಳ್ಳಿ ಶಿವರಾಯರು ಈ ಕ್ಷೇತ್ರದಲ್ಲಿ ಹಲವರ ಮೇಲೆ ಪ್ರಭಾವ ಬೀರಿದ ಹಿರಿಯವ್ಯಕ್ತಿ. ಅಂಥವರ ಪ್ರೇರಣೆಯಿಂದ ಬಂಟ್ವಾಳದಲ್ಲೂ ಒಂದು ಸಹಕಾರಿ ಸಂಸ್ಥೆಯು ಸ್ಥಾಪಿತವಾಗಿತ್ತು. ಅದು ಇನ್ನೇನು ಮುಳುಗಿ ಹೋಗುವ ಹಂತದಲ್ಲಿ ಅದನ್ನು ಪುನರುಜ್ಜೀವನಗೊಳಿಸುವ ಹೊಣೆ ಏರ್ಯರ ಹೆಗಲಿಗೆ ಬಿದ್ದಿತ್ತು. ಏರ್ಯರು ಅದನ್ನು ಯಶಸ್ವಿಯಾಗಿ ನಿಭಾಯಿಸಿ ಜಿಲ್ಲೆಯಲ್ಲಿಯೇ ಉತ್ತಮ ಸಹಕಾರಿ ಸಂಸ್ಥೆಯಾಗಿ ಅಭಿವೃದ್ಧಿಪಡಿಸಿದರು. ಸಹಕಾರಿ ಕ್ಷೇತ್ರದ ಈ ಅನುಭವ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಪದವಿ ಹಾಗೂ ಈ ಕ್ಷೇತ್ರದ ಇನ್ನಿತರ ಹಲವು ಹುದ್ದೆಗಳ ಗೌರವ ಅವರಿಗೆ ಒದಗಲು ಕಾರಣವಾಯಿತು.

    ಕಾಸರಗೋಡಿನ ಜೊತೆ ಅವರ ನಂಟು ಅವಿನಾಭಾವದ್ದು. ಪಾರ್ತಿಸುಬ್ಬ, ಗೋವಿಂದ ಪೈ, ಕಯ್ಯಾರ, ಶೇಣಿ, ಪೆರ್ಲ ಮುಂತಾದ ಈ ನೆಲದ ಒಂದೊಂದು ಹೆಸರಿನ ಜೊತೆ ಇರುವ ಸಾಧನೆಯ ಪ್ರಭಾವಳಿಯಲ್ಲಿ ಮಿಂದೆದ್ದ ಅವರಿಗೆ ರಾಜಕೀಯ ಭೂಪಟದಲ್ಲಿ ಇದರ ಭೌಗೋಳಿಕ ಗಡಿಗೆರೆಗಳು, ಇದರ ಆಡಳಿತ ಅನ್ಯ ಸಂಸ್ಥಾನದ ಸುಪರ್ದಿಗೆ ಒಳಗಾದದ್ದು ಎಂದರೆ ಅದು ನುಂಗಲಾರದ ಸುಡುತುತ್ತಾಗಿತ್ತು. ಕಾಸರಗೋಡಿನಲ್ಲಿ ಕನ್ನಡದ ಕಾರ್ಯಕ್ರಮಗಳು ಜರಗುವಾಗಲೆಲ್ಲ ಸಂಘಟಕರು ಅವರ ಸಾನ್ನಿಧ್ಯವನ್ನು ಬಯಸಿದಾಗ ಅವರು ಇಲ್ಲವೆಂದದ್ದಿಲ್ಲ. ಕ. ಸಾ. ಪ. ಕೇರಳ ಗಡಿನಾಡ ಘಟಕವು ಡಾ. ಲಲಿತಾ ಎಸ್. ಎನ್. ಭಟ್ಟರ ನೇತೃತ್ವದಲ್ಲಿ, ಹೊಸದುರ್ಗ ತಾಲೂಕು ಮೊದಲ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಿದಾಗ ಅದರ ಸರ್ವಾಧ್ಯಕ್ಷರಾಗಿ ಅವರು ನಿರ್ವಹಿಸಿದ ಬಗೆ ಅವಿಸ್ಮರಣೀಯ. ಕಾಸರಗೋಡಿನ ಹಲವರಲ್ಲಿ ಏರ್ಯರ ಕುರಿತಾದ ಈ ಬಗೆಯ ನೆನಪುಗಳು ಅನೇಕವಿರಬಹುದು. ಕಾಸರಗೋಡಿನ ಸರಕಾರಿ ಕಾಲೇಜಿನ ಕನ್ನಡ ವಿಭಾಗದ ಜೊತೆ ಅವರು ಆರಂಭದಿಂದಲೂ ನಂಟನ್ನು ಹೊಂದಿದ್ದರು. ವಿಭಾಗದ ಹಲವು ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸಿ ಸಹಭಾವವನ್ನು ಪ್ರಕಟಿಸಿದ್ದರು. ಕಾಲೇಜಿನ ಕನ್ನಡ ವಿದ್ಯಾರ್ಥಿಗಳ ಸಾಹಿತ್ಯಿಕ ವೇದಿಕೆಯಾದ ‘ಸ್ನೇಹ ರಂಗ’ದ ಬೆಳ್ಳಿಹಬ್ಬ ಸಂದರ್ಭದಲ್ಲಿ ಪಾಲ್ಗೊಂಡ ಅವರು ವಿಭಾಗವನ್ನು ಕಟ್ಟಿಬೆಳೆಸಿದ ಹಿರಿಯರನ್ನು ನೆನೆಸಿಕೊಂಡಿದ್ದರು. ಇಲ್ಲಿನ ಕನ್ನಡ ವಿದ್ಯಾರ್ಥಿಗಳ ಕ್ರಿಯಾಶೀಲ ಚಟುವಟಿಕೆಗಳನ್ನು ಶ್ಲಾಘಿಸುವುದರ ಜೊತೆಗೆ ಅವರ ಸಂಕಷ್ಟಗಳನ್ನು ತಾಯಿ ಕರುಳಿನಂತೆ ಪರಿಭಾವಿಸಿ ಸಂಕಟಪಟ್ಟಿದ್ದರು. ಭಾಷಣದ ಕೊನೆಯಲ್ಲಿ ಅವರ ಕೊರಳಸೆರೆ ಬಿಗಿದು ಕಂಠ ಗದ್ಗದವಾಗಿ ಕಣ್ಣಾಲಿಗಳು ತುಂಬಿಕೊಂಡಿದ್ದವು. ಅವರಿಗೆ ಮಾತು ಮುಂದುವರಿಸಲಾಗಿರಲಿಲ್ಲ. ಅದು ಅವರು ನಮ್ಮ ಕಾಲೇಜಿನಲ್ಲಿ ಭಾಗವಹಿಸಿದ ಕೊನೆಯ ಕಾರ್ಯಕ್ರಮ. ಕಾಸರಗೋಡಿನ ಜೊತೆ ಹೊಂದಿರುವ ಈ ಸಹಭಾವದಿಂದಲೇ ಅವರು ಆಯೋಜಿಸುವ ಕಾರ್ಯಕ್ರಮಗಳಲ್ಲಿ ಕಾಸರಗೋಡಿನ ಪ್ರಾತಿನಿಧ್ಯವಿರುವಂತೆ ಮರೆಯದೆ ನೋಡಿಕೊಳ್ಳುತ್ತಿದ್ದರು. ಒಮ್ಮೆ ಬಂಟ್ವಾಳದ ಏರ್ಯಬೀಡಿನಲ್ಲಿ ಜರಗಿದ ಕಾರ್ಯಕ್ರಮವೊಂದರಲ್ಲಿ ವಿದ್ಯಾರ್ಥಿ ಮತ್ತು ಅಧ್ಯಾಪಕರ ತಂಡದೊಂದಿಗೆ ಹೋಗಿ ಭಾಗವಹಿಸಿದ ನೆನಪು ನನಗಿದೆ. ಸಮಕಾಲೀನ ಸಾಹಿತ್ಯ ಚಟುವಟಿಕೆಗಳ ಬಗ್ಗೆ ಹಮ್ಮಿಕೊಂಡ ಕಾರ್ಯಕ್ರಮವದು. ದ. ಕ. ಜಿಲ್ಲೆಯ ಸಾಹಿತ್ಯ ಸಾಂಸ್ಕೃತಿಕ ಲೋಕದ ಹಿರಿಯರು, ಕಿರಿಯರು, ಅಧ್ಯಾಪಕರು, ವಿದ್ಯಾರ್ಥಿಗಳು ಅದರಲ್ಲಿ ಭಾಗವಹಿಸಿದ್ದರು. ಸಾಹಿತ್ಯಪ್ರೀತಿ, ಸಂಸ್ಕೃತಿಯ ಮುನ್ನಡೆಯ ಕಾಳಜಿ ಅಧ್ಯಾಪಕ ಮತ್ತು ವಿದ್ಯಾರ್ಥಿ ಬಳಗದಲ್ಲಿ ಹೆಚ್ಚಾಗಬೇಕೆಂಬುದು ಆ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದರ ಮುಖ್ಯಲಕ್ಷ್ಯವಾಗಿತ್ತು. ಅದಕ್ಕಾಗಿಯೇ ಅಧ್ಯಾಪಕರ ಮತ್ತು ವಿದ್ಯಾರ್ಥಿಗಳ ಭಾಗವಹಿಸುವಿಕೆಯನ್ನು ಅವರು ಖಾತರಿಪಡಿಸಿಕೊಂಡಿದ್ದರು.

    ಶಿಕ್ಷಣ ಕ್ಷೇತ್ರದ ಬಗ್ಗೆ ಅವರದು ವಿಶೇಷ ಕಾಳಜಿ. ಕಲಿಕೆಯ ಮಾಧ್ಯಮದ ಪ್ರಶ್ನೆ ಬಂದಾಗ ಅವರು ಕನ್ನಡ ಮಾಧ್ಯಮಕ್ಕೆ ಒತ್ತುಕೊಟ್ಟರು. ಕನ್ನಡ ಮಾಧ್ಯಮದ ಶಾಲೆಯೊಂದು ಆಂಗ್ಲಮಾಧ್ಯಮದ ಶಾಲೆಯಾಗಿ ಪರಿವರ್ತನೆಗೊಳ್ಳುತ್ತಿರುವಾಗ ಶಾಲೆಯ ಸಮಾರಂಭದಲ್ಲಿ ಭಾಗವಹಿಸಿದ ಅವರು ‘ಕೇವಲ ಇಂಗ್ಲಿಷ್ ಕಲಿಕೆಗೆ ಈ ಶಾಲೆಯನ್ನು ಕಟ್ಟಲಾಗಿಲ್ಲ, ಕನ್ನಡ ಉಳಿಸಲು ಶಾಲೆಯನ್ನು ಸ್ಫಾಪಿಸಲಾಗಿದೆ‘ ಎಂದು ನಿರ್ಭಿಡೆಯಿಂದ ಹೇಳಿದ ವಿಚಾರ ಪತ್ರಿಕೆಗಳಲ್ಲಿ ವರದಿಯಾಗಿತ್ತು. ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಆರಂಭ ಕಾಲದಿಂದಲೂ ಅದರ ಬೆಳವಣಿಗೆಯಲ್ಲಿ ಕಾಳಜಿ ವಹಿಸಿ ತೊಡಗಿಸಿಕೊಂಡ ಅವರು ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಜೊತೆಗೂ ದೀರ್ಘ ಒಡನಾಟವನ್ನು ಇರಿಸಿಕೊಂಡಿದ್ದರು.

    ಅವರ ನಿಸ್ಪೃಹತೆ ಉದಾರಗುಣ ಎಷ್ಟೆಂದರೆ ಅಭಿಮಾನಿಗಳು ತಮಗೆ ‘ಏರ್ಯ ಅಭಿನಂದನ ಗ್ರಂಥ’ವನ್ನು ಅರ್ಪಿಸುವುದರ ಜೊತೆಗೆ ಸನ್ಮಾನರೂಪದಲ್ಲಿ ಒಂದು ಮೊತ್ತವನ್ನು ನೀಡಿದಾಗ ಅದನ್ನು ಶಾಶ್ವತನಿಧಿಯಾಗಿ ಸ್ಥಾಪಿಸಿ ನಾಡಿನ ವಿದ್ವಾಂಸರನ್ನು ಗುರುತಿಸಿ ಗೌರವಿಸುವುದಕ್ಕಾಗಿ ವಿನಿಯೋಗಿಸಿದರು.

    ನಿರಂತರ ಕ್ರಿಯಾಶೀಲರಾಗಿದ್ದ ಅವರು ಓದಿದ್ದು ಹೆಚ್ಚು. ಬರೆದದ್ದು ಪ್ರಮಾಣದ ದೃಷ್ಟಿಯಿಂದ ಕಡಿಮೆ. ಆದರೆ ಅವರ ‘ರಾಮಾಶ್ವಮೇಧದ ರಸ ತರಂಗಗಳು’ ಕೃತಿ ಮುದ್ದಣನ ರಾಮಾಶ್ವಮೇಧದ ರಸರುಚಿಯನ್ನು ಅತ್ಯಂತ ಸೊಗಸಾಗಿ ಉಣಬಡಿಸಿತು. ಪತ್ರರೂಪದ ಕಾದಂಬರಿ ಸ್ನೇಹಸೇತು, ಮುಳಿಯ ತಿಮ್ಮಪ್ಪಯ್ಯನವರ ಕುರಿತು ಜೀವನಚಿತ್ರ ಇತ್ಯಾದಿಗಳನ್ನು ರಚಿಸಿದ್ದಾರೆ. ಗಾನಕೋಗಿಲೆ ದಾಮೋದರ ಮಂಡೆಚ್ಚರ ಸಂಸ್ಮರಣಾ ಗ್ರಂಥವನ್ನು ಸಂಪಾದಿಸಿದ್ದಾರೆ. ಸೇಡಿಯಾಪು ಕೃಷ್ಣಭಟ್ಟರು ಬರೆದ ಪತ್ರಗಳನ್ನು ‘ಪತ್ರಗಳು ಚಿತ್ರಿಸಿದ ಸೇಡಿಯಾಪು’ ಎಂಬ ಹೆಸರಿನಲ್ಲಿ ಸಂಪಾದಿಸಿದ್ದಾರೆ. ಹೀಗೆ ನಮ್ಮ ತುಳುನಾಡಿನ ಸಾಂಸ್ಕೃತಿಕ ಇತಿಹಾಸವನ್ನು ದಾಖಲಿಸುವಲ್ಲಿ ಅವರ ಕೊಡುಗೆಯೂ ಮಹತ್ವದ್ದೆ. ತಮ್ಮ ಮಾತೃಭಾಷೆಯಾದ ತುಳುವಿನ ಬಗ್ಗೆ ಸಹಜವಾಗಿಯೇ ವಿಶೇಷ ಒಲವು ಅಭಿಮಾನಗಳನ್ನಿರಿಸಿಕೊಂಡಿದ್ದ ಅವರು ತುಳು ಅಸ್ಮಿತೆಯ ಪ್ರಜ್ಞೆಯುಳ್ಳವರಾಗಿದ್ದರು ಮಾತ್ರವಲ್ಲ ತುಳುವಿನ ಬೆಳವಣಿಗೆಯ ಕುರಿತು ವಿವೇಕಪೂರ್ಣವಾದ ನಿಲುವನ್ನು ತಳೆದಿದ್ದರು. ತುಳುವಿನ ಕುರಿತಾದ ಪ್ರೀತಿ ಎಂದರೆ ಅದನ್ನು ಕನ್ನಡದ ಕುರಿತಾದ ವಿರೋಧ ಎಂದು ತಿಳಿಯಬೇಕಾಗಿಲ್ಲ. ಅವರು ಕನ್ನಡವನ್ನೂ ಅಷ್ಟೇ ಪ್ರೀತಿಸಿದರು. ಕನ್ನಡದ ಏಳಿಗೆಗೆ ವಿಶೇಷವಾಗಿ ಶ್ರಮಿಸಿದರು.

    ಕಾಸರಗೋಡಿನ ಹಿರಿಯ ಭಾಷಾಂತರಕಾರ ಶ್ರೀ. ಎ. ನರಸಿಂಹಭಟ್ಟರದು ಆಳ್ವರೊಂದಿಗೆ 1950ರ ಲಾಗಾಯ್ತು ನಿಕಟ ಒಡನಾಟ. ಸಮಾನ ಆಸಕ್ತಿ ಅಭಿರುಚಿಗಳಿಂದ ಇಬ್ಬರಲ್ಲೂ ಆಪ್ತಬಂಧುತ್ವದ ಬೆಸುಗೆಯಾಗಿತ್ತು.ಅವರು ಏರ್ಯರನ್ನು ಹೀಗೆ ನೆನೆದುಕೊಳ್ಳುತ್ತಾರೆ: “ಆಳ್ವರದ್ದು ಸುಮಾರು 12000ಕ್ಕೂ ಹೆಚ್ಚಿನ ಪುಸ್ತಕಗಳ ಸರಸ್ವತಿ ಸಾಮ್ರಾಜ್ಯ. ತಮ್ಮ ಏರ್ಯಬೀಡಿನ ಸಮೀಪವೇ ಸಾಕೇತವನ್ನು ಕಟ್ಟಿದ ಆಳ್ವರು ಕಾಡಿಗೆ ಹೋಗದ, ಯುದ್ಧ ಮಾಡದ ಶ್ರೀರಾಮನಂತೆ ಸಮಚಿತ್ತದಿಂದ ಬದುಕಿನುದ್ದಕ್ಕೂ ಪರಿಶ್ರಮಿಸಿದವರು.

    ಮಹೇಶ್ವರಿ ಯು.
    ಸಾಹಿತಿ, ಕಾಸರಗೋಡು

    article baikady Birthday Literature roovari
    Share. Facebook Twitter Pinterest LinkedIn Tumblr WhatsApp Email
    Previous Articleಯಕ್ಷಗಾನ ವಿದ್ವಾಂಸ ಬಿ. ಗೋಪಾಲಕೃಷ್ಣ ಕುರುಪ್‌ ನಿಧನ
    Next Article ಗುಂಡ್ಮಿ-ಸಾಲಿಗ್ರಾಮದ ಸದಾನಂದ ರಂಗ ಮಂಟಪದಲ್ಲಿ ‘ತ್ರಿಕೂಟ ಯಕ್ಷ ಸಂಭ್ರಮ’ | ಮಾರ್ಚ್ 20ರಿಂದ 22
    roovari

    Add Comment Cancel Reply


    Related Posts

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025

    ಖ್ಯಾತ ಸಾಹಿತಿ ಪ್ರೊ. ಜಿ.ಎಸ್. ಸಿದ್ಧಲಿಂಗಯ್ಯ ನಿಧನ

    May 8, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.