ಪ್ರಸಿದ್ಧ ಕಾದಂಬರಿಗಾರ್ತಿ ಮತ್ತು ಸಂಗೀತ ತಜ್ಞೆಯಾದ ದೇವಕಿ ಮೂರ್ತಿಯವರು 1931 ಮೇ 22ರಂದು ಮೈಸೂರಿನಲ್ಲಿ ಜನಿಸಿದರು. ಇವರು ಕಮಲಮ್ಮ ಮತ್ತು ಆನಂದರಾಯರ ಸುಪುತ್ರಿ. ಇವರ ಆರಂಭದ ಶಿಕ್ಷಣ ಹಾಗೂ ಪ್ರೌಢ ವಿದ್ಯಾಭ್ಯಾಸ ಒಂದೇ ಕಡೆಯಲ್ಲಿ ಆಗಲಿಲ್ಲ. ಕಾರಣ ತಂದೆ ಆನಂದರಾಯರು ಮೈಸೂರು ರಾಜ್ಯದ ರೆವಿನ್ಯೂ ಇಲಾಖೆಯಲ್ಲಿ ಅಮಲ್ದಾರರಾಗಿದ್ದು ವರ್ಗವಾಗಿ ಬೇರೆ ಬೇರೆ ಕಡೆಗೆ ಹೋಗುತ್ತಿದ್ದರು. ಚಿಕ್ಕಮಗಳೂರಿನ ಇಂಟರ್ಮೀಡಿಯಟ್ ಕಾಲೇಜಿನಲ್ಲಿ ಕಾಲೇಜು ವಿದ್ಯಾರ್ಥಿಯಾಗಿರುವಾಗ ಗುರುಗಳಾದ ಪ್ರೊ. ವಿ. ಸೀತಾರಾಮಯ್ಯನವರ ವಿಶಿಷ್ಟವಾದ ಬೋಧನಾ ಕ್ರಮ, ಗುರುಗಳು ಪಠ್ಯಪುಸ್ತಕಗಳ ಜೊತೆಗೆ ಪಠ್ಯೇತರ ಪುಸ್ತಕಗಳ ಮತ್ತು ಪ್ರಸಿದ್ಧ ಲೇಖಕರ ಶ್ರೇಷ್ಠ ಕೃತಿಗಳನ್ನು ಓದಲು ಪ್ರೋತ್ಸಾಹಿಸುತ್ತಿದ್ದುದ್ದು ಇವರ ಮೇಲೆ ವಿಶೇಷ ಪ್ರಭಾವ ಬೀರಿತ್ತು. ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ. ಪದವಿಯನ್ನು ಪಡೆಯುವುದರೊಂದಿಗೆ ಸಂಗೀತದಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದ ಕಾರಣ ವಯಲಿನ್ ಶಿಕ್ಷಣವನ್ನೂ ಪಡೆದರು.
ಬಾಲ್ಯದಿಂದಲೇ ಎಲ್ಲಾ ಮಕ್ಕಳಿಗೂ ಇರುವಂತೆ ಕಥೆ ಕೇಳುವ ವಿಪರೀತವಾದ ಹುಚ್ಚು ಇವರಿಗೂ ಇತ್ತು. ಅವರ ಮನೆಯ ಪಕ್ಕದಲ್ಲಿದ್ದ ರಾಮಮಂದಿರದಲ್ಲಿ ಗೆಜ್ಜೆಯನಾದ ಮತ್ತು ಚಿಟಿಕೆಯ ತಾಳದೊಂದಿಗೆ ದಾಸರು ಹರಿಕಥೆ ಹೇಳುತ್ತಿದ್ದರೆ, ದೇವಕಿಯವರು ಮೈಮರೆತು ಕೇಳುತ್ತಿದ್ದರು. ಹೆಚ್ಚು ವಿದ್ಯಾಭ್ಯಾಸವಿಲ್ಲದಿದ್ದರೂ ಪತಿಯ ವರ್ಗಾವಣೆಯ ಕಾರಣದಿಂದಾಗಿ ಊರೂರು ಸುತ್ತುತ್ತಾ ತಮ್ಮ ಜ್ಞಾನದ ಪರಿಧಿಯನ್ನು ವಿಸ್ತರಿಸಿಕೊಂಡವರು ತಾಯಿ ಕಮಲಮ್ಮ. ಮಾತಿನ ನಡು ನಡುವೆ ಹೇಳುವ ಗಾದೆ ಮಾತುಗಳು, ಶುಶ್ರಾವ್ಯವಾಗಿ ಹಾಡುವ ಜನಪದ ಗೀತೆಗಳು ಮತ್ತು ಬದುಕಿನಲ್ಲಿ ಕಂಡ ಪ್ರಚಲಿತ ವಿದ್ಯಮಾನಗಳನ್ನು ತಾಯಿ ಮನಸ್ಸಿಗೆ ತಟ್ಟುವ ಹಾಗೆ ವರ್ಣನೆ ಮಾಡಿ ಹೇಳುತ್ತಿದ್ದ ರೀತಿ ಇವರ ಸಾಹಿತ್ಯದ ರಚನೆಗೆ ನಾಂದಿಯಾಯ್ತು.
ತಾವು ಬರೆಯಬೇಕೆಂಬ ಪ್ರಬಲವಾದ ಆಸೆ ಮನಸ್ಸಿನಲ್ಲಿ ಮೂಡಿದಾಗ ‘ಸುಪ್ರಭಾತ’, ‘ಕಥಾವಳಿ’ ಹೀಗೆ ಕೆಲವು ಪತ್ರಿಕೆಗಳಿಗೆ ಕವನಗಳನ್ನು ಮತ್ತು ಸಣ್ಣ ಕಥೆಗಳನ್ನು ಬರೆದರು. ಅವುಗಳು ಆಯ್ಕೆಯಾಗಿ ಪ್ರಕಟಗೊಂಡಾಗ ಅವರಿಗಾದ ಸಂತೋಷಕ್ಕೆ ಪಾರವೇ ಇರಲಿಲ್ಲ. ಮುಂದಿನ ಬರವಣಿಗೆಗೆ ಇದೇ ರಾಜಮಾರ್ಗವಾಯಿತು. ಪ್ರಸಿದ್ಧ ವಾಗ್ಗೇಯಕಾರರಾದ ವಾಸುದೇವಾಚಾರ್ಯರ ಮೊಮ್ಮಗ ಎಸ್. ಕೃಷ್ಣಮೂರ್ತಿಯವರೊಂದಿಗೆ ಇವರ ವಿವಾಹವಾಯಿತು. ಎಸ್. ಕೃಷ್ಣಮೂರ್ತಿಯವರು ಸಂಗೀತದ ಬಗ್ಗೆ ಅಪಾರ ಜ್ಞಾನವುಳ್ಳವರಾಗಿದ್ದರು. ಆಕಾಶವಾಣಿಯಲ್ಲಿ ಅಧಿಕಾರಿಗಳಾಗಿ, ಸಂಗೀತ ವಿಮರ್ಶಕರಾಗಿ, ಬರಹಗಾರರಾಗಿ ಪ್ರಸಿದ್ಧರಾಗಿದ್ದರು. ವಿವಾಹಾನಂತರ ದೇವಕಿ ಮೂರ್ತಿಯವರಿಗೆ ಸಂಗೀತದ ಮೇಲಿನ ಆಸಕ್ತಿ ಹೆಚ್ಚಾಯ್ತು. ಪ್ರಸಿದ್ಧ ವಿದ್ವಾಂಸರಿಂದ ಸಂಗೀತದ ಅಭ್ಯಾಸವನ್ನು ಮಾಡಿದರು.
ಸಂಗೀತದಲ್ಲಿ ಸಾಧನೆ ಮಾಡುತ್ತಾ ಹೋದ ಹಾಗೆ ಸಂಗೀತ ಕ್ಷೇತ್ರದಲ್ಲಿ ಮಹಿಳೆಯರ ಸಂಖ್ಯೆ ಬೆರಳೆಣಿಕೆಯಷ್ಟೇ ಇದ್ದು, ಸಂಗೀತ ಪುರುಷ ಪ್ರಧಾನ ಕ್ಷೇತ್ರವಾಗಿ ಏಕೆ ಉಳಿದಿದೆ ? ಎಂಬುದರ ಬಗ್ಗೆ ಪ್ರಶ್ನೆ ಮೂಡಿತು. ವಾಸುದೇವ್ ಆಚಾರ್ಯರೊಂದಿಗೆ ಚರ್ಚಿಸಿದಾಗ, “ಸಂಪ್ರದಾಯಸ್ಥ ಪುರುಷರಿಗೆ ಈ ಕ್ಷೇತ್ರವನ್ನು ಪ್ರವೇಶಿಸುವುದು ಕಷ್ಟವಾಗಿರುವಾಗ ಮಹಿಳೆಯರು ಹೇಗೆ ಮುಂದುವರೆಯಲು ಸಾಧ್ಯ?” ಎಂದು ಅವರ ಅನುಭವದ ಮಾತುಗಳನ್ನು ಹೇಳಿದರು. ಹೀಗೆ ಚರ್ಚಿಸಿದ ವಿಷಯದ ಬಗ್ಗೆ ಮನಸ್ಸಿನಲ್ಲಿ ಹರಿದ ವಿಚಾರಧಾರೆಯೇ ಇವರ ಮೊದಲ ಬರಹವಾದ ‘ಉಪಾಸನೆ’ ಎಂಬ ಕಾದಂಬರಿ. ಸಂಗೀತ ಕಲಾವಿದೆಯೊಬ್ಬಳಿಗೆ ಜೀವನದಲ್ಲಿ ಎದುರಾಗುವ ಅಡ್ಡಿ ಆತಂಕಗಳು ಕಲಾ ಸಾಧನೆ ಮತ್ತು ಜೀವನವನ್ನು ಜೊತೆಯಾಗಿ ತೂಗಿಸಿಕೊಂಡು ಹೋಗಲು ಹೇಗೆ ಕಷ್ಟವಾಗುತ್ತದೆ ಎಂಬ ಕಥಾವಸ್ತುವನ್ನೊಳಗೊಂಡ ಕಾದಂಬರಿ ಇದಾಗಿದೆ. ಕನ್ನಡಪ್ರಭ ದಿನಪತ್ರಿಕೆಯಲ್ಲಿ ಧಾರವಾಹಿಯಾಗಿ ಪ್ರಕಟಗೊಂಡ ಈ ಬರಹವನ್ನು ಮೈಸೂರಿನ ಕಾವ್ಯ ಪ್ರಕಾಶನದವರು ಪುಸ್ತಕ ರೂಪದಲ್ಲಿ ಪ್ರಕಟಿಸಿದರು. ಚಲನಚಿತ್ರ ನಿರ್ಮಾಣದಲ್ಲಿ ಮತ್ತು ನಿರ್ದೇಶನದಲ್ಲಿ ಪ್ರಸಿದ್ಧರಾದ ಪುಟ್ಟಣ್ಣ ಕಣಗಾಲರ ಗಮನಕ್ಕೆ ಈ ಕಾದಂಬರಿ ಬಂದಾಗ ‘ಉಪಾಸನೆ’ ಎಂಬ ಮೂಲ ಹೆಸರಿನಿಂದಲೇ ಚಲನಚಿತ್ರವಾಗಿ ಪ್ರಸಿದ್ಧಿಗೊಂಡು ಜನ-ಮನದಲ್ಲಿ ಅಚ್ಚಳಿಯದೆ ಉಳಿಯಿತು.
ಮುಂದೆ ದೇವಕಿ ಮೂರ್ತಿಯವರ ಹಲವಾರು ಸಣ್ಣ ಕಥೆಗಳು ಮತ್ತು ಲೇಖನಗಳು ಪ್ರಸಿದ್ಧ ವಾರಪತ್ರಿಕೆ, ಮಾಸಪತ್ರಿಕೆಗಳಲ್ಲಿ ಪ್ರಕಟವಾಗಿ ಓದುಗರ ಮೆಚ್ಚುಗೆಗೆ ಪಾತ್ರವಾದವು. ಮತ್ತೆ ಬರೆದ ಕಾದಂಬರಿಗಳಾದ ‘ಬಳ್ಳಿ ಚಿಗುರಿತು’, ‘ಶಿಶಿರ ವಸಂತ’, ‘ಎರಡು ದಾರಿ’, ‘ಚಂಡಮಾರುತ’, ‘ಒಡಕು ದೋಣಿ’, ‘ಆಹುತಿ’, ‘ಬಿರುಕು’, ‘ಬಂಧಿ’, ‘ನಿರೀಕ್ಷೆ’, ಮತ್ತು ‘ಶೋಧ’ ಕಾದಂಬರಿಗಳು ವಿವಿಧ ವಾರಪತ್ರಿಕೆ, ಮಾಸಪತ್ರಿಕೆ ಮತ್ತು ದಿನಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಾಗ, ಓದುಗರು ದೇವಕಿಯವರ ಬರಹಕ್ಕೆ ಮಾರುಹೋದರು. ಇವರ ಕಾದಂಬರಿಗಳಲ್ಲಿ ಸಾಮಾನ್ಯವಾಗಿ ಚರ್ಚಿಸುವ ವಿಷಯಗಳೆಂದರೆ ಹೆಣ್ಣಿನ ಬದುಕು – ಬವಣೆಗಳು, ವರದಕ್ಷಿಣೆ ಪಿಡುಗು, ಅಂತರ್ಜಾತೀಯ ವಿವಾಹ, ವಿಧವಾ ವಿವಾಹ, ಹೆಣ್ಣಿನ ಮಾನಸಿಕ ತುಮುಲಗಳು, ಉದ್ಯೋಗಸ್ಥ ಮಹಿಳೆಯ ಕಷ್ಟಕಾರ್ಪಣ್ಯಗಳು ಮತ್ತು ಸಾಂಸ್ಕೃತಿಕ ಜಗತ್ತಿನ ಕಲಾವಿದೆಯರ ಬದುಕಿನ ಹೋರಾಟ. ಇವರ ‘ಒಡಕು ದೋಣಿ’ ಮತ್ತು ‘ಆಹುತಿ’ ಕಾದಂಬರಿಗಳು ವನಿತಾ ಮಾಸಪತ್ರಿಕೆಯ ಕಾದಂಬರಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದರೆ ‘ನಿರೀಕ್ಷೆ’ ಕಾದಂಬರಿ ಮತ್ತು ‘ಕೆಂಪು ಗುಲಾಬಿ’ ಕಥಾ ಸಂಕಲನ ಅತ್ತಿಮಬ್ಬೆ ಪ್ರತಿಷ್ಠಾನದ ಸಾಹಿತ್ಯ ಪ್ರಶಸ್ತಿಗೆ ಪಾತ್ರವಾದವು.
‘ನಿರೀಕ್ಷೆ’ ಕಾದಂಬರಿಯಲ್ಲಿ ರಾಮಾಯಣದಲ್ಲಿ ಬರುವ ಖಳನಾಯಕಿ ಕೈಕೇಯಿ ಪಾತ್ರಕ್ಕೆ ನ್ಯಾಯ ಒದಗಿಸುವ ಸಲುವಾಗಿ ತಮ್ಮ ಬರವಣಿಗೆಯಲ್ಲಿ ಕೈಕೇಯಿಗೆ ತನ್ನ ತಪ್ಪಿನ ಅರಿವಾಗಿ, ಪಶ್ಚಾತ್ತಾಪದಿಂದ ಬೆಂದು ಪ್ರಾಯಶ್ಚಿತ್ತ ಮಾಡಿಕೊಳ್ಳ ಬಯಸುವ ಮನಸ್ಸಿನ ತೊಳಲಾಟವನ್ನು ಸುಂದರವಾಗಿ ಚಿತ್ರಿಸಲಾಗಿದೆ. ಮಹಾಭಾರತದ ಸ್ತ್ರೀ ಪಾತ್ರಗಳಲ್ಲಿ ಬಹಳ ಮುಖ್ಯವಾಗಿರುವ ಕುಂತಿಯ ಮಾನಸಿಕ ಗೊಂದಲವನ್ನು ಚಿತ್ರಿಸಿರುವ ಕಾದಂಬರಿ ‘ಕುಂತಿ’. ಈ ಕಾದಂಬರಿಗಳೊಂದಿಗೆ ರಾಮಾಯಣದ ‘ವೈದೇಹಿ’ ಕಾದಂಬರಿಯೂ ಸೇರಿದಂತೆ ಎಲ್ಲಾ ಕಾದಂಬರಿಗಳೂ ವಿಶೇಷವಾಗಿ ಓದುಗರ ಅಪಾರ ಮೆಚ್ಚುಗೆ ಗಳಿಸಿವೆ. ‘ಕೆಂಪು ಗುಲಾಬಿ’ ಮತ್ತು ‘ಅವನ ನೆರಳು’ ದೇವಕಿಯರ ಕಥಾಸಂಕಲನಗಳು. ‘ನಮ್ಮೂರು…. ನಮ್ಮ ಜನ’ ಇದು ದೇವಕಿಯವರ ಹಲವಾರು ಹಾಸ್ಯ ಲೇಖನಗಳ ಒಂದು ಸಂಗ್ರಹ ಕೃತಿ. ದೇಶ ವಿದೇಶಗಳ ಜನಜೀವನ, ಆಚಾರ-ವಿಚಾರ, ಸಂಸ್ಕೃತಿ ಇತ್ಯಾದಿ ವಿಚಾರಗಳನ್ನು ತಿಳಿದುಕೊಂಡು ತಮ್ಮ ಜ್ಞಾನವನ್ನು ವಿಸ್ತರಿಸಿಕೊಳ್ಳುವ ಸಲುವಾಗಿ ದೇವಕಿಯವರು ಮಾಡಿದ ಯುರೋಪ್ ಮತ್ತು ಅಮೇರಿಕ ಪ್ರವಾಸದ ಅನುಭವಗಳನ್ನು ದಾಖಲಿಸುವ ಕೃತಿಯೇ ‘ಯುರೋಪ್ ಅಮೆರಿಕದ ಇಣುಕು ನೋಟ’. ಕಾವೇರಿ ನದಿಯ ಪ್ರಯಾಣವನ್ನು ವಿವರಿಸುವ ಕಾವೇರಿಯ ಆತ್ಮಕಥೆ ‘ಕೊಡಗಿಂದ ಕಡಲಿಗೆ’. ಮಕ್ಕಳಿಗಾಗಿ ಅನೇಕ ಕೃತಿಗಳನ್ನು ರಚಿಸಿದ ದೇವಕಿ ಮೂರ್ತಿಯವರು ಒಟ್ಟು 15 ಕಾದಂಬರಿಗಳನ್ನು ರಚಿಸಿದ್ದಾರೆ. ದೇವಕಿ ಮೂರ್ತಿಯವರ ಸೃಜನಶೀಲ ಬರಹಗಳಲ್ಲಿ ಸಾಹಿತ್ಯದ ಎಲ್ಲಾ ಪ್ರಕಾರಗಳೂ ಮೂಡಿಬಂದಿವೆ.
– ಅಕ್ಷರೀ