ಗುರುವಿನ ಶೆಟ್ಟಿ ನೇಕಾರ ಕುಟುಂಬದ ಮಹಾನ್ ದೈವಭಕ್ತ ಹಾಗೂ ಹರಿಕಥಾ ಕೀರ್ತನಾಕಾರರೂ ವಿದ್ವಾಂಸರೂ ಆದ ರುದ್ರಪ್ಪ ಹಾಗೂ ಜನಪದ ಹಾಡುಗಾರ್ತಿ ಗೌರಮ್ಮ ಅವರ ಎಂಟನೆಯ ಸುಪುತ್ರರೇ ಶ್ರೀ ಗುರುರಾಜ್ ಹೊಸಕೋಟೆಯವರು. ಇವರು ಜನಿಸಿದ್ದು ಕರ್ನಾಟಕದ ಬಾಗಲಕೋಟ ಜಿಲ್ಲೆಯ ಮುಧೋಳ ತಾಲೂಕಿನ ಮಹಾಲಿಂಗಪುರದಲ್ಲಿ, 1948ನೇಯ ಇಸವಿ ಮೇ ತಿಂಗಳ 26ನೇ ತಾರೀಕಿನಂದು. ಇವರ ವಿದ್ಯಾಭ್ಯಾಸ ಪಿ.ಯು.ಸಿ.ಯವರೆಗೆ ಮಾತ್ರ. ಆದರೆ ಅಳೆಯಲಾಗದ, ಅಳಿಯದ, ಅಳಿಸಲಾಗದ ಸಾಧನೆ ಮಾಡಿದವರು ಇವರು.
1969ನೆಯ ಇಸ್ವಿಯಲ್ಲಿ ರಬಕವಿ ಬನಹಟ್ಟಿಯಲ್ಲಿ ನಡೆದ ಗಣೇಶೋತ್ಸವದಲ್ಲಿ ಪ್ರಥಮ ಯಶಸ್ವೀ ಕಾರ್ಯಕ್ರಮ ನೀಡಿದ ಬಳಿಕ, ಸಂಗೀತದ ಮಾಂತ್ರಿಕ ದಂಡವನ್ನು ಕೈಯಲ್ಲಿ ಹಿಡಿದವರಂತೆ ರಾಜ್ಯದೊಳಗೆ ಮಾತ್ರವಲ್ಲದೆ ಹೊರ ರಾಜ್ಯಗಳಾದ ಗೋವಾ, ತಮಿಳ್ನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶಗಳಲ್ಲಿಯೂ ಕಾರ್ಯಕ್ರಮ ನೀಡಿ ಸಂಗೀತಾಸಕ್ತರ ಮೆಚ್ಚುಗೆಗೆ ಪಾತ್ರರಾದರು. ಮೊದಲು ಬಿಜಾಪುರದಲ್ಲಿ ಇದ್ದ ‘ಸೋಮಯ್ಯ ಸಕ್ಕರೆ ಕಾರ್ಖಾನೆ’ಯಲ್ಲಿ 1970ರಿಂದ 1982ರವರೆಗೆ ಕಾರ್ಮಿಕನಾಗಿ ಸೇವೆ ಸಲ್ಲಿಸಿದರು. ನಿಖರವಾದ ಮತ್ತು ವಾಸ್ತವಿಕ ಅರಿವಿನ ಭಾವ ಇದ್ದ ಇವರು ತಾನೊಬ್ಬ ಕಲಾವಿದನಾಗಿ ಬೆಳೆಯಬೇಕೆಂಬ ಆಸೆಯಿಂದ ಸಕ್ಕರೆ ಕಾರ್ಖಾನೆಗೆ ರಾಜೀನಾಮೆ ಕೊಟ್ಟು 1983ರಲ್ಲಿ ಬೆಂಗಳೂರಿಗೆ ಬಂದರು. ಇಲ್ಲಿಂದ ಕಲಾ ಬದುಕು ಆರಂಭವಾಯಿತು
ತಂದೆ ತಾಯಿಯಿಂದ ಬಳುವಳಿಯಾಗಿ ಬಂದ ಹಾಡುಗಾರಿಕೆಯನ್ನು ಕರಗತ ಮಾಡಿಕೊಂಡು ತಮ್ಮದೇ ಆದ ಒಂದು ಹೊಸ ಆಯಾಮದ ದೃಷ್ಟಿಯಿಂದ ಉತ್ತರ ಕರ್ನಾಟಕದ ಭಾಷೆಯ ಸೊಗಡನ್ನು ಜನಪದ ಶೈಲಿಯಲ್ಲಿ ಸುಮಾರು 63ಕ್ಕೂ ಹೆಚ್ಚು ಧ್ವನಿ ಸುರುಳಿಗಳಿಗೆ ಸಾಹಿತ್ಯ ರಚನೆ ಮಾಡಿ ಸಂಗೀತ ಸಂಯೋಜನೆಯೊಂದಿಗೆ ಹಾಡಿದ ಖ್ಯಾತಿ ಇವರದು. ಆಸಕ್ತಿಯೊಂದಿಗೆ ಸಾಧಿಸಬೇಕೆಂಬ ದೃಢ ನಿಶ್ಚಯವನ್ನು ಮಾಡಿಕೊಂಡರೆ ಸಣ್ಣಪುಟ್ಟ ಸೋಲುಗಳು ನಮ್ಮನ್ನು ಹಿಮ್ಮೆಟ್ಟಿಸಲಾರವು ಎಂಬುದಕ್ಕೆ ಉದಾಹರಣೆ ಗುರುರಾಜ್ ಹೊಸಕೋಟೆಯವರು. 1969ರಿಂದ ಇಲ್ಲಿಯವರೆಗೆ 13,000ಕ್ಕೂ ಹೆಚ್ಚು ಸಾರ್ವಜನಿಕ ಕಾರ್ಯಕ್ರಮಗಳನ್ನು ನೀಡಿ 31ಕ್ಕೂ ಹೆಚ್ಚು ಜಿಲ್ಲೆಗಳ ಪ್ರತಿಷ್ಠಿತ ವೇದಿಕೆಗಳಲ್ಲಿ, ಸೇರಿದ ಅಸಂಖ್ಯಾತ ಸಭೆಯ ಸಮ್ಮುಖದಲ್ಲಿ ಹಾಡಿ, ಬಹು ಆಯಾಮಗಳಲ್ಲಿ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡು ಪ್ರಸಿದ್ಧರಾಗಿದ್ದಾರೆ. ‘ತಾಯಿ ಸತ್ತ ಮ್ಯಾಲ ತವರಿಗೆ ಎಂದೂ ಹೋಗಬಾರದವ್ವ’, ‘ಕಲಿತ ಹುಡುಗಿ ಕುದುರಿ ನಡಿಗಿ’, ‘ನನ್ನ ಕರುಳಿನ ಕುಡಿ ನೀನು’, ‘ಕಣ್ಣೀರಿನ ಕಥೆ’, ‘ಮಗ ಹುಟ್ಯನವ್ವ’ ಇಂತಹ ನೂರಾರು ಹಾಡುಗಳು ಇವರ ಕಂಠಸಿರಿಯಿಂದ ಧ್ವನಿಸುರುಳಿಯಲ್ಲಿ ಹೊರಬಂದು ಭಾಷೆಯನ್ನು ಅರಿಯದಂತಹ ಅವಿದ್ಯಾವಂತರ ಮನಸ್ಸನ್ನು ತಟ್ಟಿದ್ದು ಇವರ ವೈಶಿಷ್ಟ್ಯ. ಅನೇಕ ಜನಪ್ರಿಯ ದ್ವನಿ ಸುರುಳಿ ಸಂಸ್ಥೆಗಳ ಬೆಳವಣಿಗೆಯಲ್ಲಿ ಇವರ ಪಾತ್ರವು ಪ್ರಮುಖವಾಗಿದೆ.
ಶ್ರೀ ಗುರುರಾಜ್ ಹೊಸಕೋಟೆಯವರ ಲೇಖನಿಯಿಂದ ಮೂಡಿಬಂದ ‘ಸ್ನೇಹಜೀವಿ’, ‘ಕೈಬೀಸಿ ಕರೆದಾವ’ ಮತ್ತು ‘ಉತ್ತರ ಕರ್ನಾಟಕದ ಜನಪ್ರಿಯ ಹಾಡುಗಳು’ ಎಂಬ ಈ ಮೂರು ಕವನ ಸಂಕಲನಗಳ ಹಾಡುಗಳು ಸಂಗೀತಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ. ‘ಸೊಕ್ಕ ತಂದ ಸೋಲು’, ‘ಸುಮ್ ಸುಮ್ನೆ’, ‘ಅದೇನ್ ಹೇಳ್ರಿ’, ‘ಹೇಳಕಾಗಲ್ಲ’ ಎಂಬ ನಾಲ್ಕು ನಾಟಕಗಳನ್ನು ತಾವೇ ರಚಿಸಿ ನೂರಾರು ಯಶಸ್ವೀ ಪ್ರದರ್ಶನಗಳನ್ನು ನೀಡಿದ್ದು, ಇವರ ಉತ್ತಮ ನಾಟಕದ ರಚನೆಗೆ ಸಾಕ್ಷಿಯಾಗಿದೆ. ಶಾಲಾ ಮಕ್ಕಳ ಪಠ್ಯಪುಸ್ತಕದ ಹಾಡುಗಳಿಗೆ ರಾಗ ಸಂಯೋಜನೆ ಮಾಡಿ ಸುಮಾರು 35000ಕ್ಕೂ ಮಿಕ್ಕಿ ಮಕ್ಕಳಿಗೆ ಉಚಿತವಾಗಿ ಧ್ವನಿಸುರುಳಿಗಳನ್ನು ನೀಡಿದ್ದಾರೆ. ಶಾಲೆ ಶಾಲೆಗಳಿಗೆ ಹೋಗಿ ಜನಪದ ಶೈಲಿಯ ಸಮೂಹ ಗೀತೆಗಳನ್ನು ರಚಿಸಿ ರಾಗ ಸಂಯೋಜನೆ ಮಾಡಿ ಮಕ್ಕಳಿಂದ ನೃತ್ಯ ಮಾಡಿಸಿದ ಹೆಗ್ಗಳಿಕೆ ಗುರುರಾಜ್ ಹೊಸಕೋಟೆಯವರದು. ಇವರ ಸಾಹಿತ್ಯ ಸೇವೆ ಮತ್ತೆ ಜನಪ್ರಿಯತೆಗೆ ಸರಕಾರವು ಸಂಗೀತ ಮತ್ತು ನೃತ್ಯ ಅಕಾಡೆಮಿಗೆ 1983ರಲ್ಲಿ ಗೌರವ ಸದಸ್ಯರನ್ನಾಗಿ ಆಯ್ಕೆ ಮಾಡಿ ಗೌರವಿಸಿತ್ತು.
ಸಿನಿಮಾ ಹುಚ್ಚಿನಿಂದಾಗಿ ಬೆಂಗಳೂರಿಗೆ ಬಂದು ‘ಅಲ್ಲೇ ಇರುವುದು ನೋಡಿ’ ಎಂಬ ಚಿತ್ರವನ್ನು ನಿರ್ದೇಶಿಸಿದರು. ಆದರೆ ಅದು ಅವರ ಮನಸ್ಸಿಗೆ ಹಿತವಾಗಲಿಲ್ಲ. ಇವರೊಬ್ಬ ನಟನಾಗಿ, ಹಿನ್ನೆಲೆ ಗಾಯಕನಾಗಿ, ಸಂಗೀತ ಸಂಯೋಜಕನಾಗಿ, ಸಾಹಿತಿಯಾಗಿಯೂ ಜನಪ್ರಿಯವಾದವರು. ತಾತ ಸಂಗೀತ ನಿರ್ದೇಶಕ ವಿಜಯ ಭಾಸ್ಕರ್ ಇವರ ನಿರ್ದೇಶನದಲ್ಲಿ ಉತ್ತರ ಕರ್ನಾಟಕದ ಭಾಷಾ ಆಧಾರಿತ ಕಥೆಯಾದ ‘ಸಂಗ್ಯಾ ಬಾಳ್ಯಾ’ ಇವರ ಹಿನ್ನೆಲೆ ಗಾಯನದ ಮೊದಲನೆಯ ಚಿತ್ರ. ನಾದಬ್ರಹ್ಮ ಹಂಸಲೇಖ ಇವರ ಸಂಗೀತ ನಿರ್ದೇಶನದಲ್ಲಿ ಬಿಡುಗಡೆಗೊಂಡ ‘ಮಹಾ ಕ್ಷತ್ರಿಯ’ ಚಿತ್ರದಲ್ಲಿ ಹೊಸಕೋಟೆ ಅವರು ಹಾಡಿದ ಹಾಡುಗಳು ಜನಮಾನಸದಲ್ಲಿ ಮನ್ನಣೆ ಪಡೆಯಿತು. ನಂತರ ಸಾಲು ಸಾಲಾಗಿ ಬಂದ ‘ತವರಿನ ತೊಟ್ಟಿಲು’, ‘ದಾಸ’, ‘ಅಂಬಿ’, ‘ಶಂಭು’, ‘ಕರಿಯ’, ‘ಜೋಗಿ’, ‘ತನನಂ ತನನಂ’ ಇತ್ಯಾದಿ 88ಕ್ಕೂ ಹೆಚ್ಚು ಚಿತ್ರಗಳಿಗೆ ಯಶಸ್ವೀ ಹಿನ್ನೆಲೆ ಗಾಯಕರಾಗಿ ಜನಪ್ರಿಯರಾಗಿದ್ದಾರೆ.
ನಟನಾಗಿ ಕಾರ್ಯನಿರ್ವಹಿಸಿದ ಇವರು ಚಲನಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ. ಶಿವರಾಜ್ ಕುಮಾರ್ ಅಭಿನಯದ ‘ಜೋಗಿ’ ಚಿತ್ರದ ಚಹಾದ ಅಂಗಡಿಯ ‘ಚಾಚಾ’ನ ಪಾತ್ರದಲ್ಲಿ ಕಾಣಿಸಿಕೊಂಡು ತಮ್ಮ ನಟನೆಯ ಮೂಲಕ ಜನಮನವನ್ನು ಸೆಳೆದಿದ್ದಾರೆ. ಹೀಗೆ ‘ತವರಿನ ಸಿರಿ’, ‘ಜೋಗಯ್ಯ’, ‘ಹನಿಮೂನ್ ಎಕ್ಸ್ಪ್ರೆಸ್’, ‘ರಂಗ ಸಮುದ್ರ’, ‘ಅವತಾರ ಪುರುಷ’ ಒಟ್ಟು 132 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಸಾಹಿತ್ಯ ರಚನೆ, ಹಾಡುಗಾರಿಕೆ, ರಂಗಭೂಮಿ ಅಭಿನಯ, ಸಂಗೀತ ಇತ್ಯಾದಿ ಸೇರಿದಂತೆ ಹಲವಾರು ವಿಷಯಗಳ ಕುರಿತು ಉಚಿತವಾಗಿ ಯುವ ಕಲಾವಿದರಿಗೆ ತರಬೇತಿ ನೀಡಲೆಂದೇ ‘ರಜತ ಕಲಾ ಕುಟೀರ’ ಎಂಬ ಕಲಾ ಸಂಸ್ಥೆಯನ್ನು ಹುಟ್ಟು ಹಾಕಿದ ಕಲಾ ಪ್ರೇಮಿ. ಸರಕಾರದ ಯಾವುದೇ ಸಹಾಯವಿಲ್ಲದೆ ತಮ್ಮ ಸ್ವಂತ ದುಡಿಮೆಯಿಂದಲೇ ಮುಂದುವರಿಸಿಕೊಂಡು ಬಂದದ್ದು ವಿಶೇಷ. ‘ಜನಪದ ಉಳಿಸಿ, ಜನಪದ ಬೆಳೆಸಿ’ ಎಂಬ ಸಂದೇಶವನ್ನು ಸಾರುತ್ತ, ಇದೇ ಸಂಸ್ಥೆಯ ವತಿಯಿಂದ ಜನಪದ ಜೇಂಕಾರ ಕಾರ್ಯಕ್ರಮದ ಮೂಲಕ ರಾಜ್ಯದಾದ್ಯಂತ ಪ್ರಥಮ ಪ್ರವಾಸ ಮಾಡಿದ ಕೀರ್ತಿವಂತ.
ಇವರ ಕಲಾ ಸೇವೆಗೆ ನೂರಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿದೆ. ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’, ‘ಕೆಂಪೇಗೌಡ ಪ್ರಶಸ್ತಿ’, ‘ನೇತಾಜಿ ಪ್ರಶಸ್ತಿ’, ‘ಮಾನವ ಪ್ರಶಸ್ತಿ’, ‘ಬೆಂಗಳೂರು ರತ್ನ’, ‘ಜನಪದ ಕಲಾ ನಿಧಿ’, ‘ಜನಪದ ಗಾಯಕರತ್ನ’, ‘ಜನಪದ ಗಾನಸಿರಿ’, ‘ಜನಪದ ಕೋಗಿಲೆ’, ‘ಜನಪದ ಸಾರ್ವಭೌಮ’ ಇಷ್ಟು ಮಾತ್ರವಲ್ಲದೆ ಹಲವಾರು ಸಂಘ-ಸಂಸ್ಥೆಗಳು ಪ್ರೀತಿ ಗೌರವಾದರೆಗಳಿಂದ ಇವರನ್ನು ಆ ಪ್ರಶಸ್ತಿಗಳನ್ನು ನೀಡಿ ಗೌರವಿಸಿದ್ದಾರೆ. ಇವೆಲ್ಲವೂ ಇವರ ಸಾಧನೆಗೆ ಸಂದ ಗೌರವ.
– ಅಕ್ಷರೀ