ದಿನಾಂಕ 01 ಸೆಪ್ಟೆಂಬರ್ 1948ರಂದು ಪುತ್ತೂರಿನಲ್ಲಿ ಜನಿಸಿದ ಗಂಗಾ ಪಾದೇಕಲ್ ಇವರ ಮೂಲ ಹೆಸರು ಗಂಗಾರತ್ನ. ತಂದೆ ಮುಳಿಯ ಕೇಶವ ಭಟ್ ಚಿನ್ನ, ಬೆಳ್ಳಿ ವ್ಯಾಪಾರಸ್ಥರು, ತಾಯಿ ಸರಸ್ವತಿ. ಇವರ ಅಜ್ಜಿ ಮೂಕಾಂಬಿಕಾ ಹಾಡುಗಳನ್ನು ರಚಿಸುತ್ತಿದ್ದರು. ಅವುಗಳನ್ನು ಬರಹ ರೂಪಕ್ಕೆ ತಂದವರು ತಂದೆ ಕೇಶವ ಭಟ್, ಆ ರಚನೆಗಳನ್ನು ತಾಯಿ ರಾಗಬದ್ಧವಾಗಿ ಹಾಡುತ್ತಿದ್ದರು. ಹೀಗೆ ಒಂದು ಸಾಂಸ್ಕೃತಿಕ ವಾತಾವರಣದಲ್ಲಿ ಬೆಳೆದ ಗಂಗಾ ಪಾದೇಕಲ್ ಬಾಲ್ಯದಿಂದಲೇ ಹಲವು ಪತ್ರಿಕೆಗಳನ್ನೂ ಓದುತ್ತಿದ್ದರು. ಬಾಳ ಹಾದಿಯಲ್ಲಿ ಕಂಡ ನೋವುಗಳಿಗೆ ಅಕ್ಷರ ರೂಪವನ್ನು ಕೊಟ್ಟು, ಜನರ ಮನಕ್ಕೆ, ಹೃದಯಕ್ಕೆ ತಟ್ಟುವಂತಹ ಕಥೆ-ಕಾದಂಬರಿಗಳನ್ನು ಬರೆಯುವಲ್ಲಿ ಬಾಲ್ಯದ ಅವರ ಆಸಕ್ತಿಗಳು ಸಹಾಯಕವಾಗಿದ್ದವು.
ಕುಟುಂಬದ ಪರಮಾಪ್ತರನ್ನು ಕಳೆದುಕೊಂಡಾಗ ಗಂಗಾ ಪಾದೇಕಲ್ ಅವರಿಗೆ ಸಂಗಾತಿಯಾದದ್ದು ಸಾಹಿತ್ಯ, ಓದು, ಬರಹ. ಗಂಗಾ ಪಾದೇಕಲ್ ಅವರ ಸ್ನೇಹ ಸಖಿಯರೊಂದಿಗೆ ಮಂಗಳೂರಿನಲ್ಲಿ ‘ಕರಾವಳಿ ಲೇಖಕಿಯರ ವಾಚಕಿಯರ ಸಂಘ’ವನ್ನು ಕಟ್ಟಿದರು. ಅವರ ‘ಹೊಸ ಹೆಜ್ಜೆ’ ಕಥಾಸಂಕಲನವು ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ತರಗತಿಗೆ ಪಠ್ಯಪುಸ್ತಕವಾಗಿದೆ. ‘ಪುಲಪೇಡಿ’ ಕಥೆಯು ಇಂಗ್ಲೀಷ್ ಹಾಗೂ ತೆಲುಗು ಭಾಷೆಗಳಿಗೆ ಭಾಷಾಂತರಗೊಂಡಿದ್ದು, ರಂಗ ನಾಟಕ ಹಾಗೂ ಚಲನಚಿತ್ರಕ್ಕೂ ಆಯ್ಕೆಯಾಗಿದೆ. ‘ಇನ್ನೊಂದು ಅಧ್ಯಾಯ’ ಹಾಗೂ ‘ಸೆರೆಯಿಂದ ಹೊರಗೆ’ ಇವರ ಪ್ರಮುಖ ಕೃತಿಗಳು. ‘ಹೊನ್ನಳ್ಳಿಯಲ್ಲೊಮ್ಮೆ’, ‘ಪಯಣದ ಹಾದಿಯಲ್ಲಿ’, ‘ಮೌನರಾಗಗಳು’ ಹೀಗೆ ಹಲವು ಕಾದಂಬರಿಗಳು ಜನಪ್ರಿಯವಾಗಿವೆ.
‘ಆಯ್ದ ಕಥೆಗಳು’, ‘ಪ್ರತಿಬಿಂಬ’, ‘ಮುಳಿಯ ಮೂಕಾಂಬಿಕಾ’, ‘ಏರ್ಯ ಚಂದ್ರಭಾಗಿ ರೈ’ ಮುಂತಾದವು ಗಂಗಾ ಪಾದೇಕಲ್ ಸಂಪಾದಿತ ಕೃತಿಗಳು. ‘ರಾಜ್ಯೋತ್ಸವ ಪ್ರಶಸ್ತಿ’, ಕನ್ನಡ ಸಾಹಿತ್ಯ ಪರಿಷತ್ತಿನ ‘ಮಲ್ಲಿಕಾ ಪ್ರಶಸ್ತಿ’, ‘ವನಿತ ಕಾದಂಬರಿ ಸ್ಪರ್ಧೆ’ಯಲ್ಲಿ ದ್ವಿತೀಯ ಬಹುಮಾನ, ‘ಅಕ್ಷಯ’, ‘ತುಷಾರ’ ಮಾಸಿಕಗಳಲ್ಲಿ ಬಹುಮಾನಗಳು, ‘ಪುಲಪೇಡಿ’ ರೇಡಿಯೋ ನಾಟಕಕ್ಕೆ ರಾಷ್ಟ್ರೀಯ ನಾಟಕೋತ್ಸವದಲ್ಲಿ ಮೊದಲ ಬಹುಮಾನ. ಹೀಗೆ ಹಲವಾರು ಪ್ರಶಸ್ತಿ, ಗೌರವಗಳಿಗೆ ಭಾಜನರಾದ ಗಂಗಾ ಪಾದೇಕಲ್ ಕನ್ನಡ ಸಾಹಿತ್ಯದ ಅಪೂರ್ವ ಲೇಖಕಿ.
– ಶ್ರೀಮತಿ ಮಾಧುರಿ ಶ್ರೀರಾಮ್
ಅಧ್ಯಾಪಕಿ, ಮಂಗಳೂರು