ಮೂಲತ: ಭಾರತೀಯ ಆಡಳಿತಾತ್ಮಕ ಸೇವಾ ಅಧಿಕಾರಿ (I.A.S.) ಅದಕ್ಕೂ ಮಿಗಿಲಾಗಿ ಬಹುಮುಖ ಸೇವೆಯೊಂದಿಗೆ ಕವಿ, ಕಥೆಗಾರ, ಕಾದಂಬರಿಕಾರ, ಅನುವಾದಕ, ಜಾನಪದ ಸಂಗ್ರಾಹಕ, ಸಂಶೋಧಕ ಹೀಗೆ ಬಹುಮುಖ ಪ್ರತಿಭೆಯ ಕನ್ನಡ ಸಾಹಿತ್ಯ ಮತ್ತು ಜಾನಪದ ಲೋಕವನ್ನು ಶ್ರೀಮಂತಗೊಳಿಸಿದ ಕನ್ನಡ ಸಾರಸ್ವತ ಲೋಕದ ಹಿರಿಯರಲ್ಲಿ ಓರ್ವರಾದ ಎಚ್.ಎಲ್. ನಾಗೇಗೌಡರು, ಮಂಡ್ಯ ಜಿಲ್ಲೆಯ ಹೆರಗನಹಳ್ಳಿ ದೊಡ್ಡಮನೆ ಕುಟುಂಬದಲ್ಲಿ 1915ರ ಫೆಬ್ರವರಿ 11ರಂದು ಜನಿಸಿದರು. ತಂದೆ ಲಿಂಗೇಗೌಡ, ತಾಯಿ ಹುಚ್ಚಮ್ಮನವರು.
ಬಾಲಕನಿರುವಾಗಲೇ ತಾಯಿಯನ್ನು ಕಳೆದುಕೊಂಡ ಇವರಿಗೆ ತಂದೆಯೇ ಮಾತಾಪಿತರೀರ್ವರ ಸ್ಥಾನ ತುಂಬುತ್ತಾ ಪ್ರತೀ ಹೆಜ್ಜೆಯಲ್ಲಿ ಹುರಿದುಂಬಿಸಿರುವರು. ಅವರ ಮಾರ್ಗದರ್ಶನದಂತೆಯೆ ಬೆಳೆದರು. ನಾಗತಿಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು, ಮೈಸೂರಿನಲ್ಲಿ ಬಿ.ಎಸ್ಸಿ ಪದವಿ ಮುಗಿಸಿ, ಪೂನಾದಲ್ಲಿ ಎಲ್.ಎಲ್.ಬಿ. ಪದವಿಯ ನಂತರ ನರಸಿಂಹರಾಜಪುರದ ಮುನ್ಸೀಫ್ ಕೋರ್ಟಿನಲ್ಲಿ ಹೆಡ್ ಮುನ್ಸೀಫ್ ಆಗಿ ವೃತ್ತಿ ಆರಂಭಿಸಿದ ಇವರು, ಮೈಸೂರು ಸಿವಿಲ್ ಸರ್ವೀಸ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ವಿಜಯಿಯಾಗಿ ರೆವೆನ್ಯು ಇಲಾಖೆಯಲ್ಲಿ ಅಧಿಕಾರಿಯಾಗಿ ಆಯ್ಕೆಗೊಂಡು ನಂತರದಲ್ಲಿ ಐ.ಎ.ಎಸ್. ಅಧಿಕಾರಿಯಾಗಿ ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿರುತ್ತಾರೆ. ಮುಂದುವರಿದು ಆಯುಕ್ತರಾಗಿ ರಾಜ್ಯದ ಲೋಕಸೇವಾ ಆಯೋಗದ ಸದಸ್ಯರಾಗಿ ನಿವೃತ್ತರಾದರು. ಕರ್ತವ್ಯನಿಷ್ಟೆ, ಸಮಯಪ್ರಜ್ಞೆ, ಶಿಸ್ತಿನ ಸಿಪಾಯಿ, ಮಾನವೀಯತೆಗೆ ಹೆಸರುವಾಸಿಯಾಗಿದ್ದ ಇವರಿಗೆ ತುಡಿತವಿದ್ದದ್ದು ಗ್ರಾಮೀಣ ಬದುಕಿನ ಪ್ರೀತಿ ಮತ್ತು ಸುಧಾರಿಸುವ ಕಾಳಜಿ. ಇವರು ಹೋದಲ್ಲೆಲ್ಲ ಇದಕ್ಕೆ ಸಂಬಂಧಿಸಿದ ವಸ್ತುಗಳನ್ನು ಸಂಗ್ರಹಿಸುತ್ತಿದ್ದರು. ತದನಂತರದಲ್ಲಿ ಸಂಗ್ರಹಿಸಿದ ವಸ್ತುಗಳ ಪ್ರದರ್ಶನಕ್ಕೆ ಕರ್ನಾಟಕ ಜಾನಪದ ಟ್ರಸ್ಟ್ ಸ್ಥಾಪಿಸಿದರು.
ಇವರ ಅಮೋಘ ಸೇವೆಯನ್ನು ಗುರುತಿಸಿದ ಬೆಂಗಳೂರಿನ ಅಭಿಮಾನಿಗಳು ಅಭಿನಂದನಾ ಸಮಾರಂಭ ಏರ್ಪಡಿಸಿ ಅರ್ಪಿಸಿದ ಒಂದು ಲಕ್ಷದ ಹದಿನೈದು ಸಾವಿರ ರೂಪಾಯಿಗಳನ್ನು ಮೂಲ ಧನವಾಗಿಸಿಕೊಂಡು ರಾಮನಗರದ ಬಳಿ ಹದಿನೈದು ಎಕರೆ ಪ್ರದೇಶದಲ್ಲಿ ಜಾನಪದ ಟ್ರಸ್ಟ್ ಸ್ಥಾಪಿಸಿದರು. ಇದುವೇ ಇಂದಿನ ಕರ್ನಾಟಕ ಜಾನಪದ ಪರಿಷತ್ ಆಗಿ ಜಾನಪದ ಲೋಕ ಎನಿಸಿದೆ. ಇದರಲ್ಲಿ ಧ್ವನಿ ಮುದ್ರಣ, ವರ್ಣ ಪಾರದರ್ಶಕಗಳ ತಯಾರಿ, ಮೂಲಗ್ರಾಹಕರ ಧ್ವನಿ ಶೇಖರಣೆ ಇತ್ಯಾದಿ ವಿಷಯಗಳ ಕುರಿತು ಜಾನಪದ ಮಹಾವಿದ್ಯಾಲಯ ಸ್ಥಾಪಿಸಿ ಡಿಪ್ಲೋಮ, ಸೆರ್ಟಿಫಿಕೇಟ್ ಕೋರ್ಸಗಳು, ಯಕ್ಷಗಾನ ತರಬೇತಿ, ವಸ್ತು ಸಂಗ್ರಹಣೆ, ಸಾಕ್ಷ್ಯಚಿತ್ರ ನಿರ್ಮಾಣ ಇವೇ ಮುಂತಾದ ಕಾರ್ಯಕ್ರಮಗಳನ್ನೊಳಗೊಂಡ ಕೇಂದ್ರಸ್ಥಾನವಾಗಿ ಈ ‘ಜನಪದ ಲೋಕ’ ಇಂದು ಜನಮನ ಗೆದ್ದಿರುವ ಒಂದು ಪ್ರವಾಸಿ ತಾಣವೆನಿಸಿರುತ್ತದೆ. ನಿರ್ಲಕ್ಷ್ಯಕೊಳಗಾಗಿದ್ದ ಜಾನಪದ ಕಲಾವಿದರನ್ನು ಗುರುತಿಸಿ, ಪ್ರೋತ್ಸಾಹಿಸಿ, ಗೌರವಿಸುವ, ಸನ್ಮಾನಿಸುವ ಕಾರ್ಯವನ್ನು ಆರಂಭಿಸಿದ ಮೊದಲಿಗರೂ ಹೌದು. ತದನಂತರದಲ್ಲಿ ಪ್ರತೀ ವರ್ಷ ಜಾನಪದ ಲೋಕೋತ್ಸವ, ದಸರಾ ಸಮಾರಂಭ, ಗಾಳಿಪಟದ ಉತ್ಸವ ಇವೇ ಮುಂತಾದ ಕಾರ್ಯಕ್ರಮಗಳಲ್ಲಿ ಅತ್ಯುತ್ತಮ ಜಾನಪದ ಕಲಾವಿದರನ್ನು ಗುರುತಿಸಿ ಗೌರವಿಸುವ ಪರಂಪರೆ ಇಂದಿಗೂ ಮುಂದುವರಿದುಕೊಂಡು ಬಂದಿರುವುದು ಶ್ಲಾಘನೀಯ. ಜಾನಪದದ ಬಗ್ಗೆ ದೂರದರ್ಶನದಲ್ಲಿ ಪ್ರಸಾರವಾದ ‘ಸಿರಿಗಂಧ’ ಎಂಬ ಸಾಕ್ಷ್ಯಚಿತ್ರವು 108 ಕಂತುಗಳಲ್ಲಿ ಧಾರಾವಾಹಿಯಾಗಿ ಪ್ರಸಾರಗೊಂಡ ಹಿರಿಮೆ ಇವರದಾಗಿದೆ. ಇಂತಹ ಜಾನಪದ ಲೋಕವನ್ನು ಕಲಾವಿದರು ‘ಜಾನಪದ ಕಾಶಿ’ ಎಂದೇ ನಂಬಿರುತ್ತಾರೆ.
ಇವರ ಸಾಹಿತ್ಯ ಲೋಕದ ಕೊಡುಗೆಗಳು ಅಪಾರ ಮತ್ತು ಅವಿಸ್ಮರಣೀಯ. ಕವನ ಸಂಕಲನ, ಕಥೆ ವ್ಯಥೆ, ಕಾದಂಬರಿಗಳು – ದೊಡ್ಡಮನೆ, ಸೊನ್ನೆಯಿಂದ ಸೊನ್ನೆಗೆ, ಭೂಮಿಗೆ ಬಂದ ಗಂಧರ್ವ, ಬೆಟ್ಟದಿಂದ ಬಟ್ಟಲಿಗೆ ಇತ್ಯಾದಿ. ನಾನಾಗುವೆ ಗೀಜಗನ ಹಕ್ಕಿ, ನನ್ನೂರು, ಕನ್ನಡ ಜಾನಪದ ಕೋಶ, ಖೈದಿಗಳ ಕಥೆಗಳು, ಸೋಬಾನೆ ಚಿಕ್ಕಮ್ಮನ ಪದಗಳು, ಕರ್ನಾಟಕ ಜಾನಪದ ಕಥೆಗಳು, ಹಾಡಾನ ಬನ್ನಿ ದನಿ ಎತ್ತಿ, ಮೈಲಾರ ಲಿಂಗನ ಕಾವ್ಯ, ಪ್ರವಾಸಿ ಕಂಡ ಇಂಡಿಯಾ, ಮಾರ್ಕೊಪೋಲೊ ಪ್ರವಾಸ ಕಥನ, ನಾ ಕಂಡ ಪ್ರಪಂಚ ಇತ್ಯಾದಿಗಳ ಜೊತೆಗೆ ಸರೋಜಿನಿ ದೇವಿ ಮತ್ತು ಮಲೆನಾಡ ವಾಲ್ಮೀಕಿ (ಕುವೆಂಪು) ಜೀವನ ಚೆರಿತ್ರೆಗಳೊಂದಿಗೆ ತಮ್ಮದೇ ಆತ್ಮಕಥೆಯನ್ನು ಬರೆದಿರುವ ಆಸಾಮಾನ್ಯ ಸಾಹಿತ್ಯ ತಜ್ಞರು.
ಇವರಿಗೆ ಸಂದ ಪ್ರಶಸ್ತಿಗಳು ಆಸಂಖ್ಯ. ಕರ್ಣಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ರಾಜ್ಯೋತ್ಸವ, ಕನ್ನಡ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಕರ್ಣಾಟಕ ಅಕಾಡೆಮಿ ಫೇಲೊಷಿಪ್, ಪಂಪ, ಮಂಗಳೂರಿನ ಸಂದೇಶ ಪ್ರತಿಷ್ಠಾನ, ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದ ನಾಡೋಜ ಪ್ರಶಸ್ತಿಗಳು ಸೇರಿ ಇನ್ನೂ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿರುತ್ತಾರೆ. 64ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು, ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರು ಹೀಗೆ ನೂರಾರು ಗೌರವ ಸ್ಥಾನಗಳನ್ನು ಗಿಟ್ಟಿಸಿಕೊಂಡಿರುವ ಅಗರ್ಭ ಸಾಹಿತ್ಯ ಚಿಂತಾಮಣಿಯಾಗಿದ್ದರು ಎಂದರೂ ಅತೀಶಯೋಕ್ತಿಯಾಗಲಾರದು.
ಒಟ್ಟಿನಲ್ಲಿ ಕರ್ನಾಟಕದ ಪರಂಪರೆಯಲ್ಲಿ ಜಾನಪದಕ್ಕೊಂದು ವಿಶಿಷ್ಟ ಸ್ಥಾನ ಕಲ್ಪಿಸಿಸಿಕೊಟ್ಟ ಅಪರೂಪದ ಅಮರ ವ್ಯಕ್ತಿ ಎನಿಸಿದ ಶ್ರೀಯುತ ಎಚ್.ಎಲ್. ನಾಗೇಗೌಡರು 2005ರ ಸೆಪ್ಟೆಂಬರ್ 22ರಂದು ಜಾನಪದ ಲೋಕದಿಂದ ಮರೆಯಾದರು. ಆದರೆ ಜಗದ ಜನಮನಗಳಲ್ಲಿ ಇಂದಿಗೂ ಅಮರವಾಗಿರುವ ಜಾನಪದದ ಚಿಲುಮೆಯಾದ ಅಮರ ಚೈತನ್ಯದ ಜನುಮದಿನದ ಸಂಸ್ಮರಣೆಯೊಂದಿಗೆ ಅಭಿನಂದನಾ ನಮನಗಳನ್ನು ವಿಶೇಷ ಲೇಖನದ ಮೂಲಕ ಅರ್ಪಿಸೋಣ.
ಲಲಿತಾ ಕೆ. ಆಚಾರ್
ನಿವೃತ್ತ ಪ್ರಾಂಶುಪಾಲರು
ಬೆಂಗಳೂರು.