ತುಮಕೂರು ಜಿಲ್ಲೆಯ ಉರುಡುಗೆರೆ ಹೋಬಳಿಯ ತಾಳೇನಹಳ್ಳಿಯಲ್ಲಿ ಜನ್ಮ ತಾಳಿದ ಅಪರೂಪದ ಸಾಹಿತಿ ಕೆ. ಎಸ್. ಧರಾಣೇಂದ್ರಯ್ಯ. 1903 ನೇ ಇಸವಿ ಡಿಸೆಂಬರ್ 31ರಂದು ಇವರ ಜನನವಾಯಿತು. ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ. ಪದವಿ ಪಡೆದ ಇವರು ಪಂಪ, ರನ್ನ ಮತ್ತು ಜನ್ನರ ಕೃತಿಗಳ ಪದ್ಯಗಳನ್ನು ನಿರರ್ಗಳವಾಗಿ ಹಾಡುತ್ತಿದ್ದರು. ಇವರ ವೃತ್ತಿಜೀವನ ಆರಂಭವಾದದ್ದು ಶಿಕ್ಷಣ ಇಲಾಖೆಯಿಂದ. ಕರ್ನಾಟಕ ಸರಕಾರದ ಸಾಹಿತ್ಯ ಸಂಸ್ಕೃತಿ ಅಭಿವೃದ್ಧಿ ಇಲಾಖೆಯ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ ಹೆಗ್ಗಳಿಕೆ ಇವರದು. ಆಗಲೇ ಸಾಹಿತ್ಯ ಕೃಷಿಯ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡ ಮೇಧಾವಿ ಇವರು.
ಪಂಪ ಆದಿಪುರಾಣ, ಭಾರತ ವಸ್ತು ಪ್ರದರ್ಶನ, ಪದ್ಮಾವತಿ ಮಹಾತ್ಮೆ, ಆಡಳಿತ ಶಬ್ದಗಳ ಕನ್ನಡ ಕೋಶ, ಭಗವಾನ್ ಮಹಾವೀರ, ಭಕ್ತಿ ಕುಸುಮಾಂಜಲಿ, ಇತ್ಯಾದಿ ಅನರ್ಘ್ಯ ಕೃತಿಗಳನ್ನು ಸಾಹಿತ್ಯ ಕ್ಷೇತ್ರಕ್ಕೆ ನೀಡಿದವರು. ಕನ್ನಡ – ಕನ್ನಡ ಕೋಶ, ಕನ್ನಡ ವಿಶ್ವಕೋಶ, ಕುಮಾರವ್ಯಾಸ ಭಾರತ ಮುಂತಾದ ಸಾಹಿತ್ಯ ಯೋಜನೆಗಳನ್ನು ಸಾಹಿತ್ಯ ಸಂಸ್ಕೃತಿ ಅಭಿವೃದ್ಧಿ ಇಲಾಖೆಯ ಮೂಲಕ ಕಾರ್ಯರೂಪಕ್ಕೆ ತರುವಲ್ಲಿ ಪ್ರಧಾನ ಪಾತ್ರ ವಹಿಸಿದವರು. “ಜೈನ ಶಾಸ್ತ್ರ ವಿಶಾರದ”, “ಸಾಹಿತ್ಯ ಸುಧಾರಕ”, “ಸಾಹಿತ್ಯ ವಿಭೂಷಣ” ಮತ್ತು “ಕರ್ನಾಟಕ ಸಾಹಿತ್ಯ ವಿಭೂಷಣ”ವೂ ಸೇರಿದಂತೆ ಹಲವಾರು ಪ್ರಶಸ್ತಿಗಳು ಇವರು ಮಾಡಿದ ಪ್ರಾಮಾಣಿಕ ಸಾಹಿತ್ಯ ಸೇವೆಗೆ ಇವರನ್ನು ಅಲಂಕರಿಸಿವೆ.
ಸಾಹಿತ್ಯ ಕ್ಷೇತ್ರದಲ್ಲಿ ಪ್ರತಿಫಲಾಪೇಕ್ಷೆ ಇಲ್ಲದೆ ದುಡಿದ ಅನೇಕ ಸಾಹಿತಿಗಳಲ್ಲಿ ಇವರು ಒಬ್ಬರು. ಇಂತಹ ಒಬ್ಬ ಸಾಹಿತ್ಯ ಶ್ರೀಮಂತ 1971ರ ಆಗಸ್ಟ್ 13ರಂದು ತಮ್ಮ 68ನೇ ವಯಸ್ಸಿನಲ್ಲಿಯೇ ಸ್ವರ್ಗಸ್ಥರಾದರು.
– ಅಕ್ಷರೀ
Subscribe to Updates
Get the latest creative news from FooBar about art, design and business.
Previous Articleಪರಿಚಯ ಲೇಖನ | ‘ಯಕ್ಷಬನದ ಚೈತ್ರ’ ಚೈತ್ರ ಶೆಟ್ಟಿ
Related Posts
Comments are closed.