ರಂಗ ಚಟುವಟಿಕೆಗಳ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಕೆ. ವಿ. ಸುಬ್ಬಣ್ಣ ಎಂದೇ ಪ್ರಖ್ಯಾತರಾಗಿರುವ ಇವರ ಮೂಲ ಹೆಸರು ಕುಂಟಗೋಡು ವಿಭೂತಿ ಸುಬ್ಬಣ್ಣ.
ಇವರ ತಂದೆ ಕೆ. ವಿ. ರಾಮಪ್ಪ, ತಾಯಿ ಸಾವಿತ್ರಮ್ಮ. ಮೂಲಮನೆ ‘ಕುಂಟಗೋಡು’ ಇದು ಒಂದು ಪುಟ್ಟ ಹಳ್ಳಿ. ‘ವಿಭೂತಿ’ ಇವರ ಮನೆತನದ ಹೆಸರು. ಬಿ. ಎ. ಆನರ್ಸ ಪದವಿಯನ್ನು ರ್‍ಯಾಂಕ್ ನಲ್ಲಿ ಉತ್ತೀರ್ಣರಾಗಿ, ಉದ್ಯೋಗಕ್ಕೆ ಅವಕಾಶಗಳಿದ್ದರೂ, ಅಡಿಕೆ ಬೆಳೆಗಾರರಾದ ಇವರು ಹಳ್ಳಿಗೆ ಬಂದು ಮಾಡಿದ ಸಾಧನೆ ಅಪೂರ್ವವಾದದ್ದು,
ಶಿವಮೊಗ್ಗ ಜಿಲ್ಲೆಯ, ಸಾಗರ ತಾಲೂಕಿನ ಒಂದು ಚಿಕ್ಕ ಊರು ಹೆಗ್ಗೋಡಿನಲ್ಲಿ 1932 ಫೆಬ್ರವರಿ 20ರಂದು ಇವರ ಜನನವಾಯಿತು. ಇವರು ಹೆಗ್ಗೋಡಿನಲ್ಲಿದ್ದುಕೊಂಡೇ ‘ನೀನಾಸಂ’ ಎಂದು ಖ್ಯಾತಿವೆತ್ತ ‘ನೀಲಕಂಠೇಶ್ವರ ನಾಟ್ಯ ಸೇವಾ ಸಂಘ’ವನ್ನು 1949ರಲ್ಲಿ ಸ್ಥಾಪಸಿ ಸ್ಥಾಪಕಸದಸ್ಯರಾದರು. ಆದರೆ 1974ರಲ್ಲಿ ಕಟ್ಟಿದ ‘ನೀನಾಸಂ ಚಿತ್ರ ಸಮಾಜ’ ಭಾರತದ ಮೊತ್ತಮೊದಲ ಗ್ರಾಮೀಣ ಸಿನಿಮಾ ಸೊಸೈಟಿ ಎಂಬ ಕೀರ್ತಿಯನ್ನು ಪಡೆದಿದೆ.
‘ ನೀನಾಸಂ’ ನ ರಂಗ ಚಟುವಟಿಕೆಗಳ ಮೂಲಕ ಗ್ರಾಮೀಣ ರಂಗಭೂಮಿಗೆ ತನ್ನದೇ ಆದ ಸ್ಥಾನ – ಮಾನ, ಗೌರವ – ಪ್ರತಿಷ್ಠೆಗಳನ್ನು ತಂದುಕೊಟ್ಟವರು ಸುಬ್ಬಣ್ಣ. ‘ನೀನಾಸಂ’ ಸಂಸ್ಥೆ ನಡೆಸುವ ತಿರುಗಾಟ ಈಗ ಕಲಾಸಕ್ತರನ್ನು ಆಕರ್ಷಿಸುತ್ತಿದೆ. ಸುಬ್ಬಣ್ಣನವರು ನಾಟಕ, ಸಿನಿಮಾ ಮತ್ತು ಸಾಹಿತ್ಯ ಚಟುವಟಿಕೆಗಳ ಕ್ರಾಂತಿ ನಡೆಸಿದ ಪುಟ್ಟ ಊರಾದ ಹೆಗ್ಗೋಡಿನ ಹೆಸರನ್ನು ತಮ್ಮ ಹೆಸರಿನೊಂದಿಗೆ ಕರ್ನಾಟಕದ ಮೂಲೆ ಮೂಲೆಯಲ್ಲಿ ಅನುರಣಿಸುವಂತೆ ಮಾಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ಜನರ ಅಭಿರುಚಿಯ ಅನಾವರಣಕ್ಕಾಗಿ ರಾತ್ರಿ ಹಗಲು ದುಡಿದು, ಸರ್ವಸ್ವನ್ನು ಸಮರ್ಪಿಸಿ, ಪ್ರಾಮಾಣಿಕವಾಗಿ ಶ್ರಮ ಪಟ್ಟ ಸಾಹಸಿ ‘ಮ್ಯಾಗ್ಸೇಸೆ’ ಪ್ರಶಸ್ತಿ ವಿಜೇತ ಸುಬ್ಬಣ್ಣನವರು.
ದೊಡ್ಡ ದೊಡ್ಡ ನಗರಗಳಲ್ಲಿ ಇದ್ದುಕೊಂಡು ಸರಕಾರದಿಂದ ಬರುವ ಎಲ್ಲಾ ಸೌಲಭ್ಯಗಳನ್ನು ಉಪಯೋಗಿಸಿಕೊಂಡ ಅಕಾಡೆಮಿಗಳೂ ಮಾಡದಂತಹ ಅಮೋಘ ಕಾರ್ಯವನ್ನು ಹೆಗ್ಗೋಡಿನಂತಹ ಪುಟ್ಟ ಹಳ್ಳಿಯಲ್ಲಿ ಇದ್ದುಕೊಂಡು ಸುಬ್ಬಣ್ಣನವರು ಮಾಡಿದ್ದು ಅವರ ಪರಿಶ್ರಮಕ್ಕೆ ಸಾಕ್ಷಿಯಾಗಿದೆ. ರಂಗಭೂಮಿಯ ಕಮ್ಮಟಗಳು, ಶಿಕ್ಷಣ, ನೀನಾಸಂ ತಿರುಗಾಟ, ನೀನಾಸಂ ಸಾಹಿತ್ಯ ಶಿಬಿರ ಇವೆಲ್ಲವೂ ಸುಬ್ಬಣ್ಣನವರ ಸಾಧನೆಗಳು. ಸಿನಿಮಾಗಳ ಕುರಿತು ಕನ್ನಡದಲ್ಲಿ ಆ ಕಾಲದಲ್ಲಿ ಸುಮಾರು ಇಪ್ಪತ್ತು ಪುಸ್ತಕಗಳನ್ನು ಸುಬ್ಬಣ್ಣನವರೇ ಬರೆದಿದ್ದರು. ಮಾತ್ರವಲ್ಲ ರಂಗ ಶಿಕ್ಷಣದ ಬಗ್ಗೆ ಬಹಳಷ್ಟು ಪುಸ್ತಕಗಳನ್ನು ಬರೆದಿದ್ದಾರೆ. ಇವರೊಬ್ಬ ಉತ್ತಮ ಅನುವಾದಕಾರರೂ ಹೌದು. ಪ್ರಸ್ತುತ ಕಾಲಘಟ್ಟದಲ್ಲಿ ದೀಪದ ಅಡಿಯಲ್ಲಿ ಕತ್ತಲೆ ಎಂಬಂತೆ ಕಲಾವಿದರ ಮನೆಯಲ್ಲಿ ಕಲೆಯನ್ನು ಉಳಿಸಿಕೊಂಡು ಹೋಗಲು, ವಾರಸುದಾರರಿಲ್ಲದೆ ಅದು ಕೊನೆಯನ್ನು ಮುಟ್ಟುತ್ತದೆ. ಆದರೆ ಸ್ಪರ್ಧಾತ್ಮಕ ಕಾಲದಲ್ಲಿಯೂ ತನ್ನ ಒಬ್ಬನೇ ಮಗನಿಗೆ, ತನ್ನ ಕನಸಿನ ಕೂಸನ್ನು ಬೆಳೆಸುವ ಜವಾಬ್ದಾರಿಯನ್ನು ನೀಡಿ ಅದನ್ನು ಉಳಿಸಿ ಬೆಳೆಸಲು ಬೇಕಾದ ಮಾರ್ಗದರ್ಶನವನ್ನು ತನ್ನ ಒಬ್ಬನೇ ಪುತ್ರ ಕೆ. ವಿ. ಅಕ್ಷರ ಇವರಿಗೆ ನೀಡಿರುವುದು ಸುಬ್ಬಣ್ಣನವರ ಹೆಗ್ಗಳಿಕೆ. ವಿದ್ಯಾರ್ಥಿಗಳು ನೀನಾಸಂ ರಂಗ ಶಿಕ್ಷಣ ಕೇಂದ್ರದಲ್ಲಿ ಇದ್ದುಕೊಂಡು ಶಿಕ್ಷಣ ಪಡೆಯುವ ಏರ್ಪಾಟು ಆದ ನಂತರ 25 ವರ್ಷಗಳಲ್ಲಿ 350ಕ್ಕೂ ಮಿಕ್ಕಿ ವಿದ್ಯಾರ್ಥಿಗಳನ್ನು ರಂಗಭೂಮಿಯಲ್ಲಿ ತರಬೇತಿಗೊಳಿಸಿದ್ದು ವಿಶೇಷ. ಜಗತ್ತಿನ ಅತ್ಯುತ್ತಮ ಚಲನಚಿತ್ರಗಳನ್ನು ತರಿಸಿ, ಚಲನಚಿತ್ರ ರಸಗ್ರಹಣ ಶಿಬಿರಗಳ ಮೂಲಕ ಜನಮನಕ್ಕೆ ತಲುಪಿಸಿದರು.
ನಾಟಕಕಾರ ಅನುವಾದಕ ವಿಮರ್ಶಕ ಪ್ರಕಾಶಕರಾಗಿದ್ದ ಸುಬ್ಬಣ್ಣನವರು 2005 ಜುಲೈ 16 ರಂದು ಪರಲೋಕ ಸೇರಿದರು. ಪ್ರಸ್ತುತ ಕೆ. ವಿ. ಸುಬ್ಬಣ್ಣನವರ ಪತ್ನಿ ಶೈಲಜಾರೊಂದಿಗೆ ಪುತ್ರ ಕೆ. ವಿ. ಅಕ್ಷರ ಲೇಖಕರಾಗಿ ರಂಗ ನಿರ್ದೇಶಕರಾಗಿ ನೀನಾಸಂ ತಿರುಗಾಟ ಯೋಜನೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ.
-ಅಕ್ಷರೀ