ಶೈಲಜಾ ಉಡಚಣ ಎಂಬ ಕಾವ್ಯನಾಮದಿಂದ ಸಾಹಿತ್ಯ ಕ್ಷೇತ್ರದಲ್ಲಿ ಪ್ರಸಿದ್ಧರಾದವರು ಮಹಾಂತಮ್ಮ ಹಸಮ್ ಕಲ್. ಬರಹಗಾರ್ತಿಯಾಗಿ ಸಮಾಜ ಸೇವಕಿಯಾಗಿ ಗುರುತಿಸಿಕೊಂಡಿರುವ ಇವರು 1935 ಜುಲೈ 26ರಂದು ರಾಯಚೂರಿನಲ್ಲಿ ಜನಿಸಿದರು. ನಿಜಾಮರ ಆಡಳಿತದ ಕಾಲವದು. ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ಅವಕಾಶ ಇಲ್ಲದ ಕಾಲಘಟ್ಟದಲ್ಲಿ, ನಿಜಾಮರ ಆಕ್ರಮಣಶೀಲ ಭಯಾನಕ ಪರಿಸ್ಥಿತಿಗಳ ಮಧ್ಯೆಯೂ ಏಳನೇ ತರಗತಿಯವರಿಗೆ ಕನ್ನಡ ಮಾಧ್ಯಮದಲ್ಲಿ ಓದಿದ ನಂತರ ಅಧ್ಯಯನಶೀಲ ಮನೋಧರ್ಮದ ಶೈಲಜಾ ಬಿ.ಎ., ಬಿ.ಎಡ್. ಮತ್ತು ಎಂ.ಎ. ಪದವಿಗಳನ್ನು ಖಾಸಗಿಯಾಗಿ ಓದಿ ಪಡೆದುಕೊಂಡರು.
1958ರಲ್ಲಿ ಗುಲ್ಬರ್ಗ ಕಾಲೇಜಿಗೆ ಉಪನ್ಯಾಸಕಿಯಾಗಿ ಸೇರುವ ಮೂಲಕ ವ್ಯಕ್ತಿ ಜೀವನಕ್ಕೆ ಪಾದಾರ್ಪಣೆ ಮಾಡಿದರು. ಗುಲ್ಬರ್ಗ ಸರ್ಕಾರಿ ಕಾಲೇಜು, ಮೈಸೂರು ಮತ್ತು ಬೆಂಗಳೂರಿನ ಮಹಾರಾಣಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸಿ 1991ರಲ್ಲಿ ನಿವೃತ್ತಿ ಹೊಂದಿದರು. ಶೈಲಜಾ ಉಡಚಣ ಅವರು 9ನೇ ತರಗತಿಯ ಎಳವೆಯಲ್ಲಿಯೇ ಸ್ಥಳೀಯ ಪತ್ರಿಕೆಗಳಿಗೆ ಹಲವಾರು ಪದ್ಯಗಳನ್ನು ಬರೆಯುವ ಹವ್ಯಾಸವನ್ನು ಇಟ್ಟುಕೊಂಡಿದ್ದರು. 1972ರಲ್ಲಿ ಇವರ ಮೊದಲ ಕವನ ಸಂಕಲನ ‘ಒಂದು ಗಳಿಗೆ’ ಪ್ರಕಟವಾಯಿತು. ಆ ನಂತರ ಹಿಂದಿರುಗಿ ನೋಡದ ಇವರು ‘ಸ್ವಗತ’, ‘ಕಪ್ಪು ನೆಲ ಸೊಕ್ಕಿದ ಸೂರ್ಯ’, ‘ತುಂತುರು ಹನಿಗಳು’, ‘ನನ್ನಂಥವರು’ ಮುಂತಾದ ಕವನ ಸಂಕಲನಗಳನ್ನು ಪ್ರಕಟಪಡಿಸಿದರು. 1977ರಲ್ಲಿ ‘ಕೇಳು ಮಗಾ’ ಎಂಬ ವಚನ ಸಂಕಲನವನ್ನು ಹೊರ ತಂದರು. ಹಿಂದಿ ಮತ್ತು ಮರಾಠಿ ಭಾಷೆಗೆ ಇವರ ಕೆಲವು ಕವಿತೆಗಳು ಅನುವಾದಗೊಂಡಿವೆ. ‘ವಚನಕಾರರ ದೃಷ್ಟಿಯಲ್ಲಿ ಸ್ತ್ರೀ’ ಎಂಬ ಪ್ರೌಢ ಪ್ರಬಂಧಕ್ಕಾಗಿ ಕರ್ನಾಟಕ ವಿಶ್ವವಿದ್ಯಾಲಯದಿಂದ 1977ರಲ್ಲಿ ಇವರಿಗೆ ಪಿ.ಎಚ್.ಡಿ. ಪದವಿಯು ದೊರೆಯಿತು. ‘ವಚನಗಳಲ್ಲಿ ಸತಿಪತಿ ಭಾವ’, ‘ನನ್ನ ಲೇಖನಗಳು’, ‘ವಚನ ಸಾಹಿತ್ಯ ಮತ್ತು ಮಹಿಳೆ’, ‘ಮೂರು ಮಾತು ನೂರು ನೀತಿ’, ‘ನಾನು ಮತ್ತು ಸಾಹಿತ್ಯ’, ‘ಕಾಲ ನಮ್ಮ ಕೈಯ್ಯಲ್ಲಿದೆ’ ಇತ್ಯಾದಿ ಇವರ ಬರಹಗಳ ಗದ್ಯಕೃತಿಗಳು. ‘ನುಡಿ ನೆರಳು’ ಅಮೃತಾ ಪ್ರೀತಮ್ ಅವರ ಅನುವಾದಿತ ಕೃತಿ. ಗುಲ್ಬರ್ಗದ ಜಿಲ್ಲಾಮಟ್ಟದ ಸಹಕಾರ ಬ್ಯಾಂಕ್ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಇವರಿಗೆ ರಾಷ್ಟ್ರೀಯ ಮಟ್ಟದ ಪುರಸ್ಕಾರ ದೊರೆತಿದೆ.
ದೆಹಲಿಯ ಮಹಿಳಾ ಆಯೋಗವು 1997ರಲ್ಲಿ ಇವರಿಗೆ ಅತ್ಯುತ್ತಮ ಸೇವಾ ಪುರಸ್ಕಾರ ನೀಡಿ ಗೌರವಿಸಿದೆ. ಕಲಬುರ್ಗಿ ಜಿಲ್ಲೆಯ ಮೂರನೆಯ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಯಶಸ್ವಿಯಾಗಿ ನಿರ್ವಹಿಸಿದ ಖ್ಯಾತಿ ಇವರದು. 1992ರಲ್ಲಿ ಕೊಪ್ಪಳದಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಭಾವೈಕ್ಯ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ನಿರ್ವಹಿಸಿದ್ದಾರೆ. ಇವರು ಮಾಡಿದ ಸಮಾಜ ಸೇವೆ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ಹಲವಾರು ಪ್ರಶಸ್ತಿ ಹಾಗೂ ಗೌರವಗಳು ಸಂದಿವೆ. ಅವುಗಳಲ್ಲಿ 1995ರಲ್ಲಿ ಮುಧೋಳದಲ್ಲಿ ನಡೆದ ಅಖಿಲ ಭಾರತ 66ನೇ ಸಾಹಿತ್ಯ ಸಮ್ಮೇಳನದಲ್ಲಿ ಗೌರವ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಅನುಪಮಾ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸರ್ಕಾರದ ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ ಇವು ಮುಖ್ಯವಾದವುಗಳು.
ಹೆಣ್ಣು ಮಕ್ಕಳಿಗೆ ಅಸ್ತಿತ್ವವೇ ಇಲ್ಲದ ಆ ಕಾಲದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ, ಸಮಾಜ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡು ತನ್ನ ಅಸ್ತಿತ್ವವನ್ನು ತಾನೇ ಕಂಡುಕೊಂಡ ಡಾ. ಶೈಲಜಾ ಉಡಚಣ ಇವರು ದಿನಾಂಕ 06 ಡಿಸೆಂಬರ್ 2010ರಲ್ಲಿ ಸಾಹಿತ್ಯ ಕ್ಷೇತ್ರ ಮತ್ತು ಸಾಮಾಜಿಕ ಕ್ಷೇತ್ರ ಮಾತ್ರವಲ್ಲದೆ ಈ ಲೋಕದಿಂದಲೇ ದೂರವಾದರು. ಅವರ ಜನ್ಮದಿನವಾದ ಇಂದು ಅವರ ಸಾಧನೆಯನ್ನು ಗೌರವಿಸುತ್ತಾ ಆ ಮಹಾನ್ ಚೇತನಕ್ಕೆ ಅಂತರಾಳದ ನಮನಗಳು.
– ಅಕ್ಷರೀ