ಸಾಹಿತ್ಯದ ಗೀಳು ಹಚ್ಚಿಕೊಳ್ಳುವುದು ಸುಲಭಸಾಧ್ಯವಾದ ಕೆಲಸವಲ್ಲ. ಭಾಷೆ, ಸಾಹಿತ್ಯದ ಹಿನ್ನೆಲೆ ಇರುವವರಿಗೆ ಅದು ಬಹಳ ಕಷ್ಟದ ಕೆಲಸವೂ ಅಲ್ಲ. ವೃತ್ತಿ ಜೀವನಕ್ಕೂ ಸಾಹಿತ್ಯಕ್ಕೂ ಹೊಂದಾಣಿಕೆ ಕಷ್ಟವಾಗಿದ್ದರೂ, ಸಾಹಿತ್ಯ ಲೋಕಕ್ಕೆ ಅನನ್ಯ ಕೊಡುಗೆ ನೀಡುವ ಮೂಲಕ ಸಾಧನೆ ಮಾಡಿದ ಅನೇಕರಲ್ಲಿ ನ್ಯಾಯವಾದಿ ಕೋಣನ ವೀರಣ್ಣ ಚೆನ್ನಬಸಪ್ಪನವರೂ ಒಬ್ಬರು.
ಚೆನ್ನಬಸಪ್ಪನವರು ಬಳ್ಳಾರಿ ಜಿಲ್ಲೆಯ, ಕೂಡ್ಲಿಗಿ ತಾಲೂಕಿನ, ಆಲೂರು ಮಜರಾ ಗ್ರಾಮದಲ್ಲಿ 1922 ಫೆಬ್ರವರಿ 27ರಂದು ಜನಿಸಿದರು. ತಂದೆ ಕೋಣನ ವೀರಣ್ಣ, ತಾಯಿ ಬಸಮ್ಮ. ಕೋ. ಚನ್ನಬಸಪ್ಪ ಇವರ ಹಿರಿಯರು ಕೋಣಗಳ ಮೇಲೆ ದವಸಧಾನ್ಯ, ದಿನಸಿಗಳನ್ನು ಹೇರಿಕೊಂಡು ವ್ಯಾಪಾರ ಮಾಡುತ್ತಿದ್ದುದರಿಂದ ಈ ಉಪನಾಮ ರೂಢಿಯಲ್ಲಿ ಬಂದಿದೆ.
ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ನಂತರ ಬಳ್ಳಾರಿಯಲ್ಲಿ ಪ್ರೌಢಶಾಲಾ ಶಿಕ್ಷಣ, ಅನಂತಪುರದಲ್ಲಿ ಕಾಲೇಜು ಶಿಕ್ಷಣ ಪಡೆದುಕೊಂಡರು. ದೇಶದಲ್ಲಿ ಸ್ವಾತಂತ್ರ್ಯದ ಹೋರಾಟ ಬಿರುಸಾಗಿ ನಡೆಯುತ್ತಿದ್ದ ಸಂದರ್ಭವದು. ಚೆನ್ನಬಸಪ್ಪನವರು ವಿದ್ಯಾರ್ಥಿ ಮುಖಂಡರಾಗಿ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ ಬಂಧನಕ್ಕೊಳಗಾಗಿ ಸೆರೆಮನೆ ವಾಸವನ್ನೂ ಅನುಭವಿಸಿದರು. ನಂತರ ಬೆಳಗಾವಿ ಕಾಲೇಜಿನಿಂದ ಕಾನೂನು ಪದವಿ, ಚರಿತ್ರೆ ಮತ್ತು ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡರು. ಮುಂದೆ ಕೋ. ಚೆ. ಯವರ ಹೋರಾಟದ ಕಿಚ್ಚು ಜೀವನದುದ್ದಕ್ಕೂ ಜ್ವಲಂತವಾಗಿತ್ತು. ನ್ಯಾಯವ್ಯಾದಿಗಳಾಗಿ ವೃತ್ತಿ ಪ್ರಾರಂಭಿಸಿದ ಇವರು ನ್ಯಾಯಮೂರ್ತಿಗಳಾಗಿ ನಿವೃತ್ತರಾದರು.
ಸಾಹಿತ್ಯದಲ್ಲಿ ಆಸಕ್ತಿಯನ್ನು ಪಡೆದಿದ್ದ ಇವರ ಬರಹಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಬಳ್ಳಾರಿಯಲ್ಲಿ ವಕೀಲಿವೃತ್ತಿಯಲ್ಲಿ ಇರುವಾಗಲೇ ‘ರೈತ’ ಪತ್ರಿಕೆಯನ್ನು ಆರಂಭಿಸಿದ್ದು, ಇದು ರೈತರ ಗೋಳಿಗೆ ಸಾಕ್ಷಿಯಾಯಿತು. ಪ್ರಸಿದ್ಧ ಹಾಸ್ಯ ಸಾಹಿತಿ ಬೀ. ಚಿ. ಯವರು ‘ಬೇವಿನಕಟ್ಟೆ ತಿಮ್ಮ’ ಎಂಬ ಸ್ಥಿರ ಶೀರ್ಷಿಕೆಯಡಿಯಲ್ಲಿ ಮೊತ್ತ ಮೊದಲು ಬರೆದದ್ದು ‘ರೈತ’ ಪತ್ರಿಕೆಯಲ್ಲಿ. 1944 ರಲ್ಲಿ ಚೆನ್ನಬಸಪ್ಪನವರ ‘ಯಾರಿಗಾಗಿ ?’ ಕಥೆ ಅಂದಿನ ಆಳರಸರ ವಿರುದ್ಧವಾಗಿದೆ ಎಂಬ ಕಾರಣದಿಂದ ಪ್ರಕಟಗೊಳ್ಳಲಿಲ್ಲ. 1951ರಲ್ಲಿ ಸ್ವಾತಂತ್ರ್ಯಾ ನಂತರ ಬರೆದ ‘ಮುಕ್ಕಣ್ಣನ ಮುಕ್ತಿ’ ಕಥೆಯು ಸರ್ಕಾರವನ್ನು ಟೀಕಿಸುವಂತಿದೆ ಎಂಬ ಕಾರಣಕ್ಕೆ ಧಾರವಾಡದ ಆಕಾಶವಾಣಿ ಕೇಂದ್ರ ಪ್ರಸಾರ ಮಾಡಲಿಲ್ಲ. ಇದರಿಂದ ಸಾಹಿತ್ಯ ಕ್ಷೇತ್ರದಲ್ಲಿ ಪ್ರಗತಿಶೀಲ ಸಾಹಿತ್ಯ ರಚನೆ ಮಾಡುವವರಿಗೆ ಪ್ರೋತ್ಸಾಹವಿಲ್ಲವೆಂಬುದು ಅವರಿಗರಿವಾಯಿತು. ಆದರೂ ತಮ್ಮ ಸಾಹಿತ್ಯ ಕೃಷಿಯನ್ನು ಮುಂದುವರಿಸಿಕೊಂಡು ಹೋದ ಧೀಮಂತ ಇವರು.
ಚೆನ್ನಬಸಪ್ಪನವರು ವೃತ್ತಿ ಜೀವನದಲ್ಲಿ ಎಷ್ಟು ಕಠೋರವಾಗಿದ್ದರೋ, ಅದಕ್ಕಿಂತ ಹೆಚ್ಚು ಸಮಾಜದ ಬಗ್ಗೆ ಮತ್ತು ಜನರ ಬಗ್ಗೆ ಕಾಳಜಿ, ಅನುಕಂಪ ಉಳ್ಳವರಾಗಿದ್ದರು. ಅವರೊಬ್ಬ ದೈವಭಕ್ತ, ಆಧ್ಯಾತ್ಮ ಚಿಂತಕ, ವೈಚಾರಿಕ ಪ್ರಜ್ಞೆ ಹಾಗೂ ವೈಜ್ಞಾನಿಕ ಮನೋಧರ್ಮವನ್ನು ಬೆಳೆಸಿಕೊಂಡ ಮಾನವತಾವಾದಿ. ಕಾವ್ಯ, ಕಥೆ, ಕಾದಂಬರಿ, ನಾಟಕ, ಜೀವನ ಚರಿತ್ರೆ, ವಿಮರ್ಶೆ, ಲೇಖನ, ಪ್ರವಾಸ ಕಥನ, ಆತ್ಮಕಥನ ಮತ್ತು ಅನುವಾದ ಹೀಗೆ ಎಲ್ಲ ಪ್ರಕಾರಗಳೂ ಸೇರಿ ಒಟ್ಟು ಇವರ 89 ಕೃತಿಗಳು ಪ್ರಕಟಗೊಂಡಿವೆ.
‘ಖಜಾನೆ’, ‘ಶ್ರೀ ರಾಮಾಯಣ ದರ್ಶನ ಮಹಾಕಾವ್ಯ ಸಮೀಕ್ಷೆ’, ‘ರಕ್ತ ತರ್ಪಣ’, ‘ನ್ಯಾಯಾಲಯದ ಸತ್ಯ ಕಥೆಗಳು’, ‘ಪ್ರಾಣ ಪಕ್ಷಿ’, ‘ಹೃದಯ ನೈವೇದ್ಯ’, ‘ದಿವಾನ್ ಬಹದ್ದೂರ್’, ‘ಶ್ರೀ ಮೃತ್ಯುಂಜಯ ಸ್ವಾಮಿಗಳು’, ‘ಶ್ರೀ ಅರವಿಂದರು’, ‘ಶ್ರೀ ಅರವಿಂದರು ಮತ್ತು ಅವರ ಆಶ್ರಮ’, ‘ಶ್ರೀ ರಾಮಕೃಷ್ಣ ಲೀಲಾ ನಾಟಕ’, ‘ರಾಮಕೃಷ್ಣರ ದೃಷ್ಟಾಂತ ಕಥೆಗಳು’, ‘ಬೆಳಕಿನೆಡೆಗೆ’, ‘ನಮಗೆ ಬೇಕಾದ ಸಾಹಿತ್ಯ’, ‘ನನ್ನ ಮನಸ್ಸು’, ‘ನನ್ನ ನಂಬುಗೆ’, ‘ಆ ಮುಖ ಈ ಮುಖ’ ಮತ್ತು ‘ಈ ರಾಜ್ಯದೊಡೆಯ ರೈತ’ ಇತ್ಯಾದಿ ಇವರ ಕೃತಿಗಳು. ಅರವಿಂದರ ಮಹಾಕಾವ್ಯ ‘ಡಿವೈನ್ ಲೈಫ್’ ಕೃತಿಯನ್ನು ಅನುವಾದಿಸಿ ಕುವೆಂಪು ಅವರ ಮೆಚ್ಚುಗೆಗೆ ಪಾತ್ರರಾದದು ಇವರ ಅನುವಾದದ ಸತ್ವಕ್ಕೆ, ಶ್ರೇಷ್ಠತೆಗೆ ಸಂದ ಗೌರವ.
‘ಗಡಿಪಾರು’ ‘ನಮ್ಮೂರ ದೀಪ’ ಮತ್ತು ‘ಗಾಯಕನಿಲ್ಲದ ಸಂಗೀತ’, ಇವು ಇವರ ಕಥಾ ಸಂಕಲನಗಳಾದರೆ, ‘ಸ್ವಾತಂತ್ರ್ಯ ಮಹೋತ್ಸವ’, ‘ಪ್ರಾಣ ಪಕ್ಷಿ’ ಮತ್ತು ‘ಜೀವ ತೀರ್ಥ’ ಇವು ಇವರ ಕವನ ಸಂಕಲನಗಳು.
ಫೆಬ್ರವರಿ 2013 ಆಗ ಚೆನ್ನಬಸಪ್ಪನವರಿಗೆ 92ನೇ ವಯಸ್ಸು. ವಿಜಾಪುರದಲ್ಲಿ ನಡೆದ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚನ್ನಬಸಪ್ಪನವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಈ ಆಯ್ಕೆ ಅವರ ಅನನ್ಯ ಸಾಹಿತ್ಯ ಸೇವೆ ಮತ್ತು ಅವರ ಮೇಲಿನ ಗೌರವಕ್ಕೆ ಸಾಕ್ಷಿಯಾಗಿದೆ.
ಕೋ. ಚೆನ್ನಬಸಪ್ಪನವರ ‘ಖಜಾನೆ’ಗೆ ಭಾರತ ಸರಕಾರದ ನೂತನ ಅಕ್ಷರಸ್ಥರ ಸಾಹಿತ್ಯ ಸ್ಪರ್ಧೆಯಲ್ಲಿ ಬಹುಮಾನ, ಶ್ರೀ ರಾಮಾಯಣ ದರ್ಶನ ಮಹಾಕಾವ್ಯ ಸಮೀಕ್ಷೆಗೆ ಕುವೆಂಪು ವಿದ್ಯಾವರ್ಧಕ ಟ್ರಸ್ಟಿನ ಪುರಸ್ಕಾರ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಉಗ್ರಾಣ ಪ್ರಶಸ್ತಿ, ಸ. ಸ. ಮಾಳವಾಡ ಪ್ರಶಸ್ತಿ, ಚಿಂತನ ಶ್ರೀ ಪ್ರಶಸ್ತಿ, ಸಂ.ಶಿ. ಭೂಸನೂರ ಮಠ ಪ್ರಶಸ್ತಿ, ಕನ್ನಡ ಶ್ರೀ ಪ್ರಶಸ್ತಿ ಮತ್ತು ವಿಶ್ವ ಮಾನವ ಪ್ರಶಸ್ತಿ ಇವು ಸಾಹಿತ್ಯ ಕ್ಷೇತ್ರದಲ್ಲಿ ಇವರು ಮಾಡಿದ ಅನನ್ಯ ಸಾಹಿತ್ಯ ಸೇವೆಗೆ ಸಂದ ಗೌರವ. ಸಾಹಿತಿಯಾಗಿ ಅಪೂರ್ವ ಸಾಧನೆ ಮಾಡಿದ ಕೋ. ಚೆ. ಯವರು ನಿವೃತ್ತರಾದ ನಂತರವೂ ಹಲವಾರು ಸಂಘ-ಸಂಸ್ಥೆ, ಸಮಿತಿ, ಸಾಹಿತ್ಯ ಅಕಾಡೆಮಿಗಳಲ್ಲಿ ಜವಾಬ್ದಾರಿಯತ ಕಾರ್ಯ ನಿರ್ವಹಿಸಿದ ಶ್ರೇಷ್ಠರು.
2019 ಫೆಬ್ರವರಿ 23ರಂದು ಒಬ್ಬ ಸೃಜನಶೀಲ ಸಾಹಿತಿ, ಶ್ರೇಷ್ಠ ನ್ಯಾಯಮೂರ್ತಿ, ಮಾನವತಾವಾದಿಯಾದ ಕೋ. ಚೆನ್ನಬಸಪ್ಪ ಇವರನ್ನು ನಾವು ಕಳೆದುಕೊಂಡಿದ್ದೇವೆ. ಆ ದಿವ್ಯ ಚೇತನಕ್ಕೆ ನೂರು ನೂರು ನಮನಗಳು