ಕುಮಾರ ಗಂಧರ್ವ ಇವರ ಮೂಲ ಹೆಸರು ಶಿವಪುತ್ರ ಕೊಂಕಾಳಿ ಮಠ. 8 ಏಪ್ರಿಲ್ 1924ರಲ್ಲಿ ಬೆಳಗಾವಿ ಜಿಲ್ಲೆಯ ಸುಳೇಭಾವಿಯಲ್ಲಿ ಜನಿಸಿದರು. ಸ್ವತಃ ತಂದೆ ಸಿದ್ದರಾಮಯ್ಯನವರೇ ಪ್ರಸಿದ್ಧ ಸಂಗೀತಗಾರರಾಗಿದ್ದುದು ಮಗ ಶಿವಪುತ್ರರ ಮೇಲೆ ಗಾಢವಾದ ಪ್ರಭಾವ ಬೀರಿತು. ಇವರದೊಂದು ಸಂಗೀತ ಪರಂಪರೆಯ ಕುಟುಂಬವೆಂದೇ ಹೇಳಬಹುದು. ಸೋದರಮಾವ ಕಲ್ಲಯ್ಯ ಸ್ವಾಮಿ ಅನೇಕ ನಾಟಕ ಕಂಪನಿಗಳಲ್ಲಿ ಗಾಯಕ ನಟ ಹಾಗೂ ಕಲಾವಿದರಾಗಿದ್ದರು. ಇವರು ಕುಮಾರ ಗಂಧರ್ವರರಿಗೆ ನಾಲ್ಕನೇ ವರ್ಷದ ಎಳವೆಯಲ್ಲಿಯೇ ಸಂಗೀತ ದೀಕ್ಷೆಯನ್ನು ನೀಡಿದರು. ಬಹಳ ಅದ್ಭುತವೆಂದರೆ ಕುಮಾರ ಗಂಧರ್ವರು ಐದನೆಯ ವರ್ಷದ ಎಳವೆಯಲ್ಲಿಯೇ ದಾವಣಗೆರೆಯಲ್ಲಿ ಪ್ರಥಮ ಕಚೇರಿ ನೀಡಿದರು. ಇದೊಂದು ವಿಶೇಷ ದಾಖಲೆ. ಆರು ವರ್ಷದ ಬಾಲಕನಿರುವಾಗ ಹಾಡಿದ ಸಂಗೀತವನ್ನು ಕೇಳಿ ಗುಲ್ಬರ್ಗ ಜಿಲ್ಲೆಯ ಗುರು ಕಲ್ಮಠದ ಶಾಂತವೀರ ಸ್ವಾಮಿಗಳು “ಓಹೋ ಇವನು ಕುಮಾರ ಗಂಧರ್ವ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅಲ್ಲಿಂದ ಆ ಹೆಸರೇ ಇವರಿಗೆ ಶಾಶ್ವತವಾಯಿತು. ಮಗನ ಪ್ರತಿಭೆಯೊಂದಿಗೆ ತಂದೆ ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಗದಗ ಹೀಗೆ ಕಾರ್ಯಕ್ರಮ ನೀಡುತ್ತಾ, ಕಲ್ಕತ್ತಾ, ಆಗ್ರಾ, ಕರಾಚಿ, ನಾಗಪುರವಾಗಿ ಮುಂಬೈಯವರೆಗೆ ಎಲ್ಲರಿಗೂ ಸಂಗೀತ ರಸದೌತಣವನ್ನು ಉಣ ಬಡಿಸಿದರು. ಆದರೆ ಪ್ರತಿಭೆಯಲ್ಲಿ ಸಂಸ್ಕಾರದ ಕೊರತೆಯನ್ನು ಕಂಡ ತಂದೆ ಸಿದ್ದರಾಮಯ್ಯನವರು ಮುಂಬೈಯ ಪ್ರೊ. ಬಿ.ಆರ್. ದೇವಧರರಲ್ಲಿ ಸಂಗೀತದ ಬಗೆಗಿನ ಹೆಚ್ಚಿನ ಕಲಿಕೆಗೆ ಮಗನನ್ನು ಸೇರಿಸಿದರು. ದೇವಧರರು ಗಂಧರ್ವರ ಪ್ರತಿಭೆಗೆ ಹೊಳಪನ್ನು ನೀಡಿ ವಿಕಸನಕ್ಕೆ ಅವಕಾಶ ಮಾಡಿಕೊಟ್ಟರು. ಗಂಧರ್ವರು ರಾಗಗಳನ್ನು ಗಮನವಿಟ್ಟು ಆಲಿಸಿ ತಿಳಿದಿದ್ದರೇ ಹೊರತು, ಕಲಿತು ತಿಳಿದಿರಲಿಲ್ಲ. ಈ ಕೊರತೆಯನ್ನು ದೇವಧರರು ನೀಗಿಸಿದರು ಮತ್ತು ಹತ್ತು ವರ್ಷಗಳವರೆಗೆ ಕುಮಾರ ಗಂಧರ್ವರು ದೇವಧರರಲ್ಲಿ ಸಂಗೀತದ ಅಭ್ಯಾಸವನ್ನು ಮಾಡಿದರು.
ಸಹಪಾಠಿ ಭಾನುಮತಿ ಕಂಸ ಅವರನ್ನು ವಿವಾಹವಾಗುವ ಮೂಲಕ ಗೃಹಸ್ಥಾಶ್ರಮಕ್ಕೆ ಕುಮಾರ ಗಂಧರ್ವರು ಪಾದಾರ್ಪಣೆ ಮಾಡಿದರು. ವಿವಾಹ ನಂತರ ಭಾನುಮತಿಯವರೂ ಕುಮಾರ ಗಂಧರ್ವರಲ್ಲಿ ಸಂಗೀತವನ್ನು ಮುಂದುವರಿಸಿದರು. 1947ರಲ್ಲಿ ಕುಮಾರ ಗಂಧರ್ವರ ಆರೋಗ್ಯದಲ್ಲಿ ಏರುಪೇರು ಕಂಡಿತು. ಪುಪ್ಪುಸದ ಕ್ಷಯ ರೋಗವೆಂದು ವೈದ್ಯರು ಹೇಳಿದಂತೆ ಒಂದು ಪಪ್ಪುಸವನ್ನೇ ತೆಗೆಯುವ ಪರಿಸ್ಥಿತಿ ಬಂದಿತು. ಗಂಡನ ಪರಿಸ್ಥಿತಿಯನ್ನು ಹೆಂಡತಿ ನೋಡಿ ಕಣ್ಣೀರು ಹಾಕಿದಾಗ “ಚಿಂತಿಸದಿರು, ನಾನು ಹಾಡದ ವಿನಹ ಸಾಯುವುದಿಲ್ಲ” ಎಂದು ಧೈರ್ಯದ ನುಡಿಗಳನ್ನಾಡಿದ ಧೈರ್ಯವಂತ ಕುಮಾರ ಗಂಧರ್ವರು. ಅನಾರೋಗ್ಯದ ಕಾರಣ ಹಾಡಲಾಗದಿದ್ದ ಸಂದರ್ಭದಲ್ಲಿ ಮನಸ್ಸಿನಲ್ಲಿ ಸಂಗೀತದ ಬಗ್ಗೆಯೇ ಆಲೋಚನೆ ಮಾಡುತ್ತಾ ಸಮಯ ಕಳೆಯುತ್ತಿದ್ದ ಇವರು ಮಾಳವ ದೇಶದ ಜಾನಪದ ಸಂಗೀತದ ಕಡೆಗೆ ಗಂಭೀರವಾಗಿ ತಮ್ಮ ಗಮನವನ್ನು ಹರಿಸಿದರು. ಬಹಳಷ್ಟು ಲೋಕ ಗೀತೆಗಳನ್ನು ಸಂಗ್ರಹಿಸಿ, ಅಸ್ತಿತ್ವದಲ್ಲಿದ್ದ ರಾಗಗಳಿಗೆ ಕೆಲವು ಸರಿ ಹೊಂದುವುದನ್ನು ಗಮನಿಸಿ, ಸರಿ ಹೊಂದದೆ ಇರುವುದಕ್ಕೆ ಹೊಸದಾದ ರಾಗ ರೂಪವನ್ನು ಕಂಡುಹಿಡಿದರು. ಲೋಕ ಸಂಗೀತ ಮತ್ತು ಶಾಸ್ತ್ರೀಯ ಸಂಗೀತಗಳ ಜೋಡಣೆ ಕುಮಾರ ಗಂಧರ್ವರ ಒಂದು ವಿಶಿಷ್ಟ ಕೊಡುಗೆ. ಆಡದಿದ್ದರೂ ಸಂಗೀತದ ರಾಗಗಳ ಬಗ್ಗೆ ಹೆಚ್ಚು ಅನುಭವ ಪಡೆದ ಇವರು ಅನಾರೋಗ್ಯವು ತನಗೆ ಒಂದು ವರವಾಯಿತೇಂದೇ ಹೇಳುತ್ತಿದ್ದರು. ಅನಾರೋಗ್ಯಕ್ಕೆ ತುತ್ತಾಗುವ ಮೊದಲು ಸಂಗೀತವನ್ನು ಕಂಠಪಾಠ ಮಾಡಿ ಅಭಿವ್ಯಕ್ತಗೊಳಿಸುತ್ತಿದ್ದ ಇವರು ಅನಾರೋಗ್ಯ ತನ್ನ ಒಳಗಿನ ಪ್ರತಿಭೆಯನ್ನು ಹೊರಬರಲು ಅವಕಾಶ ಮಾಡಿಕೊಟ್ಟಿತು ಎನ್ನುತ್ತಾರೆ. ಆದ್ದರಿಂದಲೇ ಅವರ ಸಂಗೀತವನ್ನು ಕಲಾರಾಧಕರು ಅಷ್ಟೊಂದು ಮೆಚ್ಚಿಕೊಳ್ಳುತ್ತಿದ್ದರು. ಕುಮಾರ ಗಂಧರ್ವರ ಮೊದಲನೆಯ ಪುತ್ರ ಮುಕುಲ್ ಸಂಗೀತ ಕ್ಷೇತ್ರದಲ್ಲಿ ಅನನ್ಯ ಸಾಧನೆ ಮಾಡಿದ ಕುಮಾರ ಗಂಧರ್ವರು ಇನ್ನೇನು ಸಂಗೀತ ಕಚೇರಿ ಆರಂಭಿಸಬೇಕು ಎನ್ನುವಷ್ಟರಲ್ಲಿ ಅವರ ಪತ್ನಿ ಭಾನುಮತಿಯವರು ಎರಡನೆಯ ಪುತ್ರ ಯಶೋವರ್ಧನ್ ನಿಗೆ ಜನ್ಮ ನೀಡಿ ಇಹವನ್ನು ತ್ಯಜಿಸಿದರು.
ಪತ್ನಿಯ ನಿಧನದ ನಂತರ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ವಸುಂಧರಾ ಶ್ರೀಖಂಡ್ರೆಯವರನ್ನು ವಿವಾಹವಾದರು. ಇವರ ಪುತ್ರಿಯೇ ಪ್ರಸಿದ್ಧ ಗಾಯಕಿ ಕಲಾಪಿನಿ ಕೋಮ್ಕಲಿ. 12 ಜನವರಿ 1958ರಲ್ಲಿ ಅಲಹಾಬಾದಿನ ಪ್ಯಾಲೇಸ್ ಥಿಯೇಟರ್ ಏಳು ವರ್ಷಗಳ ನಂತರ ಕುಮಾರ ಗಂಧರ್ವರ ಪ್ರಥಮ ಕಚೇರಿಗಾಗಿ ಸುಂದರ ವ್ಯವಸ್ಥೆಯೊಂದಿಗೆ ಸಿದ್ಧವಾಗಿತ್ತು. ಗಂಧರ್ವರಿಗೆ ಈ ಅಲಹಾಬಾದಿನ ವೇದಿಕೆ ಸಂಗೀತ ಯಾತ್ರೆಯಲ್ಲಿ ಅತ್ಯಂತ ಮಹತ್ವದ್ದಾಗಿತ್ತು. ಏಕೆಂದರೆ ಗಂಧರ್ವರು 12 ವರ್ಷದವರಿದ್ದಾಗ ಅಖಿಲ ಭಾರತ ಸಂಗೀತ ಸಮ್ಮೇಳನದಲ್ಲಿ ಹಾಡಿ ಪ್ರಸಿದ್ಧರಾದದ್ದು ಅಲಹಾಬಾದಿನಲ್ಲಿಯೇ. ಕಚೇರಿಯಲ್ಲಿ ನೆರೆದ ಸಂಗೀತ ಕಲಾ ರಾಧಕರು, ಕುಮಾರ ಗಂಧರ್ವರ ಭಿನ್ನವಾದ ಶೈಲಿಯ ಗಾಯನವನ್ನು ತೆರೆದ ಮನಸ್ಸಿನಿಂದ ಸ್ವೀಕರಿಸಿದರು. ಈ ರೀತಿಯಾಗಿ ಸಂಗೀತ ಕ್ಷೇತ್ರದಲ್ಲಿ ಮರು ಹುಟ್ಟನ್ನು ಪಡೆದವರು ಕುಮಾರ ಗಂಧರ್ವರು.
ಸಂಗೀತದಲ್ಲಿ ಕುಮಾರ ಗಂಧರ್ವರ ಸೃಜನಶೀಲ ಉತ್ತಮ ಅಂಶಗಳು ಇತರ ಘರಾಣೆಯ ಗಡಿಗಳನ್ನು ಮೀರಿತ್ತು ಎಂಬುದು ಸಂಗೀತ ಜ್ಞಾನಿಗಳ ಉಕ್ತಿ. ಕುಮಾರ ಗಂಧವರು ಹನ್ನೆರಡು ರಾಗಗಳನ್ನು ಸೃಷ್ಟಿಸಿದ್ದಾರೆ. ಎಲ್ಲಾ ರಾಗಗಳನ್ನೂ ಕಚೇರಿಗಳಲ್ಲಿ ಹಾಡಿ ಶ್ರೋತೃಗಳು ತಲೆದೂಗುವಂತೆ ಮಾಡಿದ್ದಾರೆ. ಸೂರದಾಸ್, ಕಬೀರದಾಸ್ ಮುಂತಾದ ಸಂತ ಕವಿಗಳ ಭಜನೆಗಳನ್ನು ರಚನೆಕಾರ ವ್ಯಕ್ತಿತ್ವಕ್ಕೆ ಸರಿದೂಗುವಂತೆ ರಾಗಗಳನ್ನು ಆಯ್ಕೆ ಮಾಡಿ ಭವನನಾತ್ಮಕವಾಗಿ ಹಾಡುತ್ತಿದ್ದ ಖ್ಯಾತಿ ಗಂಧರ್ವರದ್ದು. ತಮ್ಮ 10 ವರ್ಷಗಳ ಸಂಶೋಧನೆಯ ಫಲವಾಗಿ ಕುಮಾರ ಗಂಧರ್ವರು 1965ರಲ್ಲಿ ‘ಅನೂಪ ರಾಗ ವಿಲಾಸ’ ಎಂಬ ಕೃತಿಯನ್ನು ಬರೆದು ಪ್ರಕಟಿಸುವ ಮೂಲಕ 18ನೇ ಶತಮಾನದ ವಾಗ್ಗೇಯಕಾರರ ಸಾಲಿಗೆ ಸೇರುವ ಗೌರವ ಪಡೆದರು. ಕುಮಾರ ಗಂಧರ್ವರು ಬರೇ ರಾಗಗಳ ಸೃಷ್ಟಿಕರ್ತರಾಗಿರುತ್ತಿದ್ದರೆ ಸಾಮಾನ್ಯ ಸೃಷ್ಟಿಕರ್ತರಲ್ಲಿ ಒಂದಾಗಿ ಹೋಗುತ್ತಿದ್ದರು. ಸಂಗೀತದ ಬಗ್ಗೆ ಅವರು ಹೊಂದಿದ್ದ ಅನನ್ಯ ಜ್ಞಾನದಿಂದಾಗಿ ಭಾವನಾತ್ಮಕವಾಗಿ ಅನುಭವಿಸಿ ಹಾಡುವುದರೊಂದಿಗೆ ಆ ರಾಗಗಳನ್ನು ಜೀವಂತವಾಗಿಡುವಲ್ಲಿ ಗಂಧರ್ವರು ಸಫಲರಾಗಿದ್ದರು. ಚಿರಪರಿಚಿತವಾದ ರಾಗಗಳು ಅವರ ಅಭಿವ್ಯಕ್ತಿಯಲ್ಲಿ ಸಂಗೀತಾಸಕ್ತರ ಮನಸ್ಸನ್ನು ಮುದಗೊಳಿಸುತ್ತಿದ್ದವು.
ಕುಮಾರ ಗಂಧವರು ಸಂಗೀತ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ದೊರೆತಿವೆ. 1992ರಲ್ಲಿ ಮಧ್ಯಪ್ರದೇಶ ಸರ್ಕಾರವು ಸಂಗೀತ ಕ್ಷೇತ್ರದ ಅತ್ಯುತ್ತಮ ಪ್ರತಿಭೆಗಳಿಗಾಗಿ ‘ಕುಮಾರ್ ಗಂಧರ್ವ ಸಮ್ಮಾನ್’ ರಾಷ್ಟ್ರೀಯ ಗೌರವವನ್ನು ಸ್ಥಾಪಿಸಿತು. ಭಾರತ ಸರ್ಕಾರದ ಚಲನಚಿತ್ರ ವಿಭಾಗವು ಕುಮಾರ ಗಂಧರ್ವರ ಕುಟುಂಬ ಮತ್ತು ವಿವಿಧ ಜನರೊಂದಿಗೆ ಸಂದರ್ಶನ ಮಾಡಿದ 78 ನಿಮಿಷಗಳ ‘ಹ್ಯಾನ್ಸ್ ಅಕೇಲಾ’ ಎಂಬ ಸಾಕ್ಷ್ಯ ಚಿತ್ರವನ್ನು ನಿರ್ಮಾಣ ಮಾಡಿದೆ.
‘ಮುಕ್ಕಂ ವಾಶಿ’ ಎಂಬ ತಲೆ ಬರಹದಡಿಯಲ್ಲಿ ಎರಡು ದಿನಗಳ ಕಾರ್ಯಗಾರ ನಡೆದು, ತಳಮಟ್ಟದಿಂದ ಸಂಗ್ರಹಿಸಿದ ಸಂಗೀತ ಸ್ವರೂಪದ ಬಗ್ಗೆ ಗಂಧರ್ವದ ಆಲೋಚನೆಗಳ ಸಾರವನ್ನು ಹೊಂದಿದ ಪುಸ್ತಕವೇ ‘ಮುಕ್ಕಂ ವಾಶಿ’. ಉಜ್ಜಯಿನಿಯ ವಿಕ್ರಮ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದ ಗಂಧರ್ವರು ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಪದ್ಮಭೂಷಣ ಪ್ರಶಸ್ತಿ ಮತ್ತು ಕಾಳಿದಾಸ ಸಮ್ಮಾನ್ ಇತ್ಯಾದಿಗಳಿಗೆ ಭಾಜನರಾಗಿದ್ದಾರೆ. 1992 ಜನವರಿ 12ರಂದು ಕುಮಾರ ಗಂಧರ್ವರು ಇಹಲೋಕಕ್ಕೆ ವಿದಾಯ ಹೇಳಿದಾಗ ದೇಶದಾದ್ಯಂತ ನೂರಾರು ಸಂಗೀತ ಪ್ರಿಯರ ಸಮ್ಮುಖದಲ್ಲಿ ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯಸಂಸ್ಕಾರ ನಡೆಯಿತು. ತಮ್ಮ ನೈಜ ಪ್ರತಿಭೆಯಿಂದ ಸಂಗೀತ ಲೋಕವನ್ನು ಶ್ರೀಮಂತಗೊಳಿಸಿ ಅಮರರಾದ ಕುಮಾರ ಗಂಧರ್ವರ ಚೇತನಕ್ಕೆ ಅನಂತ ನಮನಗಳು.
–ಅಕ್ಷರೀ