ಕನ್ನಡ ಸಾಹಿತ್ಯ ಲೋಕದಲ್ಲಿ ಎಂ. ಎಸ್. ಕೆ. ಪ್ರಭು ಎಂದು ಚಿರಪರಿಚಿತರಾದವರು ಮಂದಗೆರೆ ಸೀತಾರಾಮಯ್ಯ ಕೇಶವ ಪ್ರಭು. ತಂದೆ ಸೀತಾರಾಮಯ್ಯ ಹಾಗೂ ತಾಯಿ ಸೀತಮ್ಮ. ಸ್ವತಃ ತಾವೇ ಹಾಡುಗಳನ್ನು ರಚಸುತ್ತಿದ್ದ ತಾತ, ಕುಮಾರವ್ಯಾಸ ಭಾರತದ ಪದ್ಯಗಳನ್ನು ರಾಗಬದ್ಧವಾಗಿ ಹಾಡುತ್ತಿದ್ದ ತಂದೆ ಇವರೆಲ್ಲ ಬಾಲ್ಯದಲ್ಲಿಯೇ ಎಂ. ಎಸ್. ಕೆ. ಯವರಿಗೆ ಸ್ಪೂರ್ತಿಯಾಗಿದ್ದರು.
ಎಂ. ಎಸ್. ಕೆ.ಯವರು ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ, ಮೈಸೂರಿನಲ್ಲಿ ಪ್ರೌಢ ಶಿಕ್ಷಣ, ಮೈಸೂರು ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರದಲ್ಲಿ ಪ್ರಥಮ ದರ್ಜೆಯ ಸ್ನಾತಕೋತ್ತರ ಪದವಿಯನ್ನು ಪಡೆದರು. ಪ್ರಥಮವಾಗಿ ಬೆಂಗಳೂರಿನ ಅಕೌಂಟೆಂಟ್ ಜನರಲ್ ರವರ ಕಛೇರಿಯ ಉದ್ಯೋಗದ ಮೂಲಕ ವೃತ್ತಿ ಜೀವನಕ್ಕೆ ಪಾದರ್ಪಣೆ ಮಾಡಿದ ಇವರು 1961 ರಿಂದ 1977ರವರೆಗೆ ಕಾರ್ಯನಿರ್ವಹಿಸಿ, ಮುಂದೆ ಯು. ಪಿ. ಎಸ್. ಸಿ. ಪರೀಕ್ಷೆಯಲ್ಲಿ ತೇರ್ಗಡೆಗೊಂಡು ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಹಣಾ ಅಧಿಕಾರಿಗಳಾಗಿ ಆಯ್ಕೆಯಾದರು. ಬೆಂಗಳೂರು, ಧಾರವಾಡ, ಭದ್ರಾವತಿ ಇತ್ಯಾದಿ ಆಕಾಶವಾಣಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಿ 1996ರಲ್ಲಿ ನಿವೃತ್ತಿ ಹೊಂದಿದರು. ತಮ್ಮ ಅಗಾಧ ಸ್ಮರಣಾ ಶಕ್ತಿಯಿಂದಾಗಿ ನೋಡಿದ್ದನ್ನು, ಕೇಳಿದ್ದನ್ನು ಮನಸ್ಸಿನಾಳಕ್ಕೆ ಇಳಿಸಿಕೊಳ್ಳುವ ಸಾಮರ್ಥ್ಯ ಇದ್ದ ಪ್ರಭುಗಳು ಬಾಲ್ಯದಲ್ಲಿ ಹಳ್ಳಿಯಲ್ಲಿ ರಾತ್ರಿ ಪೂರ್ತಿ ನಡೆಯುತ್ತಿದ್ದ ನಾಟಕಗಳನ್ನು ನೋಡಿ ಅದೇ ರೀತಿ ನಟಿಸಿ ತೋರಿಸುವ ನಟನಾ ಕೌಶಲ್ಯವನ್ನು ಇವರು ಪಡೆದಿದ್ದರು.
ಅವರಿಗಿದ್ದ ಈ ಎಲ್ಲಾ ಪ್ರತಿಭೆಗಳ ಕಾರಣದಿಂದಾಗಿ ಆಕಾಶವಾಣಿಯಲ್ಲಿ ಸೇವೆಗೆ ಸೇರಿದ ನಂತರ ಪ್ರಭು ಅವರ ‘ಕುರಿತೇಟು’ ನಾಟಕವು ನಾಟಕ ಸ್ಪರ್ಧೆಯಲ್ಲಿ ‘ಸರ್ಟಿಫಿಕೇಟ್ ಆಫ್ ಮೆರಿಟ್’ ಗಳಿಸಿತು. ಗಿರೀಶ್ ಕಾರ್ನಾಡರ ‘ಮಾನಿಷಾದ’ ನಾಟಕವನ್ನು ಇವರು ಇಂಗ್ಲಿಷಿಗೆ ಭಾಷಾಂತರಗೊಳಿಸಿದ್ದು, ಅದು ಆಕಾಶವಾಣಿಯ ವಾರ್ಷಿಕ ಸ್ಪರ್ಧೆಯಲ್ಲಿ ಪ್ರವೇಶ ಪಡೆದುಕೊಂಡಿತು. ಪ್ರಭುಗಳು ಇಷ್ಟೇ ಅಲ್ಲದೆ ಹಲವಾರು ಶಬ್ದ ಚಿತ್ರಗಳನ್ನು ನಿರ್ಮಿಸಿದರು. ಐನ್ ಸ್ಟೀನರ ‘ಸಂಸಾರಾಲಯ’ ಮತ್ತು ‘ಅವತಾರ’ ಇವುಗಳಲ್ಲಿ ಮುಖ್ಯವಾದವುಗಳು. ‘ಬೆತ್ತಲೆ ಅರಸನ ರಾಜ್ಯ ರಹಸ್ಯ’, ‘ಮುಖಾಬಿಲೆ’, ‘ವಿದೇಶಿ ಕಥೆಗಳು’ ಮತ್ತು ‘ಕಾಣೆಯಾದ ಟೋಪಿ’ ಇವು ಇವರ ಕಥಾಸಂಕಲನಗಳು. ಬಾಲ್ಯದಿಂದಲೇ ಅಭಿನಯ ಆಸಕ್ತಿ ಇದ್ದ ಪ್ರಭುಗಳು ‘ಬಕ’ ನಾಟಕ ಸಂಕಲನ ಅದೇ ರೀತಿ ‘ತಪ್ಪಿಸಿಕೊಂಡಿದ್ದಾರೆ’, ‘ಕಡೇಗಲ್ಲಿ ಕಡೇ ಮನೆ’ ಎಂಬ ಇನ್ನೆರಡು ನಾಟಕಗಳ ರಚನೆಯನ್ನು ಮಾಡಿದ್ದಾರೆ. ಪ್ರಸಿದ್ದ ನಾಟಕಕಾರ ಆಯನೆಸ್‌ಕೋ ರಚನೆಯ ‘ಲರ್ವಾಸ್ ಮುರ್’ ನಾಟಕದ ರೂಪಾಂತರವೇ ‘ಮಹಾಪ್ರಸ್ಥಾನ’ ಇದರ ಕರ್ತು ಎಂ. ಎಸ್. ಕೆ. ಪ್ರಭು. ರೋಮಿನ ದೊರೆ ಸಿಸಿರೋನ ಇತಿಹಾಸಕ್ಕೆ ಸಂಬಂಧಿಸಿದ ಘಟನೆಗಳನ್ನಾಧರಿಸಿ ರಚಿಸಿದ ನಾಟಕ ‘ಸಿಸಿರೋ’ ಇದೂ ಪ್ರಕಟಗೊಂಡಿದೆ. ‘ಮುಸ್ಸಂಜೆಯಲ್ಲಿ ನಡೆದ ಘಟನೆಯು’, ನಾಟಕ ಕ್ಷಿತಿಜ ಸಂಚಿಕೆಯಲ್ಲಿ ಮತ್ತು ‘ಶಬ್ದಕ್ಕಂಜಿದೊಡೆಂತಯ್ಯಾ’ ನಾಟಕ ಕರ್ಮವೀರ ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟಗೊಂಡಿದೆ. ‘ಗುಲಾಮನ ಸ್ವಾತಂತ್ರ್ಯಯಾತ್ರೆ’, ‘ಒಳ್ಳೆಯ ಸಮಯ ಮತ್ತು ಇತರ ನಾಟಕಗಳು’ ಇವೆರಡು ಪ್ರಭುಗಳ ನಿಧನ ನಂತರ 2002ರಲ್ಲಿ ಪ್ರಕಟಗೊಂಡಿವೆ.
ಪ್ರಭುಗಳಿಗೆ ಪತ್ತೆದಾರಿ ಕಥೆಗಳ ಬಗ್ಗೆಯೂ ವಿಶೇಷ ಒಲವಿತ್ತು. ಇವರು ‘ಫ್ಯಾಂಟಸಿ’ ಮತ್ತು ‘ವಿರೋಧವಿಲಾಸ’ ಬರಹಗಳನ್ನು ಪ್ರಕಟಪಡಿಸಿದರು. ‘ವಿರೋಧವಿಲಾಸ’ದಲ್ಲಿನ ಬರಹಗಳು ಹಾಸ್ಯ ಲೇಖನಗಳಾಗಿದ್ದರೂ, ಚಿಂತನೆಗೆ ಒರೆಹಚ್ಚುವಂತಹಾ ಬರಹಗಳಾಗಿವೆ. ‘ಫ್ಯಾಂಟಿಸಿ’ ಎಂಬುದು ಒಂದು ಪ್ರಬಂಧ ಸಾಹಿತ್ಯ.
‘ಎಲ್ಲರ ಮೂಗಿನ ಕತೆ’ ಮತ್ತು ಪತ್ತೆದಾರಿ ಕಥೆಗಳ ಸಂಗ್ರಹ ‘ಶೋಧ’ ಹಾಗೂ ಮಕ್ಕಳಿಗಾಗಿ ‘ಪೋಕರಿ ಪಾಪಣ್ಣನ ಪರಾಕು’ ಇವು ಇತರರೊಡನೆ ಸೇರಿ ಸಂಪಾದಿಸಿದ ಕೃತಿಗಳು.
ಅವರ ಗೆಳೆಯರು ಸೇರಿ ‘ಫ್ಯಾಂಟಿಸಿ ಪ್ರಭು’ ಎಂಬ ಕೃತಿಯನ್ನು ರಚಿಸಿ ಪ್ರಕಟಗೊಳಿಸಿದ್ದಾರೆ.’ ಎಂ. ಎಸ್. ಕೆ. ಪ್ರಭು ಇವರು ಪ್ರಸಿದ್ಧ ಕಾದಂಬರಿಕಾರರಾದ ಎಸ್. ಎಲ್. ಭೈರಪ್ಪನವರ ಬರಹಗಳ ಮೊದಲ ಓದುಗರಾಗಿದ್ದರು. ಪ್ರಭುಗಳು ಕರ್ನಾಟಕದಲ್ಲಿ ನಡೆಯುತ್ತಿದ್ದ ಸಾಹಿತ್ಯ ಮತ್ತು ಸಾಂಸ್ಕೃತಿಕ ಬೆಳವಣಿಗೆಗಳನ್ನು ಭೈರಪ್ಪನವರಿಗೆ ತಿಳಿಸುತ್ತಿದ್ದರು. ಭೈರಪ್ಪನವರು ತಮ್ಮ ಆತ್ಮ ವೃತ್ತಾಂತವಾದ ‘ಭಿತ್ತಿ’ಯಲ್ಲಿ ತಮ್ಮಿಬ್ಬರ ಒಡನಾಟದ ಬಗ್ಗೆ, ಸಾಹಿತ್ಯ ಚರ್ಚೆಗಳ ಬಗ್ಗೆ ಹೀಗೆ ಹಂಚಿಕೊಂಡಿದ್ದಾರೆ. “ಗುಜರಾತ್ ಮತ್ತು ದಿಲ್ಲಿಯಲ್ಲಿದ್ದಾಗ ಕನ್ನಡ ಸಾಹಿತ್ಯವನ್ನು ಚರ್ಚಿಸಲು ನನಗೆ ಬೇರೆ ಯಾರೂ ಇರಲಿಲ್ಲ. ಕರ್ನಾಟಕಕ್ಕೆ ಬರುವುದೆಂದರೆ ಪ್ರಭುವಿನೊಂದಿಗೆ ಚರ್ಚಿಸುವುದು, ಕೆಲ ದಿನಗಳನ್ನು ಕಳೆಯುವುದು ಮುಖ್ಯ ಉದ್ದೇಶವಾಗಿರುತ್ತಿತ್ತು. ನನ್ನ ತಲೆಯಲ್ಲಿ ಮೊಳಕೆಯೊಡೆಯುತ್ತಿದ್ದ ವಸ್ತುಗಳನ್ನು ಹೇಳುವುದರಿಂದ ಹಿಡಿದು ಎಷ್ಟೋ ಸಾಹಿತ್ಯ ಸಮಸ್ಯೆಗಳನ್ನು ಅವರೊಂದಿಗೆ ಚರ್ಚಿಸುತ್ತಿದ್ದೆ. ಸ್ವತಃ ಸೃಜನಶೀಲ ಪ್ರತಿಭೆ ಇರುವ ಅವರು ನನ್ನ ಕಥೆಯ ವಸ್ತು, ಪಾತ್ರಗಳ ಅಂತರಂಗವನ್ನು ಹೊಕ್ಕು ಅರಿತು ಸಲಹೆ ಸೂಚನೆಗಳನ್ನೂ ಕೊಡುತ್ತಿದ್ದರು.” ಇದು ಅವರಿಬ್ಬರ ಮಧ್ಯೆ ಇದ್ದ ಸಾಹಿತ್ಯ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ.
ಇವರ ರಚನೆಯ ‘ಬಕ’ ನಾಟಕಕ್ಕೆ ‘ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’ ಮತ್ತು ‘ವರ್ಧಮಾನ ಉದಯೋನ್ಮುಖ ಪ್ರಶಸ್ತಿ’ ದೊರೆತಿದೆ. ಸಿಸಿರೋ ನಾಟಕಕ್ಕೆ ‘ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’ ಮತ್ತು ‘ಕುರಿತೇಟು’ ನಾಟಕಕ್ಕೆ ಆಕಾಶವಾಣಿಯ ವಾರ್ಷಿಕ ಪ್ರಶಸ್ತಿ ಹೀಗೆ ಹಲವಾರು ಬಹುಮಾನ, ಪ್ರಶಸ್ತಿ, ಗೌರವದ ಸನ್ಮಾನಗಳು ಎಂ. ಎಸ್. ಕೆ. ಪ್ರಭು ಅವರ ಸೃಜನಶೀಲ ವ್ಯಕ್ತಿತ್ವ ಹಾಗೂ ಚಿಂತನಶೀಲ ಬರಹಗಳಿಗೆ ಸಂದಿವೆ. ಪ್ರಭುಗಳು ಪ್ರಶಸ್ತಿ, ಗೌರವ, ಪ್ರಚಾರದ ಹಿಂದೆ ಬಿದ್ದವರಲ್ಲ. ಆದ್ದರಿಂದಲೇ ಶ್ರೇಷ್ಠ ಮಟ್ಟದ ಬೌದ್ಧಿಕ, ಚಿಂತನಶೀಲ, ಸೃಜನಶೀಲ ಬರಹಗಳು ಅವರ ಲೇಖನಿಯಿಂದ ಮೂಡಿ ಬಂದರೂ, ಅವುಗಳಿಗೆ ಸಲ್ಲಬೇಕಾದ ಪ್ರಶಸ್ತಿ ಗೌರವಗಳು ದೊರೆಯದಿದ್ದಾಗ ಅವರು ಕೊರಗಲಿಲ್ಲ.
ದೃಶ್ಯಮಾಧ್ಯಮವಾದ ನಾಟಕ ಕ್ಷೇತ್ರವನ್ನು ತನ್ನ ಅನನ್ಯ ಬರಹಗಳ ಮೂಲಕ ಶ್ರೀಮಂತಗೊಳಿಸಿದ ಸಾಹಿತಿ ಎಂ. ಎಸ್. ಕೆ. ಪ್ರಭು ಇವರು 15 ಜುಲೈ 1938ರಲ್ಲಿ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲೂಕಿನ ಮಂದಗೆರೆ ಎಂಬ ಗ್ರಾಮದಲ್ಲಿ ಜನಿಸಿ, 25 ಜನವರಿ 2000 ಇಸವಿಯಲ್ಲಿ ಸಾಹಿತ್ಯ ಲೋಕಕ್ಕೆ ವಿದಾಯ ಹೇಳಿದರು.
ಮಂದಗೆರೆ ಸೀತಾರಾಮಯ್ಯ ಕೇಶವ ಪ್ರಭು ಇವರ ಜನ್ಮದಿನವಾದ ಇಂದು ಅವರು ನಮ್ಮ ನಡುವೆ ಇಲ್ಲದಿದ್ದರೂ, ಅವರು ಮಾಡಿದ ಸಾಹಿತ್ಯಸೇವೆಗಾಗಿ ಅವರನ್ನು ಸ್ಮರಿಸೋಣ.
-ಅಕ್ಷರೀ