ಮಮತಾ ಜಿ. ಸಾಗರ್ ಇವರು ಕವಯಿತ್ರಿ, ಅನುವಾದಕಿ ಮತ್ತು ಸುಂದರವಾದ ನಾಟಕಗಳನ್ನು ರಚಿಸುವವರು. 19 ಜನವರಿ 1966ರಲ್ಲಿ ಜನಿಸಿದ ಇವರ ತಂದೆ ಎನ್. ಗಿರಿರಾಜ್, ತಾಯಿ ಎಸ್. ಶೇಖರಿ ಬಾಯಿ. ಸ್ತ್ರೀವಾದ, ಭಾಷಾ ಮತ್ತು ಸಾಂಸ್ಕೃತಿಕ ವೈವಿಧ್ಯತೆಯ ಸುತ್ತಲಿನ ಸಮಸ್ಯೆಗಳೇ ಇವರ ಬರಹಗಳ ವಸ್ತು. ಕವಿತೆ ಗದ್ಯ ಮತ್ತು ವಿಮರ್ಶಾತ್ಮಕ ಬರಹಗಳನ್ನು ಕನ್ನಡ ಮತ್ತು ಇಂಗ್ಲೀಷಿಗೆ ಅನುವಾದಿಸುವ ಸೃಜನಶೀಲ ಅನುವಾದಕಿ.
ಇವರ ಕವನಗಳು ಅನೇಕ ಭಾಷೆಗೆ ಅನುವಾದಗೊಂಡಿದ್ದು, ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯ ಮತ್ತು ಕೇರಳ ವಿಶ್ವವಿದ್ಯಾಲಯಗಳು ಪಠ್ಯಪುಸ್ತಕಗಳಿಗೆ ಸೇರಿಸಿಕೊಂಡಿರುವುದು ಇವರ ಪ್ರೌಢ ಸಾಹಿತ್ಯ ರಚನೆಗೆ ಸಾಕ್ಷಿಯಾಗಿದೆ. ಇವರ ಕೆಲವು ಕವನಗಳಿಗೆ ವಾಸು ದೀಕ್ಷಿತ್ ಅವರು ಸಂಗೀತವನ್ನೂ ಅಳವಡಿಸಿದ್ದಾರೆ. ಹೈದರಾಬಾದಿನ ಕೇಂದ್ರೀಯ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ. ಪಡೆದು, ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿ, ಮಣಿಪಾಲದ ಸೃಷ್ಟಿ ಇನ್ಸ್ಟಿಟ್ಯೂಟ್ ಆಫ್ ಆರ್ಟ್, ಡಿಸೈನ್ ಆ್ಯಂಡ್ ಟೆಕ್ನಾಲಜಿಯಲ್ಲಿ ಶೈಕ್ಷಣಿಕ ಮತ್ತು ಸೃಜನಶೀಲ ಬರವಣಿಗೆಯ ಪ್ರಾಧ್ಯಾಪಕರಾಗಿದ್ದಾರೆ.
ದಿ ಹಿಂದು, ಬಿಸಿನೆಸ್ ಲೈನ್ ಮತ್ತು ಇಂಡಿಯನ್ ಎಕ್ಸ್ ಪ್ರೆಸ್ ನಂತಹ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಇವರಗಿದೆ. ಕಲೆ ಮತ್ತು ರಂಗಭೂಮಿಯ ವಿಮರ್ಶಕರಾಗಿ ಕಲಾವಿದರ ಸಂದರ್ಶನವನ್ನೂ ಮಾಡಿದ್ದಾರೆ. ಆರ್ಥಿಕವಾಗಿ ಹಿಂದುಳಿದ ಮುಸ್ಲಿಂ ಸಮುದಾಯದ ಹುಡುಗಿಯರಿಗಾಗಿ ಮಮತಾ ಅವರು ಸಂಯೋಜಿಸಿದ ನಾಟಕ ಕಮ್ಮಟದಲ್ಲಿ ಉರ್ದು ಭಾಷೆಯ ‘ಪರ್ದಾ’ ನಾಟಕ ಹುಟ್ಟಿಕೊಂಡಿತು. ಮೈಸೂರಿನಲ್ಲಿ 2001ರಲ್ಲಿ ನಡೆದ ರಾಷ್ಟ್ರೀಯ ರಂಗೋತ್ಸವದಲ್ಲಿ ಇದು ಪ್ರದರ್ಶನ ಕಂಡಿದೆ. ಪ್ರದರ್ಶನ ಕಾವ್ಯದತ್ತ ತಮ್ಮನ್ನು ತೊಡಗಿಸಿಕೊಂಡು ತಾವೇ ಸ್ಥಾಪಿಸಿದ ಕವಿಗಳ ಸಮುದಾಯದ ಒಂದು ಸಂಘಟನೆಯ ಅಡಿಯಲ್ಲಿ ‘ಕಾವ್ಯ ಸಂಜೆ’ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಬೆಂಗಳೂರಿನ ಸಾರ್ವಜನಿಕ ಸ್ಥಳಗಳಲ್ಲಿ ಕವನ ವಾಚನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರೊಂದಿಗೆ, ಸ್ಥಳೀಯ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕವಿಗಳೊಂದಿಗೆ ಆನ್ಲೈನ್ ಕವನ ವಾಚನ ಕಾರ್ಯಕ್ರಮಗಳನ್ನು ಆಯೋಜಿಸುವುದೂ ಇವರ ಹವ್ಯಾಸ.
ತಮ್ಮ ಕೃತಿಗಳ ಪದ್ಯಗಳನ್ನು ಒಳಗೊಂಡಿರುವ ಕವನ ಚಿತ್ರ ಸಂಕಲನ ನಿರ್ಮಿಸಿದ ಖ್ಯಾತಿ ಇವರದು. ಇವುಗಳು ಇಂಟರ್ವಶನ್ – 1, ಇಂಟರ್ವಶನ್ – 2, ಇಂಟರ್ವಶನ್ – 3 ಎಂಬ ತಲೆಬರಹದಲ್ಲಿ ಹೊರಬಂದಿವೆ. ತುಲನಾತ್ಮಕ ಸಾಹಿತ್ಯದಲ್ಲಿ ಪಿ.ಎಚ್.ಡಿ. ಪಡೆದ ಇವರು ತುಲನಾತ್ಮಕ ಸಾಹಿತ್ಯ, ಲಿಂಗ ಅಧ್ಯಯನ, ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಷಯಗಳ ಮೇಲೆ ಮಾಡುವ ಭಾಷಣದಲ್ಲಿ ಒಂದು ರೀತಿಯ ವಿಶೇಷತೆ ಇದೆ. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಮ್ಮೇಳನಗಳಲ್ಲಿಯೂ ಸಾಹಿತ್ಯ ಮತ್ತು ಮಹಿಳಾ ಸಮಸ್ಯೆಗಳ ಕುರಿತು ಮೌಲ್ಯಯುತ ಪ್ರಬಂಧಗಳನ್ನು ಮಂಡಿಸಿದ್ದಾರೆ. ಇವರು ರಚಿಸಿದ ಹಲವಾರು ಕವನ ಸಂಕಲನಗಳಲ್ಲಿ ‘ಕಾಡ ನವಿಲಿನ ಹೆಜ್ಜೆ’ ಇವರ ಚೊಚ್ಚಲ ಕವನ ಸಂಕಲನ. ಇದರ ಜೊತೆಗೆ ‘ನದಿಯ ನೀರಿನ ತೇವ’ ಎಂಬ ಕವನ ಸಂಕಲನವು ಪ್ರಮುಖವಾದವು. ಮಕ್ಕಳ ಸಂಗೀತ ನಾಟಕ ‘ಚುಕ್ಕಿ ಚುಕ್ಕಿ ಚಂದಕ್ಕಿ’ ಮತ್ತೊಂದು ‘ಮೈಯೆ ಭಾರ ಮನವೇ ಭಾರ’ ಕನ್ನಡ ನಾಟಕ ಆಂಗ್ಲ ಭಾಷೆಗೆ ಅನುವಾದಗೊಂಡು ‘ದಿ ಸ್ವಿಂಗ್ ಆಫ್ ಡಿಸೈರ್’ ಎಂಬ ತಲೆಬರಹದಲ್ಲಿ ಪ್ರಕಟಗೊಂಡಿದೆ ಇವು ಮಮತಾರ ಗಮನಾರ್ಹವಾದ ಎರಡು ಕೃತಿಗಳು.
ಇವರ ಸಜನಶೀಲ ಬರವಣಿಗೆಗೆ ಅದೆಷ್ಟೋ ಪುರಸ್ಕಾರ ಪ್ರಶಸ್ತಿಗಳು ದೊರೆತಿವೆ. ಅವುಗಳಲ್ಲಿ ಪ್ರಮುಖವಾದವು 2024ರಲ್ಲಿ ವಿಶ್ವ ಬರಹಗಾರರ ಸಂಸ್ಥೆಯಿಂದ ‘ವಿಶ್ವ ಸಾಹಿತ್ಯ ಪ್ರಶಸ್ತಿ’ ಮತ್ತು ಬ್ರಿಟಿಷ್ ಕೇಂದ್ರದ ಪೂರ್ವ ಆಂಗ್ಲಿಯ ವಿಶ್ವವಿದ್ಯಾಲಯ ‘ಚಾರ್ಲ್ಸ್ ಪ್ಯಾಲೇಸ್ ಇಂಡಿಯಾ ಟ್ರಸ್ಟ್’ ಸಾಹಿತ್ಯ ಅನುವಾದಕ್ಕಾಗಿ ಇವರಿಗೆ ಫೆಲೋಶಿಪ್ ನೀಡಿ ಗೌರವಿಸಿದೆ. ಯು.ಕೆ.ಯಲ್ಲಿ ‘ಸಂಚಿ ಹೊನ್ನಮ್ಮ’ ಕವನ ಮೆಚ್ಚುಗೆ ಪ್ರಶಸ್ತಿ ಮತ್ತು ‘ಭಾಷಾ ಭಾರತಿ ಅನುವಾದ ಪ್ರಶಸ್ತಿ’ಯನ್ನು 2019ರಲ್ಲಿ ಪಡೆದುಕೊಂಡಿದ್ದಾರೆ. ಕರ್ನಾಟಕ ಲೇಖಕಿಯರ ಸಂಘದ ‘ಗುಡಿಬಂಡೆ ಪೂರ್ಣಿಮಾ ದತ್ತಿ ಬಹುಮಾನ’, ಸಾಹಿತ್ಯಕ್ಕಾಗಿ ಕೇಂದ್ರ ಸರ್ಕಾರದ ಜೂನಿಯರ್ ಫೆಲೋಶಿಪ್, ಸಾಹಿತ್ಯದಲ್ಲಿ ಅತ್ಯುತ್ತಮ ಸಾಧನೆಗೆ ಕೊಡ ಮಾಡುವ ‘ಜಾಗತಿಕ ಸಾಹಿತ್ಯ ಪ್ರಶಸ್ತಿ’ ಇದು ಕನ್ನಡದ ಕವಯಿತ್ರಿಗೆ ದೊರೆತಿದೆ ಎಂಬುದು ಕನ್ನಡಿಗರಿಗೆ ಮಾತ್ರವಲ್ಲ ಭಾರತೀಯರಿಗೇ ಅಭಿಮಾನದ ವಿಷಯ. 2024ರಲ್ಲಿ ‘ಸಾಗರ್ ವರ್ಲ್ಡ್ ಆರ್ಗನೈಜೇಷನ್ ಆಫ್ ರೈಟರ್ಸ್’ ನೀಡುವ ಸಾಹಿತ್ಯ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.
ಸ್ವತಃ ಅನುವಾದಕಿಯಾಗಿರುವ ಮಮತಾ ಇವರ ಹೆಚ್ಚಿನ ಅನುವಾದಗಳು ಮತ್ತು ಬರಹಗಳು ಭಾರತೀಯ ಭಾಷಾ ಕಾವ್ಯದ ಓದುಗರ ಸಂಖ್ಯೆಯ ಹೆಚ್ಚಳಕ್ಕೆ ದಾರಿ ಮಾಡಿಕೊಟ್ಟಿದೆ. ಸಾಹಿತ್ಯ ಕ್ಷೇತ್ರದ ವಿವಿಧ ಆಯಾಮಗಳಲ್ಲಿ ಕೈಯಾಡಿಸಿ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಮಮತಾ ಜಿ. ಸಾಗರ್ ಅವರ ಲೇಖನಿಯಿಂದ ಇನ್ನಷ್ಟು ಸೃಜನಶೀಲ ಬರಹಗಳು ಹೊರಬರಲಿ ಎಂಬ ಆಶಯದೊಂದಿಗೆ.
– ಅಕ್ಷರೀ