ಮುಳಿಯ ತಿಮ್ಮಪ್ಪಯ್ಯನವರು ಬಂಟ್ವಾಳ ತಾಲೂಕಿನ ವಿಟ್ಲದಲ್ಲಿ ಸಾವಿರದ 1888 ಮಾರ್ಚ್ 3 ರಂದು ಜನಿಸಿದರು. ಇವರ ತಂದೆ ಮುಳಿಯ ಕೇಶವ ಭಟ್ಟ ಹಾಗೂ ತಾಯಿ ಮೂಕಾಂಬಿಕ ಅಮ್ಮ. ವಿಟ್ಲ ಸೀಮೆಯಲ್ಲಿ ವಿಟ್ಲದರಸರಿಗೆ ಸರಿಸಾಟಿಯಾಗಿ ಮುಳಿಯರ ಕುಟುಂಬದ ಶ್ರೀಮಂತಿಕೆ, ಪ್ರಭಾವಾಗಳಿದ್ದು, ‘ಮುಳಿಯದರಸು’ಗಳು ಎಂದೇ ಹೆಸರಾಗಿದ್ದ ಶ್ರೀಮಂತ ಕುಟುಂಬ ಇವರದ್ದಾಗಿತ್ತು. ಕಾಲ ಕ್ರಮೇಣ ಆಸ್ತಿ ಪಾಸ್ತಿಗಳೆಲ್ಲ ಕರಗಿಹೋಗಿ ಇವರು ಹುಟ್ಟುವಾಗ ಕುಟುಂಬ ಕಡು ಬಡತನಕ್ಕೆ ತುತ್ತಾಗಿತ್ತು. ಆದ್ದರಿಂದ ಇವರ ವಿದ್ಯಾಭ್ಯಾಸ ನಾಲ್ಕನೇ ತರಗತಿಗೆ ನಿಂತು ಹೋಯಿತು. ಕನ್ನಡವನ್ನು ಸ್ವತಂತ್ರವಾಗಿ ಓದುತಿದ್ದ ತಿಮ್ಮಪ್ಪಯ್ಯನವರು ಆಗ ವಿಟ್ಲಸೀಮೆಯಲ್ಲಿ ಪ್ರಸಿದ್ಧ ವಿದ್ವಾಂಸರಾಗಿದ್ದ ಕಲ್ಲಜೆ ಕೃಷ್ಣ ಶಾಸ್ತ್ರಿಗಳಲ್ಲಿ ಸಂಸ್ಕೃತದ ಅಧ್ಯಯನ ಮಾಡಿದರು.
1906ರಲ್ಲಿ ತಮ್ಮ 18ನೇ ವಯಸ್ಸಿನಲ್ಲಿ ಯಾರಿಗೂ ಹೇಳದೆ ಮನೆಯನ್ನು ತೊರೆದು ಕೇರಳದ ತಿರುವನಂತಪುರಕ್ಕೆ ಹೋಗಿ ಸಂಸ್ಕೃತದಲ್ಲಿ ಹೆಚ್ಚಿನ ಅಧ್ಯಯನ ಮಾಡಿದರು. ಅಲ್ಲಿಂದ ಮತ್ತೆ ಮೈಸೂರಿಗೆ ಹೋಗಿ ವಾರಾನ್ನದ ಮೂಲಕವೇ ಜೀವನ ನಡೆಸಿದರು. ಆ ಮೊದಲೇ ಅಲ್ಪಸ್ವಲ್ಪ ಸಂಗೀತ ಅಭ್ಯಾಸ ಮಾಡಿದ್ದ ಮುಳಿಯರು ಮೈಸೂರು ವಾಸುದೇವ ಆಚಾರ್ಯರ ಶಿಷ್ಯರಾಗಿ ಸಂಗೀತ ಶಿಕ್ಷಣವನ್ನು ಪಡೆದರು. ಇವರು ಸುಶ್ರಾವ್ಯ ಕಂಠದಿಂದ ಹಾಡುತಿದ್ದ ಕಾರಣ ಮುಂದೆ ಅವರಿಗೆ ‘ಕೋಗಿಲೆ ತಿಮ್ಮಪ್ಪಯ್ಯ’ ಎಂಬ ಅಡ್ಡಹೆಸರು ಬಂದಿತ್ತು ಮಾತ್ರವಲ್ಲದೆ ಕನ್ನಡ ಕೋಗಿಲೆ ಎಂಬ ಪತ್ರಿಕೆಯನ್ನು ನಡೆಸುತಿದ್ದುದು ಇದಕ್ಕೆ ಕಾರಣವಾಗಿತ್ತು. 1910ರಲ್ಲಿ ಮೈಸೂರಿನ ವಿದ್ಯಾಭ್ಯಾಸ ಮುಗಿಸಿ ಮನೆಗೆ ಹಿಂದಿರುಗಿದರು. ಹೀಗೆ ಹಿಂದಿರುಗಿ ಬಂದವರು ರಾಮಾಯಣ, ಮಹಾಭಾರತದ ಕಾವ್ಯಗಳ ಓದು ಮತ್ತು ದಾಸರ ಪದಗಳನ್ನು ಹಾಡುವುದನ್ನು ತಮ್ಮ ವೃತ್ತಿ ಜೀವನವನ್ನಾಗಿ ಮಾಡಿಕೊಂಡರು. 1916ರಲ್ಲಿ ತಿಮ್ಮಪ್ಪಯ್ಯನವರ ಮದುವೆ ದೇವಕಿಯೋಡನೆ ನಡೆಯಿತು. ದೇವಕಿಯವರು ಕರೋಪಾಡಿ ಗ್ರಾಮದ ಮಹಾಬಲ ಭಟ್ಟರ ಮಗಳಾಗಿದ್ದರು. ಹಾರ್ಮೋನಿಯಂನಲ್ಲಿ ಶ್ರುತಿಯನ್ನು ಇಟ್ಟು ಗಮಕ ಶೈಲಿಯಲ್ಲಿ ಹಾಡುವುದನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇವರೇ ಮೊದಲು ಪ್ರಾರಂಭಿಸಿದವರು. ತಿಮ್ಮಪ್ಪಯ್ಯನವರು ಯಕ್ಷಗಾನ ತಾಳಮದ್ದಳೆಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡರು. ಕವಿಭೂಷಣ ಕೆ. ಪಿ. ವೆಂಕಪ್ಪ ಶೆಟ್ಟರು ಆಗಿನ ಪ್ರಸಿದ್ಧ ಅರ್ಥಧಾರಿಗಳಾಗಿದ್ದು ತಿಮ್ಮಪ್ಪಯ್ಯನವರ ವಿದ್ವತ್ತು ಹಾಗೂ ವಾಗ್ವೈಖರಿಗೆ ಮೆಚ್ಚಿ ಮಂಗಳೂರಿನ ಕೆನರಾ ವಿದ್ಯಾಸಂಸ್ಥೆಗಳ ಸ್ಥಾಪಕರಿಗೆ ಇವರನ್ನು ಪರಿಚಯಿಸಿಕೊಟ್ಟರು ಹಾಗೆ 1911ರಲ್ಲಿ ಕೆನರಾ ಹೈಸ್ಕೂಲಿನ ಕನ್ನಡ ಪಂಡಿತರಾಗಿ ಅಧ್ಯಾಪಕ ಹುದ್ದೆಗೆ ನಿಯೋಜನೆಗೊಂಡರು. ಈಗ ತಿಮ್ಮಪ್ಪಯ್ಯನವರ ಬದುಕು ಒಂದು ನೆಲೆಯನ್ನು ಕಂಡಿತು. ಇಲ್ಲಿಂದ ಅವರ ಸಾಹಿತ್ಯ ರಚನೆ ಆರಂಭವಾಯಿತು. ಮುಂದೆ ಸೈಂಟ್ ಆಲೋಶಿಯಸ್ ಕಾಲೇಜಿನಲ್ಲಿ ಕನ್ನಡ ಪಂಡಿತ ಸ್ಥಾನವನ್ನು ಅಲಂಕರಿಸಿ 30 ವರ್ಷಗಳ ಕಾಲದ ಸೇವೆಯ ನಂತರ 1948ರಲ್ಲಿ ನಿವೃತ್ತಿ ಹೊಂದಿದರು. ಕನ್ನಡ ಮತ್ತು ಸಂಸ್ಕೃತದಲ್ಲಿ ಅಗಾಧ ಜ್ಞಾನಪಡೆದಿದ್ದ ತಿಮ್ಮಪ್ಪಯ್ಯನವರಿಗೆ ಇಂಗ್ಲೀಷ್ ಬರುತ್ತಿರಲಿಲ್ಲ. ತಮ್ಮ ಸೇವಾ ಅವಧಿಯಲ್ಲಿ ಇಂಗ್ಲೀಷ್ ಶಬ್ದಗಳನ್ನು ಉಪಯೋಗಿಸದ ಇವರು ‘ಶಿರಸ್ತ್ರಾಣ’ ಎಂಬ ಕನ್ನಡ ಶಬ್ಧಕ್ಕೆ ‘ಹೆಲ್ಮೆಟ್’ ಎಂಬ ಇಂಗ್ಲೀಶ್ ಶಬ್ದದ ಅರ್ಥವನ್ನು ಕೊಡುವ ಮೂಲಕ ಸುದ್ದಿ ಮಾಡಿದರು. ಸರಳ ಸಜ್ಜನರಾಗಿದ್ದ ಮುಳಿಯ ತಿಮ್ಮಪ್ಪಯ್ಯನವರು ಒಬ್ಬ ಸಾತ್ವಿಕ ವ್ಯಕ್ತಿಯಾಗಿದ್ದರು. ಇವರು 1910ಕ್ಕೂ ಮೊದಲೇ ‘ಅಜೋದಯ’ವೆಂಬ ವಾರ್ಧಕ ಷಟ್ಪದಿಯನ್ನು ಮತ್ತು ‘ಸೂರ್ಯಕಾಂತಿ ಕಲ್ಯಾಣ’ ಎಂಬ ಯಕ್ಷಗಾನ ಪ್ರಸಂಗವನ್ನು ರಚಿಸಿದರು. ‘ಕವಿರಾಜಮಾರ್ಗ ವಿವೇಕ’ವನ್ನು ಬರೆದವರು ನೃಪತುಂಗ ಅಲ್ಲ, ಬದಲಾಗಿ ಜಯಾಳ್ವನೆಂದು ಕಾವ್ಯದ ಒಳಗಿರುವ ಸಾಕ್ಷಿಗಳಿಂದಲೇ ಮೊಟ್ಟಮೊದಲು ತೋರಿಸಿಕೊಟ್ಟವರು ಮುಳಿಯ ತಿಮ್ಮಪ್ಪಯ್ಯನವರು. ಅವರ ರಚನೆಯ ಬೃಹತ್ ಗ್ರಂಥ ‘ನಾಡೋಜ ಪಂಪ’ದಿಂದಾಗಿ ಅವರಿಗೆ ಪ್ರಸಿದ್ಧಿ ಬಂದಿತು. ಪೇಜಾವರ ಭೋಜರಾಯರ ಜೊತೆ ಸೇರಿ 1914ರಲ್ಲಿ ‘ಕನ್ನಡ ಕೋಗಿಲೆ’ ಎಂಬ ಸಾಹಿತ್ಯಿಕ ಮಾಸಪತ್ರಿಕೆಯನ್ನು ಆರಂಭಿಸಿದರು. ಆದರೆ ಮತ್ತೆ ತಲೆ ತೋರಿದ ಆರ್ಥಿಕ ಅಡಚಣೆಯಿಂದಾಗಿ ಐದು ವರ್ಷಗಳವರೆಗೆ ಪತ್ರಿಕೆಯನ್ನು ನಡೆಸಿ 1919ರಲ್ಲಿ ಅದನ್ನು ನಿಲ್ಲಿಸಿಬಿಟ್ಟರು. ಬಹಳ ಮೇಧಾವಿಯಾದ ಇವರು ‘ಚಂದ್ರಾವಳಿ ವಿಳಾಸ’ವೆಂಬ ಹಳೆಗನ್ನಡ ಗದ್ಯ ಕಾವ್ಯವನ್ನು ‘ಅಜೋದಯ’ ಮತ್ತು ‘ಸೊಬಗಿನ ಬಳ್ಳಿ’ ಎಂಬ ಕಾವ್ಯವನ್ನು ರಚನೆ ಮಾಡಿದರು. ‘ಹಗಲಿರುಳು’ ಇವರ ರಚನೆಯ ನಾಟಕ ಕೃತಿ. ‘ಸೂರ್ಯಕಾಂತಿ ಕಲ್ಯಾಣ’ ಎಂಬ ಯಕ್ಷಗಾನ ಪ್ರಸಂಗ ಇವರಿಂದ ರಚಿತವಾದದ್ದು. ‘ಪಶ್ಚಾತ್ತಾಪ’ ಮತ್ತು ‘ಪ್ರೇಮ ಪಾಶ’ ಇವರ ಸಾಮಾಜಿಕ ಕಾದಂಬರಿ ಹಾಗೂ ‘ವೀರ ಬಂಕೆಯ’ ಇವರ ಐತಿಹಾಸಿಕ ಕಾದಂಬರಿ. ‘ಸಾಹಿತ್ಯ ಸರೋವರ’ ಇದೊಂದು ಲಕ್ಷಣ ಗ್ರಂಥ. ‘ನಾಡೋಜ ಪಂಪ’ ಇವರ ಸಂಶೋಧನಾ ಕೃತಿ. ‘ಆದಿಪುರಾಣ ಸಂಗ್ರಹ’, ‘ಸಮಸ್ತ ಭಾರತ ಸಾರ’, ‘ಪಾರ್ತಿಸುಬ್ಬ’ ಮತ್ತು ‘ಕವಿರಾಜ ಮಾರ್ಗ ವಿವೇಕ’ ಇದರ ಭಾಗ-1 ಮತ್ತು ಭಾಗ 2 ಇವೆಲ್ಲ ಮುಳಿಯ ತಿಮ್ಮಪ್ಪಯ್ಯನವರು ಸಂಪಾದಿಸಿದ ಕೃತಿಗಳು. ‘ತ್ರಿಪುರದಾಹ’, ‘ನಡತೆಯ ಹಾಡು’, ‘ಬಡ ಹುಡುಗಿ’, ‘ನವನೀತ ರಾಮಾಯಣ’, ‘ಕನ್ನಡ ನಾಡೂ ದೇಸಿ ಸಾಹಿತ್ಯವೂ’ ಇವು ಇವರ ಇತರ ಬರಹಗಳು.
1931ರಲ್ಲಿ ಕಾರವಾರದಲ್ಲಿ ಜರುಗಿದ ‘ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ’ಕ್ಕೆ ತಿಮ್ಮಪ್ಪಯ್ಯನವರನ್ನು ಅಧ್ಯಕ್ಷರನ್ನಾಗಿ ಮಾಡಿ ಗೌರವಿಸಿದ್ದು ಮತ್ತು 1941ರಲ್ಲಿ ಲಕ್ಷ್ಮೇಶ್ವರದಲ್ಲಿ ನಡೆದ ‘ಪಂಪನ ಸಹಸ್ರ ಸಂವತ್ಸರಿಕ ಉತ್ಸವ’ಕ್ಕೆ ತಿಮ್ಮಪ್ಪಯ್ಯನವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು ಇವರ ಸಾಹಿತ್ಯ ಸೇವೆಗೆ ಸಂದ ಗೌರವ.
ಕನ್ನಡಕ್ಕೆ ಬಹುಆಯಾಮಗಳಲ್ಲಿ ಕೊಡುಗೆ ನೀಡಿದ ಮುಳಿಯ ತಿಮ್ಮಪ್ಪಯ್ಯನವರು 1948ರಲ್ಲಿ ನಿವೃತ್ತರಾಗಿ ಅನಾರೋಗ್ಯದ ಕಾರಣ ಮಂಗಳೂರನ್ನು ತೊರೆದು ಪೆರ್ಲದಲ್ಲಿದ್ದ ತಮ್ಮ ಮಗನ ಮನೆಯಲ್ಲಿ ಕೆಲಕಾಲವಿದ್ದು ಮತ್ತೆ ಮದ್ರಾಸಿನಲ್ಲಿದ್ದ ಹಿರಿಯಮಗ ಕೇಶವ ಭಟ್ಟರ ಮನೆಯಲ್ಲಿ 15 ಜನವರಿ 1950ರಲ್ಲಿ ಇಹವನ್ನು ತ್ಯಜಿಸಿದರು.
Subscribe to Updates
Get the latest creative news from FooBar about art, design and business.