ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಎಂ. ರಾಮರೆಡ್ಡಿ ಮತ್ತು ಮಂಗಳಮ್ಮ ಇವರ ಸುಪುತ್ರಿಯೇ ಸುಪ್ರಸಿದ್ಧ ಕಾದಂಬರಿಗಾಗಿ ಅನಸೂಯ ರಾಮರೆಡ್ಡಿ. ಇವರ ಹುಟ್ಟೂರು ಚಿತ್ರದುರ್ಗದ ಬಳಿಯ ತುರುವನೂರು. ಇವರ ಕುಟುಂಬ ಸ್ವಾತಂತ್ರ್ಯ ಹೋರಾಟಗಾರರ ಮನೆತನಕ್ಕೆ ಸಂಬಂಧಪಟ್ಟ ಕಾರಣ ಮನೆಯಲ್ಲಿ ಕಾಂಗ್ರೆಸ್ ನೇತಾರೊಂದಿಗೆ ನಡೆಯುತ್ತಿದ್ದ ಚರ್ಚೆ, ಅನಸೂಯ ಅವರ ಮೇಲೆ ಪ್ರಭಾವ ಬೀರಿ, ಗಾಂಧೀಜಿಯವರ ಆದರ್ಶಗಳಿಗೆ ಮಾರುಹೋಗಿ ಜೀವನದಲ್ಲಿ ಅದನ್ನು ರೂಢಿಸಿಕೊಂಡರು.
ಪುಟ್ಟ ಊರಾದ ತುರುವ ನೂರಿನ ಶಾಂತ ವಾತಾವರಣ, ಅಲ್ಲಿಯ ಜನರ ಸರಳ ಜೀವನ, ಸರಳ ವಿವಾಹ, ಚರಕದಲ್ಲಿ ನೂಲು ತೆಗೆಯುವುದು, ರಾಷ್ಟಾಭಿಮಾನ ಇವುಗಳ ಮಧ್ಯೆ ಬೆಳೆದ ಅನಸೂಯರಿಗೆ ಸಮರ್ಪಣಾ ಭಾವ ಮೈಗೂಡಿಕೊಂಡಿತ್ತು. ಒಂದು ಕಡೆ ಸ್ವಾತಂತ್ರ್ಯ ಹೋರಾಟದ ಚರ್ಚೆ, ಮನೆಯಲ್ಲಿದ್ದ ಹಿರಿಯ ಹೆಣ್ಣು ಜೀವಿಗಳಾದ ತಾಯಿ ಅಜ್ಜಿ ಮುತ್ತಜ್ಜಿಯರು ಆಧ್ಯಾತ್ಮವನ್ನೇ ಗುರಿಯಾಗಿಸಿಕೊಂಡು ನಡೆಸುತ್ತಿದ್ದ ಜೀವನ, ಕವಿ ಬೆಳಗೆರೆ ಚಂದ್ರಶೇಖರ ಶಾಸ್ತ್ರಿಗಳು ಗುರುಗಳಾಗಿ ದೊರೆತದ್ದು, ಬೆಳಗೆರೆ ಜಾನಕಮ್ಮನ ಸ್ನೇಹ ಇಂಥ ಪರಿಸರದಲ್ಲಿ ಓದುವ ಹವ್ಯಾಸ ಅನಸೂಯರಿಗೆ ತನ್ನಿಂದ ತಾನೇ ಒಗ್ಗಿಹೋಯಿತು. ವ್ಯಾಯಾಮ, ಯೋಗ, ಈಜು, ಸೈಕಲ್ ಸವಾರಿ, ಸಂಗೀತ, ಹಿಂದಿ, ಸಾಹಿತ್ಯ ಕೂಡ ಇವರಿಗೆ ಬಹು ಪ್ರಿಯವಾದ ಹವ್ಯಾಸವಾಗಿತ್ತು. ಶಾಲೆಯ ಓದಿನ ಜೊತೆಗೆ ಹಿಂದಿ ರಾಷ್ಟ್ರಭಾಷಾ ವಿಶಾರದ ಪರೀಕ್ಷೆಯಲ್ಲಿ ತೇರ್ಗಡೆ ಆದ ಕಾರಣ ಮದುವೆಯ ನಂತರ ಚಿತ್ರದುರ್ಗದ ಬಾಲಕಿಯರ ಮಾಧ್ಯಮಿಕ ಶಾಲೆಯಲ್ಲಿ ಹಿಂದಿ ಶಿಕ್ಷಕಿಯ ಹುದ್ದೆಯನ್ನು ಪಡೆದರು. ಮೈಸೂರಿನ ಮಹಾರಾಣಿ ಶಿಕ್ಷಕರ ತರಬೇತಿ ಶಾಲೆಯಿಂದ ಟಿ.ಸಿ.ಎಚ್. ಟ್ರೈನಿಂಗ್ ಮತ್ತು ವಿಶ್ವವಿದ್ಯಾಲಯದಿಂದ ಬಿ.ಎ ಮತ್ತು ಎಂ.ಎ ಪದವಿಗಳನ್ನು ಪಡೆದರು. ಅನಸೂಯ ರಾಮ ರೆಡ್ಡಿ ಅವರ ಚೊಚ್ಚಲ ಕೃತಿ ‘ಗುರು ಗೋವಿಂದ ಸಿಂಹರ ಜೀವನ ಚರಿತ್ರೆ’ ಚೊಚ್ಚಲ ಕೃತಿ ಮತ್ತು ‘ದೇವಿಯ ದರ್ಶನ’ ಮೊದಲ ಕಾದಂಬರಿ. ಚಲನಚಿತ್ರ ನಿರ್ಮಾಪಕ ಚಂದುಲಾಲ್ ಜೈನ್ ರಿಂದ ಚಲನಚಿತ್ರವಾಗಿ ತೆರೆಗೆ ಬಂದು ಅಪಾರ ಮೆಚ್ಚುಗೆಯನ್ನು ಪಡೆದ ಕಾದಂಬರಿ ‘ಮಮತೆಯ ಮಡಿಲು’. 1965 ರಿಂದ 95 ರ ಅವಧಿಯವರೆಗೆ 17 ಕಾದಂಬರಿಗಳನ್ನು ರಚಿಸಿದರು. ಕುಲದೀಪಕ, ಪ್ರತೀಕ್ಷೆ, ಈಚಲುಮರ, ಹರಿಗೋಲು, ಬೆಳಕಿನಬಳ್ಳಿ, ಮಧುರತರಂಗ, ಮಂದಾನಿಲ, ಮೂರು ದಾರಿ, ಒಡೆದ ಹಾಲು, ಪಂಜರ, ಮಡಿಲ ಮೊಗ್ಗು, ತೆರೆಗಳು, ಸಂಭಾವಿತರು ಮತ್ತು ಅಂತ್ಯ ಇವೇ ಮೊದಲಾದ ಕಾದಂಬರಿಗಳು. ‘ದಾರಿತೋರಿದ ದೇವಿಯರು ಮತ್ತು ಇತರ ಕಥೆಗಳು’ ಇದು ಸಣ್ಣ ಕಥೆಗಳ ಸಂಗ್ರಹ. ಹಿಂದಿಯ ಪ್ರಸಿದ್ಧ ಲೇಖಕ ಪ್ರೇಮ್ ಚಂದ್ ಇವರ ‘ಬಂಧಿಯ ಬಿಡುಗಡೆ ಮತ್ತು ಇತರ ಕಥೆಗಳು’ ಅನುವಾದ ಕಥಾಸಂಕಲನ. ಇಷ್ಟೇ ಅಲ್ಲದೆ ಸಾಹಿತ್ಯದ ವಿವಿಧ ಆಯಾಮಗಳಲ್ಲಿ ಕೈಯಾಡಿಸಿದ ಅನಸೂಯ ರಾಮರೆಡ್ಡಿಯವರು ಕುಟುಂಬ ಯೋಜನೆಯ ವಸ್ತುವನ್ನೊಳಗೊಂಡ ‘ಮನೆಗೆ ಮೂರು ಮಾಣಿಕ್ಯ’ ಮತ್ತು ‘ಮುತ್ತಿನ ಹಾಗೆ ಎರಡು’ ಎಂಬ ಎರಡು ನಾಟಕಗಳು ಮತ್ತು ಸುಮಾರು 30 ಕವಿತೆಗಳನ್ನು ರಚಿಸಿದ್ದಾರೆ. 1875ರಲ್ಲಿ ಕರ್ನಾಟಕ ಸರಕಾರದ ಕುಟುಂಬ ಯೋಜನಾ ಇಲಾಖೆ ನಡೆಸಿದ ಸ್ಪರ್ಧೆಯಲ್ಲಿ ‘ಮುತ್ತಿನ ಹಾಗೆ ಎರಡು’ ಎಂಬ ನಾಟಕ ಕೃತಿಯು ಪ್ರಥಮ ಬಹುಮಾನವನ್ನು ಪಡೆದಿದೆ. ‘ಪಂಜರ’ ಎಂಬ ಕಾದಂಬರಿಗೆ 1983 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಲ್ಲಿಕಾ ದತ್ತಿ ನಿಧಿ ಬಹುಮಾನ ದೊರೆತಿದೆ. ‘ಪನ್ನಾ’ ಎಂಬ ಜನಪ್ರಿಯ ಆಕಾಶವಾಣಿಯಿಂದ ಪ್ರಸಾರಗೊಂಡಿದೆ. ಅನಸೂಯ ರಾಮ ರೆಡ್ಡಿ ಅವರಿಗೆ ಸಾಹಿತ್ಯದ ಬಗ್ಗೆ ಅಪಾರ ಒಲವಿತ್ತು ಮತ್ತು ಕುತೂಹಲವೂ ಇತ್ತು. ಇದೇ ಕುತೂಹಲದಿಂದ ಕರ್ನಾಟಕ ಲೇಖಕಿಯ ಸಂಘವು ಲೇಖಕಿಯರ ಭೇಟಿಗೆ ವೇದಿಕೆ ಒದಗಿಸಿದಾಗ, ನಿರಂತರವಾಗಿ ಸಮಕಾಲಿನ ಲೇಖಕರನ್ನು ಭೇಟಿಯಾಗುತ್ತಿದ್ದರು.
ಶ್ರದ್ದೆ ಆಸಕ್ತಿಯಿಂದ ಸಾಹಿತ್ಯ ಕ್ಷೇತ್ರದ ವಿವಿಧ ಆಯಾಮಗಳಲ್ಲಿ ಸಾಹಿತ್ಯ ರಚನೆ ಮಾಡಿ ವಾಚಕರಿಗೆ ನೀಡಿದ ಅನಸೂಯಾ ರಾಮ ರೆಡ್ಡಿಯವರು 1929 ಡಿಸೆಂಬರ್ 25ರಂದು ಜನಿಸಿ , 28 ಸಪ್ಟೆಂಬರ್ 2000ದಂದು ಇಹವನ್ನು ತ್ಯಜಿಸಿದರು.
ಅಗಲಿದ ಆತ್ಮಕ್ಕೆ ಅನಂತ ನಮನಗಳು.

ಬಿಂದಿಯಾ ಸಿನ್ಹ
ಬೆಂಗಳೂರು.
