ಮುದವಾದ ತಂಪೆರೆವ ಸಂಜೆಯ ವಾತಾವರಣದಲ್ಲಿ ರಂಗದ ಮೇಲೆ ಮುದ್ದಾದ ಹಕ್ಕಿಗಳ ಚಿಲಿಪಿಲಿ. ಪುಟಾಣಿ ಹೆಜ್ಜೆಗಳ ಕಲರವ. ಬಣ್ಣ ಬಣ್ಣದ ವಸ್ತ್ರಾಲಂಕಾರದಲ್ಲಿ, ದೇವಕನ್ನಿಕೆಯರಂತೆ ಶೋಭಿಸುವ ಉದ್ದನೆಯ ಕುಚ್ಚಿನ ಹೆರಳು, ಮಲ್ಲಿಗೆಯ ಮುಡಿಯಲ್ಲಿ ಆಭರಣ ಭೂಷಿತ ಉದಯೋನ್ಮುಖ ನೃತ್ಯ ವಿದ್ಯಾರ್ಥಿಗಳು ಪರಮೋತ್ಸಾಹದಿಂದ ಗೆಜ್ಜೆ ಕಟ್ಟಿ ನರ್ತಿಸಿದ ದೃಶ್ಯವನ್ನು ನೋಡಬೇಕಿತ್ತು. ಅಲ್ಲಿ ನೃತ್ಯದ ಶಾಸ್ತ್ರಕ್ಕೆ ದುರ್ಬೀನು ಹಚ್ಚಿ ನೋಡುವ ಅಗತ್ಯವಿರಲಿಲ್ಲ. ಮಕ್ಕಳ ಪರಿಶ್ರಮದ ನೃತ್ಯಾಭ್ಯಾಸ, ಗೆಜ್ಜೆಗಳ ಲಯಬದ್ಧ ದನಿ, ಸುಂದರ ಆಂಗಿಕಾಭಿನಯ, ಅಭಿನಯದ ವೈಖರಿ ಕಣ್ಮನ ತುಂಬಿತು.
ಪುಟ್ಟಮಕ್ಕಳಿಂದ ಹಿಡಿದು ನೈಪುಣ್ಯ ಪಡೆದ ಹಿರಿಯ ನೃತ್ಯ ಕಲಾವಿದರವರೆಗೂ ಅವರ ನೃತ್ಯದ ಹೆಜ್ಜೆಗಳಿಗೆ ಅನುವು ಮಾಡಿಕೊಟ್ಟ, ಪ್ರೋತ್ಸಾಹದ ಸಿಂಚನದೊಂದಿಗೆ ಅವರ ಬೆಳವಣಿಗೆಗೆ ಇಂಬು ನೀಡಿ, ಕಲಾನೈಪುಣ್ಯದ ಆಯಾಮಗಳನ್ನು ಕಲಿಸುತ್ತಿರುವ ಭರತನಾಟ್ಯ ಗುರು ವಿದುಷಿ ಕಾವ್ಯಾ ದಿಲೀಪ್ ಅವರ ನಿರಂತರ ಕಾರ್ಯಕ್ರಮಗಳ ಉತ್ಸಾಹ ಗಮನೀಯ. ವಿ. ಕಾವ್ಯಾ ದಿಲೀಪ್ ನೇತೃತ್ವದ ‘ರಚನಾ ಡ್ಯಾನ್ಸ್ ಅಕಾಡೆಮಿ’ಯು ಮಲ್ಲೇಶ್ವರದ ಸೇವಾ ಸದನದಲ್ಲಿ ಆಯೋಜಿಸಿದ್ದ ‘ನೂಪುರ ನಿರಂತರ’ ಐದನೆಯ ವಾರ್ಷಿಕೋತ್ಸವದ ಸಮಾರಂಭ ವೈವಿಧ್ಯಪೂರ್ಣವಾಗಿ ಯಶಸ್ವಿಯಾಗಿ ನಡೆದು, ಪ್ರತಿಭಾನ್ವಿತ ಮಕ್ಕಳ ನೃತ್ಯರಂಜನೆಯಿಂದ ಚಿರಸ್ಮರಣೀಯವಾಗಿತ್ತು.
ಪುಟ್ಟಮಕ್ಕಳಿಗೆ ನಾಟ್ಯ ಕಲಿಸುವುದು ಸುಲಭದ ಮಾತಲ್ಲ. ಮೊದಲ ತಪ್ಪುಹೆಜ್ಜೆಗಳನ್ನು ತಿದ್ದಿ -ತೀಡಿ, ಹಸ್ತಮುದ್ರೆ-ಆಂಗಿಕಾಭಿನಯದತ್ತ ಆಸಕ್ತಿ ಹುಟ್ಟಿಸಿ, ಅವರನ್ನು ನರ್ತನಾಭ್ಯಾಸಕ್ಕೆ ಸೆಳೆಯುವ ಪರಿಶ್ರಮದ ಕೆಲಸವನ್ನು ನಿಭಾಯಿಸಿದ ಕಾವ್ಯಾ ನಿಜಕ್ಕೂ ಅಭಿನಂದನೀಯರು. ಎಲ್ಲಾ ಕಲಾರಸಿಕರ ಮೆಚ್ಚುಗೆಯನ್ನು ಗಳಿಸಿದ ‘ನೂಪುರ ನಿರಂತರ-5’ನೆಯ ವಾರ್ಷಿಕೋತ್ಸವದ ವರ್ಣರಂಜಿತ ಕಾರ್ಯಕ್ರಮ ಮನರಂಜಕವಾಗಿತ್ತು. ವೇದಿಕೆಯ ಮೇಲೆ ಮೂರು- ನಾಲ್ಕು ವರ್ಷದ ಪುಟಾಣಿಗಳಿಂದ ಹಿಡಿದು ವಿವಿಧ ವಯಸ್ಸಿನ ಲಲನೆಯರು, ವಿವಾಹಿತ ಸ್ತ್ರೀಯರವರೆಗೂ ತಮ್ಮ ನರ್ತನ ಪ್ರತಿಭಾ ಲಾಸ್ಯ ತೋರಿದ್ದು ವಿಶೇಷವೆನಿಸಿತು. ವಿದುಷಿ ಕಾವ್ಯಾ ದಿಲೀಪ್ ಆಯಾ ವಯಸ್ಸಿನ ಮಕ್ಕಳ ಮನೋಧರ್ಮವನ್ನರಿತು ಕೃತಿಗಳ ಆಯ್ಕೆಯನ್ನು ನಡೆಸಿ ತಮ್ಮ ಉತ್ತಮ ಸಂಯೋಜನೆಯೊಂದಿಗೆ, ಆಕರ್ಷಕ ವಿನ್ಯಾಸ ರಚನೆ- ಪರಿಶ್ರಮ ನೃತ್ಯಾಭ್ಯಾಸದ ಶಿಸ್ತಿನ ಮೂಲಕ ಪ್ರಸ್ತುತಿಗೆ ಅನುವು ಮಾಡಿಕೊಟ್ಟಿದ್ದು ಗಮನಾರ್ಹವಾಗಿತ್ತು.
ಸಾಮಾನ್ಯವಾಗಿ ವಾರ್ಷಿಕೋತ್ಸವ ಕಾರ್ಯಕ್ರಮಗಳಲ್ಲಿ ನೇರ ಸಂಗೀತವಿರುವುದು ವಿರಳ. ಆದರೆ ನೂಪುರ ನಿರಂತರ ವರ್ಷಮೇಳದಲ್ಲಿ ಪುಟಾಣಿ ಕಲಾವಿದರಿಗೂ ಆದ್ಯತೆ ನೀಡಿ, ಈ ದೈವಿಕ ನೃತ್ಯ ನೈವೇದ್ಯಕ್ಕೆ ಉತ್ತಮ ಪ್ರಭಾವಳಿಯ ಮೆರಗು ತಂದದ್ದು ಸಂಗೀತ ಸಹಕಾರ. ವಿದ್ವಾನ್ ಅಭಿಷೇಕರ ಸುಶ್ರಾವ್ಯ ಸಂಗೀತ, ವಿದ್ವಾನ್ ಜಿ.ಎಸ್. ನಾಗರಾಜರ ಮಹೋನ್ನತ ಮೃದಂಗ ವಾದನ ಮತ್ತು ಮಧುರ ಕೊಳಲ ನಿನಾದ ವಿದ್ವಾನ್ ಸ್ಕಂಧಕುಮಾರರ ವಾದ್ಯ ಸಮ್ಮಿಲನದಲ್ಲಿ ಅಸ್ಖಲಿತ ನಟುವಾಂಗದ ಓಘ ತಂದವರು ವಿದುಷಿ ಕಾವ್ಯಾ ದಿಲೀಪ್, ತಮ್ಮ ಶಿಷ್ಯರ ನೃತ್ಯ ಗತಿಗೆ ಸ್ಫೂರ್ತಿ ಚೇತನ ನೀಡಿದರು.
‘ಮಾರ್ಗಂ’ ಸಂಪ್ರದಾಯದಲ್ಲಿ ನಡೆದ ಪ್ರಸ್ತುತಿಯಲ್ಲಿ ಮಕ್ಕಳಿಗೆ ತುಂಬಾ ಪ್ರಿಯವಾದ ಗಣಪತಿ, ನಟರಾಜ, ಸುಬ್ರಮಣ್ಯ ಮತ್ತು ಲಕ್ಷ್ಮೀ- ಸರಸ್ವತಿ ದೇವಿಯ ಕುರಿತ ನೃತ್ಯವೈವಿಧ್ಯ ಶ್ಲೋಕಗಳ ಗುಚ್ಛದ ಮುನ್ನ ಪುಷ್ಪಾಂಜಲಿಯಿಂದ ಶುಭಾರಂಭಗೊಂಡಿತು. ಅಭೋಗಿ ರಾಗದ ‘’ಜತಿಸ್ವರ’ದಲ್ಲಿ ಸರಳ ನೃತ್ತಗಳ ಪ್ರದರ್ಶನ ಮತ್ತು ‘ಸುಬ್ರಮಣ್ಯ ಕೌತ್ವಂ’- ಮುರುಗನ ಸೌಂದರ್ಯ ಮತ್ತು ಮಹಿಮೆಗಳ ಮೆರುಗನ್ನು ನಿರೂಪಿಸಿತು. ಶ್ರೀಕೃಷ್ಣನ ಲೀಲಾವಿನೋದಗಳನ್ನು ಸೆರೆಹಿಡಿದ ‘ಮುರಳಿ ಶಬ್ದಂ’ ಅಷ್ಟೇ ಮನೋಹರವಾಗಿತ್ತು. ಅನಂತರ ಅರ್ಪಿತವಾದ ದೇವರನಾಮ ಮನಸೆಳೆಯಿತು. ಮುಂದೆ-ಕೀರ್ತನೆಯ ಸೊಬಗು ಆಕರ್ಷಣೀಯವಾಗಿತ್ತು.
‘ವರ್ಣ’ದಂಥ ಘನಕೃತಿಯನ್ನು ಸಮೂಹ ನೃತ್ಯವಾಗಿ, ಹಲವು ಕಲಾವಿದೆಯರು ಅಭಿನಯಿಸಿ ತಮ್ಮ ಕಲಾನೈಪುಣ್ಯವನ್ನು ಪ್ರದರ್ಶಿಸಲು ಅವಕಾಶ ಒದಗಿಸಿದ್ದು ವಿಶಿಷ್ಟವಾಗಿತ್ತು. ನೃತ್ತ ಮತ್ತು ಅಭಿನಯ ಎರಡಕ್ಕೂ ಸಮಾನ ಪ್ರಾಶಸ್ತ್ಯ ನೀಡುವ ಸುದೀರ್ಘ ಬಂಧ, ದಂಡಾಯುಧಪಾಣಿ ಪಿಳ್ಳೈ ರಚನೆಯ ‘ಪದವರ್ಣ’ – ‘ವೆಲನೈ ವರ ಸೊಲ್ಲಡಿ’ -ವಿಪ್ರಲಂಭ ಶೃಂಗಾರದ ನಾಯಿಕೆಯ ಮನೋವೇದನೆಯನ್ನು ಸಮರ್ಥವಾಗಿ ಹೊರಸೂಸಿತು. ಕಾವ್ಯಾ ಅವರ ಸ್ಫುಟವಾದ, ನಿಖರ ಉಚ್ಛಾರಣೆಯು ನಟುವಾಂಗ ಕಲಾವಿದೆಯರಿಗೆ ಪ್ರೇರಣಾದಾಯಕವಾಗಿತ್ತು. ಶಿವಾರಾಧನೆಯ ‘ಪಂಚಾಕ್ಷರಿ ಸ್ತುತಿ’ (ರಚನೆ- ಆದಿ ಶಂಕಾರಚಾರ್ಯ) ‘ನಾಗೇಂದ್ರ ಹಾರಾಯ ತ್ರಿಲೋಚನಾಯ’ -ಅಭಿಷೇಕರ ಸುಶ್ರಾವ್ಯ ಗಾಯನದಲ್ಲಿ ಹೃದಯಸ್ಪರ್ಶಿಯಾಗಿ ಸಾಗುತ್ತ, ಅಮೃತ ಮಂಥನ ಮುಂತಾದ ಸಂಚಾರಿ ಕಥಾನಕಗಳು ನಾಟಕೀಯ ಆಯಾಮದಿಂದ ಸೊಗಸಾಗಿ ಅನಾವರಣಗೊಂಡವು. ಅನಂತರ- ‘ನಮ್ಮಮ್ಮ ಶಾರದೆ’ಯ ಮುದವಾದ ಸಾಕ್ಷಾತ್ಕಾರದ ನಂತರ ‘ಶ್ರೀ ಚಕ್ರ ರಾಜ ಸಿಂಹಾಸನೇಶ್ವರಿ’ಯ ದೈವೀಕ ಆಯಾಮದ ಸುಂದರ ಅಭಿನಯ, ಪರಿಣಾಮಕಾರಿ ಪ್ರಸ್ತುತಿ ಮನಾಪಹರಿಸಿತು. ಪುರಂದರದಾಸರ ಜನಪ್ರಿಯ ಕೃತಿ, ‘ಕೃಷ್ಣ ಬಾರೋ, ರಂಗ ಬಾರೋ’- ಆಪ್ತಕರೆಯ ಸ್ಪಂದನವನ್ನು ಕಲಾವಿದೆಯರು ಅಷ್ಟೇ ಹೃದಯಂಗಮವಾಗಿ ಅರ್ಪಿಸಿದರು. ಸಮೂಹ ನೃತ್ಯಗಳಲ್ಲಿ ಕಲಾವಿದೆಯರ ಸಾಮರಸ್ಯ ಪರಸ್ಪರ ಅರಿತು ನಿರೂಪಿಸಿದ ನರ್ತನ ಸಾಂಗತ್ಯ ಸ್ತುತ್ಯಾರ್ಹವಾಗಿತ್ತು. ಸುಮ್ಮಾನದಿಂದ ಸಾಗಿದ ತಿಲ್ಲಾನ-ಮಂಗಳದ ರಮ್ಯ ಪ್ರಸ್ತುತಿ ಕಾರ್ಯಕ್ರಮದ ಕಮನೀಯತೆಯನ್ನು ಮತ್ತಷ್ಟು ಬೆಳಗಿಸಿತ್ತು.
ವೈ.ಕೆ. ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.