ತಿಮ್ಮಪ್ಪ ಮತ್ತು ರುಕ್ಮಿಣಿ ದಂಪತಿಯ ಸುಪುತ್ರರಾದ ಇವರು ವೈದ್ಯಕೀಯ ವ್ಯಕ್ತಿಯಲ್ಲಿದ್ದುಕೊಂಡು ಸಾಹಿತ್ಯ ಕೃಷಿ ಮಾಡಿದ ಸಾಧಕ. ತಾಯಿ ರುಕ್ಮಿಣಿಯ ಸಹೋದರ ಶಿವಮೊಗ್ಗ ಜಿಲ್ಲೆಯ ಕೆಳದಿಯ ನಾಡಿಗ ಲಕ್ಷ್ಮೀನಾರಾಯಣ ಇವರ ಮನೆಯಲ್ಲಿ 1913 ಡಿಸೆಂಬರ್ 28ಕ್ಕೆ ಇವರ ಜನನವಾಯಿತು. ಇವರು ಮೂಲತಃ ಸೊರಬ ತಾಲೂಕಿನ ದೊಡ್ಡೇರಿ ಎಂಬ ಹಳ್ಳಿಯವರು. ಸಾಗರದ ಪುರಸಭೆಯ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಇವರು ಬಾಲ್ಯದಲ್ಲಿಯೇ ಕವಿತೆ ಮತ್ತು ಕಥೆಗಳ ರಚನೆ ಮಾಡುತ್ತಿದ್ದ ಸಾಹಿತ್ಯ ಪ್ರೇಮಿ. ಇವರ ಸಾಹಿತ್ಯ ರಚನೆಗೆ ಪ್ರೋತ್ಸಾಹ ನೀಡಿದವರು ಇವರ ಗುರುಗಳಾದ ಅಳಸಿಂಗಾಚಾರ್ಯರು. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಬಂದ ವೆಂಕಟಗಿರಿ ರಾವ್ ರಾಯಚೂರು ಜಿಲ್ಲೆಯ ಪಂಡಿತ ತಾರಾನಾಥರ ‘ಪ್ರೇಮ ವಿದ್ಯಾಪೀಠ’ದಲ್ಲಿ ಅಧ್ಯಯನ ಮಾಡಿ “ಆಯುರ್ವೇದ ಶಿರೋಮಣಿ ” ಡಿಪ್ಲೋಮಾ ಪದವಿಯನ್ನು ಪಡೆದು ಸಾಗರದಲ್ಲಿ ವೈದ್ಯ ವೃತ್ತಿ ಜೀವನಕ್ಕೆ 1938ರಲ್ಲಿ ಪಾದಾರ್ಪಣೆ ಮಾಡಿದರು.
ಕೊಡಗಿನ ಗಣಪಯ್ಯನವರ ಸುಪುತ್ರಿ ಸಾವಿತ್ರಮ್ಮನೊಂದಿಗೆ ವಿವಾಹವಾದ ಇವರು ಗೃಹಸ್ಥಾಶ್ರಮದ ಹೊಸಿಲನ್ನು ಮೆಟ್ಟಿ ಮೂರು ಮಂದಿ ಗಂಡು ಮತ್ತು ಇಬ್ಬರು ಹೆಣ್ಣುಮಕ್ಕಳೊಂದಿಗೆ ಬೆಂಗಳೂರು ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ 32 ವರ್ಷಗಳ ಕಾಲ ವೈದ್ಯ ವೃತ್ತಿಯೊಂದಿಗೆ ಸುಖ ಜೀವನ ನಿರ್ವಹಿಸಿದವರು. ಬಳಿಕ ವೈದ್ಯ ವೃತ್ತಿಗೆ ವಿದಾಯ ಹೇಳಿ ಸ್ವಂತ ಊರಾದ ಸಾಗರದ ಸೊರಬ ತಾಲೂಕಿನ ದೊಡ್ಡೇರಿಗೆ ಬಂದು ನೆಲೆಸಿ, ಅಡಿಕೆ ತೋಟದಲ್ಲಿ ವ್ಯವಸಾಯ ಮಾಡುತ್ತಾ ಮಕ್ಕಳ ಕಾಯಿಲೆಗೆ ವೈದ್ಯಕೀಯ ಸಲಹೆಯನ್ನೂ ನೀಡುತ್ತಾ ಕಾಲ ಕಳೆದರು. ಛಾಯಾಚಿತ್ರಗ್ರಹಣವನ್ನು ಮುಖ್ಯ ಹವ್ಯಾಸವಾಗಿ ಮಾಡಿಕೊಂಡಿದ್ದ ಇವರು ಈ ವಿಷಯದಲ್ಲಿ ರಾಷ್ಟ್ರೀಯ ಅಂತರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿದ್ದಾರೆ. ಛಾಯಾಚಿತ್ರಗ್ರಹಣದ ಬಗ್ಗೆ ಅನೇಕ ಲೇಖನಗಳನ್ನು ಬರೆದ ಹೆಗ್ಗಳಿಕೆ ಇವರದು. ಹೊಸಬರಿಗೆ ಮಾರ್ಗದರ್ಶನ ನೀಡಲು ಸಹಕಾರಿಯಾಗುವಂತಹ “ಆಧುನಿಕ ಛಾಯಾಚಿತ್ರಕಲೆ” ಎಂಬ ಮಹತ್ತರವಾದ ಕೃತಿಯ ಕರ್ತೃ ಇವರಾಗಿದ್ದಾರೆ.
ಆರಂಭದಲ್ಲಿ ಇವರು “ಕಲಾ ಕುಮಾರ” ಎಂಬ ಕಾವ್ಯನಾಮದಲ್ಲಿ ಕಥೆ ಕವನಗಳನ್ನು ರಚನೆ ಮಾಡುತ್ತಿದ್ದು, ದೇವುಡು ನರಸಿಂಹ ಶಾಸ್ತ್ರಿಗಳ “ಮಕ್ಕಳ ಪುಸ್ತಕ” ಪತ್ರಿಕೆಯಲ್ಲಿ ಇವುಗಳು ಪ್ರಕಟಗೊಂಡಿವೆ. “ಕಂದನ ಹಾಡುಗಳು” ಮತ್ತು “ದಾಳಿಂಬೆ ಚೆಲುವೆ” ಇದು ಬಾಲ ಸಾಹಿತ್ಯ. “ಸಂಪ್ರದಾನ” “ದೃಷ್ಟಿದಾನ” ಮತ್ತು “ಅವಧಾನ” ಇವುಗಳು ಇವರ ಮೂರು ಜನಪ್ರಿಯ ಕಾದಂಬರಿಗಳು ಸುಧಾ ವಾರಪತ್ರಿಕೆಯಲ್ಲಿ “ಸಂಪ್ರದಾನ” ಮತ್ತು “ದೃಷ್ಟಿದಾನ” ಕಾದಂಬರಿಗಳು ಧಾರವಾಹಿಯಾಗಿ ಪ್ರಸಾರಗೊಂಡು ಓದುಗರ ಮೆಚ್ಚುಗೆಯನ್ನು ಪಡೆದಿದ್ದವು. ಪುಟ್ಟಣ್ಣ ಕಣಗಾಲರ “ಅಮೃತಘಳಿಗೆ” ಸಿನೇಮಾ ದೊಡ್ಡೇರಿ ವೆಂಕಟಗಿರಿರಾಯರ “ಅವಧಾನ” ಕಾದಂಬರಿ ಆಧಾರಿತವಾಗಿದೆ. “ಮುಕ್ತ”, “ಅತ್ತಿಯ ಹೂವು” ಮತ್ತು “ಇಷ್ಟಕಾಮ್ಯ” ಇವು ಇವರ ಇತರ ಜನಪ್ರಿಯ ಕಾದಂಬರಿಗಳು. ಇದರಲ್ಲಿ “ಇಷ್ಟಕಾಮ್ಯ” ಕಾದಂಬರಿಯು 2016ರಲ್ಲಿ ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಕರ್ ಇವರ ನಿರ್ದೇಶನದಲ್ಲಿ ಸಿನೆಮಾವಾಗಿ ಪ್ರದರ್ಶನ ಕಂಡಿದೆ. “ತುಂಬಿದ ಕೊಡ” ಕಥಾ ಸಂಕಲನ. “ರೋಹಿಣಿ” ಕವನ ಸಂಕಲನ, “ಸಂತಾನ ಸಂಯಮ” ಮತ್ತು “ಪ್ರಸವ ಜ್ಞಾನ” ಇವರ ವೈಜ್ಞಾನಿಕ ಕೃತಿಗಳು.
ವೃತ್ತಿಯಲ್ಲಿ ವೈದ್ಯರಾಗಿದ್ದರೂ ವ್ಯವಸಾಯ ಮತ್ತು ಛಾಯಾಚಿತ್ರಗ್ರಹಣವನ್ನು ಹವ್ಯಾಸವನ್ನಾಗಿ ಮಾಡಿಕೊಂಡಿದ್ದು, ಬಾಲ್ಯದಲ್ಲಿಯೇ ರಕ್ತಗತವಾದ ಸಾಹಿತ್ಯ ಕೃಷಿಯನ್ನು ಮುಂದುವರಿಸಿಕೊಂಡು ಬಂದದ್ದು ವಿಶೇಷ. ಛಾಯಾಚಿತ್ರಗ್ರಹಣ ಪ್ರವೀಣರಾಗಿದ್ದ ಇವರು “ಅಖಿಲ ಭಾರತ ಫೋಟೋಗ್ರಫಿ ಪರಿಷತ್” ಇದರ ಉಪಾಧ್ಯಕ್ಷರಾಗಿದ್ದರು. ಬೆಂಗಳೂರಿನ “ಅಖಿಲ ಹವ್ಯಕ ಮಹಾಸಭೆ”ಯ ಸ್ಥಾಪಕ ಸದಸ್ಯರಲ್ಲಿ ಇವರೂ ಒಬ್ಬರಾಗಿದ್ದದ್ದು ಹೆಮ್ಮೆಯ ವಿಚಾರ. ಸಾಹಿತ್ಯ ಕ್ಷೇತ್ರದ ವಿವಿಧ ಮಜಲುಗಳಲ್ಲಿ ಕೈಯಾಡಿಸಿ ಪ್ರಸಿದ್ಧಿಯನ್ನು ಪಡೆದ ಇವರಿಗೆ ಕರ್ನಾಟಕ ರಾಜ್ಯ ಸರ್ಕಾರ 1981ರಲ್ಲಿ “ರಾಜ್ಯೋತ್ಸವ ಪ್ರಶಸ್ತಿ” ನೀಡಿ ಗೌರವಿಸಿದೆ. ವೈದ್ಯಕೀಯ ವೃತ್ತಿಯೊಂದಿಗೆ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಂಡಿದ್ದು, ಜನಪ್ರಿಯ ಸಾಹಿತಿಯಾದ ಇವರು 26.5.2004ರಂದು ತಮ್ಮ 91ನೇ ವಯಸ್ಸಿನಲ್ಲಿ ಇಹವನ್ನು ತ್ಯಜಿಸಿದರು.
ಅಕ್ಷರಿ.