Subscribe to Updates

    Get the latest creative news from FooBar about art, design and business.

    What's Hot

    ರಾಜ್ಯ ಮಟ್ಟದ ಸಂಶೋಧನಾ ಕಮ್ಮಟ ‘ಕನ್ನಡ ನಾಟಕಗಳ ವಿಭಿನ್ನ ನೆಲೆಗಳು’ | ಮೇ 27

    May 23, 2025

    ಪುತ್ತೂರಿನ ‘ಬಹುವಚನಂ’ ಸಭಾಂಗಣದಲ್ಲಿ ಅದ್ಭುತವಾಗಿ ಸಂಪನ್ನಗೊಂಡ ಸಂಗೀತ ಕಛೇರಿ

    May 23, 2025

    ಮಂಡ್ಯದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ‘ಅಣ್ಣನ ನೆನಪು’ ಸಾಕ್ಷ್ಯ ನಾಟಕ | ಮೇ 24

    May 23, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ವಿಶೇಷ ಲೇಖನ | ಜೀವ-ದಾರಿಯ ಮರುಜೋಡಣೆ ಅಬ್ಬಕ್ಕ ಮ್ಯೂಸಿಯಮ್ – ಡಾ. ನರೇಂದ್ರ ರೈ ದೇರ್ಲ
    Article

    ವಿಶೇಷ ಲೇಖನ | ಜೀವ-ದಾರಿಯ ಮರುಜೋಡಣೆ ಅಬ್ಬಕ್ಕ ಮ್ಯೂಸಿಯಮ್ – ಡಾ. ನರೇಂದ್ರ ರೈ ದೇರ್ಲ

    September 3, 20232 Comments7 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಐವತ್ತು-ಅರುವತ್ತು ವರ್ಷಗಳ ಹಿಂದೆ ಕರಾವಳಿ-ಮಲೆನಾಡಿನ ಪ್ರತಿಯೊಂದು ಮನೆ ಕೂಡಾ ಒಂದು ಪುಟ್ಟ ಮ್ಯೂಸಿಯಮ್. ಜಗಲಿ, ಚಾವಡಿ, ಮೊಗಸಾಲೆಗಳಿಗೆ ಒಂದು ಸುತ್ತು ಬಂದರೆ ಸಾಕು; ಮಾಡು, ಕಿಟಕಿ, ಛಾವಣಿ, ಏಣಿ, ಅಟ್ಟ, ಹಜಾರ-ಎಲ್ಲವೂ ಕಟ್ಟಿಗೆ, ಬಿದಿರು, ಲೋಹ, ಮಣ್ಣು, ಬೆತ್ತ, ಕಾಡುಬಿಳಲು – ಹೀಗೆ ಒಂದಲ್ಲ ಒಂದು ಬಗೆಯ ನೆಲಮೂಲದ ಸಹಜ ಕೌಶಲಪೂರ್ಣ ವಸ್ತುಗಳು, ಅಟ್ಟದ ಮೇಲಿನ ಅಕ್ಕಿಮುಡಿ, ತಲೆಗಿಡುವ ಮುಟ್ಟಾಳೆ, ಎತ್ತಿನ ಹೆಗಲಿಗೇರಿಸುವ ನೊಗ, ಅಂಕದ ಕೋಳಿ ಕಟ್ಟುವ ಹಗ್ಗ, ಭತ್ತ ಕುಟ್ಟುವ ಒನಕೆ, ರಾಗಿ ಬೀಸುವ ಕಲ್ಲು, ಅನ್ನ ಬೇಯಿಸುವ ಮಡಕೆ, ಶೇಂದಿ ಕುಡಿಯುವ ಕುದ್ದು, ಮೀನು ಹಿಡಿಯುವ ಕೂರಿ – ಎಲ್ಲವೂ ನಮ್ಮ ಹಿರಿಯರ ಜಾಣ್ಮೆ, ಕೌಶಲಗಳಿಗೆ ಕನ್ನಡಿ, ನಾಲ್ಕೈದು ತಲೆಮಾರು ಬಾಳುವ ಉಳಿಯುವ ಗಟ್ಟಿತನ, ಪ್ರಕೃತಿಯ ಒಳಸುರಿಗಳನ್ನೇ ಬಳಸಿ ಮಾಡುವ ನೈಜ ಹೆಣಿಗೆಯ ಸಹಜ ಸಾಮಗ್ರಿಗಳಿವು.

    ಇಂದಿನದು ಕೊಳ್ಳುಬಾಕ ಸರಕು ಸಂಸ್ಕೃತಿ. ಬೇಡ ಬೇಡವೆಂದರೂ ಹಳೆಯದರ ಜಾಗದಲ್ಲಿ ಹೊಸತು ಬಂದು ಕೂರುತ್ತದೆ. ಇಂದಿನ ಹೊಸತು ನಾಳೆಗೇ ಹಳತು. ಮನಸ್ಸಿನಲ್ಲಿ ಜಾಗ ಇದ್ದರೆ ತಾನೆ ಮನೆಯಲ್ಲಿ ಅವುಗಳಿಗೆ ಎಡೆ ? ಪರಂಪರಾಗತ ಬದುಕಿನ ಜೀವದ್ರವ್ಯಗಳಾಗಿ ನಮ್ಮನ್ನು ಲಾಲಿಸಿ-ಪಾಲಿಸಿದ ಸಾವಿರಾರು ವಸ್ತುಗಳಿಂದು ಮೌಲ್ಯದ ಅರಿವಿಲ್ಲದೆ ಹಾಳಾಗುತ್ತಿವೆ. ಪರಭಾರೆಗೊಳ್ಳುತ್ತಿವೆ. ಅಟ್ಟ ಸೇರುತ್ತಿವೆ.

    ಈಗ ಮೊದಲ ದಿನ ಮಗು ಬೀಳುವುದೇ ರಬ್ಬರ್ ಶೀಟ್ ಗೆ ! ಮಲಗುವ ಜಾಪೆ, ಅನ್ನ ಬೇಯಿಸುವ ಪಾತ್ರೆ, ನೀರು ಕುಡಿಯುವ ಗ್ಲಾಸ್, ಮೆಟ್ಟುವ ಚಪ್ಪಲಿ, ಉಣ್ಣುವ ಬಟ್ಟಲು, ಬರೆಯುವ ಪೆನ್ನು, ಹಾಕುವ ಬಟ್ಟೆ ಎಲ್ಲವೂ ಬಹು ರಾಸಾಯನಿಕಗಳ ಕೃತಕ ಉತ್ಪನ್ನಗಳು. ಅನ್ನದೊಂದಿಗೆ ಬೆರೆಯುವ, ಗಾಳಿಗೆ ಕರಗುವ, ಮಣ್ಣಿಗೆ ಸೇರುವ ಇವೆಲ್ಲಾ ಬಹುಪಾಲು ದೇಹ-ಮನಸ್ಸುಗಳ ನೆಮ್ಮದಿ ಕೆಡಿಸುವಂಥವು. ಭೂಮಿಯನ್ನೇ ಹಾಳು ಮಾಡುವಂಥವು.

    ನಮ್ಮ ತಂದೆ-ತಾಯಿ, ಅಜ್ಜ-ಅಜ್ಜಿ, ಅವರ ಹಿರಿಯರು ಬದುಕಿ ಬಾಳಿದ ಭೌತಿಕ ಭಾವ ಸಂಬಂಧಿ ಹಳೆಯ ವಸ್ತುಗಳನ್ನು ಒಂದೇ ಕಡೆ ಜೋಡಿಸಿ ಶತಶತಮಾನಗಳ ಆಶಯ ಜೀವನ ವಿನ್ಯಾಸವನ್ನು ಮರುಜೋಡಿಸುವುದು ಸುಲಭದ ಕೆಲಸವಲ್ಲ. 21ನೆಯ ಈ ಶತಮಾನದಲ್ಲಿ ಅಂಥ ಹಳೆಯ ಪ್ರಾಚೀನ ಒಂದೊಂದು ವಸ್ತುಗಳ ಬಳಕೆ, ಸಂರಚನೆ, ಬಾಳಿಕೆ, ತಾಂತ್ರಿಕತೆಯನ್ನು ಕೇಳಿ ನಾವೀಗ ಬೆಚ್ಚಿಬೀಳುತ್ತೇವೆ. ಆ ಕಥೆಗಳಿಗೆ ಕಿವಿಯಾದರೆ ನಮಗೆ ನಮ್ಮ ಹಿರಿಯರ ದೈಹಿಕ, ಮಾನಸಿಕ ಶಕ್ತಿ; ಅವರಿಗೆ ನಿಸರ್ಗದೊಂದಿಗೆ ಇದ್ದ ಅನುಸಂಧಾನ, ಸೂರ್ಯ-ಚಂದ್ರರ ಮೇಲಿನ ನಂಬಿಕೆ, ನೆಲದ ನಂಬಿಕೆ-ದೈವ ದೇವರುಗಳ ಮೇಲಿನ ಭಕ್ತಿ, ಜಾತಿ–ಮತಾತೀತ ಸಾಮರಸ್ಯ, ಆಚರಣೆಗಳು, ಕೌಟುಂಬಿಕ ನಿಯತ ಅವರ್ತನಗಳು ಎಲ್ಲವೂ ತಿಳಿಯುತ್ತವೆ.

    ತುಳು ನೆಲದ ಸಂಸ್ಕೃತಿ ಸಾರುವ ಚಿತ್ರಶಾಲೆ : ಅಬ್ಬಕ್ಕ – ಚಿತ್ರ ಗ್ಯಾಲರಿ 

    ಸಂಸ್ಕೃತಿ, ಭಾಷೆ, ಸಾಹಿತ್ಯ, ಕಲೆ ಇವೆಲ್ಲಾ ಒಂದು ರಾಷ್ಟ್ರ ಅಥವಾ ರಾಜ್ಯದ ಹೆಮ್ಮೆ-ಗುರುತು ಎರಡೂ ಹೌದು. ಸರಕಾರಗಳು ಪ್ರತಿ ವರ್ಷ ಇವುಗಳ ಸಮೃದ್ಧಿ ಮತ್ತು ಪ್ರಸರಣಕ್ಕೆ ವ್ಯಯಿಸುವ ಹಣಕ್ಕೆ ಲೆಕ್ಕವಿಲ್ಲ. ಆದರೆ ಬಹುಪಾಲು ವೆಚ್ಚದ ದಾರಿಯಲ್ಲಿ ಸೋರಿಕೆಯೇ ಹೆಚ್ಚು, ಅಬ್ಬಕ್ಕ ಕರಾವಳಿ-ಕರ್ನಾಟಕದ ಬಹುಮುಖ್ಯ ಗುರುತು. ಮೂರೂವರೆ ಶತಮಾನಗಳ ಹಿಂದೆ ಪೋರ್ಚುಗೀಸರ ವಿರುದ್ಧ ಕಚ್ಚೆ ಕಟ್ಟಿದ ಈಕೆ ವೀರರಾಣಿ. ಉಳ್ಳಾಲದ ಈ ಶೂರಳ ಬಗ್ಗೆ ಹಬ್ಬ-ಉತ್ಸವ ಮಾಡಲು ಪ್ರತಿವರ್ಷ ಸರಕಾರ ಕರಾವಳಿಯಲ್ಲಿ ಲಕ್ಷಾಂತರ ಹಣ ಖರ್ಚು ಮಾಡುತ್ತಿವೆ. ಇಂಥ ದೇಶಪ್ರೇಮಿಗೆ ನಿಜವಾದ ಸ್ಮಾರಕ ನಿರ್ಮಿಸಿದವರು ತುಕಾರಾಮ-ಆಶಾಲತಾ ದಂಪತಿ.

    ತನ್ನದೇ ಸೀಮಿತ ಖಾಸಗಿ ಜಾಮೀನು-ಕಟ್ಟಡ ಸಂಕೀರ್ಣವನ್ನು ನಾಜೂಕಾಗಿ ವಿಭಸಿಸಿಕೊಂಡು ಬಹುಬಗೆಯಲ್ಲಿ ಸಂಗ್ರಹಾಲಯ ರೂಪಿಸಿದ ತುಕಾರಾಮರು ಮೇಲ್ ಮಹಡಿಯಲ್ಲಿ ಅಬ್ಬಕ್ಕಳ ಜೀವನಗಾಥೆಯನ್ನು ವಿವರಿಸುವ ಆರ್ಟ್ ಗ್ಯಾಲರಿಯನ್ನು ರೂಪಿಸಿದ್ದಾರೆ. ಕಲ್ಪಿತ ಮೌಖಿಕ ಆಧಾರಗಳಿಗೆ ಚರಿತ್ರೆಯ ಲಿಖಿತ ಸಾಕ್ಷ್ಯಗಳನ್ನು ಜೋಡಿಸಿಕೊಂಡು ಸ್ವತಃ ಇತಿಹಾಸ ಪ್ರಾಧ್ಯಾಪಕರಾದ ತುಕಾರಾಮರೇ ನಿರೂಪಿಸಿದಂತೆ ಈ ಚಿತ್ರ ಸರಣಿ ರೂಪು ಪಡೆದಿದೆ. ರಾಷ್ಟ್ರೀಯ-ಅಂತಾರಾಷ್ಟ್ರೀಯ ಮಟ್ಟದ ಕಲಾವಿದರು ಇಲ್ಲಿ ವಾರಗಟ್ಟಲೆ ಉಳಿದು ಚಿತ್ರ ರೂಪಗಳನ್ನು ರಚಿಸಿದ್ದಾರೆ. ಈ ಗ್ಯಾಲರಿಯ ಅಡಿಯಲ್ಲಿ, ಅಂಗಳದಲ್ಲಿ ಕಲ್ಲು, ಮರ, ಲೋಹ, ಮಣ್ಣು, ಬಿದಿರುಗಳ ಶಿಲ್ಪ-ಕಾಷ್ಠ ರೂಪಗಳು ನಮ್ಮ ಪ್ರಾಚೀನದ ಜೀವ-ದಾರಿಯನ್ನು ದಾಖಲಿಸಿದರೆ ಮೇಲಿನ ಅಂತಸ್ತಿನ ಈ ಚಿತ್ರಕಥಾ ಸರಣಿ ಇದೇ ನೆಲದ ಹೆಣ್ಣು ಮಗಳೊಬ್ಬಳ ವೀರಗಾಥೆಯನ್ನು ಸಾದ್ಯಂತವಾಗಿ ನಿರೂಪಿಸುತ್ತದೆ. ಅಬ್ಬಕ್ಕಳ ಯುದ್ಧತಂತ್ರ, ನ್ಯಾಯ ತೀರ್ಮಾನ, ಇಟೆಲಿ ಪ್ರವಾಸಿಯ ಭೇಟಿ-ಹೀಗೆ ಈ ಚಿತ್ರಿಕೆಗಳು ವೈವಿಧ್ಯಮಯವಾಗಿವೆ. ನೇತ್ರಾವತಿ ನದಿಯ ಬದಿಯಲ್ಲಿ ನಿಂತು ಅಬ್ಬಕ್ಕ ಅಕ್ಕಿ ಮುಡಿಗಳನ್ನು ದೋಣಿಯಿಂದ ಹಡಗುಗಳಿಗೆ ತುಂಬಿಸುವ ಚಿತ್ರವನ್ನು ಬಳ್ಳಾರಿಯ ಹಿರಿಯ ಕಲಾವಿದ ವಿ.ಟಿ. ಕಾಳೆ ಚಿತ್ರಿಸಿದರೆ, ಅಬ್ಬಕ್ಕ ನಾಡರಕ್ಷಣೆಗಾಗಿ ವೀರಾವೇಶದಿಂದ ಹೋರಾಡುವ ಚಿತ್ರವನ್ನು ರಚಿಸಿದವರು ಬೆಂಗಳೂರಿನ ಕೆ.ಎನ್. ರಾಮಚಂದ್ರನ್ ಅವರು. ಜಾತಿ ಮರೆತು ಪರಸ್ಪರ ಪ್ರೀತಿಸುತ್ತಿದ್ದ ಉಳ್ಳಾಲದ ಮೊಗವೀರ ಮತ್ತು ಜೈನ ಯುವಕ-ಯುವತಿಯರಿಗೆ ಅಬ್ಬಕ್ಕಳೇ ಮುಂದೆ ನಿಂತು ಮದುವೆ ಮಾಡಿಸುವ ಚಿತ್ರವೂ ಇಲ್ಲಿದೆ. ಇದರ ಕಲಾವಿದ ವಿಜಾಪೂರದ ಪಿ.ಎಸ್. ಕಡೇಮನಿಯವರು. ವರ್ತಮಾನದಲ್ಲಿ ನಿಂತು ಚರಿತ್ರೆಯನ್ನು ವ್ಯಾಖ್ಯಾನಿಸುವುದು; ಕಣ್ಣು, ಕಿವಿ, ಮನಸ್ಸು ಯಾವುದರಲ್ಲೂ ನೇರ ನೋಡದ, ಮುಟ್ಟದ ಕಾಲಾತೀತ ಕಥೆಗಳನ್ನು ಹೀಗೆಯೇ ಎಂದು ವ್ಯಾಖ್ಯಾನಿಸಿ ಅದರ ಪ್ರತಿರೂಪಗಳನ್ನು ಪುನಾರೂಪಿಸುವುದು ಒಬ್ಬ ಸಮರ್ಥ ಇತಿಹಾಸಗಾರನಿಗೆ ಮಾತ್ರ ಸಾಧ್ಯ. ಈ ಕಾರಣಕ್ಕಾಗಿಯೇ ಅಬ್ಬಕ್ಕ ರಾಣಿಯ ಮ್ಯೂಸಿಯಮ್ ನ್ ಒಂದು ಭಾಗ-ಒಂದು ಬಗೆಯಾದರೆ ಅಬ್ಬಕ್ಕ ಚಿತ್ರ ಸರಣಿಯ ಈ ಭಾಗದ ಮೌಲ್ಯ ಇನ್ನೊಂದು ಬಗೆ.

    ಇತಿಹಾಸ ಪ್ರಾಧ್ಯಾಪಕನ ಅನನ್ಯ ಸಾಧನೆ 

    ದಕ್ಷಿಣ ಕನ್ನಡ ಜಿಲ್ಲೆಯ ಬಿ.ಸಿ.ರೋಡ್ ಸಮೀಪ ಸಂಚಯಗಿರಿಯ ‘ರಾಣಿ ಅಬ್ಬಕ್ಕ ಮ್ಯೂಸಿಯಮ್’ನಲ್ಲಿ ಸಂಚಯಗೊಂಡ ಸಾವಿರಾರು ಪುರಾತನ ವಸ್ತುಗಳು ತೆರೆದಿಡುವ ಕಥೆ ಬದುಕು, ಸಂದೇಶ ಸಮಾನ್ಯವಲ್ಲ. ಈ ದೇಶದಲ್ಲಿ ಸರಕಾರ, ಪ್ರಾಧಿಕಾರ, ಸಂಘಟನೆಗಳು ನಡೆಸುವ, ಸಂಯೋಜಿಸಿದ ಸಾವಿರಾರು ಸಂಗ್ರಹಾಲಯಗಳಿವೆ. ಆದರೆ ಈ ತುಳು ಅಧ್ಯಯನ ಕೇಂದ್ರ ಭಿನ್ನವಾಗುವುದು ಏಕವ್ಯಕ್ತಿ ಸಾಹಸಕ್ಕಾಗಿ. ಇತಿಹಾಸ ಪ್ರಾಧ್ಯಾಪಕ ಪ್ರೊ. ತುಕಾರಾಮ ಪೂಜಾರಿ ಮತ್ತು ಅವರ ಪತ್ನಿ ಆಶಾಲತಾ ಅವರ ಸಾಹಸದ ಫಲವಿದು . ನಿನ್ನೆ ಮೊನ್ನೆ ಇದ್ದಕ್ಕಿದ್ದಂತೆ ಸೃಷ್ಟಿಯಾದುದಲ್ಲ. ದಶಕಗಳ ಕಾಲ ನಡೆಸಿದ ಸೂಕ್ಷ್ಮ ಜೋಡಣೆ, ಸಂಗ್ರಹ, ಹುಡುಕಾಟ, ಓಡಾಟ, ಅಪಾರ ಹಣ, ಸಮಯ ವ್ಯಯದ ಸಾರ್ಥಕ ಪ್ರಯತ್ನವಿದು.

    ಗ್ರಾಮೀಣ ಬದುಕಿನ ವಿಶ್ವರೂಪ ಅನನ್ಯ ರೀತಿಯಲ್ಲಿ ಅನಾವರಣಗೊಂಡಿರುವ ಮಂಗಳೂರಿಗೆ ಸನಿಹದ ಬಿ.ಸಿ.ರೋಡಿನಲ್ಲಿರುವ ದೇಸೀ ಸೊಗಡಿನ ವಸ್ತು ಸಂಗ್ರಹಾಲಯ ಹಿಂದಿನ ಶತಮಾನದ ಜೀವನಸಂಸ್ಕೃತಿಯನ್ನು ಆಪ್ಯಾಯಮಾನ ಮಾಹಿತಿಯೊಂದಿಗೆ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದೆ. ನಗರಮುಖಿ ಬದುಕಿನ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿರುವ ಆಧುನಿಕತೆಯ ರಾವು ಬಡಿದಿರುವ ಮನಸ್ಸುಗಳನ್ನು ಕೃಷಿ ಸಂಸ್ಕೃತಿಯತ್ತ ಆಕರ್ಷಿಸುವ ಉದಾತ್ತ ಆಶಯ ಇದರ ರೂವಾರಿಗಳಾದ ತುಕಾರಾಂ–ಆಶಾಲತಾ ದಂಪತಿಗಳದ್ದು.

    ಪ್ರೊ.ತುಕಾರಾಮ ಪೂಜಾರಿಯವರು ಬಂಟ್ವಾಳ ಎಸ್.ವಿ.ಎಸ್. ಕಾಲೇಜಿನ ನಿವೃತ್ತ ಇತಿಹಾಸ ಪ್ರಾಧ್ಯಾಪಕರು. ಡಾ.ಆಶಾಲತಾ ಅವರು ಮಂಗಳೂರಿನ ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನಲ್ಲಿ ವಾಣಿಜ್ಯ ಶಾಸ್ತ್ರ ಪ್ರಾಧ್ಯಾಪಕಿ. ಪಾಠದ ನಡುನಡುವೆ ಈ ಜೋಡಿ ಎಲ್ಲೂ ವಿರಮಿಸಿದ್ದಿಲ್ಲ. ಗುಬ್ಬಿ ಕಟ್ಟಿದ ಗೂಡಿನ ಹಾಗೆ ಊರೂರು ತಿರುಗಿ ಒಂದೊಂದೇ ಸಾಂಸ್ಕೃತಿಕ ವಸ್ತುಗಳನ್ನು ಜೋಪಾನವಾಗಿ ಎತ್ತಿ ತಂದು ಜೋಡಿಸಿದ್ದಾರೆ. ತುಕಾರಾಮರು ಬರೀ ಈ ವಸ್ತುಗಳ ಮೇಲೆ ಹೆಸರಿನ ಚೀಟಿ ಅಂಟಿಸಲಿಲ್ಲ. ಸಂಗ್ರಹಾಲಯದೊಳಗೆ ಇರುವ ಪ್ರತಿಯೊಂದು ವಸ್ತುಗಳ ಮೂಲಕ್ಕಿಳಿದು ವಿವರಿಸುತ್ತಾರೆ. ಹಿಸ್ಟರಿ ಮೇಷ್ಟ್ರು ಮ್ಯೂಸಿಯಮ್ ಕಟ್ಟಿದಾಗ ಸಹೃದಯನಿಗಾಗುವ ಲಾಭವಿದು. ಒಂದೊಂದು ಪುರಾತನ ವಸ್ತುವಿನ ಹಿಂದೆಯೂ ನಮ್ಮ ಹಿರಿಯರ ಜೀವನಾನುಭವ ಕೋದುಕೊಂಡ ರೀತಿ ಬೆಚ್ಚಿಬೀಳಿಸುತ್ತದೆ. ಪ್ರೇಕ್ಷಕನಿಗೆ ಆರಂಭದಲ್ಲೇ ಅಡ್ಡವಾಗುವ ‘ಹುಲಿ ಓಡಿಸುವ – ಬೆದರಿಸುವ ಕಾಷ್ಠವಸ್ತು’ ತೆರೆದಿಡುವ ಮಾಹಿತಿ, ಅದರ ಸದ್ದಿನಷ್ಟೇ ರೋಚಕ. ಪೂಜಾರಿಯವರು ಹೇಳುವ ಆ ಕಥೆಯ ಬೆನ್ನ ಹಿಂದೆಯೇ ನಡೆದರೆ ಶತಮಾನಗಳ ಹಿಂದಿನ ಕರಾವಳಿಯ ದುರ್ಗಮ ಕಾಡು ಕಣಿವೆಗಳು, ಕೃಷಿಕರಿಗಿದ್ದ ಸವಾಲು, ಹೈನುಗಾರಿಕೆ, ಹುಲಿಗಳ ಸಮೃದ್ಧಿ-ಸಂಖ್ಯೆ. ಅದರ ಬೇಟೆ-ಹೀಗೆ ಎಲ್ಲವೂ ತಿಳಿಯುತ್ತವೆ. ಇದೇ ಮಾದರಿಯಲ್ಲಿ ಇಡೀ ಮ್ಯೂಸಿಯಮ್ ಒಳಗಡೆ ಕಾಣಿಸುವ ವಸ್ತುಗಳೊಂದಿಗೆ ಕಾಣಿಸದೇ ಇರುವ ಗತ ಕಥೆಗಳನ್ನು ಕೇಳಿಸಿಕೊಂಡರೆ, ಆ ತಾಳ್ಮೆ-ಸಹನೆ ಇದ್ದರೆ ನಾವು 200-300 ವರ್ಷಗಳ ಹಿಂದೆ ಬದುಕಿನೊಂದಿಗೆ ಸಂವಾದ ನಡೆಸಿದಂತಾಗುತ್ತದೆ.

    ಟ್ರಸ್ಟ್-ದೂರ ದೃಷ್ಟಿ 

    ಇತಿಹಾಸವನ್ನು ಹುಡುಕುವ ಹಾದಿಯಲ್ಲಿ ಯಾವ ವಸ್ತುವೂ ಚಿಕ್ಕದಲ್ಲ. ಇಲ್ಲಿ ಸಣ್ಣದು, ಮರದ್ದು, ಮಣ್ಣಿದ್ದು ಎಂಬ ಪ್ರಶ್ನೆಯೇ ಇಲ್ಲ. ಎಲ್ಲದರ ಹಿಂದೆ ಕಾಲದ, ದೇಶದ ಕಥೆಯಿದೆ. ಹುದುಗಿದ ಆ ಕಲಾತೀತ ಕಥೆಗಳನ್ನು ಶೋಧಿಸುವ, ತೆರೆದಿಡುವ ಕುತೂಹಲ ಮತ್ತು ಕಥನಾತ್ಮಕತೆ ಇರಬೇಕು. ಅಂಗೈ ತುಂಬುವ ಪುಟ್ಟ ನಾಣ್ಯ ಇರಬಹುದು. ಸಿಡಿದ ಬಂದೂಕಿನ ಗುಂಡು, ಸವೆದು ಸವೆದು ಅಂಗೈಗೆ ಸರಿದ ಕಿರು ಪೊರಕೆ ಇರಬಹುದು. ಅದರ ಹಿಂದೆ ಹತ್ತಾರು ಕಥೆಗಳಿವೆ. ಅವು ಮನೆತನ, ಸಾಮಾಜಿಕ, ಶೌರ್ಯ, ಸೈನ್ಯ, ಗಡಿರೇಖೆ, ರಕ್ಷಣೆ, ಆರ್ಥಿಕತೆ ಹೀಗೆ ಎಲ್ಲದರ ಲೆಕ್ಕ ಹೇಳುತ್ತದೆ. ನಮ್ಮ ಕರ್ತ, ನಮ್ಮ ಸಂವೇದನೆ ಆ ಕಾಲಾತೀತ ವಸ್ತುಗಳೊಂದಿಗೆ ಕೋದುಕೊಳ್ಳಬೇಕು. ಈ ಶೋಧನೆ, ದುಡಿಮೆಯಲ್ಲಿ ಪ್ರೊ. ತುಕಾರಾಮ-ಆಶಾಲತಾ ದಂಪತಿ ಎಂದೂ ವಿರಮಿಸಿಲ್ಲ. ಕಳೆದ ಎರಡು ಮೂರು ದಶಕಗಳಿಂದ ಅವರು ಸಂಗ್ರಹ, ಜೋಡಣೆ, ಶೋಧನೆ ಎಂದು ಸುತ್ತುತ್ತಲೇ ಇದ್ದಾರೆ. ಹೆತ್ತವರ ಈ ಅಪರೂಪದ ಆಸಕ್ತಿಯ ಹಿಂದೆ ಅವರ ಇಬ್ಬರು ಮಕ್ಕಳಿಗೂ ಅಷ್ಟೇ ಬದ್ಧತೆಯಿದೆ. ಹಿರಿಯ ಮಗ ತುಷಾರ್ ಎಂಟೆಕ್ ಮುಗಿಸಿ ಪ್ರಸ್ತುತ ಉದ್ಯೋಗ ನಿಮಿತ್ತ ಅಮೆರಿಕದಲ್ಲಿದ್ದಾರೆ. ಮಗಳು ಸಿಂಧೂರ ವರ್ಲ್ಡ್ ಹೆರಿಟೇಜ್ ಬಗ್ಗೆ ವಿದೇಶದಲ್ಲಿ ಸ್ನಾತಕೋತ್ತರ ಅಧ್ಯಯನ-ಸಂಶೋಧನೆ ನಡೆಸುತ್ತಿದ್ದಾರೆ. ಹಿರಿಯರು ಕಟ್ಟಿದ ಸಂಗ್ರಹ-ಸಂಶೋಧನಾ ಕೇಂದ್ರವನ್ನು ಭವಿಷ್ಯದಲ್ಲಿ ವ್ಯವಸ್ಥಿತವಾಗಿ ಮರುಜೋಡಿಸುವ, ನಿಭಾಯಿಸುವ ದೂರದೃಷ್ಟಿ ಈಕೆಯದು. ದಶಕಗಳ ಹಿಂದೆಯೇ ತುಕಾರಾಮರು ಅಧ್ಯಕ್ಷರಾಗಿ, ಡಾ. ಆಶಾಲತಾ ಅವರು ಕಾರ್ಯದರ್ಶಿಯಾಗಿ ಈ ಅಧ್ಯಯನ ಕೇಂದ್ರದ ಸುಲಭ ನಿರ್ವಹಣೆಗೆ ಟ್ರಸ್ಟ್ ಒಂದರ ರಚನೆಯಾಗಿದೆ. ಕೆ.ಎಚ್. ಪೂಜಾರಿ, ಯಶವಂತಿ ಸುವರ್ಣ, ಪ್ರೊ. ಶಂಕರ್ ಭಟ್ ಸದಸ್ಯರಾಗಿದ್ದಾರೆ.

    ಕಲಾತ್ಮಕ ಬದುಕಿನ ದರ್ಶನ 

    ನಮ್ಮದೀಗ ಯಾಂತ್ರಿಕ ಬದುಕು. ದೇಹ-ಮನಸ್ಸು ತುಂಬಾ ಯಂತ್ರಗಳನ್ನು ಕಟ್ಟಿಕೊಂಡೇ ಬದುಕುತ್ತೇವೆ. ನಮ್ಮ ಹಿರಿಯರು ಹಾಗಲ್ಲ, ಅನ್ನ ದಾರಿಯ ಆ ಪ್ರತಿಯೊಂದು ದಿನಬಳಕೆಯ ವಸ್ತುಗಳನ್ನು ಕಲಾತ್ಮಕವಾಗಿ ರೂಪಿಸಿದ್ದಾರೆ. ಕವಳ ತಿಂದು ತುಪ್ಪುವ ಪೀಕದಾನಿ ಇರಬಹುದು, ರಾತ್ರಿ ಬುಡ್ಡಿ ದೀಪ ಉರಿಸುವ ದೀಪ ಕಂಬ ಇರಬಹುದು. ಹೊಸ ಅಕ್ಕಿ ಬೇಯಿಸುವ ಮಣ್ಣಿನ ಮಡಕೆ ಇರಬಹುದು. ಮಗುವನ್ನು ತೂಗುವ ಬಿದಿರ ತೊಟ್ಟಿಲು, ಉಪ್ಪು-ಉಪ್ಪಿನಕಾಯಿಯ ಭರಣಿ, ಆಭರಣ ಇಡುವ ಪೆಟ್ಟಿಗೆ, ಎಲ್ಲದರ ಮೇಲೂ ಹಿರಿಯರು ಕಲಾತ್ಮಕತೆಯನ್ನು ತೋರಿದ್ದಾರೆ, ಚಿತ್ರಗಳನ್ನು ಕೆತ್ತಿದ್ದಾರೆ.

    ಸಾಂಸ್ಕೃತಿಕ ವಸ್ತುಗಳ ಸಂರಕ್ಷಣೆ-ಮ್ಯೂಸಿಯಮ್ ಪರಿಕಲ್ಪನೆ ಒಂದು ದುಬಾರಿ ಹವ್ಯಾಸ. ತಂದು ತಂದು ರಾಶಿ ಹಾಕಿದರೆ ಮುಗಿಯುವುದಿಲ್ಲ. ಮಣ್ಣಿದ್ದು ಹೊರತಾಗಿ ಉಳಿದ ಪರಿಕರಗಳ-ಲೋಹ, ಕಟ್ಟಿಗೆ-ಏನೇ ಇರಲಿ, ಅವು ನಿಧಾನವಾಗಿ ಹಾಳಾಗುತ್ತವೆ. ಐತಿಹಾಸಿಕ-ಸಾಂಸ್ಕೃತಿಕ ಮೌಲ್ಯ ಇರುವ ಆ ವಸ್ತುಗಳನ್ನು ಜತನದಿಂದ ಕಾಯಬೇಕು. ಶಿಲಾಯುಗದಿಂದ ಹಿಡಿದು ಇತ್ತೀಚಿನ ಕಾಲದವರೆಗಿನ ಪರಿಕರಗಳು ಇಲ್ಲಿವೆ. ಬೇರೆ ಬೇರೆ ರಾಜ ವಂಶಗಳ ಬಳಕೆಯ ನಾಣ್ಯಗಳು, ಯುದ್ಧೋಪಕರಣ, ಜಾನಪದ ವಾದ್ಯಗಳು, ದೈವದ ಆಭರಣಗಳು, ಕಂಬಳ ಅಂಕದ ಪರಿಕರಗಳು, ಕೃಷಿ ಬಳಕೆಯ ವಸ್ತುಗಳು, ಹಳೆಯ ಬೀಗಗಳು, ಅಡುಗೆಯ ಪಾತ್ರೆಗಳು, ಬಹುಬಗೆಯ ದೀಪಗಳು, ಬೀಗ, ಸಂಚಿ, ಹೂಜಿಗಳು, ಶಾಸನ, ನಾಗನ ಕಲ್ಲು .. ಇಷ್ಟಕ್ಕೇ ಮುಗಿಯುವುದಿಲ್ಲ. ದಿನವಿಡೀ ನೋಡಬೇಕು. ಒಂದೊಂದು ವಸ್ತುಗಳ ಹಿಂದೆ ತುಕಾರಾಮರು ನಿಂತು ಮಾತನಾಡಿದರೆ ನಾವು ಮೂಲ ಸಂಸ್ಕೃತಿಯ ಬೇರಿಗಿಳಿಯಲೇಬೇಕು. 1995ರಲ್ಲಿ ಪುಟ್ಟದಾಗಿ ಆರಂಭಗೊಂಡ ಹವ್ಯಾಸವೊಂದು ಇಂದು ಬೃಹತ್ ಆಗಿ ಬೆಳೆದಿದೆ.

    ನಾಡು-ನುಡಿಯ ಭಾವಕೋಶ 

    “ವಸ್ತು ಸಂಗ್ರಹಾಲಯವೆಂದರೆ ಹಳೆಯ ವಸ್ತುಗಳನ್ನು ರಾಶಿ ಹಾಕುವ ಗೋದಾಮು ಅಲ್ಲ. ಅವು ನಮ್ಮ ಪರಂಪರೆ, ಹಿರಿಬದುಕು, ನಾಡು-ನುಡಿಯ ಭಾವಕೋಶಗಳು. ಅಲ್ಲಿ ನಾವು ಗತಿಸಿದ ಜೀವಾತ್ಮಗಳನ್ನು ಹುಡುಕುವ ಪ್ರಯತ್ನ ಮಾಡಬೇಕು. ಪ್ರಕೃತಿ-ಮನುಷ್ಯ ಸಂಬಂಧವನ್ನು ಮನುಷ್ಯ-ಮನುಷ್ಯ ಸಂಬಂಧಗಳನ್ನು ಹುಡುಕಬೇಕು. ನಮಗೀಗ ಹಿರಿಯರ ಪರಂಪರೆ, ಸಂಸ್ಕೃತಿ, ಇತಿಹಾಸ, ಕೃಷಿ ಯಾವ ಬೇರು ಮೂಲದ ಆಶಕ್ತಿಯೂ ಇಲ್ಲ. ತಿನ್ನುವ ಅನ್ನ ಹುಟ್ಟುವ ದಾರಿ ಅಸ್ಪಷ್ಟಗೊಳ್ಳುವ ಕಾಲದಲ್ಲಿ ನಾವೆಲ್ಲಾ ಬಂದು ನಿಂತಂತಿದೆ. ನಾಜೂಕಿನ ನವ ನಾಗರಿಕ ಮನಸ್ಸಿಗೆ ಈ ಮ್ಯೂಸಿಯಮ್ ಕಾಲದ ಕಥೆ ಹೇಳಲಿ ಎಂಬುದೇ ನಮ್ಮ ಉದ್ದೇಶ” ಎನ್ನುತ್ತಾರೆ ಡಾ| ತುಕಾರಾಮರು.

    ನಾವೀಗ ಹಸು ನೋಡದೆಯೇ ಹಾಲು ಕುಡಿಯುತ್ತೇವೆ. ಭತ್ತ ನೋಡದೆಯೇ ಅನ್ನ ತಿನ್ನುತ್ತೇವೆ. ನಮ್ಮ ಗ್ರಾಮಗಳಲ್ಲಿಂದು ಕತ್ತಿ ಸಿಗುತ್ತದೆ. ಕತ್ತಿ ಮಾಡುವವ ಇಲ್ಲ. ಮಡಕೆ ಸಿಗುತ್ತದೆ. ಕುಂಬಾರ ಸಿಗುವುದಿಲ್ಲ. ತರಕಾರಿ-ಅಕ್ಕಿ ಸಿಗುತ್ತದೆ. ರೈತ ಸಿಗುವುದಿಲ್ಲ-ಹಳ್ಳಿ ಬದುಕು ನಿರ್ನಾಮದ ಹಂತದಲ್ಲಿದೆ. ರೈತರ ಜೀವ ಮಾತ್ರ ಹಳ್ಳಿಯಲ್ಲಿ ಕೆಸರಲ್ಲಿದ್ದು ಮನಸ್ಸು ಪೂರ್ತಿ ಮಾರುಕಟ್ಟೆಯೊಂದಿಗೆ ಬೆಸೆದಿದೆ. ಇಂಥ ಸ್ಥಿತಿಯಲ್ಲಿ ಈ ಮ್ಯೂಸಿಯಮ್ ನ ಒಂದೊಂದು ಪರಿಕರಗಳನ್ನು ಆಳವಾಗಿ ಪರಿಭಾವಿಸಿದರೆ ಭಾರತದ ಪುರಾತನ ಗ್ರಾಮಗಳು ಪೂರ್ಣರೂಪದಲ್ಲಿ ತೆರೆದುಕೊಳ್ಳುತ್ತವೆ. ತುಳುನಾಡು ಕಣ್ಣಿಗೆ ಕಟ್ಟುತ್ತದೆ. ಬರೀ ಸ್ಥಾವರದೊಳಗಡೆಯ ಸ್ಥಿರ ಪರಿಕರಗಳೆಲ್ಲ ಇದೇ ಆವರಣದೊಳಗೆ ಇವುಗಳ ನಡುವೆಯೇ ಚರಿತ್ರೆ. ಮೇಷ್ಟ್ರು ಆಗಾಗ ನಡೆಸುವ ಕಮ್ಮಟ-ಕಾರ್ಯಾಗಾರಗಳು, ಪ್ರಕಟಿಸುವ ಪುಸ್ತಕಗಳು, ಕಾರ್ಯಕ್ರಮಗಳ ತೂಕ, ಶಕ್ತಿ ಬೇರೆ ಬಗೆಯವು.

    ಕೃಷಿ ವ್ಯಾಪಾರ, ಬಂದರು ದಾರಿ, ಮುದ್ರಣ, ಪತ್ರಿಕೆಗಳು, ಸಾಹಿತ್ಯ, ಸ್ವಾತಂತ್ರ್ಯ, ಹೋರಾಟ, ಶಿಕ್ಷಣ ಹೀಗೆ ಬಹುಬಗೆಗಳಲ್ಲಿ ಹೊಸತುಗಳನ್ನು ನೀಡಿದ ಕರಾವಳಿ ಇಂದು ಅತ್ಯಂತ ವೇಗವಾಗಿ ಸಾಂಸ್ಕೃತಿಕ ಪಲ್ಲಟಕ್ಕೆ ಒಳಗಾಗುತ್ತಿದೆ. ಇಂಗ್ಲೀಷ್ ಮಾಧ್ಯಮ ಮತ್ತು ನವಮಾಧ್ಯಮಗಳ ಚಕ್ರಸುಳಿಯಲ್ಲಿ ಹೊಸ ತಲೆಮಾರು ನೆಲ ಕಳಚುವ ದಿನಮಾನದಲ್ಲಿ ಪರಂಪರೆಯೊಂದಿಗೆ ಮರುಜೋಡಿಸುವ ತುಕಾರಾಮರ ಈ ಪ್ರಯತ್ನ-ಸಾಹಸ ಶ್ಲಾಘ್ಯವೇ ಸರಿ. ಬೃಹತ್ ಗ್ರಂಥಾಲಯ, ನಾಣ್ಯಗಳ ಸಂಗ್ರಹಾಲಯ–ಹೀಗೆ ಮ್ಯೂಸಿಯಮ್ ವಿಸ್ತಾರಗೊಳ್ಳುತ್ತಲೇ ಇದೆ. ಪ್ರವೇಶ ಉಚಿತ.

    ಕಣ್ಣ ಮುಂದಿನ ಯೋಜನೆಗಳು 

    ಮ್ಯೂಸಿಯಮ್ ಅಂದರೆ ಬರೀ ಕಟ್ಟಡವಲ್ಲ. ಕಟ್ಟಡ ಒಳಗಡೆಯ ಚರಿತ್ರೆಯನ್ನು ಕಾಪಾಡುವ ರಕ್ಷಾ ಕವಚ ಅಷ್ಟೇ. ಇಲ್ಲಿ ಒಳ-ಹೊರ ಸಮೀಕರಣ ತುಕಾರಾಮರ ಮಾನಸಿಕ ಪಠ್ಯದಿಂದಲೇ ರೂಪಿತವಾಗಿದೆ. ಅವರಿಗೆ ಇನ್ನೂ ಆಸೆಗಳಿವೆ. ಹತ್ತು ಎಕರೆ ಜಾಗದಲ್ಲಿ ಭೂಮಿಯನ್ನು ಮಟ್ಟಸ ಮಾಡಿ ಆಕಾರ ಬದಲಾಯಿಸದೆ ತುಳುವ ಸಾಂಸ್ಕೃತಿಕ ಗ್ರಾಮವೊಂದನ್ನು ಕಟ್ಟಡದ ಆಚೆ ನೈಜವಾಗಿ ನಿರೂಪಿಸುವಂಥದು. ನಗರದೊಳಗಡೆಯ ಪುಟ್ಟ ಜಾಗ ಮ್ಯೂಸಿಯಮ್ ಗಾಗಿ ಮುಗಿದಿದೆ. ದೂರದ ಹಸುರು–ಕೃಷಿ ಆವಾರದೊಳಗಡೆ ಅವರಿಗೆ ಭೂಮಿ ಬೇಕು. ಸರಕಾರ ಅಥವಾ ಖಾಸಗಿಯವರು ಮುಂದೆ ಬಂದರೆ ಕರಾವಳಿ-ಮಲೆನಾಡಿಗೆ ಬೇಕಾಗುವ ಅಪರೂಪದ ಸಂಸ್ಕೃತಿ ಗ್ರಾಮ ಖಂಡಿತ ನಿರ್ಮಾಣಗೊಳ್ಳಬಹುದು. ಸರಕಾರ, ಖಾಸಾಗಿಯವರ ಕನಿಷ್ಟ ಸಹಾಯದಿಂದ ಇಷ್ಟೊಂದು ಬೃಹತ್ ಮ್ಯೂಸಿಯಮ್ ಕಟ್ಟಲು, ನಿರ್ವಹಿಸಲು ಸಾಧ್ಯವೇ ಇಲ್ಲ. ಜೀವನಪೂರ್ತಿ ದುಡಿದು ಗಳಿಸಿದ ವೇತನವನ್ನು ಗಂಡ-ಹೆಂಡತಿ ಸಂಗ್ರಹಾಲಯಕ್ಕೆ ಸುರಿದಿದ್ದಾರೆ. ಇಷ್ಟಾದರೂ ತುಕಾರಾಮರ ಉಮೇದು ಬತ್ತಿಲ್ಲ. ಅವರ ಮಾತಿನಲ್ಲಿರುವ ಚೈತನ್ಯ, ಕಣ್ಣಿನಲ್ಲಿರುವ ತೀಕ್ಷ್ಣತೆ, ನಡಿಗೆಯ ವೇಗ, ಮತ್ತೆ ಮತ್ತೆ ವಿವರಿಸುವ ಆಸಕ್ತಿ ಎಲ್ಲವೂ ಬಹುಕಾಲ ಬಾಳಬೇಕು, ಈ ಮ್ಯೂಸಿಯಮ್ ಮೂಲಕ ತುಕಾರಾಮರು ಕರ್ನಾಟಕದ ಹೆಮ್ಮೆಯಾಗಿ ಬೆಳಗಬೇಕು. ಈ ಸಂಗ್ರಹಾಲಯ ಮಂಗಳೂರಿಂದ 23 ಕಿ.ಮೀ. ದೂರದ ಬಿ.ಸಿ.ರೋಡಿನಲ್ಲಿದೆ.

    Share. Facebook Twitter Pinterest LinkedIn Tumblr WhatsApp Email
    Previous Articleಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯದಲ್ಲಿ ಪಟ್ಲ ಪೌಂಡೇಶನ್ ಯಕ್ಷಗಾನ ತರಗತಿ ಆರಂಭ 
    Next Article ಎಕ್ಕಾರಿನಲ್ಲಿ 37ನೇ ಯಕ್ಷಧ್ರುವ ಯಕ್ಷ ಶಿಕ್ಷಣ ಉದ್ಘಾಟನೆ
    roovari

    2 Comments

    1. K. Sripad Bhat on September 4, 2023 9:18 am

      I greatly appreciate the stupendous efforts put in by Tukaram -Ashalatha couple to showcase the cultural heritage of Tulunadu in their privately built museum. This is indeed a commendable achievement.
      I wish them all the best and hope and pray that all their dreams would be converted into reality in the coming years.

      Reply
    2. Ravi Shettigar on September 4, 2023 3:05 pm

      Undoubtedly couple have invested their time , energy and efforts to build this historical heritage museum.

      Probably this is one of its kind in the region which needs due recognition and rewards from the government.

      Wish entire family every success in the coming days and years .

      Wishing them this center will become a popular tourists spot.

      Reply

    Add Comment Cancel Reply


    Related Posts

    ಪುಸ್ತಕ ವಿಮರ್ಶೆ | ಸುನಂದಾ ಬೆಳಗಾಂವಕರ ಇವರ ‘ಕೇಳು ಪಾಪಕ್ಕ’

    May 23, 2025

    ನೃತ್ಯ ವಿಮರ್ಶೆ | ನಯನ ಮನೋಹರ ನೃತ್ತಾಭಿನಯ ಸಂವೃತಳ ರಮ್ಯ ನರ್ತನ

    May 22, 2025

    ಪುಸ್ತಕ ವಿಮರ್ಶೆ | ‘ನೀಲು ಮಾತು ಮೀರಿದ ಮಿಂಚು’ ಲಂಕೇಶ್ ಕಾವ್ಯದ ರೂಹುಗಳು

    May 14, 2025

    ಪುಸ್ತಕ ವಿಮರ್ಶೆ | ಸುನಂದಾ ಬೆಳಗಾಂವಕರ ಅವರ ಕಥಾಸಂಕಲನ ‘ಮೃದ್ಗಂಧ’

    May 13, 2025

    2 Comments

    1. K. Sripad Bhat on September 4, 2023 9:18 am

      I greatly appreciate the stupendous efforts put in by Tukaram -Ashalatha couple to showcase the cultural heritage of Tulunadu in their privately built museum. This is indeed a commendable achievement.
      I wish them all the best and hope and pray that all their dreams would be converted into reality in the coming years.

      Reply
    2. Ravi Shettigar on September 4, 2023 3:05 pm

      Undoubtedly couple have invested their time , energy and efforts to build this historical heritage museum.

      Probably this is one of its kind in the region which needs due recognition and rewards from the government.

      Wish entire family every success in the coming days and years .

      Wishing them this center will become a popular tourists spot.

      Reply

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.