ಕನ್ನಡದ ಪ್ರಗತಿಶೀಲ ಬರಹಗಾರ ಎಂದೇ ಪ್ರಸಿದ್ಧರಾಗಿರುವ ಎಸ್. ಅನಂತನಾರಾಯಣರು ದಿನಾಂಕ 30 ನವೆಂಬರ್ 1925ರಂದು ಮೈಸೂರಿನಲ್ಲಿ ಜನಿಸಿದರು. ಆರ್. ಸದಾಶಿವಯ್ಯ ಮತ್ತು ಗಂಗಮ್ಮ ದಂಪತಿಗಳ ಸುಪುತ್ರರಾದ ಇವರು ತಮ್ಮ ಎಲ್ಲಾ ವಿದ್ಯಾಭ್ಯಾಸವನ್ನೂ ಮೈಸೂರಿನಲ್ಲಿ ಮುಗಿಸಿದರು. ಇಂಗ್ಲೀಷ್ ಸಾಹಿತ್ಯದಲ್ಲಿ ಬಿ. ಎ. (ಆನರ್ಸ್) ಮತ್ತು ಎಂ. ಎ. ಪದವಿಗಳನ್ನು ಪ್ರಪ್ರಥಮ ಶ್ರೇಣಿಯಲ್ಲಿ ಚಿನ್ನದ ಪದಕದೊಂದಿಗೆ ತೇರ್ಗಡೆ ಹೊಂದಿದ ಮೇಧಾವಿ. ಮೈಸೂರು ವಿಶ್ವವಿದ್ಯಾಲಯದ ಹೆಚ್ಚಿನ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಇವರು ಸಂಗೀತ ನಾಟಕ ಕಾಲೇಜಿನಲ್ಲಿಯೂ ಮೂರು ವರ್ಷ ನಾಟಕ ಶಾಸ್ತ್ರದ ಉಪನ್ಯಾಸಕರಾಗಿ ಮತ್ತು ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿ, ಶಿಷ್ಯ ವೃಂದದ ಅಪಾರ ಪ್ರೀತ್ಯಾದರ ಮತ್ತು ಗೌರವಗಳಿಗೆ ಪಾತ್ರರಾದವರು. ಹದಿನೇಳರ ತಾರುಣ್ಯದಲ್ಲಿಯೇ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ ಸೆರೆಮನೆವಾಸವನ್ನು ಅನುಭವಿಸಿದ ಇವರು ಸೆರೆಮನೆಯಿಂದಲೇ ಕವಿತಾ ರಚನೆಯ ಕಾರ್ಯ ಆರಂಭಿಸಿದರು.
‘ಅತ್ತಿಗೆ’, ‘ಆಲದ ಹೂ’, ‘ತೀರದ ಬಯಕೆ’, ‘ಪಯಣದ ಹಾದಿಯಲ್ಲಿ’, ‘ಹಣ್ಣು ಹಸಿರು’, ‘ರತ್ನ ಪರೀಕ್ಷೆ’, ‘ಸಾಹಿತ್ಯ ಮನನ’, ‘ಮುರುಕು ಮಂಟಪ’ ಮತ್ತು ‘ಸಪ್ತ ಸಮಾಲೋಕ ಇವರ ಲೇಖನಿಯಿಂದ ಮೂಡಿ ಬಂದ ಕಾದಂಬರಿಗಳಾದರೆ, ‘ಅರಣ್ಯ ಪರ್ವ’, ‘ಹರಿಶ್ಚಂದ್ರ ಕಾವ್ಯ ಸಾಂಗತ್ಯ’ ಇವು ಪ್ರಬಂಧಗಳು. ‘ಚಿಂತನ ಬಿಂದು’, ‘ಮೆಲುಕು’ ಮತ್ತು ‘ವಿಚಾರ ನಿಮಿಷ’ ಇವು ಸಂಪಾದಿತ ಕೃತಿಗಳು. ‘ಬಾಡದ ಹೂ’, ‘ಉಷಾ ಸ್ವಪ್ನ’ ಮತ್ತು ‘ಬಣ್ಣಗಳು ಆಡಿದುವು’ ಇವು ಇವರ ಕಾವ್ಯಗಳು. ಸುಂದರವಾದ ನಾಟಕ ಕೃತಿಗಳನ್ನು ರಚಿಸಿದ ಖ್ಯಾತಿ ಅನಂತನಾರಾಯಣರಿಗಿದೆ. ‘ಪ್ರೇಮ ಬಲಿ’, ‘ಮಂಗಳಾರತಿ’, ‘ವಿಪರೀತಕ್ಬಂತೆ ವಿವಾಹ’, ‘ಸ್ವಪ್ನ ವಾಸವದತ್ತ’, ‘ಪ್ರತಿಜ್ಞಾ ಯೌಗಂಧರಾಯಣ’ ಮತ್ತು ‘ಪೂರ್ಣಾಹುತಿ’ ಇವಿಷ್ಟು ಇವರ ಲೇಖನಿಯಿಂದ ಹೊಮ್ಮಿದ ನಾಟಕಗಳು. ಅಮೇರಿಕಾದ ಖ್ಯಾತ ಲೇಖಕಿ ಲಾರ ಇಂಗಾಲ್ಸ್ ವೈಲ್ಡರ್ ಇವರ ಜೀವನಾನುಭವವನ್ನು ಕುರಿತ 9 ಕೃತಿಗಳ ಅನುವಾದವನ್ನು ಅನಂತನಾರಾಯಣರು ಮಾಡಬೇಕಿತ್ತು. ಆದರೆ ಅವರ ಅಕಾಲ ಮರಣದಿಂದಾಗಿ 8 ಕೃತಿಗಳ ಅನುವಾದ ಮಾತ್ರ ಆಗಿದೆ. ‘ದೊಡ್ಡ ಕಾಡಿನಲ್ಲಿ ಪುಟ್ಟಮನೆ’, ‘ಹುಲ್ಲುಗವಾಲಿನಲ್ಲಿ ಪುಟ್ಟಮನೆ’, ‘ರೈತರ ಹುಡುಗ’, ‘ಪ್ಲಮ್ ನದಿಯ ತೀರದಲ್ಲಿ’, ‘ಸಿಲ್ವರ್ ಲೇಕ್ ದಡದಲ್ಲಿ’, ‘ಚಳಿಯ ಸುಳಿಯಲ್ಲಿ’, ‘ಹುಲ್ಲುಗಾವಲಿನಲ್ಲಿ ಪುಟ್ಟ ಪಟ್ಟಣ’, ‘ಆ ಸೊಗಸಿನ ಬಂಗಾರದ ದಿನಗಳು’, ‘ಡೇಗೆ ಹಕ್ಕಿ : ಇಟಲಿ – ಆಸ್ತ್ರೀಯಾ ಕಥೆಗಳು’. ಇವು ಇವರ ಅನುವಾದಿತ ಕೃತಿಗಳು. ಸಂಸ್ಕೃತದಿಂದ ಕನ್ನಡಕ್ಕೆ ಅನುವಾದಗೊಂಡದ್ದು ‘ಅಭಿಜ್ಞಾನ ಶಾಕುಂತಲ’.
ಕನ್ನಡ ಉತ್ತರ ರಾಮಚರಿತೆ, ಕನ್ನಡ ನಾಗಾನಂದ, ಭಾಸನ ಎರಡು ನಾಟಕಗಳು, ಸಂಗ್ರಹ ಭಾಗವತ ಮತ್ತು ಸಂಗ್ರಹ ಮಹಾಭಾರತ, ಏಲಿಯಟ್ ನ ಮೂರು ಉಪನ್ಯಾಸಗಳು, ‘ಕಲೆ ಎಂದರೇನು ? ಪಾಶ್ಚಾತ್ಯ ಕಾವ್ಯ ಚಿಂತನ’, ‘ಮಹತ್ ಕಾವ್ಯ ಕಲ್ಪನೆ’, ‘ಸಾಹಿತ್ಯ ಪ್ರವೇಶ’, ‘ಸಾಹಿತ್ಯ ಮತ್ತು ಮನೋವಿಜ್ಞಾನ’, ‘ಸಾಹಿತ್ಯ ವಿಮರ್ಶೆಯ ತತ್ವಗಳು’ ಹಾಗೂ ‘ಸಾಹಿತ್ಯ ಮನನ’ ಇವು ಇವರ ಇತರ ಕೃತಿಗಳು. ‘ಹೊಸಗನ್ನಡ ಕವಿತೆಯ ಮೇಲೆ ಇಂಗ್ಲೀಷ್ ಕಾವ್ಯದ ಪ್ರಭಾವ’ ಇದು ಒಂದು ಅಪೂರ್ವವಾದ ಸಂಶೋಧನಾತ್ಮಕ ಪ್ರಬಂಧ. ಇವರು ‘ಬಾಡದ ಹೂ’ ನೀಳ್ಗವಿತೆಗೆ 1944ರಲ್ಲಿ ಬಿ. ಎಂ. ಶ್ರೀ.ಯವರಿಂದ ರಜತ ಮಹೋತ್ಸವದ ಸುವರ್ಣ ಪದಕ ಸ್ವೀಕರಿಸಿದರು.
‘ಪುರಂದರ ಕಂಡ ಶ್ರೀರಾಮ ಸಂಗೀತ’ ರೂಪಕಕ್ಕೆ ರಾಜ್ಯ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಬಿ. ಎಂ. ಶ್ರೀ – ರಜತ ಪದಕ ಇತ್ಯಾದಿ ಪ್ರಶಸ್ತಿಗಳು ಇವರ ಸಾಹಿತ್ಯ ಕೃಷಿಗೆ ಸಂದ ಗೌರವ. ದಿನಾಂಕ 15 ಆಗಸ್ಟ್ 1992ರಂದು ತಮ್ಮ 67ನೇ ವಯಸ್ಸಿನಲ್ಲಿ ಒಬ್ಬ ಪ್ರಗತಿಶೀಲ ಬರಹಗಾರನನ್ನು ಸಾಹಿತ್ಯ ಲೋಕ ಕಳೆದುಕೊಂಡಿತು. ತಮ್ಮ ಪ್ರೀತಿಪಾತ್ರರಾದ ವಿದ್ಯಾರ್ಥಿಗಳ ನೆನಪಿನಂಗಳದಲ್ಲಿ ಹಚ್ಚಹಸಿರಾಗಿ ಉಳಿದವರು ಎಸ್. ಅನಂತನಾರಾಯಣರು.
ಅಕ್ಷರೀ